

ಭೂ ತಾಪಮಾನ ಏರಿಕೆ ಸದ್ಯ ಜಾಗತಿಕ ಚರ್ಚೆಯ ವಿಷಯ. ಈ ವಿಷಯ ಚರ್ಚೆಗೆ ಬಂದಾಗಲೆಲ್ಲ ಹಸಿರುಮನೆ ಪರಿಣಾಮ ಅಥವಾ ಪ್ರಭಾವ (Greenhouse Effect) ಪ್ರಸ್ತಾಪವಾಗುತ್ತದೆ. 200 ವರ್ಷಗಳ ಈಚೆಗೆ ಗಣನೀಯ ಪ್ರಮಾಣದಲ್ಲಿ ಭೂಮಂಡಲದ ಉಷ್ಣತೆ ಏರಿಕೆ ಕಂಡಿದೆ. ಈ ಏರಿಕೆಯಿಂದ ಹಲವು ಸೂಕ್ಷ್ಮ ಜೀವಿವೈವಿಧ್ಯಗಳು ಭೂಮಿ ಮೇಲೆ ಜೀವಿಸಲು ಸಾಧ್ಯವಾಗದೆ ಅಳಿದು ಹೋಗಿವೆ. ಇದೇ ಪ್ರಮಾಣದಲ್ಲಿ ಭೂ ತಾಪಮಾನ ಏರಿಕೆಯಾಗುತ್ತಿದ್ದರೆ ಇನ್ನು ನೂರಾರು ವರ್ಷಗಳಲ್ಲಿ ಮತ್ತಷ್ಟು ಜೀವಿಗಳು ಇತಿಹಾಸದ ಪುಟ ಸೇರಲಿವೆ, ಮನುಷ್ಯನಿಗೂ ಬದುಕಲು ಕಷ್ಟವಾಗಲಿದೆ.
ಅರಣ್ಯನಾಶ, ಕೈಗಾರಿಕೆ, ಜನಸಂಖ್ಯೆ ಹೆಚ್ಚಳ, ತೈಲ, ವಿದ್ಯುತ್ ಉಪಕರಣಗಳ ಬಳಕೆ ಹೀಗೆ ಹಲವು ಕಾರಣಗಳಿಂದ ಹಸಿರುಮನೆ ಪ್ರಭಾವ ಸಮತೋಲನ ಕಳೆದುಕೊಳ್ಳುತ್ತಿದೆ. ಹೀಗಾಗಿಯೇ ಭೂಮಿಯ ಮೇಲ್ಮೈ ಬಿಸಿ ಹೆಚ್ಚುತ್ತಿದೆ.
ಹಸಿರುಮನೆ ಪರಿಣಾಮ
ಇದೊಂದು ನೈಸರ್ಗಿಕ ಕ್ರಿಯೆ. ಭೂ ಮಂಡಲದ ತಾಪಮಾನ ನಿಯಂತ್ರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರಕ್ರಿಯೆ ನಡೆಯದಿದ್ದರೆ ಭೂಮಿಯ ಮೇಲೆ ಯಾವುದೇ ಜೀವಿ ವಾಸಿಸಲು ಸಾಧ್ಯವೇ ಇಲ್ಲ.
ಸೂರ್ಯನ ಕಿರಣಗಳು ಹಲವು ಶಕ್ತಿಗಳಿಗೆ ಮೂಲ. ಅಂದರೆ ಸೂರ್ಯ ವಿವಿಧ ಶಕ್ತಿಯ ಮೂಲಗಳನ್ನು ಸೃಷ್ಟಿಸುವ ಜತೆಗೆ ಭೂಮಿಯ ಮೇಲಿನ ವಾತಾವರಣ ಬಿಸಿಯಾಗಿರುವಂತೆ ನೋಡಿಕೊಳ್ಳುತ್ತಾನೆ. ಸೂರ್ಯನ ಕಿರಣಗಳು ವಿವಿಧ ಅಳತೆಯ ತಂರಂಗಾಂತರಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಬಹುತೇಕ ಕಿರಣಗಳು ಮನುಷ್ಯನ ಅರಿವಿಗೆ ಬರುತ್ತವೆ. ಆದರೆ, ಅತಿ ಕಿರಿದಾದ ತರಂಗಾಂತರ ಹೊಂದಿರುವ ಕಿರಣಗಳ (ಅತಿನೇರಳೆ ಅಥವಾ Ultraviolet) ಹಾಗೂ ಅತಿ ಉದ್ದದ ತರಂಗಾಂತರ ಹೊಂದಿರುವ (ಕಡುಗೆಂಪು ಅಥವಾ Infrared) ಕಿರಣಗಳು ಮನುಷ್ಯನ ಅರಿವಿಗೆ ಬಾರದೆ ಭೂಮಿಯನ್ನು ತಲುಪುತ್ತವೆ. ಇವು ಹೆಚ್ಚು ಶಕ್ತಿಶಾಲಿಯಾಗಿರುತ್ತವೆ. ಅತಿನೇರಳೆ ವಿಕಿರಣಗಳು ಮನುಷ್ಯನಿಗೆ ಸುಟ್ಟಗಾಯಗಳನ್ನು, ಚರ್ಮದ ಕ್ಯಾನ್ಸರ್ ಉಂಟುಮಾಡಬಲ್ಲವು.
ಸೂರ್ಯನಿಂದ ಹೊರಟ ಸುಮಾರು ಶೇ. 50ರಷ್ಟು ಕಿರಣಗಳನ್ನು ಭೂಮಿ ಹೀರಿಕೊಂಡು ಉಳಿದ ಪ್ರಮಾಣವನ್ನು ಪ್ರತಿಫಲಿಸುತ್ತದೆ. ಹೀಗೆ ಪ್ರತಿಫಲಿಸಿದ ಕಿರಣಗಳು ಅಂದರೆ ಕಡುಗೆಂಪು ವಿಕಿರಣಗಳನ್ನು ಭೂಮಂಡಲದಲ್ಲಿರುವ ಹಸಿರುಮನೆ ಅನಿಲಗಳು ಹೀರಿಕೊಂಡು ಭೂಮಿಗೆ ಮರುಪ್ರತಿಫಲಿಸುತ್ತವೆ. ಹೀಗೆ ಮರುಪ್ರತಿಫಲಿಸಿದ ಕಿರಣಗಳು ಭೂಮಿ ಹಾಗೂ ಭೂಮಿಯ ಮೇಲ್ಮೈಯನ್ನು ಅಗತ್ಯಕ್ಕೆ ಬೇಕಿರುವಷ್ಟು ಬೆಚ್ಚಗೆ ಇಡುತ್ತವೆ. ಈ ಪ್ರಕ್ರಿಯೆಯನ್ನೇ 'ಹಸಿರುಮನೆ ಪರಿಣಾಮ' ಎನ್ನುತ್ತೇವೆ.
ಹಸಿರುಮನೆ ಅನಿಲ ಏಕೆ ಹೆಚ್ಚುತ್ತದೆ?
ಇತ್ತೀಚಿನ ವರ್ಷಗಳಲ್ಲಿ ಹಸಿರುಮನೆ ಅನಿಲದ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಇದು ಭೂ ತಾಪಮಾನ ಹೆಚ್ಚಳಕ್ಕೆ ಅನುವು ಮಾಡಿಕೊಟ್ಟಿದೆ. ಅರಣ್ಯನಾಶ, ಅತಿಯಾದ ಇಂಧನ ಬಳಕೆ, ಜನಸಂಖ್ಯೆ ಹೆಚ್ಚಳ, ಕೈಗಾರಿಕೆಗಳು-ಹಸಿರುಮನೆ ಅನಿಲ ಹೆಚ್ಚಳಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ. ಅರಣ್ಯ ಅತಿಯಾದ ನಾಶದಿಂದ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಿದೆ. ಮರ-ಗಿಡಗಳ ಸಂಖ್ಯೆ ಕುಗ್ಗುತ್ತಿರುವುದರಿಂದ ದ್ಯುತಿ ಸಂಶ್ಲೇಷಣೆ ಕ್ರಿಯೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಕಟ್ಟಿಗೆ ಸುಡುವುದು, ಕಾಡ್ಗಿಚ್ಚಿನಿಂದಲೂ ವಾತಾವರಣಕ್ಕೆ ಅತಿ ಹೆಚ್ಚು ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಸೇರ್ಪಡೆಯಾಗುತ್ತದೆ. ಜನಸಂಖ್ಯೆ ಹೆಚ್ಚಳದಿಂದಾಗಿ ಸಹಜವಾಗಿ ಬೇಡಿಕೆಗಳು ಹೆಚ್ಚುತ್ತವೆ. ಕೈಗಾರಿಕೆಗಳೂ ಬೆಳೆಯುತ್ತವೆ. ಇಂಧನ, ಕಲ್ಲಿದ್ದಲು, ಅಡುಗೆ ಅನಿಲ ಬಳಕೆ ಪ್ರಮಾಣ ಹೆಚ್ಚುತ್ತಿದೆ. ಕೈಗಾರಿಕೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತೈಲ, ಕಲ್ಲಿದ್ದಲು ಬಳಸಲಾಗುತ್ತಿದೆ. ಇದು ಹಸಿರುಮನೆ ಅನಿಲ ಹೆಚ್ಚಳಕ್ಕೆ ಇನ್ನೊಂದು ಕಾರಣ.
ವಿದ್ಯುತ್ ಉಪಕರಣ ಬಳಕೆಯಿಂದಲೂ ವಾತಾವರಣದಲ್ಲಿ ಹಸಿರುಮನೆ ಅನಿಲದ ಪ್ರಮಾಣ ಹೆಚ್ಚುತ್ತಿದೆ. ಮನೆಯಲ್ಲಿ ಬಳಸುವ ಫ್ರಿಜ್ ಕೂಡ ಹಸಿರುಮನೆ ಅನಿಲವನ್ನು ಬಿಡುಗಡೆ ಮಾಡುತ್ತದೆ. ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ಉದ್ಯಮಗಳು, ಸಿಮೆಂಟ್ ಕಾರ್ಖಾನೆಗಳು ಹೆಚ್ಚಿನ ಪ್ರಮಾಣದ ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುತ್ತವೆ.
ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಕೈಗಾರಿಕೆ ಯುಗ ಆರಂಭವಾದ ಮೇಲೆ ವಾತಾವರಣದಲ್ಲಿ ಶೇ. 34ರಷ್ಟು ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಿದೆ. ಬೃಹತ್ ಪ್ರಮಾಣದ ಕೈಗಾರಿಕೆಗಳು ಆರಂಭವಾಗುವ ಮುನ್ನ ಭೂಮಂಡಳದಲ್ಲಿ ಇಂಗಾಲದ ಡೈ ಆಕ್ಸೈಡ್ ಸಾಂದ್ರತೆ 270 ಪಿಪಿಎಂ (ಮಿಲಿಯನ್‌ನಲ್ಲಿ ಅಷ್ಟು ಭಾಗ) ಇತ್ತು. 1958ರಲ್ಲಿ 315ಕ್ಕೇರಿತು. 2012ರಲ್ಲಿ 380 ಪಿಪಿಎಂ ಆಗಿದೆ. ಸಾವಿರಾರು ವರ್ಷಗಳಲ್ಲಿ ಏರಿಕೆಯಾದ ಇಂಗಾಲದ ಡೈ ಆಕ್ಸೈಡ್ ಸಾಂದ್ರತೆ ಪ್ರಮಾಣದಷ್ಟು ಕಳೆದ 200 ವರ್ಷಗಳಲ್ಲಿ ಏರಿಕೆಯಾಗಿದೆ. ಹಸಿರುಮನೆ ಅನಿಲಗಳು ಇದೇ ವೇಗದಲ್ಲಿ ಹೆಚ್ಚುತ್ತಿದ್ದರೆ ಇಂಗಾಲದ ಡೈ ಆಕ್ಸೈಡ್ ಸಾಂದ್ರತೆ 2025ರಲ್ಲಿ 425 ಪಿಪಿಎಂ, 2050ರಲ್ಲಿ 500 ಪಿಪಿಎಂ ತಲುಪಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಭೂಮಂಡಲದ ತಾಪಮಾನ ಏರಿಕೆಯಾಗುತ್ತಲೇ ಇದೆ. ಮುಂದೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಾರೆ. ಮತ್ತಷ್ಟು ಹೆಚ್ಚಾದಂತೆ ತಡೆಯುವ ಬಗೆ ಹೇಗೆ ಎಂಬ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಪರಿಹಾರ ಮಾತ್ರ ಈ ವರೆಗೂ ದೊರೆತಿಲ್ಲ, ದೊರೆಯುವ ಲಕ್ಷಣವೂ ಕಾಣುತ್ತಿಲ್ಲ. ನಾಶವಾದ ಅರಣ್ಯವನ್ನು ಮರುಸೃಷ್ಟಿಸುವುದು ಸುಲಭದ ಮಾತಲ್ಲ. ಹಾಗೆಯೇ ಕೈಗಾರಿಕೆಗಳನ್ನೂ ಮುಚ್ಚಲಾಗದು. ಇಂಧನ ಬಳಕೆ ಕಡಿಮೆ ಮಾಡುವುದೂ ಆಗದ ಕೆಲಸ. ಯಾವುದಾದರೂ ಹೊಸ ತಾಂತ್ರಿಕತೆ ಬಳಸಿ ಹಸಿರುಮನೆ ಅನಿಲ ಹೆಚ್ಚದಂತೆ ತಡೆಯುವ ಕನಸು ಕಾಣುವುದೂ ಬೇಡ. ಆದರೆ ದೃಢ ಸಂಕಲ್ಪವಿದ್ದರೆ ಹಸಿರುಮನೆ ಅನಿಲಗಳ ಹೆಚ್ಚುತ್ತಿರುವ ವೇಗ ಕಡಿಮೆ ಮಾಡಲು ಸಾಧ್ಯವಿದೆ.
ಪ್ರಕೃತಿದತ್ತ ವ್ಯವಸ್ಥೆ
ಆವಿಯಾದ ನೀರು (ಏ2ಕ), ಮೋಡ, ಇಂಗಾಲದ ಡೈ ಆಕ್ಸೈಡ್ (ಈಕ2), ಮೀಥೇನ್ (ಈಏ4), ಓಝೋನ್, ಸಾರಜನಕದ ಆಕ್ಸೈಡ್ (ತೀರಾ ಅಲ್ಪ ಪ್ರಮಾಣದಲ್ಲಿರುತ್ತವೆ) ಹಸಿರುಮನೆ ಅನಿಲಗಳು. ಹಸಿರುಮನೆ ಅನಿಲಗಳಲ್ಲಿ ನೀರು, ಮೋಡದ ಪ್ರಮಾಣ ಶೇ. 36-70ರಷ್ಟಿದ್ದರೆ, ಇಂಗಾಲದ ಡೈ ಆಕ್ಸೈಡ್ ಶೇ. 9-26ರಷ್ಟಿರುತ್ತವೆ. ಮೀಥೇನ್ ಶೇ. 4-9ರಷ್ಟಿರುತ್ತವೆ. ಹಸಿರುಮನೆ ಅನಿಲಗಳು ಭೂಮಿಯನ್ನು ಬೆಚ್ಚಗಿಡುವ ಹೊದಿಕೆಯಂತೆ ಕಾರ್ಯ ನಿರ್ವಹಿಸುತ್ತದೆ. ಈ ಹಸಿರುಮನೆ ಅನಿಲಗಳು ಇಲ್ಲದೇ ಹೋಗಿದ್ದರೆ ಭೂಮಿಯ ತಾಪಮಾನ ಈಗಿರುವುದಕ್ಕಿಂತ ಸುಮಾರು 33 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಇರುತ್ತಿತ್ತು. ಅಂದರೆ ಯಾವುದೇ ಜೀವಿ ಬದುಕಲು ಸಾಧ್ಯವಿರಲಿಲ್ಲ. ಭೂಮಂಡಲದ ತಾಪಮಾನ ಅಗತ್ಯಕ್ಕೆ ತಕ್ಕಂತೆ ಕಾಯ್ದುಕೊಳ್ಳಲು ಪ್ರಕೃತಿಯೇ ನಿರ್ಮಿಸಿರುವ ವ್ಯವಸ್ಥೆ ಹಸಿರುಮನೆ ಪ್ರಭಾವ.
ನಾವೇನು ಮಾಡಬಹುದು?