ಈಗೀಗ ಕಸ ವಿಲೇವಾರಿ, ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲೇ. ಆದರೆ ನೆರೆಯ ಗೋವಾ ರಾಜ್ಯದ ಹೆದ್ದಾರಿ ಹಾಗೂ ಹೆದ್ದಾರಿಯಂಚಿನಲ್ಲಿ ತ್ಯಾಜ್ಯ ನಿರ್ವಹಣೆ ಉಳಿದೆಲ್ಲ ರಾಜ್ಯಗಳಿಗೆ ಮಾದರಿ. ಗೋವಾದ ಪರಿಸರಸ್ನೇಹಿ ಹೆದ್ದಾರಿಯಲ್ಲಿ ಸಾಗುವುದೇ ಖುಷಿಯ ಸಂಗತಿ.
ಗೋವಾದ ಹೆದ್ದಾರಿ ಪಕ್ಕ ಅಲ್ಲಲ್ಲಿ ತ್ಯಾಜ್ಯ ಸಂಗ್ರಹಣೆ ಬಾಕ್ಸುಗಳನ್ನು ಇಡಲಾಗಿದೆ. ಪೊಟ್ಟಣಗಳಲ್ಲಿ ಗಂಟು ಕಟ್ಟಿ ಈ ಬಾಕ್ಸುಗಳಲ್ಲಿ ಹಾಕಿಟ್ಟಿರುವುದು ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಕಾಣಿಸುತ್ತದೆ. ಹೆದ್ದಾರಿಯಂಚಿನಲ್ಲಿ ಸಂಗ್ರಹಿಸಿದ ಕಸ ಮತ್ತೆ ಚೆಲ್ಲಾಪಿಲ್ಲಿಯಾಗಬಾರದು ಎಂಬ ಬಗ್ಗೆ ಅತೀವ ಕಾಳಜಿ ವಹಿಸಲಾಗಿದೆ. ಇದಕ್ಕಾಗಿ ಕಬ್ಬಿಣದ ಸರಳುಗಳ ಪೆಟ್ಟಿಗೆಯನ್ನೂ ರೂಪಿಸಲಾಗಿದೆ. ಪ್ರತಿ 2 ಕಿ.ಮೀ.ಗೆ ಒಂದರಂತೆ ಈ ಪೆಟ್ಟಿಗೆಯನ್ನಿಡಲಾಗಿದೆ. ಹೆದ್ದಾರಿಯಂಚಿನಲ್ಲಿ ಸಂಗ್ರಹಿಸಿದ ಕಸವನ್ನು ಈ ಬಾಕ್ಸಿಗೆ ತುಂಬಲಾಗುತ್ತದೆ. ಸಂಗ್ರಹಿಸಿದ ಕಸವನ್ನು ನಾಯಿ, ದನಕರುಗಳು, ಕಾಡುಪ್ರಾಣಿಗಳು ಚೆಲ್ಲಾಪಿಲ್ಲಿಯಾಗಿಸಿ ಮತ್ತಷ್ಟು ಮಾಲಿನ್ಯ ಮಾಡಬಹುದು ಎಂದು ಈ ಬಾಕ್ಸುಗಳನ್ನು ರೂಪಿಸಲಾಗಿದೆ.
ತ್ಯಾಜ್ಯಕ್ಕೆ ಬೀಗ
ಚಿನ್ನಾಭರಣ, ಹಣ ಮತ್ತಿತರ ಅಮೂಲ್ಯ ವಸ್ತುಗಳಿಗೆ ಬೀಗ ಹಾಕುವುದು ಸಹಜ. ಆದರೆ ಗೋವಾ, ತ್ಯಾಜ್ಯಕ್ಕೆ ಬೀಗ ಹಾಕಿದೆ. ಚಿಂದಿ ಆಯುವವರು ಸಂಗ್ರಹಿಸಿದ ಕಸ ಮತ್ತೆ ಹೆದ್ದಾರಿಯಂಚಿಗೆ ಬೀಳಬಾರದು ಎಂದು ಎಲ್ಲ ಬಾಕ್ಸುಗಳಿಗೂ ಬೀಗ ಹಾಕಲಾಗಿದೆ.
ಹೆದ್ದಾರಿಯನ್ನು ಹೇಗೆ ಸ್ವಚ್ಛವಾಗಿಡಬಹುದು ಎಂಬ ಬಗ್ಗೆ ಗೋವಾದಿಂದ ಪಾಠ ಕಲಿಯಬೇಕು. ಹೆದ್ದಾರಿಯುದ್ದಕ್ಕೂ ಸಂಚರಿಸಿದರೆ ಒಂದೇ ಒಂದು ಪ್ಲಾಸ್ಟಿಕ್ ಬ್ಯಾಗು, ರ್ಯಾಪರ್‌ಗಳು, ಕಾಗದದ ತುಣುಕುಗಳು, ತ್ಯಾಜ್ಯಗಳು ಕಾಣಸಿಗವು. ನಮ್ಮ ಮನೆಯಂತೆ ಹೆದ್ದಾರಿ ಹಾಗೂ ಹೆದ್ದಾರಿಯ ಇಕ್ಕೆಲಗಳು ಒಪ್ಪ ಓರಣವಾಗಿದೆ.
ಕಸ ಸಂಗ್ರಹಣೆ ವೃತ್ತಿ
ನಿತ್ಯ ಈ ಹಾದಿಗಳಲ್ಲಿ ತ್ಯಾಜ್ಯ ಸಂಗ್ರಹಿಸುವವರು ಹಾಜರಾಗುತ್ತಾರೆ. ಎಲ್ಲ ಕಸವನ್ನೂ ಸಂಗ್ರಹಿಸಿ ನಿಗದಿತ ಸ್ಥಳದಲ್ಲಿಡುತ್ತಾರೆ. ಕಸ ಒಟ್ಟುಗೂಡಿಸಿ ಇಟ್ಟ ಮೇಲೆ ಕಸ ಸಂಗ್ರಹಣೆ ವಾಹನಕ್ಕೆ ಮಾಹಿತಿ ನೀಡಲಾಗುತ್ತದೆ. ತಕ್ಷಣ ವಾಹನ ಹೆದ್ದಾರಿಯುದ್ದಕ್ಕೂ ಸಂಚರಿಸಿ ಎಲ್ಲ ಕಸವನ್ನೂ ಸೇರಿಸಿಕೊಂಡು ತ್ಯಾಜ್ಯ ವಿಲೇವಾರಿ ಸ್ಥಳಕ್ಕೆ ತೆರಳುತ್ತದೆ. ಪೋಳೆಂನಿಂದ ಮಹಾರಾಷ್ಟ್ರ ಗಡಿ ತನಕ ಏನಿಲ್ಲವೆಂದರೂ 20ಕ್ಕೂ ಹೆಚ್ಚು ವಾಹನ ತ್ಯಾಜ್ಯ ಸಂಗ್ರಹಣೆ, ಸಾಗಣೆಯಲ್ಲಿ ನಿರತವಾಗಿರುತ್ತವೆ. ಇಲ್ಲಿ ನೂರಾರು ಜನರಿಗೆ ಕಸ ಸಂಗ್ರಹಣೆಯೇ ವೃತ್ತಿ.
ಪರಿಕ್ಕರ್ ವ್ಯಂಗ್ಯ
ಗೋವಾ ಸಿಎಂ ಮನೋಹರ ಪರಿಕ್ಕರ್, ಇತ್ತೀಚೆಗೆ ಕಾರವಾರಕ್ಕೆ ಆಗಮಿಸಿದ್ದರು. ಆಗ ಅವರಂದ ಮಾತು ನಮ್ಮ ಮನವನ್ನು ತಟ್ಟಲೇಬೇಕು; 'ನಾವು ಗೋವಾದಿಂದ ಕಾರಿನಲ್ಲಿ ಹೊರಟ ಮೇಲೆ ನಿದ್ದೆ ಬಂದಿತ್ತು. ಕೆಲ ಸಮಯದ ನಂತರ ಎಚ್ಚರವಾಯಿತು. ಎಲ್ಲಿದ್ದೇನೆ ಎಂದು ತಕ್ಷಣ ಗೊತ್ತಾಗಲಿಲ್ಲ. ಆದರೆ, ಹೆದ್ದಾರಿ ಪಕ್ಕದಲ್ಲಿ ನೋಡಿದಾಗ ಕಸ, ತ್ಯಾಜ್ಯದ ರಾಶಿ ರಾಶಿ ಕಂಡುಬಂತು. ಆಗ ನಾನು ಕಾರವಾರಕ್ಕೆ ಸಮೀಪದಲ್ಲಿದ್ದೇನೆ ಎಂದು ತಿಳಿದುಬಂತು'!
ಪರಿಕ್ಕರ್ ಹೇಳಿಕೆಯಲ್ಲಿ ರಾಜ್ಯದಲ್ಲಿ ಕಸ ನಿರ್ವಹಣೆ ಬಗ್ಗೆ ವ್ಯಂಗ್ಯ ಇದ್ದುದು ಸುಳ್ಳೇನಲ್ಲ. ಆದರೆ ಅದನ್ನೇ ಯಾಕೆ ನಾವು ಚಾಲೆಂಜ್ ಆಗಿ ತೆಗೆದುಕೊಳ್ಳಬಾರದು ಎನ್ನುವ ಬಗ್ಗೆ ನಾವು ಯೋಚಿಸುವುದೇ ಇಲ್ಲ.
ಗೋವಾ ಪ್ರವಾಸೋದ್ಯಮವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಇದೊಂದು ಜಾಗತಿಕ ಪ್ರವಾಸಿ ತಾಣ. ಹೆದ್ದಾರಿ ಪಕ್ಕದಲ್ಲಿ ತ್ಯಾಜ್ಯಗಳು ಬಿದ್ದುಕೊಂಡಿದ್ದಲ್ಲಿ ದೇಶ ವಿದೇಶಗಳಿಂದ ಬರುವ ಪ್ರವಾಸಿಗರು ಗೋವಾದ ಬಗ್ಗೆ ಸದಭಿಪ್ರಾಯ ಇಟ್ಟುಕೊಳ್ಳಲಾರರು. ಇದು ಪ್ರವಾಸೋದ್ಯಮದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡಬಲ್ಲದು ಎಂದೆಲ್ಲ ಯೋಚಿಸಿ ಈ ಯೋಜನೆ ಜಾರಿಗೆ ಬಂದಿದೆ.
ಹೆದ್ದಾರಿಯಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಗೋವಾ ರಾಜ್ಯದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಶುಲ್ಕ ವಿಧಿಸಲಾಗುತ್ತಿದೆ. ಈ ಸೌಲಭ್ಯಗಳಲ್ಲಿ ತ್ಯಾಜ್ಯ ವಿಲೇವಾರಿಯೂ ಒಂದು.
ನಮ್ಮಲ್ಲೂ ರಾಷ್ಟ್ರೀಯ ಹೆದ್ದಾರಿ ಇದೆ. ಆದರೆ ಹೆದ್ದಾರಿಯ ಇಕ್ಕೆಲಗಳಲ್ಲೂ ಕಸ, ಕಡ್ಡಿಗಳು, ಪ್ಲಾಸ್ಟಿಕ್ ರ್ಯಾಪರ್‌ಗಳು, ನೀರು, ಸಾಫ್ಟ್‌ಡ್ರಿಂಕ್ಸ್, ಬಿಯರ್ ಬಾಟಲಿಗಳು, ಅರ್ಧ ತಿಂದು ಬಿಸಾಡಿದ ಪೊಟ್ಟಣಗಳು ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತವೆ. ಗೋವಾ ಎಂದರೆ ಮದ್ಯ, ಮೋಜು, ಮಸ್ತಿ ಎಂದೆಲ್ಲ ಹೇಳುವ ನಾವು ಗೋವಾದಿಂದ ಇಂಥ ಪಾಠಗಳನ್ನು ಯಾಕೆ ಕಲಿಯುತ್ತಿಲ್ಲ ಎನ್ನುವುದು ಪ್ರಶ್ನೆಯಾಗಿಯೇ ಇದೆ.
- ವಸಂತಕುಮಾರ್ ಕತಗಾಲ
vasant800@gmail.com