ಸಬ್ಸಿಡಿ ಅಡುಗೆ ಅನಿಲವನ್ನು ಕೇಂದ್ರ ವಾರ್ಷಿಕ 9ಕ್ಕೆ ಮಿತಿಗೊಳಿಸಿದೆ. ಇದರಿಂದ ಬಡವರು, ಮಧ್ಯಮ ವರ್ಗದವರು ಹೇಗಪ್ಪಾ ಜೀವನ ಸಾಗಿಸೋದು ಎಂಬ ಆತಂಕದಲ್ಲಿದ್ದಾರೆ. ಹಾಗಾಗಿ ಪರ್ಯಾಯ ಮಾರ್ಗ ಹುಡುಕೋದು ಉತ್ತಮ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿ ಪರಿಸರಸ್ನೇಹಿ ಮತ್ತು ಕಡಿಮೆ ಖರ್ಚಿನ ಅಧಿಕ ಉಳಿತಾಯದ ಒಲೆ ಕಂಡುಹಿಡಿದ್ದಾರೆ! ಇದಕ್ಕೆ ಬೇಕಾಗುವ ಕಚ್ಚಾವಸ್ತುಗಳು ನಮ್ಮ ಸುತ್ತಮುತ್ತಲೇ ಸಿಗುವುದರಿಂದ ಯಾವುದೇ ತರಹದ ಖರ್ಚು ಇಲ್ಲ. ಜೊತೆಗೆ ಪರಿಸರಕ್ಕೂ ಹಾನಿಯಿಲ್ಲ.
ಏನಿದು ಒಲೆ?
ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ತಾವು ಕಂಡುಹಿಡಿದ ಸಾಧನ ಹಲವು ಜನರನ್ನು ತಲುಪಬಲ್ಲದು ಎಂಬುದಕ್ಕೆ ಇದು ಸಾಕ್ಷಿ. ತುಮಕೂರಿನ ಎಂಜಿನಿಯರಿಂಗ್ ಕಾಲೇಜಿನ ಮೂವರು ಮತ್ತು ಬೆಂಗಳೂರು ವಿವಿಧ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೇರಿ ಪರಿಸರಸ್ನೇಹಿ ಒಲೆ ಕಂಡುಹಿಡಿಯಬೇಕೆಂಬ ತುಡಿತ. ಇದಕ್ಕೆ ಡಾ. ವಿಜಯ ವಿಠ್ಠಲ್ ಅವರ ಪ್ರೋತ್ಸಾಹ, ಮಾರ್ಗದರ್ಶನ. ಕಳೆದ ಜನವರಿಯಲ್ಲಿ ಸಂಶೋಧನೆ ಶುರು ಮಾಡಿದರು. ಅದರಲ್ಲಿ ಶೀಘ್ರಗತಿಯಲ್ಲಿ ಯಶಸ್ಸು ಕಂಡರು. ಮುಂಬೈಯಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನವೊಂದರಲ್ಲಿ ಭರವಸೆಯ ಪರಿಸರಸ್ನೇಹಿ ಒಲೆ ಎಂಬ ಕೀರ್ತಿಗೆ ಭಾಜನವಾಯಿತು. ತುಮಕೂರಿನ ಧರ್ಮ ಟೆಕ್ನಾಲಜೀಸ್‌ನವರು ಇದಕ್ಕೆ ಮಾರುಕಟ್ಟೆ ಒದಗಿಸಿಯೇ ಬಿಟ್ಟರು. ಅದಕ್ಕೆ 'ವಾದಿರಾಜ ಒಲೆ' ಎಂದು ಹೆಸರಿಡಲಾಗಿದೆ. ಈಗಾಗಲೇ ವಿದ್ಯಾರ್ಥಿಗಳು ಕಂಡುಹಿಡಿದ ಪರಿಸಹಸ್ನೇಹಿ ಒಲೆ ಮಾರುಕಟ್ಟೆಯಲ್ಲಿ ಲಭ್ಯ. ಕಿಮ್ಮತ್ತು ಕೇವಲ ರು. 800 ಮಾತ್ರ. ಇದನ್ನು ಮನೆ ಬಳಕೆಗೆ ಮಾತ್ರವಲ್ಲದೆ ಹೋಟೆಲ್‌ನಲ್ಲಿಯೂ ಉಪಯೋಗಿಸಬಹುದು. ಅಲ್ಲದೆ, ಪ್ರವಾಸ ಹೋದಲ್ಲಿ ಅಲ್ಲಿಯೂ ಅದನ್ನು ತೆಗೆದುಕೊಂಡು ಹೋಗಿ ಅಡುಗೆ ತಯಾರಿಸಬಹುದು.
ಬಳಕೆ ಹೇಗೆ?
ಒಲೆ ಮೇಲೆ 2 ಗಾತ್ರದ ಪಾತ್ರೆ ಇಡಲು ಅನುಕೂಲವಾಗುವಂತೆ ಸ್ಟ್ಯಾಂಡ್ ಮಾಡಲಾಗಿದೆ. ಅದರ ಕೆಳಗೆ ಊರುವಲು ಹಾಕಲು ಜಾಗವಿದೆ. ಕೆಳಗೆ ಬೂದಿ ಬೀಳಲು ಸ್ಥಳವಿದೆ. ಒಲೆಯ ಸುತ್ತಲೂ ರಕ್ಷಾಕವಚವಿದೆ. ಅದರ ಸುತ್ತ ರಂಧ್ರ ಕೊರೆಯಲಾಗಿದೆ. ಇದು ಬೆಂಕಿ ಸರಾಗವಾಗಿ ಹೊತ್ತಿ ಉರಿಯಲು ಸಹಕಾರಿ. ಒಲೆ ಮುಂಭಾಗದಲ್ಲಿ ಕಚ್ಚಾವಸ್ತು ಹಾಕಲು ಪುಟ್ಟ ಕೋಣೆಯಂತೆ ಜಾಗವಿದೆ.
ಖರ್ಚೆ ಇಲ್ಲ!
ಇನ್ನು ಒಲೆ ಉರಿಸಲು ಬೇಕಾಗುವ ಕಚ್ಚಾವಸ್ತುಗಳಿಗಾಗಿ ರೊಕ್ಕ ಖರ್ಚು ಮಾಡಬೇಕಿಲ್ಲ. ಮನೆಯಲ್ಲಿ ಮತ್ತು ಸುತ್ತಮುತ್ತ ಸಿಗುವ ತೆಂಗಿನ ಸಿಪ್ಪೆ, ಅನುಪಯುಕ್ತ ಕಾಗದ, ಒಣಗಿದ ಎಲೆಗಳು, ಗಿಡಗಂಟಿಯ ತೊಗಟೆ, ಜೋಳದ, ಮೆಕ್ಕೆಜೋಳದ ದಂಟು, ಶೇಂಗಾ, ಅಡಕೆ ಸಿಪ್ಪೆ ಸೇರಿದಂತೆ ಇತರೆ ವಸ್ತುಗಳನ್ನು ಉರುವಲನ್ನಾಗಿ ಬಳಸಬಹುದು.
ನಿಮಗೂ ಒಲೆಯನ್ನು ಕೊಂಡುಕೊಳ್ಳುವ ಆಸೆಯಾದರೆ ಶೈಲಜಾ ಅವರನ್ನು ಮೊ. 9886737260 ಅಥವಾ ಢಿಢಿಢಿ.ಝಛ್ಠಟಛಛ್ಜ್ಠ್ಟಡಿಝ್ಛ.್ಛ್ಟಟ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಲಾಭಗಳೇನು?
ನಮ್ಮ ಸುತ್ತಮುತ್ತ ಸಿಗುವ ಹಲವು ನಿರುಪಯುಕ್ತ ವಸ್ತುಗಳನ್ನು ಬಳಸುವುದರಿಂದ ಖರ್ಚು ತೀರಾ ಕಡಿಮೆ.
ಒಲೆಯ ದರವೂ ತೀರಾ ಕಮ್ಮಿ.
ಒಮ್ಮೆ ಕೊಂಡುಕೊಂಡರೆ ಮತ್ತೆ ಬಂಡವಾಳ ತೊಡಗಿಸುವ ಅಗತ್ಯವಿಲ್ಲ.
ರಿಪೇರಿ ಖರ್ಚಿಲ್ಲ.
ಪರಿಸರಸ್ನೇಹಿಯೂ ಹೌದು.
ಪರಿಸರಸ್ನೇಹಿ ಒಲೆ ನನ್ನ ಇಪ್ಪತ್ತು ವರ್ಷ ಹಿಂದಿನ ಕನಸು. ಅದು ಈಗ ಸಾಕಾರಗೊಂಡಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ನನ್ನ ಪತಿ ಇದಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಇದರ ಮಹತ್ವ ಗ್ರಾಹಕರು ಅರಿತರೆ ನಮ್ಮ ಶ್ರಮ ಸಾರ್ಥಕ.
- ಶೈಲಜಾ ವಿಠ್ಠಲ್, ಸಿಇಒ,
ಧರ್ಮ ಟೆಕ್ನಾಲಜೀಸ್, ತುಮಕೂರು
ಈ ಪರಿಸರಸ್ನೇಹಿ ಒಲೆಯನ್ನು ಬಡವರು, ಮಧ್ಯಮವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಿದ್ದೇವೆ. ನಮ್ಮ ಸುತ್ತಮುತ್ತ ಸಿಗುವ ಹಲವು ನಿರುಪಯುಕ್ತ ವಸ್ತುಗಳನ್ನು ಊರುವಲನ್ನಾಗಿ ಬಳಸಬಹುದು. ಹಾಗಾಗಿ ಇದು ಪರಿಸರಸ್ನೇಹಿ, ಮಿತವ್ಯಯಿ ಕೂಡಾ.
- ಡಾ. ವಿಜಯ ವಿಠ್ಠಲ್
- ಮಹೇಶ್ ಅರಳಿ