ತೋಟದಂಚಿನ ನಿಂಬೆ ಗಿಡದಲ್ಲಿ ಹೊಸದೊಂದು ಆಕೃತಿ ಮೂಡಿ ಬರುತ್ತಲಿತ್ತು. ನಿಂಬುವಿನ ಜೊತೆಯಲ್ಲಿಯೇ ಆ ಆಕೃತಿಯೂ ಬೆಳೆಯುತ್ತಲಿತ್ತು. ಅದು ಹುಳಿನಿಂಬೆ ಕಾಯಿ ಆಗಿರಲಿಲ್ಲ. ಮೊದಲು ಗಮನಿಸಿಯೂ ಇರಲಿಲ್ಲ. ನಂತರ ಗಮನಿಸಿದರೂ ಕ್ಲಿಕ್ಕಿಸಲಿಲ್ಲ, ಆಮೇಲೆ ಕ್ಲಿಕ್ಕಿಸಿದರೂ ಅರ್ಥವಾಗಿರಲಿಲ್ಲ.
ಲಿಂಬುವಿನ ಆಕೃತಿ ದಿನ ಕಳೆದಂತೆ ಬುಗುರಿಯಾಯಿತು. ಬುಗುರಿಗೂ ಒಂದು ಮುಳ್ಳು ಬಂದಿತು. ರೆಕ್ಕೆಯನ್ನು ಕಟ್ಟಿಕೊಂಡ ಪುಟ್ಟ ಕೀಟಮೊಂದು ತಾಸಿಗೊಮ್ಮೆ ಬುಗುರಿಯ ಸುತ್ತ ಸುತ್ತುತ್ತಲಿತ್ತು. ಇನ್ನೇನೋ ಶಬ್ದ ಮಾಡುತ್ತಲಿತ್ತು. ಅದೇನೋ ತಂದು ಅಲ್ಲಿ ಶೇಖರಿಡಿಸುತ್ತಲಿತ್ತು. ಅದೊಂದು ಕೀಟದ ಗೂಡು ಎಂಬ ಅರಿವಾಯಿತು. ಮರಿ ಹಾಕಿದ ಕೀಟ ಗೂಡಿನಲ್ಲಿ ತನ್ನ ಮರಿಗಳನ್ನು ಸಂಪೋಶಿಸುತ್ತಲಿತ್ತು. ಮರಿ ಕೀಟಕ್ಕೆ ಹಾರಾಡಲು ತರಬೇತಿ ನೀಡುತ್ತಲಿತ್ತು. ಆಹಾರವನ್ನು ಪೂರೈಸುತ್ತಲಿತ್ತು. ಕ್ಯಾಮೆರಾ ಕಣ್ಣಿಗೆ ಕಣ್ಣು ನೀಡಿ ಕುಕ್ಕುತ್ತಲಿತ್ತು. ಅದೊಮ್ಮೆ ಧಾವಿಸಿ ಬಂದು ಕ್ಯಾಮೆರಾ ಮೇಲೂ ಹಲ್ಲೆ ಮಾಡಿತ್ತು. ಕಡೆಗೂ ಮೂರು ವಾರದ ನಂತರದ ಮುಂಜಾನೆ ಇಬ್ಬನಿಗೆ ಕರಗಿ ಸಂಸಾರದ ಪಾತ್ರೆ ಒಡೆದು ಹೋಯಿತು. ಮುಂದೆ ಆ ಕೀಟ ಏನಾಯಿತೋ ತಿಳಿಯಲಿಲ್ಲ. ನಿಂಬೆಗಿಡ ಮುಳ್ಳನ್ನು ಮರೆಮಾಚಿ ನಸುನಕ್ಕಿತು.
- ಅಚ್ಯುತಕುಮಾರ ಯಲ್ಲಾಪುರ
a14kumar@gmail.com