ಸಾಧನೆ

ಕಲಾ ಲತೆ

ಗ್ರಾಮೀಣ ಮಹಿಳೆಯರು ತಮ್ಮ ಬಿಡುವಿನ ವೇಳೆಯನ್ನು ಹೇಗೆ ಸೃಜನಶೀಲವಾಗಿ ವಿನಿಯೋಗಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ಇಲ್ಲೊಬ್ಬರು ಮಹಿಳೆ ಇದ್ದಾರೆ.

ಲಲಿತಾ ಹೆಗಡೆ ನಗರದಲ್ಲಿ ವಾಸಮಾಡುತ್ತಿಲ್ಲ. ಉದ್ಯೋಗದಲ್ಲಿರುವ ಗಂಡನನ್ನು ವರಿಸಿದವರಲ್ಲ. ಅವರು ಕೃಷಿ ಕಸುಬಿಗೆ ಹೊಂದಿಕೊಂಡಿರುವ ವಿ.ಎಂ. ಹೆಗಡೆ ಅವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿ, ಸಿದ್ದಾಪುರ ತಾಲೂಕಿನ ತ್ಯಾಗಲಿ (ಶಿಂಗು) ಎನ್ನುವ ಹಳ್ಳಿಯಲ್ಲಿಯೇ ಜೀವನದ ನೌಕೆ ಸಾಗಿಸುತ್ತಿರುವ ಸಾಮಾನ್ಯ ಮಹಿಳೆ. ಗ್ರಾಮೀಣ ಜೀವನದ ದೈನಂದಿನ ಜಂಜಡಗಳ ನಡುವೆಯೂ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹೆಣ್ಣು.
ಈ ಕೃಷಿ ಮಹಿಳೆ ಯಾವುದೇ ವಸ್ತುವನ್ನು ಕಸವೆಂದು ಎಸೆದವರಲ್ಲ. ಆದಷ್ಟೋ ನಿರುಪಯುಕ್ತ ವಸ್ತುಗಳು ಇವರ ಕೈಯಲ್ಲಿ ಅಲಂಕಾರದ ವಸ್ತುಗಳಾಗಿ ಅರಳಿವೆ. ಕರಡದ (ಒಣಹುಲ್ಲು) ಕಡ್ಡಿಯಿಂದ ಗಣಪತಿ, ಟೂತ್ಪೇಸ್ಟ್ ಕವರ್ನಿಂದ ಗಣಪ... ಇತ್ಯಾದಿ ವಿಶಿಷ್ಟ ಕಲಾಕೃತಿಗಳನ್ನು ಸಿದ್ಧಪಡಿಸಿದ್ದು ವಿಶೇಷ. ಅಲ್ಲದೇ, ಮಣಿಯಿಂದ ಆರತಿ ಬಟ್ಟಲು, ಬತ್ತದಿಂದ ಆರತಿ ಕಟ್ಟು, ಊಟದ ಪ್ಲೇಟಿನಲ್ಲಿ ಡಿಸೈನ್, ಮದುವೆಗಳಲ್ಲಿ ಬಳಸುವ ಬಿತ್ತಕ್ಕಿ ಬಟ್ಟಲಿಗೆ ಅಲಂಕಾರ, ಬೀಜದಿಂದ ಗ್ರೀಟಿಂಗ್ಸ್, ದಾರದಿಂದ ಆಕರ್ಷಕ ಗ್ರೀಟಿಂಗ್ಸ್, ಅಶ್ವತ್ಥ ಎಲೆ ಮೇಲೆ ಮನನೋಹಕ ವಿನ್ಯಾಸ, ಬಟ್ಟೆ ಮೇಲೆ ವಿಭಿನ್ನ ಕಲಾಕೃತಿ, ಉಲನ್ನಿಂದ ವಿವಿಧ ವಸ್ತುಗಳ ತಯಾರಿಕೆ.... ಹೀಗೆ ತಮ್ಮ ಕಲಾ ಪ್ರವೃತ್ತಿಯಲ್ಲಿ ಲಲಿತಾ ಹೆಗಡೆ ಸಕ್ರಿಯ.
ಚಿಕ್ಕ ವಯಸ್ಸಿನಲ್ಲಿ ಮೋಜಿಗಾಗಿ ಆರಂಭವಾಗಿರುವ ಇವರ ಹವ್ಯಾಸ, ಹರೆಯದ ದಿನಗಳಲ್ಲಿ ವಿಸ್ತಾರಗೊಂಡಿತು. ಸಂಸಾರ ತಾಪತ್ರಯ, ಸಂಕಷ್ಟದ ಮಧ್ಯೆಯೂ ಉತ್ಸಾಹದಿಂದ ತಮ್ಮ ಕಲಾ ಚಟುವಟಿಕೆಯನ್ನು ಉತ್ಸಾಹದಿಂದಲೇ ಮುಂದುವರಿಸಿದ್ದಾರೆ. ತಮ್ಮ ಕೌಶಲದಿಂದ ಮೂಡಿದ ಕಲಾಕೃತಿಗಳನ್ನು ಸ್ಥಳೀಯ ಕಾರ್ಯಕ್ರಮಗಳಲ್ಲಿ, ಬನವಾಸಿಯಲ್ಲಿ ನಡೆದ ರೋಟರಿ ಸಮುದಾಯ ದಳಗಳ ಸಮಾವೇಶ, ಸ್ವರ್ಣವಲ್ಲಿಯ ಕೃಷಿ ಜಯಂತಿ ಇನ್ನಿತರ ಕಡೆಗಳಲ್ಲಿ ಪ್ರದರ್ಶಿಸಿದ್ದಾರೆ.
ಪತಿ ವೆಂಕಟ್ರಮಣ ಹೆಗಡೆ ನಿರಂತರ ಪ್ರೋತ್ಸಾಹ ನೀಡಿದ್ದರಿಂದ, ಮಕ್ಕಳಾದ ಅಭಯ್, ನಿಧಿಯ ಸಹಕಾರ, ಹಾಗೂ ತಂಗಿ ನಾಗರತ್ನ, ಮೈದುನ ನಾಗರಾಜ ಹೆಗಡೆ ಅವರ ಸಹಾಯ ಹಸ್ತದಿಂದಲೇ ತನ್ನ ಕಲಾ ಚಟುವಟಿಕೆ ಇಷ್ಟೋಂದು ವಿಸ್ತಾರವಾಗಿ ಬೆಳೆದಿದೆ ಎಂದು ಲಲಿತಾ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಶಾಸ್ತ್ರೀಯ ಸಂಗೀತ, ಯಕ್ಷಗಾನಗಳೂ ಇವರಿಗೆ ಅಚ್ಚುಮೆಚ್ಚು. ಹೂವಿನ ಗಿಡಗಳ ಆರೈಕೆಯಲ್ಲಿಯೂ ಸಿದ್ದಹಸ್ತರು. ಅವರ ಸಂಪರ್ಕ: 08389-281615.

ನಾಣ್ಯ ಭಂಡಾರ
ಸಾವಿರಕ್ಕೂ ಹೆಚ್ಚು ಬೆಂಕಿಪೊಟ್ಟಣ ಚಿತ್ರಗಳು, 1500ಕ್ಕೂ ಅಧಿಕ ಅಂಚೆ ಚೀಟಿಗಳು ಇವರ ಸಂಗ್ರಹದಲ್ಲಿವೆ. ಅಮೆರಿಕ, ಸೌದಿ ಅರೆಬಿಯಾ, ಭೂತಾನ್, ಸಿಂಗಾಪುರ, ರಷ್ಯಾ, ಉ.ಕೋರಿಯಾ, ಚೈನಾ, ಮಲೇಷಿಯಾ, ಜಪಾನ್, ಕುವೈತ್, ಬ್ಯಾಂಕಾಕ್.... ಮುಂತಾದ ದೇಶಗಳ ನೋಟು - ನಾಣ್ಯಗಳ ಭಂಡಾರವೇ ಇವರಲ್ಲಿದೆ.

-ಚಿತ್ರ-ಬರಹ: ಗಣಪತಿ ಹಾಸ್ಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!