ಧಾರವಾಡ ಮನಗುಂಡಿಯ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿಯವರ ಆಶ್ರಮದಲ್ಲಿ ವರುಷಪೂರ್ತಿ ಪ್ಲೋರೈಡ್‌ಮುಕ್ತ ಶುದ್ಧ ಕುಡಿವ ನೀರು. ಭಕ್ತರಿಗೆ ಮಂತ್ರಾಕ್ಷತೆಯೊಂದಿಗೆ ನೀರಿನ ಅರಿವನ್ನು ಬಿತ್ತುವ ಸ್ವಾಮೀಜಿಯವರದು ಸಮಾಜಮುಖಿ ಚಿಂತನೆ. ನೀರಿನ ವಿಚಾರದಿಂದಲೇ ಅವರ ಮಾತುಕತೆ ಆರಂಭ.
ಆಶ್ರಮದಲ್ಲಿ ಮಾಡಿದ ಮಳೆಕೊಯ್ಲಿನ ಘಟಕಕ್ಕೀಗ ಎರಡು ವರುಷ. ಅರುವತ್ತು ಸಾವಿರ ಲೀಟರ್ ಸಾಮರ್ಥ್ಯದ ಮಳೆ ನೀರಿನ ಸಂಗ್ರಹ. ತಾರಸಿಯಲ್ಲಿ ಬಿದ್ದ ನೀರು ವಿವಿಧ ಹಂತಗಳಲ್ಲಿ ಸೋಸಿ ಟ್ಯಾಂಕ್‌ನಲ್ಲಿ ಸಂಗ್ರಹವಾಗುತ್ತದೆ. ಆಶ್ರಮದ ಸೂರು ರಚಿಸುವಾಗಲೇ ಮಳೆಕೊಯ್ಲಿನ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
ಕಳೆದ ವರುಷ ಟ್ಯಾಂಕ್‌ನಲ್ಲಿ ಬಳಸಿ ಮಿಕ್ಕಿದ 2 ಸಾವಿರ ಲೀಟರ್ ನೀರು ಉಳಿದಿದೆ ಎಂದು ಹರ್ಷದಿಂದ ಹೇಳುತ್ತಾರೆ ಆಶ್ರಮದ ಮಾತಾಜಿ. 2012ರಲ್ಲಿ ಹೇಳುವಂಥ ಮಳೆ ಬಂದಿಲ್ಲ. ಕೆರೆ, ಬಾವಿಗಳಲ್ಲಿ ನೀರು ಭಣಭಣ. ಕುಡಿವ ನೀರಿಗೂ ತತ್ವಾರ. ಆದರೆ, ಆಶ್ರಮದಲ್ಲಿ ಮಾತ್ರ ನೀರಿಗೆ ಬರವಿರಲಿಲ್ಲ.
ಈಗ ಮಳೆ ಚೆನ್ನಾಗಿ ಬಂದಿದೆ. ಟ್ಯಾಂಕ್ ತುಂಬಿದೆ. ತುಂಬಿ ತುಳುಕಿದ ನೀರನ್ನು ಕೊಳವೆ ಬಾವಿಗೆ ಮರುಪೂರಣ ಮಾಡುತ್ತಾರೆ. ಇದರಿಂದಾಗಿ ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಏರಿದೆ. ಕೊಳವೆ ಬಾವಿಗೆ ಮೂರ್ನಾಲ್ಕು ವರುಷಗಳಿಂದ ಮರುಪೂರಣ ಮಾಡಿದ್ದರಿಂದಾಗಿ ಗಡಸು ನೀರು ಮೆದುವಾಗಿದೆ. ಈ ನೀರನ್ನು ನೇರವಾಗಿ ಕುಡಿಯುವಷ್ಟು ಶುದ್ಧವಾಗಿದೆ ಎನ್ನುತ್ತಾರೆ ಸ್ವಾಮೀಜಿ.
ಮಳೆಕೊಯ್ಲು ವ್ಯವಸ್ಥೆ ಮಾಡಿಕೊಳ್ಳುವ ಮೊದಲು ಆಶ್ರಮಕ್ಕೆ ಕುಡಿವ ನೀರಿಗಾಗಿ ನೀರನ್ನು ಖರೀದಿ ಮಾಡಿಕೊಳ್ಳಬೇಕಾಗುತ್ತಿತ್ತು. ಐದಾರು ಸಾವಿರ ರುಪಾಯಿ ವೆಚ್ಚವಾಗುತ್ತಿತ್ತು. ಈಗ ನೀರಿನ ಚಿಂತೆಯಿಲ್ಲ. ಆಶ್ರಮದಲ್ಲಿ ಪ್ರಕೃತಿ ಚಿಕಿತ್ಸಾ ವ್ಯವಸ್ಥೆಯಿದೆ. ಮಳೆಕೊಯ್ಲು ನೀರಿನಿಂದಾಗಿ ನಿರ್ವಹಣೆ ಈಗ ತ್ರಾಸವಾಗುತ್ತಿಲ್ಲ. ಸ್ನಾನ, ಬಟ್ಟೆ ತೊಳೆಯಲು ಕೊಳವೆ ಬಾವಿಯ ನೀರಿನ ಬಳಕೆ.
ಆಶ್ರಮದ ಭಕ್ತರಿಗೆ ಸ್ವಾಮೀಜಿ ನೀರಿನ ಬಳಕೆ, ನೈರ್ಮಲ್ಯ, ಮಳೆಕೊಯ್ಲು, ನೀರಿನ ಮಹತ್ವ ಹೇಳುತ್ತಾರೆ. ಪ್ರವಚನ, ಸತ್ಸಂಗಗಳಲ್ಲೂ ನೀರಿನದ್ದೇ ಚಿಂತನೆ. ಇವರ ವಿಚಾರವನ್ನು ಅಳವಡಿಸಿದ ಅರಸೀಕೆರೆ, ಧಾರವಾಡ ಮೊದಲಾದೆಡೆಯ ಕೆಲವರು ಮಳೆಕೊಯ್ಲಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಚಿತ್ರದುರ್ಗದ ಜಲತಜ್ಞ ಎನ್.ಜೆ. ದೇವರಾಜ ರೆಡ್ಡಿಯವರು ಆಶ್ರಮಕ್ಕೆ ಮಳೆಕೊಯ್ಲಿನ ತಂತ್ರಜ್ಞಾನ ಅಳವಡಿಸಿದ್ದರು. ಸ್ವಾಮೀಜಿಯವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ, ಮಳೆಕೊಯ್ಲು ವ್ಯವಸ್ಥೆಯನ್ನು ಮಾಡಿಕೊಳ್ಳಲು ನೂರಕ್ಕೂ ಹೆಚ್ಚು ಮಂದಿ ಸಿದ್ಧರಾಗಿದ್ದಾರೆ.
ಮನೆ ನಿರ್ಮಿಸುವಾಗಲೇ ನೀರಿನ ಸಂಗ್ರಹಕ್ಕಾಗಿ ನೆಲದಡಿಯಲ್ಲಿ ಟ್ಯಾಂಕ್ ಹೇಗೂ ನಿರ್ಮಿಸಬೇಕು. ಅದರ ಜತೆಗೆ ಇನ್ನೊಂದು ಟ್ಯಾಂಕ್ ಅನ್ನು ಮಳೆಕೊಯ್ಲಿಗಾಗಿ ಮಾಡಿಕೊಳ್ಳಿ. ಸ್ವಲ್ಪ ವೆಚ್ಚ ಬಂದರೂ ಶುದ್ಧವಾದ ಕುಡಿವ ನೀರನ್ನು ತ್ರಾಸವಿಲ್ಲದೆ ಪಡೆಯಬಹುದು ಎಂಬ ಸಲಹೆ ರೆಡ್ಡಿಯವರದು.
ಶ್ರೀಮಠದ ಮಳೆಕೊಯ್ಲಿನ ವ್ಯವಸ್ಥೆಯು ಜನರನ್ನು ಆಕರ್ಷಿಸಿದೆ. ಅಧ್ಯಯನಕ್ಕಾಗಿ ರಾಜ್ಯದ ನಾನಾ ಕಡೆಗಳಿಂದ ತಂಡಗಳು ಬರುತ್ತಲಿವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಳೆಕೊಯ್ಲಿನ ಅಗತ್ಯವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖವಾಗಿದೆ. ತನ್ನ ಸ್ವಸಹಾಯ ಸಂಘಗಳ ಸದಸ್ಯರನ್ನು ಅಧ್ಯಯನಕ್ಕಾಗಿ ಕರೆತರುತ್ತಿದೆ. ಮಾದರಿಗಳು ಮುಂದಿದ್ದರೆ ಅನುಷ್ಠಾನದ ಹಾದಿ ಸುಲಭ. ಬಾಹ್ಯವಾಗಿ ಕಾಣುವ ನೇತ್ರಕ್ಕಿಂತ ಬದುಕನ್ನು ಕಟ್ಟಿಕೊಳ್ಳುವ ಒಳನೋಟದ ನೇತ್ರ ನಿತ್ಯ ಜಾಗೃತವಾಗಿರಬೇಕೆಂಬ ಸಂದೇಶವನ್ನು ಶ್ರೀಮಠ ಸಮಾಜಕ್ಕೆ ನೀಡುತ್ತಿದೆ.
ನಗರಗಳಲ್ಲಿ ಹೊಸದಾಗಿ ಮನೆ ಕಟ್ಟುವಾಗ ಮಳೆಕೊಯ್ಲನ್ನು ಮಾಡಿಕೊಳ್ಳಬೇಕೆಂಬ ಕಾನೂನಿದೆ. ಎಷ್ಟು ಮಂದಿ ಪಾಲಿಸುತ್ತಾರೆ ಟ್ಯಾಪ್ ತಿರುಗಿಸಿದಾಗ ದೂರದಿಂದ ಸರಬರಾಜಾಗುವ ನೀರು ಯಥೇಚ್ಛ ಬರುತ್ತದೆ. ತಿಂಗಳ ಕೊನೆಗೆ ನೀರಿನ ಬಿಲ್ಲನ್ನು ಪಾವತಿಸಿದರೆ ಆಯಿತು ಎನ್ನುವವರೇ ಅಧಿಕ. ಒಂದು ದಿವಸ ನೀರು ನಲ್ಲಿಯಲ್ಲಿ ಬಾರದಿದ್ದರೆ ಬದುಕೇ ಹೈರಾಣವಾಗುತ್ತದೆ. ದಿನೇ ದಿನೇ ಕುಸಿಯುತ್ತಿರುವ ಅಂತರ್ಜಲದ ಸ್ಥಿತಿ ಗಮನಿಸಿದಾಗ ಪ್ರತಿ ಮನೆಯಲ್ಲಿ ಕನಿಷ್ಠ ಕುಡಿಯುವ ನೀರಿಗಾದಾರೂ ಮಳೆಕೊಯ್ಲನ್ನು ಅವಲಂಬಿಸಬೇಕಾದುದು ಭವಿಷ್ಯದ ಅನಿವಾರ್ಯತೆ.
- ನಾ. ಕಾರಂತ ಪೆರಾಜೆ