

ಕಿವಾನೋ ಇದರ ಮೂಲ ಆಫ್ರಿಕಾ. ಕೇರಳದ ಮಲಪ್ಪುರಂ ಜಿಲ್ಲೆಯ ಆನಕ್ಕಯಂ ಕೃಷಿ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿ. ನೂರಾರು ರೈತರು ಕಿವಾನೋ ಬೆಳೆಯುತ್ತಿದ್ದಾರೆ. ಇದು ತರಕಾರಿಯೋ ಹಣ್ಣೋ ಎಂದು ಪ್ರಶ್ನಿಸಿದರೆ ಎರಡೂ ಹೌದು.
ಆನಕ್ಕಯಂ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಪಿ. ರಾಜೇಂದ್ರನ್ ಉತ್ಸಾಹದಲ್ಲಿ ಕಿವಾನೋ ಕೇರಳದಲ್ಲಿ ಗೆದ್ದಿದೆ. ಆಫ್ರಿಕನ್ ಹಾರ್ನ್ಡ್ ಕುಕುಂಬರ್, ಜೆಲ್ಲಿ ಮೆಲನ್, ಹೆಜ್ಡ್ ಗೋರ್ಡ್.. ಹೀಗೆ ಹಲವು ನಾಮಗಳು. ಕಿವಾನೋ ಎಂದೇ ಜನಪ್ರಿಯ.
ಕೃಷಿ ಮಾಧ್ಯಮ 'ಅಡಿಕೆ ಪತ್ರಿಕೆ' ಮೂಲಕ ಕಿವಾನೋ ಬೀಜ ಕರಾವಳಿಗೆ ಕಾಲಿಟ್ಟಿತು. ಬೆಳೆದು ಫೀಡ್ಬ್ಯಾಕ್ ನೀಡುವ ಆಸಕ್ತರಿಗಷ್ಟೇ ಪತ್ರಿಕೆಯು ಬೀಜ ಹಂಚಿತು. ದ.ಕ. ಜಿಲ್ಲೆಯ ಪುಣಚದ ಕೃಷಿಕ ಮಲ್ಯ ಶಂಕರನಾರಾಯಣ ಭಟ್ಟರು ಪ್ರೀತಿಯಿಂದ ಕಿವಾನೋ ಬೀಜ ಊರಿದರು. ಆರೈಕೆ ಮಾಡಿದರು. ಕಾಯಿ ಬಿಟ್ಟಾಗ ಸಂತಸ. ಸ್ನೇಹಿತರಿಗೆ ಹಂಚಿದರು. 30- 40 ಕಾಯಿಗಳು ಬಿಟ್ಟಿತು.
ಕಾಯಿಯ ಹೊರಮೈಯಲ್ಲಿ ಚೂಪಾದ ಮುಳ್ಳುಗಳು. ಹಳೆಯ ಕಾಲದ ಆಯುಧ ನೆನಪಿಸುವ ರಚನೆ. ಮುಳ್ಳುಸೌತೆಯ ಹತ್ತಿರದ ಸಂಬಂಧಿ ಎನ್ನಬಹುದು. ಹೂರಣ ಅಂದ. ಒಪ್ಪವಾಗಿ ಜೋಡಿಸಿದ ಬೀಜಗಳು. ಸುತ್ತಲು ಹಟಜಿರು ಜೆಲ್ಲಿಯಂತಹ ವಸ್ತು.
ಚಪ್ಪರದಲ್ಲಿ ಬೆಳೆವ ಹೊಸ ನೆಂಟನತ್ತ ನಿತ್ಯ ನೋಟ. ಹೂಕಚ್ಚಿ, ಕಾಯಿಯಾಗುವ ತನಕ ನಿಗಾ. ಕಾಯಿ ಬಿಟ್ಟಾಗ ಹೊರಮೈಯಲ್ಲಿ ಆಕರ್ಷಕ ಮುಳ್ಳು. ಇದನ್ನು ತೆಗೆಯುವ ಜಾಣ್ಮೆಯ ಕುರಿತು ಮನೆಮಂದಿ ಸಮಲೋಚನೆ. ಚಿಕ್ಕ ಚಾಕುವಿನಿಂದ ಮುಳ್ಳುಗಳನ್ನು ಹೆರೆಸಿ ತೆಗೆದರು. ಕಾಯನ್ನು ತುಂಡರಿಸಿ ತಿಂದಾಗ ಥೇಟ್ ಮುಳ್ಳುಸೌತೆಯ ರುಚಿ. 'ಹೊಸ ತರಕಾರಿಯಲ್ವಾ, ಆರಂಭದಲ್ಲಿ ಬಾಯಿಗಿಡುವಾಗ ಕೈ ನಡುಗಿತು' ಎಂದು ನಗೆಯಾಡುತ್ತಾರೆ ಭಟ್ಟರು.
ತೀರಾ ಎಳೆಯ ಕಾಯಿಗೂ, ಬಲಿತದ್ದಕ್ಕೂ ರುಚಿಯಲ್ಲಿ ವ್ಯತ್ಯಾಸವಿದೆ. ಜ್ಯೂಸ್ ಮಾಡಿದರೆ ರುಚಿ ಹೆಚ್ಚು. ಸಲಾಡಿನಂತೆ ಬಳಸಬಹುದು. ಕ್ಷಿಪ್ರವಾಗಿ ಬೇಯುವ ಗುಣ. ಎಲ್ಲಾ ತರಕಾರಿ ಕೃಷಿ ಮಾಡುವಂತೆ ಶಂಕರ ಭಟ್ಟರು ಮಾಡಿದರು. ಚಪ್ಪರಕ್ಕೆ ಹಬ್ಬಿಸಿದರು. ಗೊಬ್ಬರ ಉಣಿಸಿದರು. ನಮ್ಮೂರಿಗೆ ಹೊಸತು ಅಂದಾಗ ಅದು ನಮ್ಮಲ್ಲೇ ಬೆಳೆಯಬೇಕು, ಬೆಳೆದು ತೋರಿಸಬೇಕು ಎಂಬ ಛಲ. ಸ್ನೇಹಿತರಿಗೆ, ಆಪ್ತರಿಗೆ ಹಂಚಿದಾಗ ಎಲ್ಲರೂ ಆಶ್ಚರ್ಯಪಟ್ಟವರೇ.
ಕಿವಾನೋ ಕರಾವಳಿಗೆ ಹೊಸತು. ಹಾಗಾಗಿ ಅದರ ಕೃಷಿ ಮಾಡುವ ವಿಧಾನ, ಅದಕ್ಕೆ ಬೇಕಾದ ಪೋಷಕಾಂಶಗಳ ಕುರಿತು ಅರಿವಿಲ್ಲ. ಒಮ್ಮೆ ಮಾಡಿ ನೋಡಿದ ಅನುಭವದಲ್ಲಿ, ಅದು ಹೆಚ್ಚು ಆರೈಕೆ ಬೇಡುವುದಿಲ್ಲ ಎನ್ನುತ್ತಾರೆ ಭಟ್. ಕಿವಾನೋ ಹಣ್ಣಾದಾಗ ಹಳದಿ-ಕೇಸರಿ ಮಿಶ್ರ ಬಣ್ಣ.
ಶಂಕರ ಭಟ್ಟರಿಂದ ಬೀಜ ಪಡೆದ ಕರಿಂಗಾಣದ ಡಾ. ಕೆ.ಎಸ್. ಕಾಮತ್, ಮುಳಿಯ ವೆಂಕಟಕೃಷ್ಣ ಶರ್ಮ... ಮೊದಲಾದ ಕೃಷಿಕರಲ್ಲಿ ಕಿವಾನೋ ಅಭಿವೃದ್ಧಿ ಹೊಂದುತ್ತಿದೆ. 'ನಮ್ಮಲ್ಲಿ ಕಾಯಿಬಿಟ್ಟ ಬಳ್ಳಿ ಪೂರ್ತಿ ಒಣಗಿದೆ. ಬೀಜವನ್ನು ಕಾಪಿಟ್ಟಿದ್ದೇನೆ. ಮುಂದಿನ ಋತುವಿನಲ್ಲಿ ಅಭಿವೃದ್ಧಿ ಪಡಿಸುತ್ತೇನೆ' ಎಂದರು ಶಂಕರ ಭಟ್. ಇದಕ್ಕೆ ಯಾವುದೇ ರೋಗಬಾಧೆಯಿಲ್ಲ ಎಂದಾದರೆ ತರಕಾರಿಯಾಗಿ ಬೆಳೆಸಬಹುದು ಎಂಬ ಸಲಹೆ ಡಾ.ಕಾಮತರದ್ದು.
ಕಿವಾನೋ ಮೂರು ತಿಂಗಳ ಬೆಳೆ. ಕೇರಳದಲ್ಲಿ ಗೆದ್ದಿದೆ. ಕರಾವಳಿಯಲ್ಲೂ ಓಕೆ. ಅದರ ನೋಟ, ಗಾತ್ರಗಳು ಆಕರ್ಷಿಸುತ್ತದೆ. ಒಬ್ಬ ಹೊಸ ನೆಂಟನಿಗೆ ಹಿತ್ತಿಲಲ್ಲಿ ಜಾಗಕ್ಕೆ ಅಭಾವವಿಲ್ಲ. ಬೆಳೆಸುವ ಮನಸ್ಸು ಬೇಕು. ಆಸಕ್ತಿ ಬೇಕು.
--ನಾ. ಕಾರಂತ ಪೆರಾಜೆ