'ಬದಲಾವಣೆ'- ಇದೊಂದು ಪ್ರಕ್ರಿಯೆ ಮಾತ್ರ. ಭೂಮಿ ಎಂಬ ಗ್ರಹದಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿದೆ, ನಡೆಯುತ್ತಿದೆ ಸಹ. ಇದಕ್ಕೆ ಅಂತ್ಯವಿಲ್ಲ. ನಾಲ್ಕು ಬಿಲಿಯನ್ ವರ್ಷಗಳ ಹಿಂದೆ, ಈ ಭೂಮಿ ಜನನವಾದಾಗಿನಿಂದ ಇಲ್ಲಿಯವರೆಗೂ ನಮ್ಮ ಈ ವಾಸಗ್ರಹ ನಿರಂತರ ಬದಲಾವಣೆ ಕಾಣುತ್ತಲೇ ಬಂದಿದೆ.
ತಾನೇ ತಾನಾಗಿ ಬದಲಾದ ಭೂಮಿ ವಾಸಿಸಲು ಯೋಗ್ಯ ಗ್ರಹವಾಗಿ ಮಾರ್ಪಟ್ಟರೆ, ನಿಸರ್ಗದಲ್ಲಿ ಮಾನವನ ಹಸ್ತಕ್ಷೇಪದಿಂದಾಗಿ ಬದಲಾಗುತ್ತಿರುವ ಭೂಮಿ ಈಗ ವಾಸಿಸಲು ಅಸಾಧ್ಯವೆನ್ನುವ ಸ್ಥಿತಿ ತಲುಪುತ್ತಿದೆ. ಪರಿಸರ ವಿಜ್ಞಾನ ಮಾತ್ರ, ಮಾನವನು ಪರಿಸರ ಮೇಲೆ ಹಾಗೂ ಜೀವಿಗಳ ಮೇಲೆ ಮಾಡುತ್ತಿರುವ ದೌರ್ಜನ್ಯಗಳನ್ನು ಸಾಕ್ಷಿ ಸಮೇತ ದಾಖಲಿಸುತ್ತಾ ಸಾಗಿದೆ.
ಮನುಷ್ಯನ ಪ್ರಭಾವ
ಮೊದಲು ಗುಹೆಗಳಲ್ಲಿ ವಾಸಿಸುತ್ತಿದ್ದ ಮಾನವ, ನಿಧಾನವಾಗಿ ನಾಗರಿಕತೆಯತ್ತ ಹೊರಳುತ್ತಿದ್ದಾಗ, ನಿಸರ್ಗದ ಎಲ್ಲವನ್ನೂ ತನ್ನ ಅಗತ್ಯಗಳಿಗೆ ತಕ್ಕಂತೆ ಬಳಸಿಕೊಳ್ಳುವುದನ್ನು ಕಲಿತ. ಆದರೆ, ಅಂದು ಅವರ ಅಗತ್ಯತೆ ಸೀಮಿತವಾಗಿದ್ದರಿಂದ ಹಾಗೂ ಅವನ ಜ್ಞಾನಶಕ್ತಿಯೂ ಇತಿಮಿತಿಗಳನ್ನು ಹೊಂದಿದ್ದರಿಂದ ಅವನಿಂದ ಪರಿಸರಕ್ಕೆ ಹಾನಿಯಾಗಿರಲಿಲ್ಲ. ಮಾನವನ ನಾಗರಿಕತೆ ಮತ್ತಷ್ಟು ಉತ್ತುಂಗಕ್ಕೇರಿದಾಗಲೂ ನಿಸರ್ಗಕ್ಕೆ ಘಾಸಿಯಾಗಿರಲಿಲ್ಲ.
ಆದರೆ, ಕಳೆದೊಂದು ಶತಮಾನಗಳಲ್ಲಿ ಮಾನವನ ನಾಗರಿಕತೆ ಆಧುನಿಕತೆಯೆಂಬ ಮರೀಚಿಕೆಯ ಬೆನ್ನತ್ತಿದೆ. ಇದೇ ಮಾಯೆಯಲ್ಲಿ ಸಿಲುಕಿರುವ ಮಾನವ ಇಂದು ನಿಸರ್ಗದ ಶೋಷಣೆಗೊಳಗಾಗಿದ್ದಾನೆ.
ಜನಸಂಖ್ಯೆ ಸ್ಫೋಟ
ಕಳೆದೊಂದು ಶತಮಾನದಿಂದೀಚೆಗೆ ಆದ ತಂತ್ರಜ್ಞಾನ ಹಾಗೂ ವೈದ್ಯಕೀಯ ಕ್ರಾಂತಿಗಳು ಮನುಷ್ಯನ ಆಯುಷ್ಯವನ್ನು ಹೆಚ್ಚಿಸಿವೆ. ಹಾಗಾಗಿ, ಜನರ ಜೀವಿಸುವ ಅವಧಿ ಹಾಗೂ ಜನನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿವೆ. ವಿಶ್ವದ ಜನಸಂಖ್ಯೆ ಅಗಾಧವಾಗಿ ಏರಿಕೆಯಾಗಲು ಇದೇ ಪ್ರಮುಖ ಕಾರಣ.
ಹೀಗೆ, ಮಿತಿ ಮೀರಿ ಬೆಳೆದಿರುವ ಜನಸಂಖ್ಯೆಗೆ ಅಗತ್ಯವಾಗಿ ಬೇಕಾದ ಸೌಕರ್ಯಗಳ ಅಗತ್ಯತೆಯೂ ಗಣನೀಯವಾಗಿ ಹೆಚ್ಚಿದೆ. ಇದು ಪ್ರಕೃತಿಯನ್ನು ದೋಚಲು ಮಾನವನ್ನು ಪ್ರೇರೇಪಿಸಲು ಮೂಲ ಕಾರಣ ಎನ್ನುತ್ತಿವೆ ಕೆಲ ಅಧ್ಯಯನಗಳು.
ಅಗತ್ಯಕ್ಕಿಂತ ಹೆಚ್ಚಾಗಿ ನಿಸರ್ಗದ ಲೂಟಿಯಲ್ಲಿ ತೊಡಗಿರುವ ಕಾರಣಗಳಿಂದ ಪರಿಸರ ದಿನೇ ದಿನೇ ಹಾಳಾಗುತ್ತಿದೆ. ನಾಗರಿಕತೆಯ ಹೆಸರಿನಲ್ಲಿ ಮಾನವ ಕಾಡುಗಳನ್ನು ಕಡಿಯುತ್ತಾ, ಭೂಮಿಯ ಫಲವತ್ತತೆಯನ್ನು ಹಾಳುಗೆಡವುತ್ತಾ, ಹಾನಿಕಾರಕ ರಾಸಾಯನ ತ್ಯಾಜ್ಯಗಳನ್ನು ಪರಿಸರಕ್ಕೆ ಬಿಡುವಂಥ ಕ್ರಿಯೆಗಳಿಂದ ಅಪಾಯವೇ ಹೆಚ್ಚು. ಆದರೆ, ಇದು ಮುಂದೊಂದು ದಿನ ತನಗೇ ಉರುಳಾಗುತ್ತದೆ ಎಂಬುದನ್ನು ಮರೆತಿರುವ ಮನುಷ್ಯ, ವಿಜ್ಞಾನಿಗಳ ಕಿವಿಮಾತನ್ನೂ ಮರೆತಿದ್ದಾನೆ.
ಉಪಗ್ರಹದ ಎಚ್ಚರಿಕೆ
ಅಂತರಿಕ್ಷಕ್ಕೆ ನಾವು ಕಳುಹಿಸಿರುವ ಉಪಗ್ರಹಗಳು ನಮ್ಮ ಭೂಮಿಯ ಪರಿಸರ ನಾಶವಾಗುತ್ತಿರುವುದರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡುತ್ತಿವೆ. ಅವು ಕಳುಹಿಸುತ್ತಿರುವ ಭೂಮಿಯ ಮೇಲ್ಮೈನ ಚಿತ್ರಗಳು ಎಚ್ಚರಿಕೆಯ ಸಂದೇಶವನ್ನು ಪರೋಕ್ಷವಾಗಿ ನೀಡುತ್ತಿವೆ. ಉಪಗ್ರಹಗಳ ಒಟ್ಟಾರೆ ಮಾಹಿತಿಗಳ ಮೇರೆಗೆ ವಿಜ್ಞಾನಿಗಳು ಈ ಭೂಮಿಯನ್ನು 'ಬಹು ಕಾಯಿಲೆಗಳಿಂದ ಬಳಲುತ್ತಿರುವ ರೋಗಿ' ಎಂದು ಬಣ್ಣಿಸಿದ್ದಾರೆ. ಹೌದು... ವಿಜ್ಞಾನಿಗಳ ಪ್ರಕಾರ, 'ಅರ್ಥ್ ಈಸ್ ಎ ಪ್ಲಾನೆಟ್ ವಿತ್ ಎ ಮಿಕ್ಸ್‌ಚರ್ ಆಫ್ ಡಿಸೀಸಸ್'. ಆದರೆ, ಆಧುಕತೆಯನ್ನು ಕೊಂಡಾಡುವವರು ಇದನ್ನು ಗ್ಲೋಬಲ್ ಚೇಂಜ್ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆಂದೂ ವಿಜ್ಞಾನಿಗಳು ಹೇಳುತ್ತಾರೆ.
ನಾವು ಅಭಿವೃದ್ಧಿಯನ್ನು ಗ್ಲೋಬಲ್ ಚೇಂಜ್ ಎಂದೇ ಅರ್ಥೈಸುತ್ತೇವೆ. ಆದರೆ, ನಿಜಕ್ಕೂ ಇದೊಂದು ಭ್ರಮೆ ಎನ್ನುತ್ತಾರೆ ವಿಜ್ಞಾನಿಗಳು. ಅವರ ಪ್ರಕಾರ, ಈ ಗ್ಲೋಬಲ್ ಚೇಂಜ್ ಎನ್ನುವುದು ಒಂದು 'ಮಿಕ್ಸ್‌ಚರ್ ಆಫ್ ಡಿಸೀಸಸ್' ಅಥವಾ 'ಕಾಂಪ್ಲೆಕ್ಸ್ ಆಫ್ ಸಿಂಡ್ರೋಮ್ಸ್'. ಸಿಂಡ್ರೋಮ್ ಎಂದರೆ ಕಾಯಿಲೆ. ಹಾಗಾದರೆ, ಆ ಕಾಯಿಲೆಗಳು ಯಾವುವು?
1 ಸಾಹೇಲ್ ಸಿಂಡ್ರೋಮ್
ಕೃಷಿ ಕ್ಷೇತ್ರದ ನಿರ್ಲಕ್ಷ್ಯದಿಂದ, ಬೇಜವಾಬ್ದಾರಿತನದಿಂದ ಹಾಳಾಗಿರುವ ಕೃಷಿ ವ್ಯವಸ್ಥೆ ಹಾಗೂ ಅದರ ಬೆನ್ನಿಗೇ ಆವರಿಸಿರುವ ಗ್ರಾಮೀಣ ಬಡತನ.
2 ಎಕ್ಸೋಡಸ್ ಸಿಂಡ್ರೋಮ್
ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಬಿಟ್ಟು ಆಧುನಿಕತೆಯ ಹೆಸರಿನಲ್ಲಿ ಅವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು, ಭೂಮಿಯ ಇಳುವರಿ ಶಕ್ತಿಗೆ ಸಂಚಕಾರ ತಂದಿರುವುದು.
3 ಡಸ್ಟ್‌ಬೌಲ್ ಸಿಂಡ್ರೋಮ್
ಕೈಗಾರಿಕಾ ಕ್ರಾಂತಿಯಿಂದ ಪರಿಸರವನ್ನು ನಾಶದೆಡೆಗೆ ಕೊಂಡೊಯ್ಯುತ್ತಿರುವುದು.
4 ಕಟಂಗಾ ಸಿಂಡ್ರೋಮ್
ನವೀಕರಣಗೊಳಿಸಲಾಗದ ಇಂಧನಗಳನ್ನು ಯಥೇಚ್ಛವಾಗಿ ಬಳಸುತ್ತಾ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದು.
5 ಫ್ಯಾವೆಲಾ ಸಿಂಡ್ರೋಮ್
ಮಿತಿಮೀರಿದ ನಗರೀಕರಣ ಯೋಜನೆಗಳಿಂದ ಉಂಟಾದ ಮನುಷ್ಯನ ದಾಹಕ್ಕೆ ಪರಿಸರವನ್ನು ಲೂಟಿ ಮಾಡುತ್ತಿರುವುದು.
6 ಡಿಸಾಸ್ಟರ್ ಸಿಂಡ್ರೋಮ್
ಕೈಗಾರಿಕೆಗಳಿಂದಾಗಿ ಸಂಭವಿಸುತ್ತಿರುವ ಪ್ರಕೋಪಗಳು.
7 ಗಾರ್ಬೇಜ್ ಸಿಂಡ್ರೋಮ್
ಕೈಗಾರಿಕಾ ತ್ಯಾಜ್ಯಗಳ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸದ ಕಾರಣ, ಉಂಟಾಗುತ್ತಿರುವ ಸಮಸ್ಯೆಗಳು.
ಐಷಾರಾಮಿಯೇ ಮಾರಕ
ಮುಂದುವರಿದ ದೇಶಗಳು ಸೃಷ್ಟಿಸುತ್ತಿರುವ ಪರಿಸರ ಮಾಲಿನ್ಯ, ಅಭಿವೃದ್ಧಿಶೀಲ ಅಥವಾ ಬಡದೇಶಗಳ ಮೇಲೆ ಮಾರಕವಾಗಿ ಪರಿಣಮಿಸುತ್ತಿರುವುದು ಮತ್ತೊಂದು ಸಮಸ್ಯೆ. ಅಂದರೆ, ಸುಖವಾಗಿರುವವರು ಬೇರೆ, ಅದರ ನೋವನ್ನು ಅನುಭವಿಸುವವರು ಬೇರೆ. ಹಾಗಾಗಿಯೇ, ಪರಿಸರ ಮಾಲಿನ್ಯ ಹಾಗೂ ಅದರ ಸಮಸ್ಯೆಗಳು ಎಲ್ಲರ ಅರಿವಿಗೆ ಬರುತ್ತಿಲ್ಲ ಎನ್ನುತ್ತಿದ್ದಾರೆ ಪರಿಸರವಾದಿಗಳು.
ಉದಾಹರಣೆಗೆ, ಪ್ಯಾರಿಸ್‌ನಲ್ಲಿ ಒಬ್ಬ ಕಾರು ಮುಂತಾದ ವಾಹನ ಅಥವಾ ಸಾಧನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತಿದ್ದಾನೆಂದರೆ, ಅದು ಬಾಂಗ್ಲಾದೇಶದ ಮೇಲೆ ಸುಮಾರು 30ರಿಂದ 40 ವರ್ಷ ಅಡ್ಡ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ಕಾಲ ಮಿಂಚಿಲ್ಲ...
ಮತ್ತೊಂದು ಅಂಶವನ್ನೂ ವಿಜ್ಞಾನಿಗಳು ತಿಳಿಸುತ್ತಾರೆ. ಪರಿಸರ ಸಾಕಷ್ಟು ಹಾಳಾಗಿದೆ. ಆದರೆ, ಈಗಲೂ ಕಾಲ ಮಿಂಚಿಲ್ಲ. ಈಗ ಎಚ್ಚೆತ್ತುಕೊಂಡರೂ ನಾವು ಪರಿಸರವನ್ನು ಉಳಿಸಿಕೊಳ್ಳಬಹುದಾಗಿದೆ. ಇದಕ್ಕೆ ಇಚ್ಛಾಶಕ್ತಿ ಬೇಕು. ಜಗತ್ತಿನ ಎಲ್ಲ ಸಂಸ್ಕೃತಿಗಳೂ, ಸಮುದಾಯಗಳು, ದೇಶಗಳು ಇದಕ್ಕೆ ಕೈ ಜೋಡಿಸಬೇಕು. ನವೀನ ತಂತ್ರಜ್ಞಾನಗಳು ಹಾಗೂ ಆವಿಷ್ಕಾರಗಳು ಪರಿಸರ ಉಳಿವಿಗೆ ಪೂರಕವಾಗಿರಬೇಕು. ಹೀಗಾದಾಗ ಮಾತ್ರ ನಮ್ಮ ಜೊತೆ ಈ ಭೂಮಿಯನ್ನೂ ಸಂರಕ್ಷಿಸಿಕೊಳ್ಳಬಲ್ಲೆವು.
ತಾಮ್ರದ ತ್ಯಾಜ್ಯ
ಜಗತ್ತಿನ ಒಟ್ಟು ತಾಮ್ರದ ಬೇಡಿಕೆಯಲ್ಲಿ ಶೇ. 34ರಷ್ಟು ಬೇಡಿಕೆ ಪೂರೈಸುವ ಚಿಲಿ ದೇಶದ ಉತ್ತರ ಪ್ರಾಂತ್ಯ. ಇಲ್ಲಿ ವರ್ಷಕ್ಕೆ ಲಕ್ಷಲಕ್ಷ ಟನ್‌ಗಳಷ್ಟು ತಾಮ್ರದ ತ್ಯಾಜ್ಯವನ್ನು ಬಿಸಾಡಲಾಗುತ್ತಿದೆ. ವಿಶ್ವದಲ್ಲೇ 2ನೇ ಅತಿ ದೊಡ್ಡ ತಾಮ್ರ ತ್ಯಾಜ್ಯದ ಗುಡ್ಡೆ. ಇದುವರೆಗೆ 850 ಮೀ. ಆಳದಷ್ಟಿದೆ.
ಕಾರಣ
ಮೂಲ ವಸ್ತುಗಳಿಗಾಗಿ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕಚ್ಚಾವಸ್ತುಗಳ ಉತ್ಪಾದನೆಯೂ ಹೆಚ್ಚಾಗುತ್ತಿದೆ.
ಪರಿಣಾಮ
ಓವರ್ ಪ್ರೊಡಕ್ಷನ್‌ನಿಂದಾಗಿ ಭೂಮಿಯ ಲೂಟಿಯ ಜೊತೆಗೆ ತ್ಯಾಜ್ಯದಿಂದ ಪರಿಸರ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿವೆ.
ಮೀನುಗಳೇ ನಾಪತ್ತೆ
ಇದು ಚೀನಾದ ಉತ್ತರ ಭಾಗದಲ್ಲಿರುವ ಚೀನಾದ ಸಮುದ್ರ. ಇತ್ತೀಚಿನ ವರ್ಷಗಳಲ್ಲಿ ನಡೆದ ಮಿತಿಮೀರಿದ ಮೀನುಗಾರಿಕೆ ಚಟುವಟಿಕೆಯಿಂದ ಸಮುದ್ರ ಬರಿದಾಗಿದೆ. ಇಡೀ ಸಮುದ್ರವನ್ನೇ ಜಾಲಾಡಿದರೂ, ಇಲ್ಲಿ ಈಗ ಮೀನುಗಳು ಸಿಗುವುದು ದುರ್ಲಬವಾಗಿದೆ.
ಕಾರಣ
ಮೀನು ತಿನ್ನುತ್ತಿರುವವರ ಸಂಖ್ಯೆ ವರ್ಷವೊಂದಕ್ಕೆ ಶೇ.1ರಷ್ಟು ಏರಿಕೆಯಾಗುತ್ತಿದೆ.
ಪರಿಣಾಮ
ಸಮುದ್ರದಂಥ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಮನುಷ್ಯನ ಅತಿಕ್ರಮಣದಿಂದಾಗಿ ನೈಸರ್ಗಿಕ ಅಸಮತೋಲನ ಉಂಟಾಗುತ್ತಿದೆ. ಅಲ್ಲದೇ, ಅಪೂರ್ವ ಜೀವಿಗಳ ನಾಶವಾಗುತ್ತಿದೆ.
NUMBER ಝಲಕ್
12%
ಸದ್ಯಕ್ಕೆ ಜಗತ್ತಿನಲ್ಲಿ ಸಂರಕ್ಷಣೆಗೊಳಪಟ್ಟಿರುವ ಭೂಮಿ ಇಷ್ಟು ಮಾತ್ರ.
10%
ವಿಶ್ವದಲ್ಲಿನ ಒಟ್ಟು ಕೆರೆಗಳಲ್ಲಿ ಇಷ್ಟು ಮಾತ್ರ ಸುರಕ್ಷಿತವಾಗಿವೆ.
0.5%
ಜಗತ್ತಿನ ಸಮುದ್ರ ಸಂಪನ್ಮೂಲದಲ್ಲಿ ಇಷ್ಟು ಪ್ರಮಾಣ ಮಾತ್ರ ಸುರಕ್ಷಿತವಾಗಿದೆ.
60%
ವಿಶ್ವ ಜನಸಂಖ್ಯೆಯಲ್ಲಿ ಇಷ್ಟು ಮಂದಿ ನಗರಗಳಲ್ಲಿ ಜೀವಿಸುತ್ತಿದ್ದಾರೆ.
60%
ಮಾನವನ ಹಸ್ತಕ್ಷೇಪದಿಂದ ಇಷ್ಟು ಪ್ರಮಾಣದಲ್ಲಿ ಭೂ ಸವಕಳಿ ಉಂಟಾಗಿದೆ.
- ಚೇತನ್ ಒ.ಆರ್.