ಹಸಿ ಬಿಸಿ

ಹಸಿ ಬಿಸಿ
Updated on: 

ದಿನೇ ದಿನೇ ಪರಿಸರ ಕಲುಷಿತಗೊಳ್ಳುತ್ತಿದೆ. ಶುದ್ಧ ನೀರು, ಗಾಳಿಯನ್ನು ಕೇಳಲೇಬೇಡಿ. ಆಧುನಿಕತೆ ಭರಾಟೆಯಲ್ಲಿ ನೈರ್ಮಲ್ಯ ಎಂಬುದು ಕೊಚ್ಚಿಹೋಗುತ್ತಿದೆ. ಕೈಗಾರಿಕೀಕರಣ, ಅಭಿವೃದ್ಧಿ ಹೆಸರಲ್ಲಿ ಕಾಡುಗಳು ಈಗಾಗಲೇ ಕಣ್ಮರೆಯಾಗಿವೆ. ಹಿಂದೆ ಇದ್ದ ಬೆಟ್ಟಗುಡ್ಡ, ಅರಣ್ಯ, ಜಲಮೂಲಗಳು ಈಗಿಲ್ಲ. ಅಂತರ್ಜಲ ಬತ್ತಿದೆ. ಕೆಲವೆಡೆ ಫ್ಲೋರೈಡ್ ನೀರೇ ಗತಿ. ಪುನರ್‌ಬಳಕೆ ಮಾಡಲಾಗದ ಪ್ಲಾಸ್ಟಿಕ್ ಉತ್ಪನ್ನಗಳು ರಾಶಿ ರಾಶಿಯಾಗಿವೆ. ಹಾಗಾದರೆ ಇದಕ್ಕೆ ಕಾರಣಗಳೇನು ಎಂಬ ಪ್ರಶ್ನೆ ಹುಟ್ಟಿಕೊಳ್ಳದೇ ಇರದು. ಇದಕ್ಕೆ ಇನಾದರೂ ಮಾಡಲು ಸಾಧ್ಯವಿದೆಯಾ? ಇಲ್ಲಿದೆ ನೋಡಿ.


ಇದೆಲ್ಲಾ ಏನು?

1.ನಿರ್ಜನ ಪ್ರದೇಶಗಳಲ್ಲಿ ಆಮ್ಲಜನಕ ಸತ್ತ ವಲಯಗಳನ್ನು ಇತ್ತೀಚೆಗೆ ಸ್ಪ್ಯಾನಿಷ್ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮೊದಲಿಗಿಂತಲೂ ಈಗ ಸಮುದ್ರ ತೀರದ ಪ್ರದೇಶಗಳು ಡೆಡ್‌ಝೋನ್‌ಗಳಾಗಿ ಪರಿವರ್ತಿತಗೊಂಡಿವೆ. ರಸಗೊಬ್ಬರ ಬಳಕೆ, ಕೈಗಾರಿಕೆ ಹಾಗೂ ವಾಹನಗಳಿಂದ ಉತ್ಪತ್ತಿಯಾಗುವ ಯಥೇಚ್ಛ ನೈಟ್ರೋಜನ್ ಅಂಶ ಡೆಡ್‌ಝೋನ್‌ಗೆ ಕಾರಣವಾಗಿದೆ.
=
2.ಆಸ್ಟ್ರೇಲಿಯಾ ಉತ್ಪಾದಿಸಿರುವ ಭೂಶಾಖ ವಿದ್ಯುತ್‌ನ ಶೇ. 1ರಷ್ಟು ವಿದ್ಯುತ್ ಅನ್ನು ಮುಂದಿನ 26 ಸಾವಿರ ವರ್ಷಗಳಲ್ಲಿ ಬಳಕೆ ಮಾಡಬಹುದು. ಮತ್ತೆ ನವೀಕರಿಸಬಹುದಾದ ಈ ವಿದ್ಯುತ್ ಬಳಕೆ ಅತ್ಯಂತ ಉಪಯುಕ್ತ. ಅಷ್ಟೇ ಅಲ್ಲ, ಇತರೆ ವಿದ್ಯುತ್‌ಗಳಿಗೆ ಹೋಲಿಸಿದ್ರೆ, ಇದ್ರ ಬೆಲೆ ಬಹಳ ಕಡಿಮೆ. ಆಸ್ಟ್ರೇಲಿಯಾದ ಜಿಯೋಥರ್ವುಲ್ ಎನರ್ಜಿ ಅಸೋಸಿಯೇಶನ್, 2020ರೊಳಗೆ 2200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ಇದರಲ್ಲಿ ಶೇ. 40ರಷ್ಟು ವಿದ್ಯುತ್ ನವೀಕರಿಸುವ ಟಾರ್ಗೆಟ್ ಇಟ್ಟುಕೊಂಡಿದೆ. ಇದಕ್ಕಾಗಿ ಆಸ್ಟ್ರೇಲಿಯಾ ಸರ್ಕಾರ 50 ಮಿಲಿಯನ್ ಡಾಲರ್ ಬಂಡವಾಳ ಹೂಡುವುದಾಗಿ ಘೋಷಿಸಿದೆ.
=
3.ಚೀನಾದ 5.6 ಕೋಟಿ ನಗರವಾಸಿಗಳಲ್ಲಿ ಶೇ. 1ರಷ್ಟು ಮಂದಿ ಮಾತ್ರ ಉತ್ತಮವಾದ ಗಾಳಿ ಸೇವಿಸುತ್ತಾರೆ. ವಾಯು ಮಾಲಿನ್ಯದಿಂದಾಗಿ ಅಲ್ಲಿನ ಜನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಇದು ಚೀನಾ ದೇಶಕ್ಕಷ್ಟೇ ಸೀಮಿತವಾಗಿಲ್ಲ. ಕಲುಷಿತ ಗಾಳಿ ಎಲ್ಲೆಡೆ ಹರಡುತ್ತಿದೆ. ಇಲ್ಲಿನ ಹಲವು ಕಾರ್ಖಾನೆಗಳು ಹಾಗೂ ಕಲ್ಲಿದ್ದಲು ಶಾಖೋತ್ಪನ್ನ ಕೇಂದ್ರಗಳಿಂದ ಉತ್ಪತ್ತಿಯಾಗುತ್ತಿರುವ ಸಲ್ಫರ್ ಡೈಆಕ್ಸೈಡ್ ಹಾಗೂ ನೈಟ್ರೋಜನ್ ಅನಿಲಗಳು ವಾಯು ಮಾಲಿನ್ಯಕ್ಕೆ ಕಾರಣವಾಗಿವೆ. ಅಷ್ಟೇ ಅಲ್ಲ, ದಕ್ಷಿಣ ಕೊರಿಯಾ ಹಾಗೂ ಜಪಾನ್‌ನಲ್ಲಿ ಆಮ್ಲ ಮಳೆಗೂ ಇದೇ ಕಾರಣ. ಮಲಿನಗೊಂಡಿರುವ ಭಾರವಾದ ಕಂದು ಮಿಶ್ರಿತ ಮೋಡಗಳು ವಿಶ್ವದಾದ್ಯಂತ ಹರಡುತ್ತಿವೆ.
=
4.ಅಮೆರಿಕಾದ ವಾಲ್‌ಸ್ಟ್ರೀಟ್‌ನಲ್ಲಿ ಸುಮಾರು 700 ಬಿಲಿಯನ್ ಡಾಲರ್ ತೆರಿಗೆ ಪಾವತಿಸುವವರಿದ್ದಾರೆ. ವಾಲ್‌ಸ್ಟ್ರೀಟ್‌ನ ಶೇ.4ರಷ್ಟು ತೆರಿಗೆದಾರರು ವಿಶ್ವದ ಹಸಿವನ್ನು ನೀಗಿಸಲು ಸಾಧ್ಯ. ಹೌದು ವರ್ಷಕ್ಕೆ 30 ಡಾಲರ್ ವ್ಯಯಿಸಿ ಕೃಷಿ ಯೋಜನೆಗಳನ್ನು ಜಾರಿಗೊಳಿಸಿದರೆ, ಜಾಗತಿಕ ಆಹಾರ ಅಭದ್ರತೆ ಬಗೆಹರಿಸಬಹುದು. ವಿಶ್ವದಲ್ಲಿರುವ 854 ಮಿಲಿಯನ್ ಜನಸಂಖ್ಯೆಯಲ್ಲಿ ಏಳರಲ್ಲಿ ಒಬ್ಬ ವ್ಯಕ್ತಿ ಕೂಡಾ ಆರೋಗ್ಯಯುತ ಆಹಾರ ಸೇವಿಸುತ್ತಿಲ್ಲ.
=
5.ಅಮೆರಿಕ ತನ್ನ ನೆರೆಯ ರಾಷ್ಟ್ರ ಇರಾಕ್ ಮೇಲಿನ ಯುದ್ಧಕ್ಕೆ ಅಂದಾಜು 3 ಲಕ್ಷ ಕೋಟಿ ಖರ್ಚು ಮಾಡಿದೆ. ಈ ಹಣವನ್ನು ಬೇರೆ ರೀತಿಯ ಅಭಿವೃದ್ಧಿಗೆ ಬಳಸಬಹುದಾಗಿತ್ತು. ಪ್ರತಿಯೊಬ್ಬ ಅಮೆರಿಕನ್‌ಗೂ ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸಬಹುದಿತ್ತು. ಇಡೀ ಅಮೆರಿಕಕ್ಕೆ ಸೋಲಾರ್ ವಿದ್ಯುತ್ ನೀಡಬಹುದಿತ್ತು. ತೀವ್ರಗತಿ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸಬಹುದಿತ್ತು. ಪ್ರಮುಖ ನಗರಗಳನ್ನು ಮಾಲಿನ್ಯರಹಿತ ಮಾಡಬಹುದಿತ್ತು. ಸಾರ್ವತ್ರಿಕ ಶಿಕ್ಷಣದ ಗುರಿ ಸಾಧಿಸಬಹುದಿತ್ತು. ಸುಮಾರು 10 ಮಿಲಿಯನ್ ಮಕ್ಕಳಿಗೆ ಶಾಲೆ ನಿರ್ಮಿಸಬಹುದಿತ್ತು. ಹೀಗೇ ಇನ್ನೂ ಹಲವಾರು ಸದುಪಯೋಗಿ ಕಾರ್ಯಗಳನ್ನು ಮಾಡಬಹುದಿತ್ತು.
=
6.ಇನ್ನು 10 ವರ್ಷಗಳಲ್ಲಿ ಅಮೆರಿಕ ದೇಶದಲ್ಲಿ ಬಳಸುವ ವಿದ್ಯುತ್‌ನ ಶೇ. 20ರಷ್ಟು ವಿಂಡ್ ಪವರ್ ಮೂಲಕ ಉತ್ಪಾದಿಸಬಹುದಾಗಿದೆ. ಇದರಿಂದಾಗಿ ಪರಿಸರಕ್ಕೆ ಸಾಕಷ್ಟು ಅನುಕೂಲವಾಗುವುದರ ಜತೆಗೆ ನೈಸರ್ಗಿಕ ವಸ್ತುಗಳ ಸದುಪಯೋಗವಾಗುತ್ತದೆ.
=
7.ಒಂದು ಟನ್ ಪೇಪ್‌ರ್ ಮರು ಉತ್ಪಾದನೆಯಿಂದ 17 ಮರಗಳು, 2 ಬ್ಯಾರಲ್ ಆಯಿಲ್, 4,100 ಕಿ.ಮೀಟರ್‌ನಷ್ಟು ಶಕ್ತಿ, 60 ಪೌಂಡ್‌ನಷ್ಟು ವಾಯುಮಾಲಿನ್ಯ ಆಗೋದನ್ನು ತಡೆಗಟ್ಟಬಹುದು. ಒಂದು ಅಲ್ಯೂಮಿನಿಯಂ ಮರು
ಬಳಕೆಯಿಂದ
ಟಿವಿಗೆ ಬೇಕಾದ 3 ಗಂಟೆಗಳ ವಿದ್ಯುತ್ ಉಳಿಸಬಹುದು. ಆದ್ದರಿಂದಲೇ ತ್ಯಾಜ್ಯಗಳ ಮರುಬಳಕೆ ನಮಗೇ ಬಹಳ ಪ್ರಯೋಜನಕಾರಿ.
=
8.ಹಿಂದಿನ 4 ದಶಲಕ್ಷ ವರ್ಷಗಳ ಜನರಿಗಿಂತ ಭೂಮಿ ಮೇಲಿನ ಜನಸಂಖ್ಯೆ ಕಳೆದ 50 ವರ್ಷಗಳಲ್ಲಿ ಹೆಚ್ಚು ಬೆಳೆದಿದೆ. ಕ್ರಿ.ಶ.1800ರವರೆಗೂ ವಿಶ್ವದ ಜನಸಂಖ್ಯೆ ಕೇವಲ 1 ಬಿಲಿಯನ್ ಇತ್ತು. ಆದರೆ ಈಗ 6.7 ಬಿಲಿಯನ್ ದಾಟಿದೆ. ಇನ್ನು 2050ರ ಹೊತ್ತಿಗೆ ವಿಶ್ವದ ಜನಸಂಖ್ಯೆ 9 ಬಿಲಿಯನ್ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಮತ್ತಷ್ಟು ಆಹಾರ ಸಮಸ್ಯೆ, ನೀರಿನ ಅಭಾವ ತಲೆದೋರಲಿದೆ.
=
9.ನಾಲ್ಕು ಸಸ್ತನಿಗಳಲ್ಲಿ ಒಂದು ಅಳಿವಿನ ಅಂಚಿನಲ್ಲಿದೆ. ಮಾನವನ ಚಟುವಟಿಕೆಗಳು, ಭೂಮಿಯ ಮಾಲಿನ್ಯದಿಂದಾಗಿ ಸಸ್ತನಿಗಳು ವಿನಾಶದಂಚಿನಲ್ಲಿವೆ. ಅದರಲ್ಲೂ ಏಷ್ಯಾ ಖಂಡದಲ್ಲಿ ಕೃಷಿ ಹಾಗೂ ಕೈಗಾರಿಕೆ ಅಭೃವೃದ್ಧಿ ಹೆಚ್ಚಾಗಿದೆ. ಶೇ. 79ರಷ್ಟು ವಾನರ ಸಂತತಿ ಅಳಿವಿನಂಚಿನಲ್ಲಿವೆ. ವಿಶ್ವದಾದ್ಯಂತ ಶೇ. 78ರಷ್ಟು ಕಡಲ ಸಸ್ತನಿಗಳು, ದುರಂತ ಸಾವಿನ ಭೀತಿ ಎದುರಿಸುತ್ತಿವೆ.
=
10.ಮನುಷ್ಯನ ಬಳಕೆಗೆ ಯೋಗ್ಯವಾಗಿರುವ ನೀರು ಕೇವಲ ಶೇ. 1ರಷ್ಟು. ಶೇ. 87ರಷ್ಟು ಶುದ್ಧ ನೀರಿನ ಮೂಲಗಳು ಕೃಷಿಗೆ ಬಳಕೆಯಾಗುತ್ತಿದೆ. ಅದರಲ್ಲಿ ಶೇ. 60ರಷ್ಟು ನೀರು ಪರಿಣಾಮಕಾರಿಯಲ್ಲದ ನೀರಿನ ವ್ಯವಸ್ಥೆಗಳಿಂದ ವೇಸ್ಟ್ ಆಗುತ್ತಿದೆ. ಏಷ್ಯಾದ ಬಹುತೇಕ ರಾಷ್ಟ್ರಗಳು 2025ರ ಹೊತ್ತಿಗೆ ನೀರಿನ ಕೊರತೆ ಎದುರಿಸಲಿವೆ. ಅಮೆರಿಕನ್ನರು ಗೃಹಬಳಕೆಗೆ ನಿತ್ಯ 300 ಗ್ಯಾಲನ್ ನೀರು ಬಳಸುತ್ತಾರೆ. ಅಲ್ಲದೇ, ಸಾವಿರಾರು ಗ್ಯಾಲಲ್ ನೀರು ಹುಲ್ಲುಗಾವಲು ನೀರಾವರಿಗೆ ಬಳಕೆ ಮಾಡುತ್ತಾರೆ. ಇನ್ನು ಅಮೆರಿಕ ನಿರುಪಯೋಗಿ ವಸ್ತು ಉತ್ಪಾದನೆಯಲ್ಲಿ ಎತ್ತಿದ ಕೈ. ದಿನನಿತ್ಯ ಒಂದು ಬಿಲ್ಡಿಂಗ್‌ನಷ್ಟು ತ್ಯಾಜ್ಯ ಉತ್ಪಾದಿಸುತ್ತಿದ್ದು, ಪ್ರತಿ ಗಂಟೆಗೊಮ್ಮೆ 25 ಲಕ್ಷ ಪ್ಲಾಸ್ಟಿಕ್ ಬಾಟಲ್‌ಗಳನ್ನು ಎಸೆಯುತ್ತಿದೆ. ಭೂಮಿಯನ್ನು 436 ಬಾರಿ ಸುತ್ತು ಹಾಕುವಷ್ಟು ಪ್ಲಾಸ್ಟಿಕ್ ಕಪ್‌ಗಳು ತಯಾರಾಗುತ್ತವೆ. ಅಲ್ಲದೇ ಲಾಸ್ ಏಂಜಲೀಸ್‌ನಿಂದ ನ್ಯೂಯಾರ್ಕ್ ನಗರದವರೆಗೂ 12 ಅಡಿ ಎತ್ತರ ಗೋಡೆಯಷ್ಟು ಆಫೀಸ್ ವೇಸ್ಟ್ ಪೇಪರ್ ಉತ್ಪತ್ತಿಯಾಗುತ್ತದೆ.

11.ಇಂಗ್ಲೆಂಡ್, ವೇಲ್ಸ್ ಹಾಗೂ ಸ್ಕಾಟ್‌ಲ್ಯಾಂಡ್ ಭೂವಿಸ್ತಾರದಷ್ಟು ಅಂದ್ರೆ 50 ಮಿಲಿಯನ್ ಎಕರೆ ಮಳೆಕಾಡನ್ನು ಪ್ರತಿವರ್ಷ ಕಳೆದುಕೊಳ್ಳುತ್ತಿದ್ದೇವೆ. ನಿತ್ಯ ನೂರಾರು ಬಗೆಯ ಮರಗಳು ಕಣ್ಮರೆಯಾಗುತ್ತಿವೆ. ಮುಂದಿನ 50 ವರ್ಷಗಳಲ್ಲಿ ಶೇ.5ರಿಂದ 10ರಷ್ಟು ಉಷ್ಣವಲಯ ಕಾಡಿನ ಜಾತಿಗಳು ನಾಶವಾಗಲಿವೆ. 2030ರೊಳಗೆ ಅಮೆಜಾನ್ ಅರಣ್ಯ ಸಂಪೂರ್ಣವಾಗಿ ಕಣ್ಮರೆಯಾಗಲಿದೆ. ಪ್ರಪಂಚದ ಶೇ. 55ರಷ್ಟು ಮಳೆ ಕಾಡುಗಳು ಕೃಷಿ, ಬರ, ಬೆಂಕಿ, ಮರ ಕಡಿಯುವುದು ಹಾಗೂ ಜಾನುವಾರುಗಳಿಂದಾಗಿ ಮುಂದಿನ 22 ವರ್ಷಗಳಲ್ಲಿ ಸರ್ವನಾಶವಾಗಲಿವೆ ಎಂದು ವರದಿಗಳಲ್ಲಿ ಹೇಳಲಾಗಿದೆ.
=
12.ಹಸಿರುಮನೆ ಅನಿಲ ಹೊರಸೂಸುವಿಕೆ ಸದ್ಯದ ಸ್ಥಿತಿಯಲ್ಲಿರುವಂತೆಯೇ ಮುಂದುವರಿದರೆ, 21ನೇ ಶತಮಾನದ ಅಂತ್ಯದಲ್ಲಿ ಸರಾಸರಿ ತಾಪಮಾನ ಶೇ. 12 ಡಿಗ್ರಿ ಫ್ಯಾರನ್ ಹೀಟ್‌ನಷ್ಟು ಹೆಚ್ಚಾಗುವುದು. ತಾಪಮಾನ ವೃದ್ಧಿಸುವ 7.2 ಡಿಗ್ರಿ ಫ್ಯಾರನ್ ಹೀಟ್, ವಿಶ್ವದ ಮಹಾದುರಂತಕ್ಕೆ ಕಾರಣವಾಗುತ್ತದೆ. ಈ ಶತಮಾನದಲ್ಲಿ ಹೆಚ್ಚಾಗಿರುವ ಈ 7.2 ಡಿಗ್ರಿ ಫ್ಯಾರನ್ ಹೀಟ್ ಡಿಗ್ರಿ ತಾಪಮಾನ ಹಿಮಯುಗದ ಅಂತ್ಯದಿಂದ ಕಳೆದ 15 ಸಾವಿರ ವರ್ಷಗಳಲ್ಲಿದ್ದ ತಾಪಮಾನಕ್ಕೆ ಸಮ.
=
13.ಇಡೀ ವಿಶ್ವದ ಜನರು ಅಮೆರಿಕನ್ನರಂತೆ ಜೀವನ ನಡೆಸುವುದಿದ್ದರೆ ಸಾಕಷ್ಟು ಸಸ್ಯ ಸಂಪೂನ್ಮೂಲಗಳು ಬೇಕಾಗುತ್ತವೆ. ಕಾರಣ ಇಷ್ಟೆ. ಅಮೆರಿಕ ದೇಶವೊಂದೇ ಶೇ. 83ರಷ್ಟು ಇಂಗಾಲ ಅನಿಲವನ್ನು ಹೊರ ಸೂಸುತ್ತಿವೆ.

-ಶೋಭಾ ಎಸ್.
shobhasavi@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com