.jpg?w=480&auto=format%2Ccompress&fit=max)
.jpg?w=480&auto=format%2Ccompress&fit=max)
ಮಕ್ಕಳಿಗೆ ಪರಿಸರದ ನಡುವೆ ಶಿಕ್ಷಣ ನೀಡುವಂತಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಪ್ರಕೃತಿದತ್ತ ವಸ್ತುಗಳನ್ನೇ ಬಳಸಿ ನಿತ್ಯದ ಜೀವನ ಸಾಗಿಸುವಂಥ ವಾತಾವರಣ ಇದ್ದಿದ್ದರೆ? ತಾಜಾ ಗಾಳಿ, ತಾಜಾ ನೀರು ಸೇವಿಸುತ್ತ ಮಣ್ಣಲ್ಲಿ ಆಡಿ ಬೆಳೆಯುವಂತಿದ್ದರೆ? ಪ್ಲಾಸ್ಟಿಕ್, ಸೀಮೆಂಟ್, ಯಾಂತ್ರಿಕ ಉಪಕರಣಗಳ ಮೊರೆ ಹೋಗಬೇಕಾದ ಅಗತ್ಯವೇ ಇಲ್ಲದಿರುತ್ತಿದ್ದರೆ?
ಈ ಕಾನ್ಸೆಪ್ಟ್ ನೋಡಿದ್ರೆ. ಗತಕಾಲಕ್ಕೆ ಒಮ್ಮೆ ಹೋಗಿಬಂದಂತೆ ಆಗುತ್ತದೆ. ಅಂದರೆ ನಮ್ಮ ಗುರುಕುಲ ವ್ಯವಸ್ಥೆ ಒಮ್ಮೆ ಕಣ್ಣ ಮುಂದೆ ಹಾದುಹೋಗುತ್ತದೆ. ಆದರೆ ಈಗ ಇಂಥ ಕಲಿಕಾ ವಾತಾವರಣ ಸೃಷ್ಟಿಸೋ ಶಾಲೆ ಇದ್ದರೆ ಎಷ್ಟು ಚೆನ್ನ?
ಅದು ಗ್ರೀನ್ ಸ್ಕೂಲ್
ಇಂಥದ್ದೊಂದು ಪರಿಸರ ಸ್ನೇಹಿ ಶಾಲೆ ಇದೆ. ಅದು ಇಂಡೋನೇಷ್ಯಾದ ಬಾಲಿಯಲ್ಲಿರುವ ಗ್ರೀನ್ ಸ್ಕೂಲ್. ಪರಿಸರದ ಸಮಗ್ರತೆ ಪರಿಚಯಿಸಿ ನೆಮ್ಮದಿ ಬದುಕಿನ ಸಾಧ್ಯತೆಗಳನ್ನು ಜಗತ್ತಿಗೇ ತೋರಿಸುತ್ತಿದೆ. ಇಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಪ್ರಕೃತಿ ಪ್ರೇಮವನ್ನು ಹೃದಯದಲ್ಲಿರಿಸಿಕೊಂಡಿದ್ದಾರೆ. ಯುಎಸ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಸೆಂಟರ್ ಗ್ರೀನ್ ಸ್ಕೂಲ್‌ಗೆ '2012 ಗ್ರೀನೆಸ್ಟ್ ಸ್ಕೂಲ್ ಆನ್ ಅರ್ಥ್' ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.
ಗ್ರೀನ್ ಸ್ಕೂಲ್ ಎಲ್ಲ ಶಾಲೆಗಳಿಗಿಂತ ಭಿನ್ನ. ಮಕ್ಕಳನ್ನು ಆಕರ್ಷಿಸುವಂತಿದೆ. ಮಕ್ಕಳು ತಾವಾಗಿಯೇ ಕಲಿಕೆಯಲ್ಲಿ ಪಾಲ್ಗೊಳ್ಳುವ ಹುಮ್ಮಸ್ಸನ್ನು ಮೂಡಿಸುತ್ತದೆ ಇಲ್ಲಿನ ಪರಿಸರ. ಜೂನ್‌ನಿಂದ ಆಗಸ್ಟ್ ತನಕ 'ಗ್ರೀನ್ ಕ್ಯಾಂಪ್ ಬಾಲಿ ಹಾಲಿಡೇ' ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರಲ್ಲಿ 5-8 ವರ್ಷದ ಮಕ್ಕಳಿಗಾಗಿ 3 ದಿನಗಳ ಕ್ಯಾಂಪ್. 9-12 ವರ್ಷದ ಮಕ್ಕಳಿಗಾಗಿ 5 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಆಸಕ್ತಿ ಮೂಡಿಸುತ್ತೆ...
ಹಣ್ಣುಗಳ ಪರಿಚಯ, ಕಚ್ಚಾವಸ್ತುಗಳ ಬಳಕೆ, ಪರ್ವತಾರೋಹಣ, ಗಾಳಿಪಟ ನಿರ್ಮಾಣ ಇತ್ಯಾದಿ ಸೃಜನಾತ್ಮಕ ಕ್ರಿಯಾಶೀಲತೆಯನ್ನು ಒದಗಿಸಿಕೊಡಬಲ್ಲ ಕಾರ್ಯಕ್ರಮಗಳಾಗಿವೆ. ಶಾಂತಿ, ಪ್ರೀತಿ, ಸತ್ಯ ಮತ್ತು ವಿವೇಕ ಪಡೆಯಲು ಪ್ರಶಾಂತ ವಾತಾವರಣ ಹುಡುಕುವ ವಾಡಿಕೆ ಇದೆ. ಇಂಥ ವಾತಾವರಣವನ್ನು ಗ್ರೀನ್ ಸ್ಕೂಲ್ ನೀಡಿದೆ. ಗಿಡ ಬೆಳೆಸುವುದು, ಸಸ್ಯಗಳಿಗೆ ನೀರುಣಿಸುವುದು ಇತ್ಯಾದಿ ಸಣ್ಣಪುಟ್ಟ ಕೆಲಸಗಳ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಮೂಡಿಸಿ ರೂಡಿಸಿಕೊಳ್ಳುವಂತೆ ಮಾಡುತ್ತಿದೆ.
ಹರ್ಡೆ ಕನಸು
ಗ್ರೀನ್ ಸ್ಕೂಲ್ ಕಮ್ಯುನಿಟಿ ಎಂಬ ಸಂಸ್ಥೆ ಇದ್ದು, ಇದು ಶಾಲೆಯ ಅಭಿವೃದ್ಧಿ, ಮಕ್ಕಳ ಕಲಿಕಾ ವಿದಾನದ ಸಫಲತೆ, ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುತ್ತಾ ಬಂದಿದೆ. ಗ್ರೀನ್ ಸ್ಕೂಲ್ ಜಾನ್ ಹರ್ಡೆಯ ಕನಸಾಗಿದ್ದು, ಮೊದಲ ಪ್ರಯತ್ನದಲ್ಲೇ ಯಶ ಕಂಡವರಲ್ಲ. ಪರಿಸರದೊಂದಿಗಿನ ಸ್ನೇಹಕ್ಕೆ ತಾಳ್ಮೆ ಮತ್ತು ಪ್ರಯತ್ನ ಅಗತ್ಯ ಎಂಬುದಾಗಿ ಅನುಭವದ ನುಡಿಯಾಡುತ್ತಾರೆ. ಗ್ರೀನ್ ಸ್ಕೂಲ್ ನಿರ್ಮಾಣದಲ್ಲಿ ಬಿದಿರನ್ನು ಹೆಚ್ಚು ಬಳಸಿಕೊಳ್ಳಲಾಗಿದೆ. ಸೇತುವೆ, ರಸ್ತೆ, ಮೈದಾನ, ಶಾಲಾ ವಠಾರ ಎಲ್ಲವೂ ಪ್ರಕೃತಿಯಿಂದ ಆವೃತವಾಗಿದ್ದು, ಮಕ್ಕಳ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.
ಇಂಥ ಶಾಲಾ ಪರಿಸರ ನಮ್ಮಲ್ಲೂ ಚಿಗುರೊಡೆದರೆ ಹೇಗೆ?
- ಮಂಜುನಾಥ್ ಎಲ್.ಕೆ.