ಹೀಗೊಂದು ಕ್ಷಣ ಊಹಿಸಿಕೊಳ್ಳಿ. ನಮ್ಮ ಬೆಂಗಳೂರಿನಲ್ಲೋ ಅಥವಾ ಇನ್ನಾವುದೋ ಮಹಾನಗರದಲ್ಲೋ ಒಂದು ಭಾನುವಾರ ರಸ್ತೆಗೆ ಕಾರು, ಬೈಕುಗಳು ಇಳಿಯುವುದೇ ಇಲ್ಲ. ಕೇವಲ ಸಾರಿಗೆ ಬಸ್ಗಳು ಮಾತ್ರ ಓಡಾಡುತ್ತವೆ. ಜನ ಬಸ್ನಲ್ಲಿ ಮಾತ್ರ ಸಂಚರಿಸುತ್ತಾರೆ. ಸೈಕಲ್ ತುಳಿಯುತ್ತಾರೆ. ಇಲ್ಲವೇ ಕಾಲ್ನಡಿಗೆಯಲ್ಲೇ ಸಂಚರಿಸುತ್ತಾರೆ. ಸದಾ ವಾಹನಗಳಿಂದ ಗಿಜಿಗುಡುತ್ತಿರುವ ನಗರದ ರಸ್ತೆಗಳು ಆ ದಿನ ಹೇಗಿರಬಹುದು?
ಇಂತಹ ಒಂದು ಪರಿಕಲ್ಪನೆಯನ್ನು ಈಗ ಜಗತ್ತಿನ 11 ದೇಶಗಳ 38ಕ್ಕೂ ಹೆಚ್ಚು ನಗರಗಳಲ್ಲಿ ಸಾಕಾರಗೊಳಿಸಲಾಗಿದೆ. ಮೊದಲು ಈ ಪರಿಕಲ್ಪನೆಗೆ ಚಾಲನೆ ಸಿಕ್ಕಿದ್ದು ಯುರೋಪಿನಲ್ಲಿ. ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯ ತಪ್ಪಿಸುವುದು, ಸಾರ್ವಜನಿಕ ಸಾರಿಗೆ ಜನಪ್ರಿಯಗೊಳಿಸುವುದು, ಸೈಕ್ಲಿಂಗ್ಗೆ ಆದ್ಯತೆ ನೀಡುವುದು, ಸಾಮಾಜಿಕವಾಗಿ ಜನ ಹತ್ತಿರವಾಗುವಂತೆ ಮಾಡುವುದು, ಹೀಗೆ ಹಲವು ಉದ್ದೇಶ ಇಟ್ಟುಕೊಂಡು ಇಂತಹ ಒಂದು ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಚಿಂತಿಸಿದರು. ಸೆ. 22ರಂದು ಕಾರುರಹಿತ ದಿನ ಎಂದು ಘೋಷಿಸಿ, ಜಗತ್ತಿನಾದ್ಯಂತ ಆಚರಿಸಲು ಪ್ರೇರೇಪಿಸಿದರು. ಈ ಚಳವಳಿಗೆ ಸಿಕ್ಕ ಪ್ರೋತ್ಸಾಹದಿಂದ ವಾರಕ್ಕೊಮ್ಮೆ ಇಂತಹ ದಿನ ಆಚರಿಸಲು ಮುಂದಾದರು. ಆ ಆಂದೋಲನ ಆರಂಭಿಸಿ ಕೇವಲ ಐದಾರು ವರ್ಷಗಳಲ್ಲಿ ಜಗತ್ತಿನ ಹಲವು ನಗರಗಳು ಕಾರುರಹಿತ ದಿನ ಆಚರಿಸಲು ಜನರೇ ಸ್ವಯಂ ಪ್ರೇರಣೆಯಿಂದ ಮುಂದಾದರು. ಇಂದು ಜಗತ್ತಿನ ಹಲವು ನಗರಗಳಲ್ಲಿ ವಾರಕ್ಕೆ ಒಂದು ದಿನ (ಸಾಮಾನ್ಯವಾಗಿ ಭಾನುವಾರ) ಜನ ತಮ್ಮ ಕಾರು, ಬೈಕ್ ಬದಿಗಿಟ್ಟು, ರಸ್ತೆಗಿಳಿಯುತ್ತಾರೆ. ಈ ಆಂದೋಲನಕ್ಕೆ ಈಗ ಕೆಲವು ದೇಶಗಳ ಸರ್ಕಾರವೂ ಕೈಜೋಡಿಸುತ್ತಿದೆ.
2012ರ ಸೆಪ್ಟೆಂಬರ್ 24ರಂದು ಮುಂಬೈನಲ್ಲೂ ಕಾರುರಹಿತ ದಿನ ಆಚರಿಸಲಾಯಿತು. ಸದಾ ಕಾರು, ಬೈಕುಗಳಿಂದ ತುಂಬಿರುತ್ತಿದ್ದ ಬಾಂದ್ರಾ ರಸ್ತೆಯಲ್ಲಿ ಸೈಕಲ್ಗಳು ರಸ್ತೆಗಿಳಿದಿದ್ದವು. ಮಕ್ಕಳೂ ಆತಂಕವಿಲ್ಲದೆ ಸೈಕಲ್ನೊಂದಿಗೆ ರಸ್ತೆಗಿಳಿದರು. ಜನ ಯಾವುದೇ ಜಂಜಾಟವಿಲ್ಲದೆ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಓಡಾಡಿದರು.
ಸದ್ಯ ಬೃಹತ್ ನಗರಗಳಲ್ಲಿ ವಾಹನಗಳದ್ದೇ ದೊಡ್ಡ ಸಮಸ್ಯೆ. ವಾಹನ ಓಡಿಸುವುದೇ ಕಷ್ಟ, ಅದರಿಂದ ಉಂಟಾಗುವ ಮಾಲಿನ್ಯ ಅಷ್ಟಿಷ್ಟಲ್ಲ. ಜತೆಗೆ ಇಂಧನ ಬಳಕೆ. ಜನ ಬೇಸತ್ತಿರುತ್ತಾರೆ. ಹೀಗಿರುವಾಗ ವಾಹನಗಳಿಲ್ಲದ ನಗರ, ರಸ್ತೆ - ಈ ಪರಿಕಲ್ಪನೆ ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಬೆಂಗಳೂರು ಸೇರಿದಂತೆ ಮತ್ತೆ ಉಳಿದ ನಗರಗಳಲ್ಲೂ ಈ ರೀತಿ ಬದಲಾವಣೆ ಆಗಬೇಕಿದೆ. ಇದಕ್ಕೆ ಸೆ. 22 ಬರಬೇಕೆಂದು ಕಾಯಬೇಕಿಲ್ಲ. ಯಾವ ದಿನವಾದರೂ ಸರಿ. ಆದರೆ ಇಚ್ಛಾಶಕ್ತಿ ಬೇಕು ಅಷ್ಟೆ. ಇದು ಆದಷ್ಟು ಬೇಗ ಆರಂಭವಾಗಲಿ ಎಂದು ನಿರೀಕ್ಷಿಸೋಣವೇ?
- ಮಧುಕರ ಭಟ್ಟ