ಪರಿಸರದ ಮೇಲಿನ ಮಾನವನ ಹಸ್ತಕ್ಷೇಪದ ನೇರ ಪರಿಣಾಮ ಆಗುತ್ತಿರುವುದು ಮಾತ್ರ ಮೂಕ ಜೀವಿಗಳ ಮೇಲೆ. ವಾಯು, ಜಲ ಮಾಲಿನ್ಯದಿಂದಾಗಿ ಈಗಾಗಲೇ ಅನೇಕ ಜೀವಿಗಳು ನಶಿಸಿಹೋಗಿವೆ. ಇನ್ನೂ ಅನೇಕ ಜೀವಪ್ರಭೇದಗಳು ಅಳಿವಿನ ಭೀತಿ ಎದುರಿಸುತ್ತಿವೆ. ಈ ಕುರಿತು ನಡೆದ ಅಧ್ಯಯನವೊಂದು, ಪರಿಸರ ನಾಶದ ಕೂಸಾದ ಹವಾಮಾನ ವೇಪರೀತ್ಯದಿಂದಾಗಿ ಭಾರತವೂ ಸೇರಿ ಏಷ್ಯಾದ ಅನೇಕ ಹಕ್ಕಿ ಸಂಕುಲ ಅಪಾಯ ಎದುರಿಸುತ್ತಿದೆ. ಹಕ್ಕಿಗಳ ಜೀವನ ಕ್ರಮದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ.
ನೇಪಾಳ, ವಿಯೆಟ್ನಾಂ, ಭಾರತ, ಕಾಂಬೋಡಿಯಾ, ಲಾವೋಸ್ ಮತ್ತು ಭೂತಾನ್‌ನ 370ಕ್ಕೂ ಹೆಚ್ಚು ಹಕ್ಕಿಗಳ ಮೇಲೆ ದುರ್ಹಾಮ್ ವಿಶ್ವವಿದ್ಯಾಲಯ ಹಾಗೂ ಬರ್ಡ್ ಲೈಫ್ ಇಂಟರ್‌ನ್ಯಾಷನಲ್ ಸಂಘಟನೆ ಈ ಅಧ್ಯಯನ ನಡೆಸಿದೆ. ವಿನಾಶದ ಭೀತಿ ಎದುರಿಸುತ್ತಿರುವ ಈ ಹಕ್ಕಿಗಳ ವಾಸಸ್ಥಳವನ್ನು ರಕ್ಷಿಸುವ ತುರ್ತು ಅಗತ್ಯವಿದೆ ಎಂದು ಅಧ್ಯಯನ ವರದಿ ಸಲಹೆ ನೀಡಿದೆ.