ಈ ಪ್ರೀತಿ ಅನ್ನೋದ್ ಹುಟ್ಕಂಡ್ರೆ ಯಾರ್ಯಾರ್ ಕೈಲಿ ಏನೇನ್ ಮಾಡ್ಸತ್ತೆ ಅಂತ ಹೇಳಕ್ಕಾಗಲ್ಲ. ಮನುಷ್ಯರಾದ ನಾವು ನಮ್ಮ ಪ್ರೀತಿ ತೋಡಿಕೊಳ್ಳಲು ನಾನಾ ಮಾರ್ಗಗಳನ್ನು ಹುಡುಕಿಕೊಳ್ಳುತ್ತೇವೆ. ಯಾವ್ಯಾವುದೋ ಗಿಫ್ಟ್‌ಗಳನ್ನೂ ಕೊಡುತ್ತೇವೆ. ಆದರೆ ಪ್ರಾಣಿ-ಪಕ್ಷಿಗಳೇನು ಮಾಡಬೇಕು ಪಾಪ? ಹೌದು ಪೆಂಗ್ವಿನ್ ಏನು ಮಾಡುತ್ತೆ? ಇದು ಗೊತ್ತಾಗಬೇಕೆಂದರೆ ಇಲ್ಲಿ ನೋಡಿ.
ಲಕ್ಷಗಟ್ಟಲೆ ಪೆಂಗ್ವಿನ್‌ಗಳನ್ನು ಒಂದೆಡೆ ನಿಲ್ಸಿದ್ರೆ ನಮ್ಗೆ ಕಪ್ಪು ಬಿಳುಪು ಚಿತ್ರ ನೋಡ್ದಂಗ್ ಆಗ್ಬಹುದು. ಆದ್ರೆ ಗಂಡು ಪೆಂಗ್ವಿನ್ ಒಂದಕ್ಕೆ ಆ ಲಕ್ಷಗಳ ನಡುವೆಯೇ ತನ್ನ ಲಕ್ಷ್ಯವನ್ನೆಲ್ಲಾ ಸೆಳೆದಿಟ್ಟುಕೊಳ್ಳುವಂಥ ಸುರಸುಂದರಾಂಗಿಯಾಗಿ ಒಂದು ಹೆಣ್ಣು ಪೆಂಗ್ವಿನ್ ಕಂಡು ಹೆವೀ ಲವ್ವಾಗುತ್ತದೆ. ತಕ್ಷಣ ಅದು ಸಮುದ್ರದ ದಂಡೆ ತುಂಬಾ ತನ್ನ ಹುಡುಗಿಗೆ ಪ್ರಪೋಸ್ ಮಾಡುವಾಗ ಕೊಡಲೆಂದು ಅತಿ ಸುಂದರವಾದ, ನುಣುಪಾದ ಕಲ್ಲನ್ನು (ಗಿಫ್ಟ್) ಹುಡುಕತೊಡಗುತ್ತದೆ. ಕೊನೆಗೆ ಮನ ಮೆಚ್ಚಿದ ಕಲ್ಲನ್ನು ತೆಗೆದುಕೊಂಡು ಹೋಗಿ ಮನ ಮೆಚ್ಚಿದ ಹುಡುಗಿಗೆ ನೀಡುತ್ತದೆ. ಆಕೆಗೂ ಆತ ಇಷ್ಟನಾದನೆಂದರೆ ಕಲ್ಲನ್ನು ತೆಗೆದುಕೊಂಡು ಹೋಗಿ ತನ್ನ ಗೂಡಿನೊಳಗಿಡುತ್ತಾಳೆ. ಅಲ್ಲಿಂದ ಮುಂದೆ ಜೋಡಿ ಪಯಣ ಶುರು. ಆದರೆ ಕೆಲವು ವಿಜ್ಞಾನಿಗಳು ಮಾತ್ರ, 'ಇದು ನಡೆಯುತ್ತದೆ. ಆದರೆ ಗಂಡು ಪೆಂಗ್ವಿನ್ ಮನೆ ಕಟ್ಟಲೋಸುಗ ಕಲ್ಲು ಹುಡುಕಿ ತರುತ್ತದೆಯೇ ಹೊರತು ಪ್ರಪೋಸ್ ಮಾಡಲಲ್ಲ' ಎನ್ನುತ್ತಾರೆ.