ಕೊಪ್ಪಳ ಜಿಲ್ಲೆಯ ಕನಕಗಿರಿಯ ನರಸಿಂಹ ಓದಿದ್ದು ಕೇವಲ ಒಂಬತ್ತನೇ ತರಗತಿ. ಆದರೆ ಕಲೆಯ ವಿಷಯದಲ್ಲಿ ಇವರು ಮಾಸ್ಟರ್. ಇದು ಇವರ ಕುಲಕಸುಬು ಕೂಡಾ. ಪೇಂಟಿಂಗ್, ಬೋರ್ಡ್, ಗೋಡೆ ಬರಹ ಗಣೇಶನ ಮೂರ್ತಿ, ಗೌರಿ ಹುಣ್ಣಿಮೆಯಲ್ಲಿ ಗೌರಿ ಮೂರ್ತಿ, ದೇವಿ ಚಿತ್ರ, ಪಣತಿ, ಪಲ್ಲಕ್ಕಿ ಚಿತ್ರಗಳು, ಇನ್ನಿತರ ಚಿತ್ರಗಳ ತಯಾರಿಯಲ್ಲಿ ನರಸಿಂಹ ಅವರದು ಎತ್ತಿದ ಕೈ.
ಹೀಗಾಗಿಯೇ ಹಬ್ಬ ಹರಿದಿನ ಮತ್ತು ಉತ್ಸವದಂಥ ದಿನಗಳಲ್ಲಿ ಇವರಿಗೆ ಬಿಡುವೇ ಇರುವುದಿಲ್ಲ. ಶ್ರಾವಣ ಮಾಸ ಆರಂಭವಾದಾಗಿನಿಂದ ದಿನಕ್ಕೆ ಹನ್ನೆರಡು ತಾಸು ಕೆಲಸ ಮಾಡುತ್ತಿದ್ದಾರೆ. ಪ್ರತಿವರ್ಷ ಗಣೇಶನ ಹಬ್ಬ ಬಂತೆಂದರೆ ನರಸಿಂಹ ಮೂರು ತಿಂಗಳು ಮುಂಚೆಯೇ ಗಣೇಶನ ಮೂರ್ತಿಗಳ ತಯಾರಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಇವರ ಕೈಯಿಂದ ಮೂಡಿಬರುವ ಮೂರ್ತಿಗಳ ಸೊಗಸೇ ಬೇರೆ.
ಹಾಗಾಗಿ ಈ ಭಾಗದ ಜನತೆಗೆ ಗಣಪತಿ ಕೊಳ್ಳಲು ಎಲ್ಲಿ ಹೋಗಬೇಕೆಂಬ ಯೋಚನೆ ಅಪ್ಪಿತಪ್ಪಿಯೂ ಸುಳಿಯದು. ಈ ವರ್ಷವಂತೂ ತಮ್ಮ ಗ್ರಾಮ ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿ, ಪಟ್ಟಣಗಳಿಂದಲೂ ಬಂದು ಗಣೇಶ ಮೂರ್ತಿಗಳನ್ನು ಒಯ್ಯುತ್ತಿದ್ದಾರೆ ಎಂಬುದು ನರಸಿಂಹ ಅವರ ಸಂತಸ.
ಇವರ ಪ್ರತಿಭೆಯನ್ನು ಗುರುತಿಸಿ ಕೃಷ್ಣದೇವರಾಯ ವೇದಿಕೆಯು ಗೋಡೆಬರಹ ಪ್ರಶಸ್ತಿ ನೀಡಿ ಗೌರವಿಸಿದೆ. ಕಲೆಯೊಂದನ್ನು ಉತ್ತಮವಾಗಿ ಒಲಿಸಿಕೊಳ್ಳಲು ಅಧಿಕ ಪರಿಶ್ರಮಬೇಕು. ಈ ದಿಸೆಯಲ್ಲಿ ನರಸಿಂಹ ಅವರ ಶ್ರಮ ಫಲ ಕಂಡುಕೊಂಡಿದೆ.
-ದೇವರಾಜ ಮ್ಯಾದ್ನೇರಿ, ಕುಷ್ಟಗಿ