

ಮೋಡ ಕಟ್ಟುತ್ತಲೇ ಇಲ್ಲ... ಮಳೆ ಹನಿಗಾಗಿ ಇಳೆ ಕಾಯುತ್ತಿದೆ, ನೆಲವಿಡೀ ಬಂಜರಾಗಿ ಬಿರುಕು ಬಿಡುತ್ತಿದೆ. ಹನಿ ನೀರಿಲ್ಲದೆ ಗಿಡಮರಗಳು ಸೊರಗಿ ಹೋಗಿವೆ. ಅಯ್ಯೋ, ಊರಿಗೆ ಅನಾವೃಷ್ಟಿಯ ದುರಾದೃಷ್ಟ ಕಾಲಿಟ್ಟಿತಲ್ಲ ಎಂಬ ಚಿಂತೆಯಲ್ಲಿ ಬೇಯುತ್ತಿದ್ದ ಮೆಕ್ಸಿಕೋ ಜನರಿಗೆ ಈಗ ಅಂಥ ಆತಂಕವೇ ಇಲ್ಲ.
ಏಕೆ ಗೊತ್ತೇ? ಅಲ್ಲಿ ಕ್ಷಾಮ ಬಂದರೂ ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತವೆ, ಬರಗಾಲದಲ್ಲೂ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ. ಇದಕ್ಕೆಲ್ಲ ಕಾರಣ ನೀರಿನ ಪೌಡರ್.
ಏನಿದು ಪೌಡರ್ ನೀರು?
ನೀವು ಹಾಲಿನ ಪುಡಿ ನೋಡಿದ್ದೀರಿ ತಾನೆ? ಅದೇ ರೀತಿ ನೀರಿನ ಪುಡಿ ತಯಾರಿಸಿದ್ದಾರೆ ಮೆಕ್ಸಿಕೋದ ಕೆಮಿಕಲ್ ಎಂಜಿನಿಯರ್. ಈ ನೀರಿನ ಪುಡಿಯ ಹೆಸರು 'ಸಾಲಿಡ್ ರೈನ್'. ಎಂಜಿನಿಯರ್ ಸರ್ಜಿಯೋ ಜೀಸಸ್ ರಿಸೋ ವೆಲಾಸ್ಕೋ ಎಂಬವರು ಇಂಥದ್ದೊಂದು ಮಹತ್ವದ ಸಂಶೋಧನೆ ಮಾಡಿ ಯಶಸ್ವಿಯಾಗಿದ್ದಾರೆ. ಪೊಟ್ಯಾಸಿಯಂ ಪಾಲಿಅಕ್ರೈಲೇಟ್ ಎಂಬ ಹೀರುವ ಸಾಮರ್ಥ್ಯವುಳ್ಳ ವಸ್ತುವಿನಿಂದ ಸಾಲಿಡ್ ರೈನ್ ಅನ್ನು ತಯಾರಿಸಲಾಗುತ್ತದೆ. ಅಂದರೆ ನೀರನ್ನು ಪೌಡರ್ನಂತೆ ಮಾಡಿ ಅದನ್ನು ಸಂಗ್ರಹಿಸಿಡಲಾಗುತ್ತದೆ. ಇದು ನೋಡಲು ಸಕ್ಕರೆಯಂತಿರುತ್ತದೆ.
ಒಂದು ವರ್ಷದ ತನಕ
ಮಳೆ, ನೀರಿರುವ ಸಂದರ್ಭದಲ್ಲಿ ಪಾಲಿಮರ್ ಮೂಲಕ ನೀರನ್ನು ಹೀರಿಕೊಳ್ಳಲಾಗುತ್ತದೆ. ಈ ಪಾಲಿಮರ್ಗೆ ತನ್ನ ಗಾತ್ರಕ್ಕಿಂತ 500 ಪಟ್ಟು ಅಧಿಕ ನೀರನ್ನು ಹೀರಿಕೊಳ್ಳುವ ಶಕ್ತಿಯಿರುತ್ತದೆ. ಅಲ್ಲದೆ ಒಮ್ಮೆ ಹೀರಿಕೊಂಡ ನೀರು ಆವಿಯಾಗುವುದು ಅಥವಾ ಹರಿದುಹೋಗುವ ಸಾಧ್ಯತೆಯೇ ಇಲ್ಲ. ಇದನ್ನು ಒಂದು ವರ್ಷದ ತನಕ ಹಾಗೆಯೇ ಸಂಗ್ರಹಿಸಿಟ್ಟುಕೊಳ್ಳಬಹುದು. ಒಂದು ಇಡೀ ಲೀಟರ್ ನೀರನ್ನು 10 ಗ್ರಾಂ ಪುಡಿಯನ್ನಾಗಿ ಸಂಗ್ರಹಿಸಬಹುದು. ನಂತರ ಅದನ್ನು ದಪ್ಪನೆಯ, ಪಾರಭಾಸಕ ಜೆಲ್ ಆಗಿ ಪರಿವರ್ತನೆ ಮಾಡಲಾಗುತ್ತದೆ.
ಐಡಿಯಾ ಹೊಳೆದಿದ್ದು ಹೇಗೆ?
ಮಕ್ಕಳ ನ್ಯಾಪಿಗಳು ಅಷ್ಟೊಂದು ಲಿಕ್ವಿಡ್ ಅನ್ನು ಅಷ್ಟು ಸಣ್ಣ ಪ್ರದೇಶದಲ್ಲಿ ಹೇಗೆ ಇಟ್ಟುಕೊಳ್ಳುತ್ತವೆ ಎಂಬುದರ ಬಗ್ಗೆ ಹೆಚ್ಚು ಅಧ್ಯಯನ ನಡೆಸಿದ ಎಂಜಿನಿಯರ್ ಸರ್ಜಿಯೋಗೆ ಈ ಉಪಾಯ ಹೊಳೆಯಿತು. ನ್ಯಾಪಿಯಲ್ಲಿ ಬಳಸುವಂಥ ಹೀರಿಕೊಳ್ಳುವ ವಸ್ತುವೊಂದರಿಂದ ನೀರನ್ನು ಪುಡಿಯಾಗಿ ಪರಿವರ್ತಿಸಬಹುದು ಎಂಬ ಆಲೋಚನೆ ಅವರಿಗೆ ಮೂಡಿತು. ಅದರಂತೆ ಪೊಟ್ಯಾಸಿಯಂ ಪಾಲಿಅಕ್ರೈಲೇಟ್ ಎಂಬ ಅಂಶದತ್ತ ಮುಖಮಾಡಿದರು.
ಬರಗಾಲದಲ್ಲಿ ಉಪಯೋಗ
ಪುಡಿಯಾಗಿ ಬದಲಾದ ನೀರನ್ನು ಮೆಕ್ಸಿಕೋದ ಬರಗಾಲದ ಸಮಸ್ಯೆಯನ್ನು ನೀಗಿಸಲು ಬಳಸಿಕೊಂಡರು ಸರ್ಜಿಯೋ. ವಿಶೇಷವೆಂದರೆ, ಒಮ್ಮೆ ಪುಡಿಯಾಗಿ ಸಕ್ಕರೆಯಂತಾಗುವ ನೀರು ತಾನಾಗಿಯೇ ಆವಿಯಾಗುವುದಾಗಲೀ, ಒಣಗುವುಗಾದಲೀ ಆಗುವುದಿಲ್ಲ. ಬದಲಾಗಿ ನೀವು ಯಾವಾಗ ಈ ಪುಡಿಯನ್ನು ಗಿಡಗಳ ಬುಡಕ್ಕೆ ಹಾಕುತ್ತೀರೋ ಅಥವಾ ಅದು ಯಾವಾಗ ಮಣ್ಣಿನೊಂದಿಗೆ ಬೆರೆಯುತ್ತದೆಯೋ ಆಗ ಅದು ನೀರಾಗಿ ಪರಿವರ್ತನೆಯಾಗುತ್ತದೆ. ಅಂದರೆ ಗಿಡಗಳು ನೀರಿನಂಶ ಹೀರಿಕೊಳ್ಳುತ್ತವೆ.
ಭರ್ಜರಿ ಬೆಳೆ
ಮೆಕ್ಸಿಕೋ ಸರ್ಕಾರವು ಈ ಸಾಲಿಡ್ ರೈನ್ (ನೀರಿನ ಪುಡಿ) ಅನ್ನು ಹಿಡಾಲ್ಗೋ ರಾಜ್ಯದ ರೈತರಿಗೆ ಸ್ಯಾಂಪಲ್ನಂತೆ ನೀಡಿ ತಮ್ಮ ಭೂಮಿಯಲ್ಲಿ ಬಳಸಲು ತಿಳಿಸಿತ್ತು. ಅದರಂತೆ, ರೈತರು ತಮ್ಮ ಜಮೀನಿನಲ್ಲಿ ಈ ಹೊಸ ಸಂಶೋಧನೆಯ ಪರೀಕ್ಷೆ ನಡೆಸಿದರು. ಅಚ್ಚರಿಯೆಂದರೆ, ನೀರಿನ ಪುಡಿ ಬಳಸಿದ ಭೂಮಿಗಳಲ್ಲಿ ಭರ್ಜರಿ ಇಳುವರಿ ದೊರೆಯಿತು. ಬೆಳೆಯ ಪ್ರಮಾಣ ಶೇ.300ರಷ್ಟು ಹೆಚ್ಚಾಯಿತು. ಸಾಲಿಡ್ ರೈನ್ ಬಳಸದೇ ಹೆಕ್ಟೇರ್ಗೆ 450 ಕೆಜಿ ಬರುತ್ತಿದ್ದ ಬೀನ್ಸ್ ಈ ಪುಡಿಯ ಬಳಕೆಯ ನಂತರ 3 ಸಾವಿರ ಕೆಜಿ ಇಳುವರಿ ಬಂತು. ಅದೇ ರೀತಿ, 2,500 ಕೆಜಿ. ಓಟ್ಮೀಲ್ ಬೆಳೆಯುತ್ತಿದ್ದ ಪ್ರದೇಶದಲ್ಲಿ ಬರೋಬ್ಬರಿ 5 ಸಾವಿರ ಕೆಜಿ ಬಂದ ಬೆಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತು. ಮೆಕ್ಸಿಕೋದಲ್ಲಿ ಸಾಲಿಡ್ ರೈನ್ನ ದರ 1489. ಇತ್ತೀಚೆಗಷ್ಟೇ ಸಾಲಿಡ್ ರೈನ್ಗೆ ಮಿಗುವೆಲ್ ಅಲೆಮನ್ ಫೌಂಡೇಶನ್ನಿಂದ 'ಇಕಾಲಜಿ ಆ್ಯಂಡ್ ಎನ್ವಿರಾನ್ಮೆಂಟ್' ಪ್ರಶಸ್ತಿ ದೊರೆತಿದೆ. ಕ್ಷಾಮ ಎದುರಿಸುತ್ತಿದ್ದ ಪ್ರದೇಶಗಳಲ್ಲಿ ಈ ನೀರಿನ ಪುಡಿ ಹೊಸ ಭರವಸೆಯ ಆಶಾಕಿರಣ ಮೂಡಿಸಿದೆ.
- ದಿಯಾ