ಅಂದು ಸೆಕೆಂಡ್ ಸ್ಯಾಟರ್‌ಡೆ. ಆಫೀಸಿಗೆ ರಜೆ. ಸಂಜೆ ಮಕ್ಕಳನ್ನು ಕರಕೊಂಡು ಹೋಗಿ ಉಯ್ಯಾಲೆ, ಜಾರುಬಂಡಿಯಲ್ಲಿ ಆಡಲು ಬಿಟ್ಟು ನಾನು ಅಲ್ಲೇ ವಾಕಿಂಗ್ ಮಾಡಿ ಬೆಂಚಿನ ಮೇಲೆ ಕುಳಿತೆ. ಅಷ್ಟರಲ್ಲಿ ಒಬ್ಬ ಹಿರಿಯರು ಬಂದು ಬೆಂಚಿನ ಆ ತುದಿಯಲ್ಲಿ ಹತಾಶವದನರಾಗಿ ತಲೆ ಮೇಲೆ ಕೈ ಹೊತ್ತು ಕುಳಿತರು. ನಾನೇ ಮಾತಿಗಿಳಿದು ಅವರ ಹೆಸರು ಕ್ಷೇಮ ಸಮಾಚಾರ ಕೇಳಿದೆ. ಅವರು ಸ್ವಲ್ಪ ಹೊತ್ತು ಮೌನವಿದ್ದು ನಂತರ ತಮ್ಮ ಬಗೆಗೆ ಹೇಳತೊಡಗಿದರು...
'ನಾನು ಶಿವರಾಜ ಅಂತ, ಇಷ್ಟು ದಿನ ಅಗ್ರಿಕಲ್ಚರ್ ಆಫೀಸಿನಲ್ಲಿ ವರ್ಕ್ ಮಾಡುತ್ತಿದ್ದೆ. ತಿಂಗಳ ಹಿಂದೆ ರಿಟೈರ್ಡ್ ಆದೆ. ಅಂದಿನಿಂದ ಮನಸ್ಸಿಗೆ ನೆಮ್ಮದಿನೇ ಇಲ್ಲದಂತಾಗಿದೆ. ನಮ್ಮ ಮನೆಯವರೆಲ್ಲ ನನಗೆ ವೈರಿಗಳಂತೆ ಕಾಣಿಸ್ತಿದಾರೆ. ನಾನು ಅವರಿಗಾಗಿ ಎಷ್ಟು ಕಷ್ಟ ಪಟ್ಟಿದ್ದೀನಿ ಅನ್ನೋದರ ಅರಿವು ಅವರಿಗಿಲ್ಲ. ಅವರ ಭವಿಷ್ಯಕ್ಕಾಗಿ ಸಾಲ ಸೋಲ ಮಾಡಿ ಅದನ್ನ ತೀರಿಸಿ, ಮನೆ ಕಟ್ಟಿಸಿ, ಹೆಣ್ಮಕ್ಕಳಿಗೆಲ್ಲ ವರದಕ್ಷಿಣೆ ಕೊಟ್ಟು ಮದುವೆ ಮಾಡಿದೀನಿ. ಮೊಮ್ಮಕ್ಕಳನ್ನೂ ಕಂಡಿದೀನಿ. ಈಗ ನಿವೃತ್ತಿ ಆಗಿದೆ ಅನ್ನೋ ಒಂದೇ ಒಂದು ಕಾರಣಕ್ಕೆ ಯಜಮಾನಿಕೆ ಸ್ಥಾನದಿಂದ ನನ್ನನ್ನು ಕೆಳಗಿಳಿಸಿದಾರೆ. ಇದುವರೆಗೂ ನನ್ನ ಮಾತು ವೇದವಾಕ್ಯವಾಗಿತ್ತು. ಈಗ ನನ್ನ ಮಾತಿಗೆ ಕ್ಯಾರೆ ಅನ್ನೋಲ್ಲ. ನನ್ನ ಕಾಲ ಮುಗಿದೇ ಹೋಯ್ತು ಅಂತ ಅನಿಸ್ತಿದೆ. ಮನಸ್ಸಿನಲ್ಲಿ ಏನೋ ಆತಂಕ, ಜೀವನವೇ ಬೇಡ ಅನಿಸ್ತಿದೆ.
ಒಂದೇ ತಿಂಗಳಲ್ಲಿ ಅವರೆಷ್ಟು ಬದಲಾಗಿದಾರೆ? ನಾನೇನಾದರೂ ಅವರಿಗೆ ಬುದ್ಧಿವಾದ ಹೇಳೋಕೆ ಹೋದರೆ ನಿಮಗೆ ವಯಸ್ಸಾಯ್ತು. ಮನೆ ಉಸಾಬರಿ ನಿಮಗೆ ಬೇಡ, ಅದೆಲ್ಲ ನಾವು ನೋಡ್ಕೋತೀವಿ. ನೀವು ಟೈಮ್ ಟೈಮಿಗೆ ಊಟ ಮಾಡಿ ತಪ್ಪದೇ ಮಾತ್ರೆ ತಗೊಂಡು ಹಾಯಾಗಿರಿ ಎಂದು ನನಗೆ ಬುದ್ಧಿ ಹೇಳ್ತಾರೆ. ಇವರಿಗೆಲ್ಲ ಎಷ್ಟು ಕೊಬ್ಬು ಅಂತೀನಿ.
ನನಗಾಗುವ ಮಾನಸಿಕ ನೋವನ್ನು ಇವಳ ಮುಂದೆ ಹೇಳಬೇಕೆಂದರೆ ಇವಳು ನನಗಿಂತ ಮೊದಲೇ ಶಿವನ ಪಾದ ಸೇರ್ಕೊಂಡಿದ್ದಾಳೆ. ಒಮ್ಮೊಮ್ಮೆ ಅನಿಸುತ್ತೆ, ನಾನು ಯಾರಿಗಾಗಿ ಬಾಳೋದು? ನನ್ನ ಗೋಳು ಯಾರಿಗೆ ಹೇಳೋದು ಅಂತ. ನನ್ ಜೊತೆ ಮಾತಾಡೋಕೆ ಯಾರೂ ಇಲ್ಲ. ಎಲ್ಲರೂ ತಮ್ಮ ತಮ್ಮ ಆಫೀಸು, ಸ್ಕೂಲು ಅಂತ ಅವಸರದಲ್ಲಿ ಇರ್ತಾರೆ. ಮರಳಿ ಬಂದ ಮೇಲೂ ಮಕ್ಕಳು ಲ್ಯಾಪ್‌ಟಾಪ್‌ನಲ್ಲಿ ಮುಖ ಹುದುಗಿಸಿ ಕೂರ್ತಾರೆ. ಸೊಸೆಯಂದಿರು ಅಡುಗೆಮನೆ ಸೇರಿಕೊಳ್ತಾರೆ. ಮೊಮ್ಮಕ್ಕಳು ಹೋಂವರ್ಕ್ ಮುಗಿಸಿ ಟಿವಿ ಮುಂದೆ ರಿಮೋಟಿನ ಸಲುವಾಗಿ ಜಗಳಾಡ್ತಾವೆ.
ನನಗೇನು ಈಗ ಅರವತ್ತು ತುಂಬಿದೆ ಅಷ್ಟೆ. ಬಿಪಿ ಬಿಟ್ಟರೆ ಬೇರೆ ಯಾವುದೂ ಹೆಲ್ತ್ ಕಂಪ್ಲೇಂಟ್ ಇಲ್ಲ. ಒಟ್ಟಿನಲ್ಲಿ ನಿವೃತ್ತಿ ನಂತರದ ಬದುಕು ತುಂಬಾ ದುಸ್ತರ. ಏನು ಮಾಡಬೇಕು ತಿಳಿತೀಲ್ಲ'.
ನಾನು ಅದಕ್ಕೆ 'ಅದಕ್ಯಾಕೆ ಅಷ್ಟು ಚಿಂತಿ ಮಾಡ್ತೀರಿ ಅಂಕಲ್? ನೀವು ಹೇಗೂ ಅಗ್ರಿಕಲ್ಚರ್ ಇಲಾಖೆಯಲ್ಲಿ ಕೆಲಸ ಮಾಡಿದೀನಿ ಅಂತೀರಾ. ನಿಮ್ಮನೆ ಮುಂದೆ ಒಂದು ಸುಂದರವಾದ ಗಾರ್ಡನ್ ಮಾಡಬಹುದು. ಒಂದು ವೇಳೆ ಮನೆ ಮುಂದೆ ಜಾಗ ಇಲ್ಲ ಅಂದ್ರೆ ಮಾಳಿಗೆ ಮೇಲೆ ಮಾಡಿ. ಬೀಜ ಚಿಗುರೊಡೆಯೋದು, ಗಿಡವಾಗುವ ಕ್ರಿಯೆ ನಿಮ್ಮ ಮನಸ್ಸಿಗೆ ತುಂಬಾ ಖುಷಿ ನೀಡುತ್ತೆ. ಮುಂಜಾನೆ, ಸಂಜೆ ಸಮಯದಲ್ಲಿ ವಾಕ್ ಹೋಗುವ ರೂಢಿ ಇಟ್ಟುಕೊಳ್ಳಿ. ಸಮವಯಸ್ಕರೊಂದಿಗೆ ಗೆಳೆತನ ಮಾಡಿಕೊಳ್ಳಿ. ಅವರೊಂದಿಗೆ ಬೆರೆತು ನಿಮ್ಮ ಮನದ ಮಾತುಗಳನ್ನು ಹಂಚಿಕೊಳ್ಳಿ. ಮಿಕ್ಕ ಸಮಯದಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡರೆ ಅದಕ್ಕಿಂತ ಉತ್ತಮ ಸಂಗಾತಿ ಬೇರೊಂದಿಲ್ಲ. ಮನಸ್ಸಿಗೆ ಹಿತ ನೀಡುವ ಸಂಗೀತ ಕೇಳಿ. ರೇಡಿಯೋದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಕಾರ್ಯಕ್ರಮಗಳು ಬರ್ತಿರ್ತಾವೆ. ಅವುಗಳನ್ನು ಕೇಳಿ ವೈದ್ಯರು ಹೇಳುವ ಟಿಪ್ಸ್ ಅಳವಡಿಸಿಕೊಳ್ಳಿ. ಈ ಎಲ್ಲ ಹವ್ಯಾಸ ಬೆಳೆಸಿಕೊಂಡರೆ ನಿಮಗೆ ಸಮಯ ಸರಿದಿದ್ದೇ ಗೊತ್ತಾಗೋಲ್ಲ. ಅದಲ್ಲದೆ ಬಾಳಲ್ಲಿ ಹೊಸ ಹುರುಪು ತುಂಬಿಕೊಳ್ಳುತ್ತೆ.
ನಿಮಗೆ ಅವಶ್ಯ ವಸ್ತುಗಳನ್ನು ಮೇಲಿಂದ ಮೇಲೆ ತೆಗೆದುಕೊಂಡು ಬರಲು ನೆನಪಿಸದೆ ಒಂದು ಚೀಟಿಯಲ್ಲಿ ಬರೆದು ಮಕ್ಕಳ ಕೈಯಲ್ಲಿ ಕೊಡಿ. ಅವರು ಬಂದ ತಕ್ಷಣ ನೀವು ಕೊಟ್ಟ ಸಾಮಾನುಗಳ ಪಟ್ಟಿ ಬಗೆಗೆ ಕೇಳದೆ ಅಂದಿನ ದಿನ ಹೇಗಿತ್ತು ಅಂತ ವಿಚಾರಿಸಿ. ಸೊಸೆಯಂದಿರು ಮಾಡಿದ ಅಡುಗೆಗೆ ಉಪ್ಪು ಕಡಿಮೆ, ಹುಳಿ ಜಾಸ್ತಿ ಅಂತ ಸುಮ್ಮನೆ ಹೆಸರಿಡದೆ, ರುಚಿಕರವಾಗಿದೆ ಅಂತ ಕಾಂಪ್ಲಿಮೆಂಟು ಕೊಟ್ಟು ನೋಡಿ. ಅಡುಗೆ ಮನೆಯಲ್ಲಿ ಚಿಕ್ಕ ಪುಟ್ಟ ಸಹಾಯ ಮಾಡಿ. ಅವರೂ ನಿಮ್ಮನ್ನು ತುಂಬಾ ಪ್ರೀತಿಯಿಂದ ಕಾಣ್ತಾರೆ. ನಿಮ್ಮ ಬಗೆಗೆ ಕಾಳಜಿ ವಹಿಸ್ತಾರೆ' ಎಂದೆ.
'ಆಯ್ತಮ್ಮಾ, ನೀನು ಹೇಳಿದ ಹಾಗೆ ಮಾಡಿ ನೋಡ್ತೀನಿ' ಎನ್ನುತ್ತ ಮನೆಯತ್ತ ಹೆಜ್ಜೆ ಹಾಕಿದರು.
-
ಒಂದೆರಡು ತಿಂಗಳ ನಂತರ ಮತ್ತೆ ನಾನು ಗಾರ್ಡನ್ನಿಗೆ ಹೋದಾಗ ಶಿವರಾಜ ಅಂಕಲ್‌ನ ನೋಡಿದೆ. ಅವರು ಗೆಳೆಯರೊಂದಿಗೆ ನಗುತ್ತ ಹರಟುತ್ತ ಕುಳಿತಿದ್ದರು. ನನ್ನನ್ನು ಕಂಡು ತಾವೇ ನನ್ನ ಕ್ಷೇಮ ಸಮಾಚಾರ ಕೇಳಿ, 'ತುಂಬಾ ಥ್ಯಾಂಕ್ಸ್ ಅಮ್ಮಾ, ನಿವೃತ್ತಿ ನಂತರ ಅಹಂಕಾರದಿಂದ ನನ್ನ ಬಾಳಿನ ಮುಸ್ಸಂಜೆ ಪಯಣ ನಿರಸನಗೊಂಡಿತ್ತು. ಅದಕ್ಕೆ ನೀನು ಸರಿಯಾದ ದಾರಿ ತೋರಿಸಿದೆ. ಈಗ ಮನೇಲಿ ಎಲ್ಲರೂ ನನ್ನನ್ನ ತುಂಬಾನೆ ಪ್ರೀತಿಸ್ತಿದಾರೆ' ಅಂತ ಅವರು ಗೆಲುವಾಗಿ ಹೇಳುವಾಗ ಅವರ ಕಣ್ಣಂಚಿನಲ್ಲಿ ಪನ್ನೀರು ತುಂಬಿತ್ತು.
= ಜಯಶ್ರೀ.ಜೆ ಅಬ್ಬಿಗೇರಿ