ಹುಳಿ ಹುಣಸೆ

ಬಯಲುಸೀಮೆ ರೈತರಿಗೆ ಮಳೆಯಾಶ್ರಿತ ಬೇಸಾಯವೇ ಜೀವಾಳ.
ಹುಳಿ ಹುಣಸೆ
Updated on: 

ಬಯಲುಸೀಮೆ ರೈತರಿಗೆ ಮಳೆಯಾಶ್ರಿತ ಬೇಸಾಯವೇ ಜೀವಾಳ. ಕಾಲ-ಕಾಲಕ್ಕೆ ಮಳೆ- ಬೆಳೆ ಬಂದರೆ ಅನ್ನದಾತನ ಬದುಕು ಹಸನು. ಇಲ್ಲದಿದ್ದರೆ ಗುಳೆ ಹೋಗುವುದು ತಪ್ಪೋದಿಲ್ಲ. ಅದಕ್ಕೆ ಬಳ್ಳಾರಿ ಜಿಲ್ಲೆಯ ಕೃಷಿಕರು ಪರಿಹಾರ ಕಂಡುಕೊಂಡಿದ್ದು, ಅದೇ ಮಳೆ ಆಧಾರಿತ ಕಾಡು ಕೃಷಿ!

ಬರ ಬರವೆಂದು ಕೊರಗುವಿರೇಕೆ?
ಇಂಥದ್ದೊಂದು ಪ್ರಶ್ನೆ ಕೇಳತೊಡಗಿದ್ದಾರೆ ಬಳ್ಳಾರಿ ಜಿಲ್ಲೆಯ ರೈತರು.
ಹೌದು, ಬರಗಾಲಕ್ಕೆ ಬೆದರದೆ ಅದಕ್ಕೆ ಎದೆಯೊಡ್ಡಿ ಬದುಕನ್ನು ಬಂಗಾರವಾಗಿಸಿದ್ದಾರೆ ಈ ರೈತರು. ಕೃಷಿಕರು ಮನಸ್ಸು ಮಾಡಿದರೆ ಎಂಥ ಸವಾಲನ್ನೂ ಎದುರಿಸಬಹುದು ಎಂಬುದಕ್ಕೆ ತಾಜಾ ನಿದರ್ಶನವಿದು.
ಉತ್ತರ ಕರ್ನಾಟಕ... ಅದರಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಮಳೆ ಆಧಾರಿತ ಕಾಡು ಕೃಷಿ ಪ್ರಯೋಗ ಯಶಸ್ವಿಯಾಗಿದೆ. ಆ ಮೂಲಕ ಬೇಸಿಗೆಯಿರಲಿ, ಬರವಿರಲಿ ನಾವು ಎದುರಿಸಲು ಸಿದ್ಧ ಎಂದು ಹೇಳತೊಡಗಿದ್ದಾರೆ ರೈತರು! ಅವರ ಯಶಸ್ಸಿನ ಹಿಂದಿರುವುದು ಕಾಡು ಕೃಷಿ. ಅದನ್ನು ವೃಕ್ಷ ಕೃಷಿ ಅಂತಲೂ ಕರೆಯುತ್ತಾರೆ.
ಈ ವೃಕ್ಷ ಕೃಷಿಯಲ್ಲಿ ಹುಣಸೆ ಬೆಳೆಯದ್ದೇ ಪಾರಮ್ಯ. ಬೆಳವಲ, ಮಾವಿಗೆ ನಂತರದ ಸ್ಥಾನ. ಕಾಡು ಕೃಷಿ ರೈತರ, ಕೂಲಿ ಕಾರ್ಮಿಕರು ಸೇರಿದಂತೆ ಇಡೀ ಸಮುದಾಯದ ಬಾಳನ್ನು ಹಸನು ಮಾಡಿದೆ.

ಬೆಳೆಯೋದು ಸಿಂಪಲ್ ಕಣ್ರಿ...
ರೈತರು ಲಭ್ಯವಿರುವ ಅಲ್ಪ ನೀರಿನಿಂದ ಹುಣಸೆ ಸಸಿ ನೆಟ್ಟು ಆರೇಳು ವರ್ಷಗಳ ಕಾಲ ಆರೈಕೆ ಮಾಡಿದರೆ ಸಾಕು. ಮಳೆ, ಅಂರ್ತಜಲ ಬಳಸಿಕೊಂಡು ಗಿಡ ಬೆಳೆಯುತ್ತವೆ. ಹುಳಿ ಹುಣಸೆ ಮರದ ಫಲದಿಂದ ರೈತರು ನಿರಂತರವಾಗಿ ಸಿಹಿ ಪಡೆಯುತ್ತಾರೆ!
ಈ ಭಾಗದಲ್ಲಿ ನೂರಾರು ವರ್ಷ ಹಳೆಯ ಹುಣಸೆ ಮರಗಳಿಗೆ ಬರವಿಲ್ಲ. ಇಲ್ಲಿನ ಬಹುಪಾಲು ರೈತರ ಹೊಲಗಳ ಬದುವಿನಲ್ಲಿ ಹುಣಸೆ ಮರಗಳಿವೆ. ಕೆಲವೆಡೆ ಹುಣಸೆ ಮರಗಳೇ ಹೊಲದಲ್ಲಿ ತುಂಬಿ ಅದರ ತೋಪುಗಳಾಗಿರುವುದು ವಿಶೇಷ. ಇತ್ತೀಚೆಗೆ ಮಳೆ ಅನಿಶ್ಚಿತವಾಗಿರುವುದರಿಂದ ಇದು ತೋಟಗಾರಿಕೆ ಬೆಳೆಯಾಗಿ ಜನಪ್ರಿಯತೆ ಗಳಿಸುತ್ತಿದೆ. ಉದಾಹರಣೆಗೆ ಕೂಡ್ಲಿಗಿ ತಾಲೂಕಿನಲ್ಲೇ ನೂರು ಹೆಕ್ಟೇರ್‌ಗಿಂತ ಅಧಿಕ ಪ್ರದೇಶದಲ್ಲಿ ಹುಣಸೆ ಮರಗಳು ಹರಡಿಕೊಂಡಿವೆ. ಅಂದರೆ ಪ್ರತಿ ರೈತ ಸರಾಸರಿ ಕನಿಷ್ಠ ಆರೇಳು ಮರಗಳ ಒಡೆಯ!

ಬಲು ಡಿಮ್ಯಾಂಡ್
ಹುಣಸೆಗೆ ರಾಜ್ಯದಲ್ಲಷ್ಟೇ ಅಲ್ಲದೆ ನೆರೆಯ ಆಂಧ್ರದಲ್ಲೂ ಸಾಕಷ್ಟು ಬೇಡಿಕೆ. ಸವಿರುಚಿಯ ಅಡುಗೆಗೆ ಹುಣಸೆ ಶ್ರೇಷ್ಠ ಎಂಬ ನಂಬಿಕೆ ಹಲವು ನಳಪಾಕರದ್ದು. ಹೀಗಾಗಿ ರೈತರು ಮಾತ್ರವಲ್ಲದೆ ಸರ್ಕಾರವೂ ರಸ್ತೆಯ ಇಕ್ಕೆಲಗಳಲ್ಲಿ, ಅರಣ್ಯದಲ್ಲಿ ಹುಣಸೆ ಗಿಡ ಬೆಳೆಸುತ್ತಿದೆ. ಸರ್ಕಾರ ಹುಣಸೆ ಮರಗಳನ್ನು ಹರಾಜು ಹಾಕುತ್ತದೆ.

ಕಾರ್ಮಿಕರಿಗೆ ಕೂಲಿ
ಹುಣಸೆ ಮಳೆಗಾಲ ಮುಗಿದ ನಂತರ ನಿರುದ್ಯೋಗಿಗಳಾಗುವ ಸಾವಿರಾರು ರೈತ ಕಾರ್ಮಿಕರಿಗೆ ಉದ್ಯೋಗ ಒದಗಿಸುತ್ತದೆ. ಕೆಲವರು ಇದನ್ನು ಫುಲ್ ಟೈಂ ಕೆಲಸ ಮಾಡಿಕೊಂಡರೆ ಮತ್ತೆ ಕೆಲವರು ಮನೆಯ ಕೆಲಸ ಮುಗಿದ ಮೇಲೆ ಬಿಡುವಿನಲ್ಲಿ ಹುಣಸೆ ಬಡಿದು ಹಣ ಬಾಚುತ್ತಾರೆ ಹುಣಸೆ ನಂಬಿ ಕೆಲಸಕ್ಕೆ ಹೋದರೆ ಕೆಲವೊಮ್ಮೆ ಕೈ ತುಂಬಾ ಹಣ ಸಿಗದಿದ್ದರೂ ಕನಿಷ್ಠ ಪಕ್ಷ ಹೊಟ್ಟೆ- ಬಟ್ಟೆಗಂತೂ ಗೋತ ಇಲ್ಲ.

ಪೈಪೋಟಿ
ಹುಣಸೆ ಮರ ಹಿಡಿಯಲು ಗುತ್ತಿಗೆದಾರರ ನಡುವೆ ಪೈಪೋಟಿ ನಡೆಯುತ್ತದೆ. ತಲೆತಲಾಂತರದಿಂದ ಗುತ್ತಿಗೆ ಕೆಲಸ ಮಾಡಿಕೊಂಡ ಕುಟುಂಬಗಳು ಈ ಭಾಗದಲ್ಲಿವೆ. ಹುಣಸೆ ಬಡಿಯಲು ಕೆಲವು ನುರಿತ ಕೂಲಿ ಮಂದಿಗೆ ಭಾರೀ ಬೇಡಿಕೆ. ಬಿದ್ದ ಹಣ್ಣು ಆರಿಸಿ, ಆಯಕಟ್ಟಿನ ಸ್ಥಳಕ್ಕೆ ಸಾಗಿಸುವುದು, ಹಣ್ಣನ್ನು ಜಜ್ಜಿ ಗೊಳ್ಳೆ, ನಾರು, ಬೀಜ ಸೇರಿದಂತೆ ಇತರೆ ತ್ಯಾಜ್ಯ ಬೇರ್ಪಡಿಸಿ ಬಳಸಲು ಯೋಗ್ಯವಾಗುವಂತೆ ಮಾಡಲು ಅಸಂಖ್ಯಾತ ಕೃಷಿ ಕೂಲಿಗಾರರಿಗೆ ಕೆಲಸ ಒದಗಿಸುತ್ತದೆ. ಇದರಲ್ಲಿ ಮಹಿಳೆಯರು ಹಾಗೂ ಪುರುಷರು ಸಮಾನ ಶ್ರಮವಿರುವುದು ವಿಶೇಷ.

ರೇಟ್ ಹೇಗಿದೆ?
ಹುಣಸೆ ಹಣ್ಣಿನ ಪ್ರತಿ ಭಾಗವೂ ವ್ಯಾಪಾರ ದೃಷ್ಟಿಯಿಂದ ಮಹತ್ವ ಪಡೆದಿದೆ. ಇದರ ಬೀಜಗಳು ಸಾಮಾನ್ಯವಾಗಿ ಕ್ವಿಂಟಲ್‌ಗೆ ರು. 750- ರು. 1200 ವರೆಗೆ, ಗೊಳ್ಳು ಅಥವಾ ಸಿಪ್ಪೆಗೆ ಪ್ರತಿ ಚೀಲಕ್ಕೆ ರು. 150- ರು. 200 ವರೆಗೆ ಧಾರಣೆ ಸಿಗುತ್ತದೆ. ಅಲ್ಲದೆ, ಹುಣಸೆಯ ನಾರು ಮಡಕೆ, ಇಟ್ಟಿಗೆ ಭಟ್ಟಿ ಸುಡಲು, ಹೋಟೆಲ್‌ಗಳಲ್ಲಿ ಉರುವಲಾಗಿ ಬಳಕೆಯಾಗುತ್ತಿದೆ. ಹುಣಸೆ ಹೆಚ್ಚೂಕಮ್ಮಿ ಕೋಟ್ಯಂತರ ರು. ವ್ಯಾಪಾರ ವಹಿವಾಟು. ಹುಣಸೆ ಖರೀದಿಸಲು ಶಿವಮೊಗ್ಗ, ಬಳ್ಳಾರಿ, ನೆರೆಯ ಆಂಧ್ರದಿಂದ ಖರೀದಿದಾರರು ಬರುತ್ತಾರೆ.  

- ಆಶಾ ಸ್ವರೂಪ್ ಎಂ. ಕೊಟ್ಟೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com