ಅಡುಗೆ ಸಿರಿ

ಅಂದು ಊಟದ ಬಟ್ಟಲಿನಲ್ಲಿ ಅಕ್ಕಿಯ ಅನ್ನವಿರಲಿಲ್ಲ, ನವಣೆಯ ಅನ್ನ ಮೊದಲ ಬಾರಿಗೆ ಉಂಡರು. ಜತೆಗೆ ....
ಅಡುಗೆ ಸಿರಿ
Updated on: 

ಅಂದು ಊಟದ ಬಟ್ಟಲಿನಲ್ಲಿ ಅಕ್ಕಿಯ ಅನ್ನವಿರಲಿಲ್ಲ, ನವಣೆಯ ಅನ್ನ ಮೊದಲ ಬಾರಿಗೆ ಉಂಡರು. ಜತೆಗೆ ಊದಲು ಚಿತ್ರಾನ್ನ. ಬರಗ ಕೇಸರಿಬಾತ್. ಸಾವೆ ಪಾಯಸ. ಐದಾರು ತುತ್ತಿನ ನಂತರ ಇವೆಲ್ಲ ಬಾಯಿಗೆ ಒಗ್ಗಿಕೊಂಡವು. ಪಾಕಗಳೆಲ್ಲ ರುಚಿ ವೈವಿಧ್ಯ ನೀಡುವಲ್ಲಿ ಸಫಲವಾಗಿದ್ದವು. ನವಣೆ, ಸಾವೆ, ಹಾರಕ, ಊದಲು, ಬರಗು, ಸಜ್ಜೆ... ಮೊದಲಾದವು ಸಿರಿಧಾನ್ಯಗಳು. ಕರಾವಳಿಗೆ ಅಪರೂಪ.
ಉತ್ತರ ಕನ್ನಾಡು ಸಿರಿಧಾನ್ಯಗಳ (ಂ್ಝಟಟಜಡಿ) ತವರೂರು. ಬರಕ್ಕೆ ಮಣಿಯದ, ಹೆಚ್ಚು ಸತ್ವವಿರುವ ಇವುಗಳ ರುಚಿಯನ್ನು ಕರಾವಳಿಯ ಆಹಾರದೊಂದಿಗೆ ಮಿಳಿತಗೊಳಿಸುವ ಯತ್ನ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಹಲಸು ಸ್ನೇಹಿ ಕೂಟವು ಮನೆಮನೆಗೆ ಸಿರಿಧಾನ್ಯದಡುಗೆ ಎಂಬ ಕಾರ್ಯಾಗಾರದಲ್ಲಿ ಹೊಸ ರುಚಿಯನ್ನು ಉಣಿಸಿತು.
ಆಹಾರವೇ ಔಷಧವಾಗಬೇಕೆನ್ನುವುದು ಹಲಸು ಸ್ನೇಹಿ ಕೂಟದ ಕಾಳಜಿ. ಹೆಚ್ಚು ಪೌಷ್ಟಿಕಾಂಶ ಭರಿತ ಸಿರಿಧಾನ್ಯಗಳು ಊಟದ ಬಟ್ಟಲು ಸೇರಿದಾಗ ಕಾಯಿಲೆಯನ್ನು ದೂರವಿಡಬಹುದಲ್ಲಾ. ಅಕ್ಕಿ, ಗೋಧಿ ರೂಢಿಯಾದ ಬಟ್ಟಲಲ್ಲಿ ಸಿರಿಧಾನ್ಯ ಖಾದ್ಯಗಳು ತುಂಬಿದಾಗ ಫಕ್ಕನೆ ಕಷ್ಟವೆಂದರೂ ರೂಢನೆಯಿಂದ ರೂಢಿಗತವಾಗುತ್ತದೆ. ಅರ್ಧ ಶತಮಾನಗಳ ಹಿಂದೆ ಕರಾವಳಿಯಲ್ಲಿ ನವಣೆ, ಬರಗ, ಸಾಮೆ ಬೆಳೆದಿರುವ ದಿವಸಗಳನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಮಾದರಿಗಳು ಮುಂದಿದ್ದರೆ ಅನುಸರಣೆ ಕಷ್ಟವಲ್ಲ. ಹಾಗಾಗಿ ಕಾರ್ಯಾಗಾರದಲ್ಲಿ ಗೃಹಿಣಿ ನಳಿನಿ ಸದಾಶಿವ ರಾವ್ ಮತ್ತು ಶಿಲ್ಪ ವಸಂತ ಕಜೆಯವರು ಸಿರಿಧಾನ್ಯಗಳ ಅಡುಗೆ ತಯಾರಿಸಿ ಸವಿಯಲು ನೀಡಿದರು. ರಾಗಿ ಶ್ಯಾವಿಗೆ, ನವಣೆ ಬಿಸಿ ಬೇಳೆಬಾತ್, ಸಜ್ಜೆ ದೋಸೆ, ಸಜ್ಜೆ ತಾಲಿಪಟ್ಟು, ಜೋಳ- ರಾಗಿ- ಸಜ್ಜೆಯ ಅರಳಿಟ್ಟು, ರಾಗಿ ಕೇಕ್, ನವಣೆ ಹಲ್ವಗಳ ರೆಸಿಪಿಯನ್ನು ದೊಡ್ಡದಾಗಿ ಬರೆದು ತಂದಿದ್ದರು. ಬಹುತೇಕರು ಕಾಗದಕ್ಕಿಳಿಸಿಕೊಂಡರು. ಅಡುಗೆ ಮನೆಯಿಂದ ಏನನ್ನು ಕಳಕೊಂಡಿದ್ದೇವೋ ಅದನ್ನು ಮರಳಿ ತರುವುದು. ಯಾಕೆಂದರೆ ಅಡುಗೆ ಎನ್ನುವುದು ಕಲೆ. ಕಲಾತ್ಮಕ ನೋಟವಿದ್ದರೆ ಮಾತ್ರ ಅಡುಗೆ ರುಚಿ ಕೊಡುತ್ತದೆ ನಳಿನಿಯವರ ಅನುಭವದ ಮಾತು. ವಸಂತ ಕಜೆಯವರು ಕಾರ್ಯಾಗಾರಕ್ಕಾಗಿಯೇ ಸಿದ್ಧಪಡಿಸಿ ತಂದಿದ್ದ ರಾಗಿ ಐಸ್ಕ್ರಿಮ್ ಹೊಸ ಸವಿಯೊಂದನ್ನು ಪರಿಚಯಿಸಿತು.
ಕರಾವಳಿಯಲ್ಲಿ ಬತ್ತ, ಗೋದಿ, ರಾಗಿಗಳು ಮಾರುಕಟ್ಟೆಯಲ್ಲಿ ಲಭ್ಯ. ಉಳಿದ ಸಿರಿಧಾನ್ಯಗಳ ಖಾದ್ಯ ಬಿಡಿ, ಧಾನ್ಯವನ್ನು ನೋಡದೇ ಇರುವವರು ಸಿಂಹಪಾಲು. ಅಲ್ಲೋ ಇಲ್ಲೋ ಕೆಲವು ಮಳಿಗೆಗಳಲ್ಲಿ ಲಭ್ಯವಿದ್ದರೂ, ಬಳಕೆಯ ರೀತಿ ಗೊತ್ತಿಲ್ಲದೆ ಇದ್ದರೆ ಏನು ಪ್ರಯೋಜನ? ಕಾರ್ಯಾಗಾರಗಳಿಂದ ಬಳಕೆಯ ರೀತಿ ಗೊತ್ತಾಯಿತು. ನಮ್ಮ ಆಹಾರ ಕ್ರಮಕ್ಕೆ ಸಿರಿಧಾನ್ಯಗಳನ್ನು ಟ್ಯೂನ್ ಮಾಡಿದರೆ ಹಲವು ಥರದ ಖಾದ್ಯ ತಯಾರಿಸಬಹುದು ಎನ್ನುತ್ತಾರೆ ಕಡಂಬಿಲ ದಿವ್ಯಾ ಮತ್ತು ಮುಳಿಯ ವಾಣಿ ಶರ್ಮ. ಕನ್ನಾಡಿನಲ್ಲಿ ಸಿರಿಧಾನ್ಯಗಳ ಕೃಷಿ ಹಿಂಬೀಳಿಕೆಯಲ್ಲಿದೆ. ಆದರೆ, ಕೆಲವು ಕಡೆ ಗಂಭೀರವಾಗಿ ಕೃಷಿಯೂ ನಡೆಯುತ್ತಿದೆ. ಧಾರವಾಡ ಕೃಷಿ ಮಾಧ್ಯಮ ಕೇಂದ್ರದ ಅನಿತಾ ಪೈಲೂರು ಸಿರಿಧಾನ್ಯಗಳ ವೈವಿಧ್ಯಗಳ ಹಿನ್ನಡೆಯನ್ನು ಹೇಳುತ್ತಾರೆ, ಹೈಬ್ರಿಡ್ ತಳಿ ಪ್ರವೇಶ, ಹತ್ತಿ- ಸೋಯಾಬೀನ್ನಂತೆ ವಾಣಿಜ್ಯ ಬೆಳೆಗಳಿಗೆ ಹೆಚ್ಚಿದ ಜನಪ್ರಿಯತೆ, ಮಿಶ್ರ ಬೆಳೆಯಾಗಿ ಸಿರಿಧಾನ್ಯಗಳನ್ನು ಬೆಳೆಸದೆ ಇರುವುದು, ಮಾರುಕಟ್ಟೆ ಸೌಲಭ್ಯದ ಕೊರತೆ, ಗ್ರಾಮೀಣರಲ್ಲಿ ಬದಲಾಗುತ್ತಿರುವ ಆಹಾರ ಪದ್ಧತಿ, ಸಿರಿಧಾನ್ಯಗಳ ಪೌಷ್ಟಿಕಾಂಶಗಳ ಮಾಹಿತಿ ಇಲ್ಲದಿರುವುದು, ಇಲಾಖೆಗಳು ಸಿರಿಧಾನ್ಯಗಳತ್ತ ನಿರ್ಲಕ್ಷ್ಯ ತಾಳಿರುವುದು, ತ್ರಾಸದಾಯಕ ಸಂಸ್ಕರಣೆ...
ಕಾರ್ಯಾಗಾರದಲ್ಲಿ ಸಿರಿಧಾನ್ಯಗಳ ಸಿರಿಯನ್ನು, ಪಾಕಗಳ ರುಚಿ ಸವಿದ ಮಂದಿಯೆದುರು ಇರುವುದು ಎರಡೇ ಪ್ರಶ್ನೆ, ಎಲ್ಲಿ ಸಿಗುತ್ತದೆ? ನಮಗೆ ಬೆಳೆಯಲು ಸಾಧ್ಯವಾ? ಹಲಸು ಸ್ನೇಹಿ ಕೂಟವು ಚಿಕ್ಕ ಹೆಜ್ಜೆಯಿಟ್ಟು ದಾರಿ ತೋರಿಸಿದೆಯಷ್ಟೇ. ಆ ದಾರಿಯಲ್ಲಿ ನಾವೇ ಸಾಗಬೇಕು. ದಾರಿ ಗೊತ್ತಾದ ಮೇಲೆ ಗುರಿ ತಲಪುವುದು ಕಷ್ಟವಲ್ಲದಿದ್ದರೂ ಲಕ್ಷ್ಯದತ್ತ ಸ್ಪಷ್ಟತೆಯಿದೆ. ಹಾಗಂತ ಅಕ್ಕಿ, ಗೋದಿಯನ್ನೋ ನಿರ್ಲಕ್ಷಿಸಬೇಕು ಎನ್ನುವ ಅರ್ಥವಲ್ಲ. ಊಟದ ಬಟ್ಟಲಿನಲ್ಲಿ ಅನ್ನ, ಚಪಾತಿಯೊಂದಿಗೆ ಸಿರಿಧಾನ್ಯಗಳೂ ಮೇಳೈಸಲಿ. ಆಹಾರ ವೈವಿಧ್ಯ ಹೆಚ್ಚಾಗಲಿ. ಆ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳೋಣ ಎನ್ನುವ ಸಂದೇಶವನ್ನಷ್ಟೇ ಕಾರ್ಯಾಗಾರ ನೀಡಿದೆ.
ಕಾರ್ಯಾಗಾರದಲ್ಲಿ ಸಿರಿಧಾನ್ಯಗಳೊಂದಿಗೆ ಮಾತುಕತೆ ಮಾಡಿದ ಡಾ. ಕೆ.ಎಸ್. ರಘು ಮಾತಿನ ಮಧ್ಯ ಹೇಳಿದರು, ಭಾರತದಲ್ಲಿ 253 ಮಿಲಿಯನ್ ಟನ್ ಆಹಾರ ಬೆಳೆಯುತ್ತೇವೆ. ಅದರಲ್ಲಿ 40 ಮಿಲಿಯನ್ ಟನ್ ಸಿರಿಧಾನ್ಯಗಳು. ಆಹಾರ ಉತ್ಪಾದಿಸಿ ರಫ್ತು ಮಾಡಿ ನಾವು ಸದೃಢರೆಂದು ಹೇಳಿಕೊಳ್ಳುತ್ತೇವೆ. ಆಹಾರ ರಫ್ತು ಮಾಡುವುದೆಂದರೆ ಭಾರತದ ಬಡತನ ರಫ್ತು ಮಾಡಿದಂತೆ...
ಹಲಸಿನ ಅಭಿವೃದ್ಧಿಗಾಗಿ ರೂಪುಗೊಂಡ ಹಲಸು ಸ್ನೇಹಿ ಕೂಟವು ಊಟದ ಬಟ್ಟಲನ್ನು ಲಕ್ಷ್ಯವಾಗಿಟ್ಟು ಮಾವು, ಸಿರಿಧಾನ್ಯ, ಗಡ್ಡೆ ಗೆಣಸು, ತರಕಾರಿ.. ಮೇಳಗಳನ್ನು ಜರುಗಿಸಿದೆ. ಜೀವವೈವಿಧ್ಯ, ರುಚಿವೈವಿಧ್ಯ ಶ್ರೀಮಂತಿಕೆಯತ್ತ ಬೊಟ್ಟು ಮಾಡಿದೆ. ಮುಳಿಯ ವೆಂಕಟಕೃಷ್ಣ ಶರ್ಮ, ಉಬರು ರಾಜಗೋಪಾಲ ಭಟ್, ಕಡಂಬಿಲ ಕೃಷ್ಣಪ್ರಸಾದ್, ಶಿರಂಕಲ್ಲು ನಾರಾಯಣ ಭಟ್, ಮಲ್ಯ ಶಂಕರನಾರಾಯಣ ಭಟ್... ಹೀಗೆ ಕೆಲವೇ ಕೆಲವು ಮಂದಿಯ ಕನಸಿನ ಹಲಸು ಸ್ನೇಹಿ ಕೂಟವು ನಾಲ್ಕು ವರುಷದಿಂದ ಸಕ್ರಿಯವಾಗಿದೆ.


- ನಾ. ಕಾರಂತ ಪೆರಾಜೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com