ಸಾಧನೆ

ಚಿತ್ರಪ್ರಭಾಕರ

ವ್ಯಂಗ್ಯಚಿತ್ರಲೋಕದ ಅಳಿಸಲಾಗದ ಗೆರೆ ರಾವ್ಬೈಲ್. ಆಗ ಎಲ್ಲ ನಿಯತಕಾಲಿಕ, ಪಾಕ್ಷಿಕ, ಮಾಸಿಕಗಳಲ್ಲಿ ...

ವ್ಯಂಗ್ಯಚಿತ್ರಲೋಕದ ಅಳಿಸಲಾಗದ ಗೆರೆ ರಾವ್ಬೈಲ್. ಆಗ ಎಲ್ಲ ನಿಯತಕಾಲಿಕ, ಪಾಕ್ಷಿಕ, ಮಾಸಿಕಗಳಲ್ಲಿ ಇವರದೇ ವ್ಯಂಗ್ಯಚಿತ್ರಗಳು. ಸದ್ಯ ಬೆಂಗಳೂರಿನಲ್ಲಿರುವ ಇವರು 75ನೇ ವಯಸ್ಸಿನಲ್ಲೂ ವಿಶ್ರಾಂತಿ ತೆಗೆದುಕೊಳ್ಳದೇ ಅಕ್ರಲಿಕ್ನಲ್ಲಿ ಸ್ಟಿಲ್ಲೈಫ್ ರಚಿಸುತ್ತಿದ್ದಾರೆ. 'ತರಂಗ'ದಲ್ಲಿ ಈಗಲೂ ಇವರ ವ್ಯಂಗ್ಯಚಿತ್ರಗಳು ಜಾಗ ಪಡೆಯುತ್ತವೆ. ಇವರೊಂದಿಗೆ ಮಾತಿಗಿಳಿದಾಗ ಅವರ ವರ್ಣಮಯ ಬದುಕಿನ ರೇಖೆಗಳನ್ನು ಹರಡಿಟ್ಟರು.
ಬೈಲಂಗಡಿ ಪ್ರಭಾಕರರಾವ್ ಅನ್ನು ಮೊಟುಕುಗೊಳಿಸಿ 'ರಾವ್ಬೈಲ್' ಆದರು. ಚಿಕ್ಕಂದಿನಲ್ಲಿ ಅಕ್ಕಂದಿರು ಬಿಡಿಸುತ್ತಿದ್ದ ಚಿತ್ರಕಲೆಯೇ ಸ್ಫೂರ್ತಿ. ಹರಟುತ್ತಾ ಕುಳಿತ ವೃದ್ಧರನ್ನು ನೋಡಿ ಕರಡು ಚಿತ್ರ ರಚಿಸುತ್ತಿದ್ದ ಇವರು ತಾವು ಆ ವಯೋವಾನಕ್ಕೆ ಬಂದರೂ ಈ ಕಲೆಯನ್ನು ಅಪ್ಪಿಕೊಂಡೇ ಬಂದಿದ್ದಾರೆ. ಮುಂಬೈನಲ್ಲಿ ಎಲ್ಐಸಿಯಲ್ಲಿ ಕೆಲಸಕ್ಕೆ ಸೇರಿ ಕಂಪನಿಯವರಿಗಾಗಿ ಜೆಜೆ ಸ್ಕೂಲ್ ಆಫ್ ಆರ್ಟ್ನಲ್ಲಿ ಅಪ್ಲೈಡ್ ಆರ್ಟ್ ಶಿಕ್ಷಣ ಪಡೆದು ಪೇಂಟಿಂಗ್ ಮತ್ತು ವ್ಯಂಗ್ಯಚಿತ್ರಗಳನ್ನು ಆತುಕೊಂಡರು. ಅಲ್ಲಿನ ಸಹಪಾಠಿಗಳ ಜೊತೆ ಆರ್ಟ್ ಫಿಲ್ಮ್ಗಳನ್ನು ನೋಡುತ್ತಿದ್ದರು. ಆ ದಿನಗಳಲ್ಲಿ ಫೋರ್ಟ್ ಗ್ಯಾಲರಿಯಲ್ಲಿ ಸೇರುತ್ತಿದ್ದ ಕಲೆಯ ದಿಗ್ಗಜರಾದ ಕೆ.ಕೆ. ಹೆಬ್ಬಾರ್, ಎಂ.ಎಫ್. ಹುಸೇನ್, ಅಲಮೇಲಕರ್ರೊಂದಿಗೆ ಕಲೆಯ ಬಗ್ಗೆ ನಡೆಸಿದ ಚರ್ಚೆಯನ್ನು ಇವರು ಮರೆತಿಲ್ಲ. ಇವರು ಮಿಮಿಕ್ರಿಯಲ್ಲೂ ಪರಿಣತರು. 'ರಾವ್ಬ್ರದರ್ಸ್' ಹೆಸರಿನಿಂದ ಕಾರ್ಯಕ್ರಮ ಕೊಡುತ್ತಾ ಪ್ರಖ್ಯಾತರಾಗಿದ್ದರು. ಖ್ಯಾತರಾದ ಮನ್ನಾಡೆ, ಮುಖೇಶ್, ಶಂಕರ್- ಜೈ ಕಿಶನ್, ಗಿಲಿಗಿಲಿ ಪಾಷಾರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.  ಅಲ್ಲದೆ, ಆಗಿನ ಪ್ರಧಾನಿ ನೆಹರು ಅವರ ಮುಂದೆಯೂ ಮಿಮಿಕ್ರಿ ನಡೆಸಿಕೊಟ್ಟಿದ್ದರು.
'ಇಂಡಿಯನ್ ಎಕ್ಸ್ಪ್ರೆಸ್'ನಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದ ಅಬು ಅಬ್ರಹಾಂರ ಶೈಲಿಯು ಪ್ರಭಾವಿಸಿತು. 'ಶಂಕರ್ ವೀಕ್ಲಿ'ಯಲ್ಲಿ ಮೊಟ್ಟ ಮೊದಲ ವ್ಯಂಗ್ಯಚಿತ್ರ ಪ್ರಕಟವಾಗಿ 'ಡೆಬೊನಾರ್', 'ಟೈಮ್ಸ್ ಆಫ್ ಇಂಡಿಯಾ', 'ತಾಜ್ ಮ್ಯಾಗಜಿನ್', 'ಸಿಗ್ನೇಚರ್', 'ರೀಡರ್ಸ್ ಡೈಜೆಸ್ಟ್'ಗಳಲ್ಲಿ ಮುದ್ರಿತವಾದವು. ತರಂಗದ ಆಗಿನ ಸಂಪಾದಕ ಸಂತೋಷಕುಮಾರ್ ಗುಲ್ವಾಡಿ ಇವರ ಪ್ರತಿಭೆ ಗುರುತಿಸಿ, ಕನ್ನಡಿಗರಿಗೆ ಪರಿಚಯಿಸಿದರು. ದೇಶ-ವಿದೇಶಗಳಲ್ಲಿ ಹಲವು ಏಕವ್ಯಕ್ತಿ ಹಾಗೂ ಸಮೂಹ ಪ್ರದರ್ಶನಗಳಲ್ಲಿ ಪೇಂಟಿಂಗ್ ಹಾಗೂ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿದ್ದಾರೆ. 'ಕ್ರೈ' ಸಂಸ್ಥೆಗೆ ಗ್ರೀಟಿಂಗ್ ಕಾರ್ಡುಗಳಲ್ಲದೇ ಮಕ್ಕಳ ಪುಸ್ತಕಗಳನ್ನೂ ರಚಿಸಿಕೊಟ್ಟಿದ್ದಾರೆ. ಬೆಂಗಳೂರಿನ ಭಾರತೀಯ ವ್ಯಂಗ್ಯಚಿತ್ರಗಾರರ ಸಂಸ್ಥೆಯು 'ಜೀವಮಾನದ ಸಾಧನೆ' ಪ್ರಶಸ್ತಿ ಕೊಟ್ಟು ಗೌರವಿಸಿದೆ. ಯಾವುದೇ ಪೆನ್ಸಿಲ್, ರಬ್ಬರ್ಗಳಿಲ್ಲದೆ ನೇರ ಪೆನ್ನಲ್ಲೇ ವ್ಯಂಗ್ಯಚಿತ್ರಗಳನ್ನು ರಚಿಸುವುದೇ ಇವರ ಸ್ಟೈಲ್!
ರಾವ್ರ ತಂದೆಯವರು ತರಾಸು, ಅನಕೃ, ಗೋಪಾಲಕೃಷ್ಣ ಅಡಿಗ, ಯಶವಂತ ಚಿತ್ತಾಲರಂಥ ಲೇಖಕರ ಪುಸ್ತಕಗಳಿಗೆ ಮುಖಪುಟ ರಚಿಸಿದವರು. ತಂದೆಯ ಪ್ರಭಾವ ಇವರ ಮೇಲೂ ಬೀರಿದೆ. ರಾವ್ ಪತ್ನಿ ಕುಮುದಿನಿ ಭರತನಾಟ್ಯ ಹಾಗೂ ಕಥಕ್ ನೃತ್ಯ ಕಲಾವಿದೆ. ಗಂಧರ್ವ ವಿವಿಗೆ ಇವರು ಭರತನಾಟ್ಯದ 5 ಪಠ್ಯಪುಸ್ತಕಗಳನ್ನು ತಯಾರಿಸಿದ್ದಾರೆ. ಇಬ್ಬರು ಹೆಣ್ಣುಮಕ್ಕಳಾದ ಉಜ್ವಲಾ ಹಾಗೂ ಶರ್ಮಿಲಾ ಇಬ್ಬರೂ ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ನೃತ್ಯವನ್ನು ಮುಂದುವರೆಸಿದ್ದಾರೆ. ಲಲಿತಕಲೆಯು ಈ ಕುಟುಂಬದಲ್ಲಿ ನೆಲೆ ಕಂಡುಕೊಂಡಿದೆ.


-  ಸಂಕೇತ್ ಗುರುದತ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT