ವಯಸ್ಸು 80 ದಾಟಿದೆ. ಜೀವಿತಾವಧಿಯನ್ನು ಕಾಲಮಾನ ಅರಿಯಲೆಂದೇ ಮೀಸಲಿಟ್ಟ ಈ ಮನುಷ್ಯ ಸಮಯದ ಬಗ್ಗೆ ಮಾತನಾಡಲು ಕುಳಿತರೆ ಇರುವ ಇಪ್ಪತ್ನಾಲ್ಕು ಗಂಟೆ ಏನೇನೂ ಸಾಲದು. ದಕ್ಷಿಣ ಭಾರತದ ಏಕೈಕ ಕಾಲಮಾನಶಾಸ್ತ್ರಜ್ಞ (ಹೊರಾಲಜಿಸ್ಟ್) ಚಂದ್ರಶೇಖರ್ ಅಯ್ಯರ್ ಅಂಥ 'ವಾಚ್'ಚತುರ!
ಗಡಿಯಾರ ರಿಪೇರಿ ಮಾಡುವ ಕುಟುಂಬದ ಐದನೇ ಕೊಂಡಿ ಇವರು. ಮೈಸೂರಿನ ದೊಡ್ಡ ಗಡಿಯಾರ ವೃತ್ತದ ಬಳಿ ಐದು ತಲೆಮಾರಿನಿಂದ 'ಲಕ್ಷ್ಮಣ ಅಯ್ಯರ್ ವಾಚ್ ಕಂ.'ಯನ್ನು ನಡೆಸಿಕೊಂಡು ಬಂದ ಕುಟುಂಬ ಅಯ್ಯರ್‌ರದು. ಮೊದಮೊದಲಿಗೆ ತಂದೆ, ತಾತನಂತೆ ವಾಚ್ ರಿಪೇರಿ ಮಾಡುತ್ತಿದ್ದ ಚಂದ್ರಶೇಖರ್‌ಗೆ ಗಡಿಯಾರದ ಜೊತೆ ಸಂಬಂಧ ನಿಕಟವಾದಂತೆಲ್ಲ ಕುತೂಹಲ ಹೆಚ್ಚುತ್ತಲೇ ಹೋಯಿತು. ಈ ನಿಟ್ಟಿನಲ್ಲಿ ಗಡಿಯಾರ ಕುರಿತು ಸಿಕ್ಕಸಿಕ್ಕ ಪುಸ್ತಕವನ್ನೆಲ್ಲ ಅಧ್ಯಯಿನಿಸಿ, ಅದಕ್ಕಾಗಿಯೇ ಮುಂಬೈಗೆ ಹೋಗಿ ಫೋನಿಕ್ಸ್, ಮೆರೆಡಿಯನ್‌ಗಳಂಥ ಪ್ರಸಿದ್ಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಗಡಿಯಾರಗಳ ತವರೆನಿಸಿದ ಸ್ವಿಜರ್ಲೆಂಡ್‌ನಿಂದ ಪುಸ್ತಕಗಳನ್ನು ತರಿಸಿಕೊಂಡು ಓದಿದ್ದಾರೆ. ಗಡಿಯಾರದ ಬಗ್ಗೆ ಕನ್ನಡವಲ್ಲದೆ ಸ್ವಿಸ್ ವಾಚ್ ಅಂಡ್ ಜ್ಯುವೆಲ್ಲರಿ ಜರ್ನಲ್, ವಾಚ್ ಮಾರ್ಕೆಟ್ ರಿವ್ಯೂ ಪತ್ರಿಕೆಗಳಿಗೂ ನಿರಂತರವಾಗಿ ಬರೆದಿದ್ದಾರೆ. ಅಷ್ಟಕ್ಕೇ ತೃಪ್ತರಾಗದೆ 'ಗಡಿಯಾರದ ಕತೆ' ಎಂಬ ಪುಸ್ತಕವನ್ನೂ ಪ್ರಕಟಿಸಿದ್ದಾರಿವರು. ಈಗಿನ ಈ ಇಳಿವಯಸ್ಸಿನಲ್ಲೂ ಸ್ಫೂರ್ತಿಯ ಚಿಲುಮೆಯಂತೆ ಕಾಲೇಜುಗಳಿಗೆ ಭೇಟಿ ನೀಡಿ ಗಡಿಯಾರದ ಕುರಿತು ಉಪನ್ಯಾಸ ನೀಡುತ್ತಾರೆ.
ಟಿಕ್ ಟಿಕ್ ಸದ್ದು ಕ್ಷಣ ಏರುಪೇರಾದರೂ ಪ್ರಪಂಚವೇ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಹೊರಾಲಜಿ ಎಲ್ಲ ವಿಜ್ಞಾನಗಳ ತಾಯಿ ಎಂದು ಪ್ರತಿಪಾದಿಸುವ ಇವರು, ಯಾವುದೇ ಕೆಟ್ಟು ನಿಂತ ಗಡಿಯಾರವನ್ನು ನೋಡಿದರೂ ಅದರ ಮೂಲಕಾರಣವನ್ನು ತತ್‌ಕ್ಷಣ ಪತ್ತೆ ಹಚ್ಚಿ ಸರಿಪಡಿಸಬಲ್ಲರು. ಸೂರ್ಯನನ್ನು ನೋಡಿ ಸಮಯ ಹೇಳುತ್ತಿದ್ದ ಮೊದಲ ಪದ್ಧತಿಯಿಂದ ಹಿಡಿದು, 1335ರಲ್ಲಿ ಇಟಲಿಯಲ್ಲಿ ಮೆಷಿನ್ ಸ್ವರೂಪ ಪಡೆದ ಸಮಯಸಾಧನ, ಇಂದಿನ ಆಲ್ಟ್ರಾ ಮಾಡರ್ನ್ ಗಡಿಯಾರಗಳವರೆಗೂ ಅವುಗಳ ಕಂಟೆಂಟ್, ಕಾರ್ಯವಿಧಾನ ಎಲ್ಲದರ ಬಗ್ಗೆ ನಿರರ್ಗಳ ಮಾತನಾಡಬಲ್ಲರು.
ಅಯ್ಯರ್‌ರ ಸಾಧನೆಯನ್ನು ಗುರುತಿಸಿ ವಾರ್ತಾ ಇಲಾಖೆ ಹತ್ತು ನಿಮಿಷಗಳ ಸಾಕ್ಷ್ಯಚಿತ್ರ ತಯಾರಿಸಿದೆ. ಹಲವು ಸಂಘಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಟೈಮ್ ಮೆಷೀನ್‌ಗಳ ಎನ್‌ಸೈಕ್ಲೋಪೀಡಿಯಾದಂತೆ ಕಾಣುವ ಅಯ್ಯರ್‌ಗೆ ಅಭಿನಂದಿಸಲು ಮೊ. 9845232098ಗೆ ಕರೆ ಮಾಡಬಹುದು.