

ತಗ್ಗು ಇದ್ದ ಕಡೆ ನೀರು ಹರಿದು ಹೋಗೋದು ಸಹಜ. ಈ ರೀತಿ ಮಳೆ ನೀರು ಹರಿದು ವ್ಯರ್ಥವಾಗದಂತೆ ತಡೆದು ಸದ್ಬಳಕೆ ಮಾಡಿಕೊಂಡರೆ ರೈತರಿಗೆ ಸಾಕಷ್ಟು ಅನುಕೂಲ. ಬಳ್ಳಾರಿ ಜಿಲ್ಲೆಯ ಸಂಡೂರು, ಕೂಡ್ಲಿಗಿ ತಾಲೂಕಿನ ಬಹಳಷ್ಟು ರೈತರು ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಯಶಸ್ಸು ಕಂಡಿದ್ದಾರೆ.
ಈಗ ಮಳೆಗಾಲ. ಇತ್ತೀಚಿನ ದಿನಗಳಲ್ಲಿ ಮಲೆನಾಡಿನಲ್ಲಿಯೇ ಮಳೆ ಅಪರೂಪವಾಗುತ್ತಿದೆ. ಇನ್ನು ಬಯಲುಸೀಮೆಯ ಪಾಡು ಕೇಳಲೇಬೇಡಿ. ಹೀಗೆ ಅಪರೂಪಕ್ಕೆ ಬೀಳುವ ಮಳೆಯನ್ನೇ ನೆಚ್ಚಿ ಬಿತ್ತನೆ ಮಾಡಿದರೆ ಫಲ ಕೈಸೇರುತ್ತೆ ಅನ್ನೋ ಗ್ಯಾರಂಟಿ ಇಲ್ಲ ಸ್ವಾಮಿ. ಹಾಗಾಗಿ ಹನಿ ನೀರನ್ನೂ ಅಮೃತದಂತೆ ಕಾಪಾಡಿ ಸದ್ಬಳಕೆ ಮಾಡಿಕೊಳ್ಳೋದು ಇವತ್ತಿನ ಜರೂರತ್ತು.
ಸಂರಕ್ಷಣಾ ತಂತ್ರ
ಈ ಭಾಗದ ರೈತರು ಮಳೆ ಬಂದಾಕ್ಷಣ ಪ್ರತಿ ಹನಿ ನೀರನ್ನೂ ತಮ್ಮ- ತಮ್ಮ ಹೊಲಕ್ಕೆ ಆಮಂತ್ರಣ ಕೊಡುತ್ತಾರೆ! ಅಂದರೆ, ಬಿದ್ದ ಮಳೆ ನೀರು ಸೀದಾ ಹೊಲಕ್ಕೆ ಬರುವಂತೆ ತಂತ್ರ ರೂಪಿಸಿದ್ದಾರೆ. ಹೀಗಾಗಿ ಪದೇ ಪದೆ ಮಳೆಗಾಗಿ ಮುಗಿಲು ನೋಡಲ್ಲ. ಮಳೆ ಬಂದಾಗ ಅದನ್ನು ಹಿಡಿದಿಟ್ಟುಕೊಂಡು ಮಳೆ ತಿಂಗಳುಗಟ್ಟಲೇ ಕೈಕೊಟ್ಟರೂ ನಿಶ್ಚಿಂತೆಯಿಂದ ಕೃಷಿ ಮಾಡುತ್ತಾರೆ.
ನೀರು ಸಂಗ್ರಹ ಹೇಗೆ?
ಇದು ಎಲ್ಲಾ ವಿಧದ ಜಮೀನಿನಲ್ಲಿ ಫಲ ನೀಡಿದರೂ ಹೆಚ್ಚಾಗಿ ಜೌಗು ಪ್ರದೇಶದಲ್ಲಿ ಪರಿಣಾಮಕಾರಿ. ರಸ್ತೆ, ಕಾಲು ಜಾಡು, ಬಂಡಿ ಜಾಡು, ಗುಡ್ಡಗಾಡುಗಳ ಬುಡ, ಕೆರೆಯ ಆಸುಪಾಸಿನ ಜಮೀನುಗಳ ರೈತರು ಇಂಥ ಕೃಷಿಗೆ ತೆರೆದುಕೊಳ್ಳುತ್ತಿದ್ದಾರೆ.
ಇವರೆಲ್ಲಾ ಮಳೆ ಬಂದಾಗ ತಮ್ಮ ಹೊಲಗಳಲ್ಲಿ ನೀರು ಹರಿದು, ಕುಂಟೆಗಳಲ್ಲಿ ಭರ್ತಿಯಾಗುವಂತೆ ನೋಡಿಕೊಳ್ಳುತ್ತಾರೆ. ಹೆಚ್ಚಾದ ನೀರನ್ನು ಹೊಲದ ಒಂದೆಡೆ ನಿರ್ಮಿಸಿದ ಗುಂಡಿಯಲ್ಲಿ ಸಂಗ್ರಹಿಸುತ್ತಾರೆ. ಮಳೆ ತಿಂಗಳುಗಟ್ಟಲೆ ಕೈಕೊಟ್ಟರೆ ಮತ್ತೆ ಆ ಗುಂಡಿಗಳಿಂದ ನೀರನ್ನು ಎತ್ತಿ ಮರು ಹಾಯಿಸಿ ಬೆಳೆ ತೆಗೆಯುತ್ತಾರೆ. ಜತೆಗೆ ಸ್ವಲ್ಪ ಆರೈಕೆ, ಕಾಲ- ಕಾಲಕ್ಕೆ ಕಳೆ ತೆಗೆದು ಗೊಬ್ಬರ ಇಟ್ಟರೆ ಎಕರೆಗೆ ಕನಿಷ್ಠ 20- 25 ಬ್ಯಾಗ್ ಭತ್ತಕ್ಕೆ ಮೋಸವಿಲ್ಲ. ಅಲ್ಲದೆ, ಈ ಪದ್ಧತಿಯಲ್ಲಿ ರಾಗಿಯನ್ನೂ ಬೆಳೆಯಬಹುದು.
ಬಯಲುಸೀಮೆಯಲ್ಲೂ ಸೋನಾಮಸೂರಿ!
ಮಲೆನಾಡಿನ ಭಾಗದಲ್ಲಿ ಮಳೆಗೆ ಬೆಳೆಯುವ ಐಆರ್- 64, ಸೋನಾಮಸೂರಿ ಭತ್ತವನ್ನು ಬಯಲುಸೀಮೆಯ ಬಂಡ್ರಿ, ಚೋರನೂರು, ಗುಡೇಕೊಟೆ ಭಾಗದ ಬಹುತೇಕ ರೈತರು ಮಳೆಗಾಲದಲ್ಲಿಯೇ ಬೆಳೆದು ಸಫಲರಾಗುತ್ತಿದ್ದಾರೆ. ಈ ಭತ್ತಕ್ಕೆ ಕನಿಷ್ಠ 10- 12 ದಿನಕ್ಕೊಮ್ಮೆ ಮಳೆ ಬಂದರೆ ಒಳಿತು. ಹೀಗೆ ನಿಯಮಿತವಾಗಿ ಬಯಲುಸೀಮೆಯಲ್ಲಿ ಮಳೆ ಅಸಾಧ್ಯ. ಇದಕ್ಕಾಗಿಯೇ ರೈತರದ್ದು ಈ ಪ್ರತಿತಂತ್ರ.
- ಸ್ವರೂಪಾನಂದ ಎಂ. ಕೊಟ್ಟೂರು