ಇದು 'ಹಸಿರು ದೇಗುಲ'. ದೇಗುಲಕ್ಕೆ ಹೋಗುವಾಗ ಹೇಗೆ ಪವಿತ್ರತೆ ಕಾಪಾಡಿಕೊಳ್ಳಬೇಕೋ ಇಲ್ಲೂ ಹಾಗೆ. ಆದರೆ ಚಪ್ಪಲಿಯೊಂದನ್ನು ಹಾಕಿಕೊಂಡು ಹೋಗಬಹುದಷ್ಟೆ. ಇಲ್ಲಿ ಶುಚಿತ್ವಕ್ಕೆ ಪ್ರಥಮ ಪ್ರಾಶಸ್ತ್ಯ.
ಅಂದಹಾಗೆ ಇದು ಸಾರ್ವಜನಿಕರಿಗಾಗಿ, ಸಾರ್ವಜನಿಕರಿಗೋಸ್ಕರ ಖಾಸಗಿಯವರು 'ಉಚಿತ'ವಾಗಿ ಮಾಡಿದ ಪಾರ್ಕ್. ಇದರ ನಾಮಧೇಯ 'ಸ್ವಾಮಿ ವಿವೇಕಾನಂದ'. ರಿಯಲ್ ಎಸ್ಟೇಟ್ ಉದ್ಯಮದಲ್ಲಿರುವ 'ಕಾರ್ನರ್ಸ್ಟೋನ್' ಎಂಬ ಖಾಸಗಿ ಸಂಸ್ಥೆ ಇಂಥ ಮಹತ್ಕಾರ್ಯ ಮಾಡಿದೆ.
ಈ ಪಾರ್ಕ್ ಇರುವುದು ಬೆಂಗಳೂರಿನ ಇಂದಿರಾನಗರದಲ್ಲಿ. ಈ ಸಂಸ್ಥೆ ಪಾರ್ಕ್ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳುವವರೆಗೂ ಪಾಳು ಬಿದ್ದಿತ್ತು. ಕಳೆದ ವರ್ಷ ಬಿಬಿಎಂಪಿಯಿಂದ ನಿರ್ವಹಣೆ ಜವಾಬ್ದಾರಿ ಹೊತ್ತು ಆಸ್ಥೆಯಿಂದ ಕಾರ್ಯನಿರ್ವಹಿಸಿ 2013 ಜನವರಿ 12ರಂದು ಸ್ವಾಮಿ ವಿವೇಕಾನಂದ ಜಯಂತಿ ದಿನ ಸಾರ್ವಜನಿಕರಿಗೆ ಮುಕ್ತವಾಗಿಸಿದೆ.
ಕಂಡಿಷನ್ಸ್ ಅಪ್ಲೆ
ಇಲ್ಲಿ ಪ್ರವೇಶಕ್ಕೆ ಮೊದಲು ಸೂಚನಾ ಫಲಕವಿದೆ. ಅದರಲ್ಲಿ ನಿಷೇಧದ ಪಟ್ಟಿಯೇ ಇದೆ. ಮದ್ಯಪಾನ, ಧೂಮಪಾನ, ಪ್ಲಾಸ್ಟಿಕ್, ಸಾಕುಪ್ರಾಣಿಗಳ ಪ್ರವೇಶ, ಕಸ ಎಸೆಯುವುದು, ಮರ, ಗಿಡಗಳಿಗೆ ಹಾನಿ ಮಾಡುವುದು, ಹೂವು ಕೀಳುವುದು, ಹುಲ್ಲು ಹಾಸಿನ ಮೇಲೆ ನಡೆಯುವುದು ಹಾಗೂ ಕೂರುವುದು, ಊಟ, ತಿಂಡಿ ಮಾಡುವುದನ್ನು ನಿಷೇಧಿಸಲಾಗಿದೆ.
ಏನೇನಿದೆ?
ಪಾರ್ಕ್ ಪ್ರವೇಶಿಸಿದ ತಕ್ಷಣ ಹಸಿರು ಲೋಕದ ಅನಾವರಣ. ಎಡ-ಬಲ ಸೇರಿದಂತೆ ಎಲ್ಲೆಲ್ಲೂ ಹಸಿರು. ಇಲ್ಲಿ ಹಳೆ ಮರಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಹೊಸ ಗಿಡಗಳನ್ನು ಬೆಳೆಸಲಾಗಿದೆ. ಥರಥರದ ಹೂವಿನ ಸಸ್ಯಗಳಿವೆ. ಬಾದಾಮಿ ಮರವೂ ಇದೆ. 80 ವರ್ಷಗಳ ಹಿಂದಿನ ಬೇರುಗಳನ್ನೂ ಕಾಪಾಡಲಾಗಿದೆ.
ಗ್ರೀನ್ ವಾಲ್
ಗ್ರೀನ್ ವಾಲ್ (ಹಸಿರು ಗೋಡೆ). ಇದನ್ನು ವಿಶಿಷ್ಟವಾಗಿ ತಯಾರಿಸಲಾಗಿದೆ. ಕಬ್ಬಿಣದ ಗೋಡೆ ನಿರ್ಮಿಸಲಾಗಿದ್ದು, ಅದರಲ್ಲಿ ಸಣ್ಣ ಸಣ್ಣ ಕಂಡಿಗಳ ರೀತಿ ನಿರ್ಮಿಸಲಾಗಿದೆ. ಅಲ್ಲಿ ಮಣ್ಣು ತುಂಬಿ ಗಿಡಗಳನ್ನು ಬೆಳಸಲಾಗಿದೆ. 15ಕ್ಕೂ ಜಾತಿಯ ಹೆಚ್ಚು ಬಳ್ಳಿಗಳನ್ನು ಬೆಳೆಸಲಾಗಿದೆ. ಅವುಗಳಿಗೆ ಅಗತ್ಯಕ್ಕೆ ತಕ್ಕಂತೆ ಪ್ರತಿದಿನ ನೀರು ಹಾಯಿಸುವ ವ್ಯವಸೆ.್ಥ ಇದು ಸದಾ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ.
ಹಸಿರು ಹಾಸು
ಕಾರಿಡಾರ್ನಲ್ಲಿ ಓಡಾಡುತ್ತಿದ್ದರೆ ಪಕ್ಕದಲ್ಲಿ ಹಸಿರು ಹಾಸು ಕಂಗೊಳಿಸುತ್ತಿರುತ್ತದೆ. ಇದು ವಾಕಿಂಗ್ ಮಾಡುವವರ ಮನಸ್ಸಿಗೆ ಮುದ ನೀಡುತ್ತದೆ. ಜತೆಗೆ ತಂಪನೆಯ ವಾತಾವರಣ ಆಹ್ಲಾದಕರ ಅನುಭವ ನೀಡುತ್ತದೆ. ಸ್ವಚ್ಛತೆಗೆ ಪ್ರಾಮುಖ್ಯತೆ ಇರುವುದರಿಂದ ಪರಿಸರ ಶುಭ್ರವಾಗಿರುತ್ತದೆ. ಭೇಟಿ ನೀಡುವ ಜನರೂ ಸಹ ಅರಿವು ಮರೆತು ವರ್ತಿಸುವುದಿಲ್ಲ.
ವ್ಯರ್ಥವಾಗದು
ಉದ್ಯಾನದ ಇನ್ನೊಂದು ವಿಶೇಷ ಎಂದರೆ ನೀರನ್ನು ವ್ಯರ್ಥವಾಗಿ ಬಳಸುವುದಿಲ್ಲ. ಅಗತ್ಯಕ್ಕೆ ತಕ್ಕಷ್ಟನ್ನು ಮಾತ್ರ ಗಿಡಗಳಿಗೆ ಬಿಡಲಾಗುತ್ತದೆ. ವೃಥಾ ಹರಿಬಿಡುವುದಿಲ್ಲ. ಹುಲ್ಲು ಹಾಸು ಇರುವುದರಿಂದ ಮಣ್ಣಿನ ಸವಕಳಿಯೂ ಆಗುವುದಿಲ್ಲ. ನೀರು ಅಲ್ಲೇ ಇಂಗುತ್ತದೆ. ಜತೆಗೆ ರಾತ್ರಿ ವೇಳೆ ಭೇಟಿ ನೀಡುವವರಿಗೆ ವರ್ಣರಂಜಿತ 'ಕಾರಂಜಿ'ಯ ವ್ಯವಸ್ಥೆಯೂ ಇದೆ. ಇದನ್ನು 'ಎಲೆ'ಯಾಕಾರದಲ್ಲಿ ಮಾಡಲಾಗಿದ್ದು, ಅದೂ ಪರಿಸರ ಸೂಚಕವಾಗಿದೆ. ಅಲ್ಲಿ ಬೀಳುವ ನೀರು ಅಲ್ಲೇ ಇಳಿದು ಮತ್ತೆ ಅದಕ್ಕೇ ಮರುಬಳಕೆಯಾಗುವಂತೆ ಮಾಡಲಾಗಿದೆ. ಜತೆಗೆ ಕೆಲ ಮರಗಳಲ್ಲಿ ಅಳಿಲು ವಾಸಕ್ಕಾಗಿ ಗೂಡುಗಳನ್ನು ಮಾಡಲಾಗಿದೆ. ಇದು ಪ್ರಾಣಿಗಳಿಗೂ 'ಸ್ನೇಹಿ' ಪಾರ್ಕ್ ಆಗಿದೆ.
ಪಾರ್ಕ್ ನಿರ್ವಹಣೆಗಾಗಿಯೇ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಇಬ್ಬರು ಸೆಕ್ಯುರಿಟಿ ಗಾರ್ಡ್, 6ರಿಂದ 8 ಮಾಲಿಗಳನ್ನು ನೇಮಿಸಿಕೊಳ್ಳಲಾಗಿದೆ. ಇವರನ್ನು ಪಾರ್ಕ್ ನಿರ್ವಹಣೆಗೆಂದೇ ನೇಮಿಸಿಕೊಳ್ಳಲಾಗಿದೆ. ಪಾಳಿ ಮೇಲೆ ಇವರು ಕಾರ್ಯ ನಿರ್ವಹಿಸುತ್ತಾರೆ. ಇವರಿಗೆ ತಿಂಗಳ ವೇತನವನ್ನು ಖಾಸಗಿ ಸಂಸ್ಥೆಯೇ ಭರಿಸುತ್ತದೆ.
ಪ್ರವೇಶ ಉಚಿತ
ಇಷ್ಟೆಲ್ಲಾ ಸೌಕರ್ಯಗಳಿದ್ದರೂ ಸಾರ್ವಜನಿಕರಿಗೆ ಪ್ರವೇಶ ಉಚಿತ. ಹಾಗೆಂದ ಮಾತ್ರಕ್ಕೆ ನಿಮ್ಮ ಮನಸ್ಸಿಗೆ ಬಂದಾಗಲೆಲ್ಲ ಹೋಗುವಂತಿಲ್ಲ. ಅದಕ್ಕೆ ಸಮಯ ನಿಗದಿ ಪಡಿಸಲಾಗಿದೆ. ಮುಂಜಾನೆ 5ರಿಂದ 10, ಸಂಜೆ 4.30ರಿಂದ 8 ಗಂಟೆವರೆಗೆ ತೆರೆದಿರುತ್ತದೆ.ಟಿ
ಮಕ್ಕಳಿಗೆ ಕಲಿಕೆ
ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳೂ ಇಲ್ಲಿ ನಡೆದಿವೆ. ಈಗಾಗಲೇ 3 ಶಾಲೆಗಳ ಮಕ್ಕಳು ಇಲ್ಲಿಗೆ ಭೇಟಿ ನೀಡಿದ್ದು, ಪರಿಸರದ ಅರಿವು ಮೂಡಿಸಿಕೊಂಡಿದ್ದಾರೆ ಎನ್ನುತ್ತಾರೆ ಕಾರ್ನರ್ಸ್ಟೋನ್ ಸಂಸ್ಥೆ ಸಿಬ್ಬಂದಿ. ಜತೆಗೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಆಟಕ್ಕೂ ಇಲ್ಲಿ ಅವಕಾಶವಿದ್ದು, ಮಕ್ಕಳನ್ನು ಕರೆದುಕೊಂಡು ಬಂದ ಪಾಲಕರು ಅವರನ್ನು ಆಡಲು ಬಿಟ್ಟು ವಾಯುವಿಹಾರ ನಡೆಸಬಹುದು. ಆಟವಾಡುವ ಜಾಗದಲ್ಲಿ ರಬ್ಬರ್ ಮ್ಯಾಟ್ ಹಾಕಲಾಗಿದೆ. ಹೀಗಾಗಿ ಆಡುವಾಗ ಮಕ್ಕಳು ಬಿದ್ದರೂ ಪೆಟ್ಟು ಬೀಳುವುದಿಲ್ಲ.
ಪಾರ್ಕ್ ಎಲ್ಲಿದೆ?
ಸಿಎಂಎಚ್ ರಸ್ತೆ -100 ಅಡಿ ರಸ್ತೆಜಂಕ್ಷನ್, ಇಂದಿರಾನಗರ, ಬೆಂಗಳೂರು.
- ಆದರ್ಶ ಎಸ್. ಅಂಚೆ
adianche@gmail.com