ಕೃಷಿ-ಪರಿಸರ

ಅಟ್ಯಾಚ್ಡ್ ವರ್ಮಿ ಕಾಂಪೋಸ್ಟ್

ಎರೆಹುಳು ಗೊಬ್ಬರದ ಉತ್ಪಾದನೆ ದಶಕಗಳಿಂದ ನಮ್ಮ ರೈತರಿಗೆ ಚಿರಪರಿಚಿತ. ವಿವಿಧ ಮಾದರಿಯ, ವಿನ್ಯಾಸದ ಎರೆತೊಟ್ಟಿಗಳು ಬಳಕೆಯಲ್ಲಿವೆ. ಹಲವಾರು ಸರ್ಕಾರಿ ಯೋಜನೆಗಳು ಎರೆಹುಳು ಘಟಕ ನಿರ್ಮಾಣಕ್ಕೆ ಸಹಕಾರ ನೀಡುತ್ತಿವೆ. ಎರೆಗೊಬ್ಬರದ ಮಹತ್ವ ಅರಿತಿರುವ ರೈತರು ತಾವೇ ಆಸಕ್ತಿಯಿಂದ ನಿರ್ಮಿಸಿಕೊಳ್ಳುತ್ತಿದ್ದಾರೆ.
ಆದರೆ, ಸಾಮಾನ್ಯವಾಗಿ ಕಂಡುಬರುತ್ತಿರುವ ಸಮಸ್ಯೆ ಎಂದರೆ ಎರೆಗೊಬ್ಬರ ಘಟಕ ನಿರ್ಮಿಸಿಕೊಂಡ ಹಲವು ರೈತರು ನಿರ್ವಹಣೆ ಮಾಡದೆ ಹಾಳುಬಿಟ್ಟಿದ್ದಾರೆ. ಕಟ್ಟಿರುವ ತೊಟ್ಟಿಯನ್ನು ನೀರು ತುಂಬಿಸಲು, ಸೌದೆ ಹಾಕಲು ಅಥವಾ ಖಾಲಿ ಬಿಟ್ಟು ಅನುತ್ಪಾದಕವಾಗಿಸಿದ್ದಾರೆ. ಎರೆಹುಳುಗಳು ನಿರಂತರವಾಗಿ ಗೊಬ್ಬರ ಉತ್ಪಾದಿಸಬೇಕಾದರೆ ನಿಯಮಿತವಾಗಿ ಸಾಕಷ್ಟು ಸೊಪ್ಪು ತುಂಬಿಸಬೇಕು, ಸಗಣಿ ಮತ್ತು ನೀರು ಹಾಕಬೇಕು. ರೈತರಿಗೆ ಸೊಪ್ಪು ಹಾಕುವುದು ಸಮಸ್ಯೆಯಾಗುತ್ತಿಲ್ಲ, ಹೊಲದಲ್ಲೆ ಸಾಕಷ್ಟು ಸಿಗುತ್ತದೆ ತಂದು ಹಾಕುತ್ತಾರೆ. ಆದರೆ, ಸಗಣಿ ಮತ್ತು ನೀರು ಹಾಕುತ್ತಿಲ್ಲ.
ತುಮಕೂರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಾವಯವ ಗ್ರಾಮ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಸಂಪನ್ಮೂಲ ಅಭಿವೃದ್ಧಿ ಹಾಗೂ ಪರಿಸರ ಪುನಶ್ಚೇತನಾ ಸಂಸ್ಥೆಯು ಈ ಸಮಸ್ಯೆ ಗಮನಿಸಿ ನಿರ್ಮಿಸಿದ ಎರೆಹುಳು ತೊಟ್ಟಿಗಳು ವ್ಯರ್ಥವಾಗದಂತೆ ತಡೆಯಲು ಹಲ ವಿಧಾನಗಳನ್ನು ಪ್ರಯತ್ನಿಸಿತು. ಅದರ ಫಲವೇ ಎರೆಹುಳು ತೊಟ್ಟಿಯ ಪಕ್ಕದಲ್ಲೇ ಜೀವಾಮೃತ ಮತ್ತು ನೀರಿನ ತೊಟ್ಟಿಯ ನಿರ್ಮಾಣ. ಒಂದು ರೀತಿ ಅಟ್ಯಾಚ್ಡ್ ಬಾತ್ ರೂಮ್ ತರಹ. ಸಂಸ್ಥೆಯು ತುರುವೇಕೆರೆ ತಾಲೂಕು ಚಿಕ್ಕಶೆಟ್ಟಿಕೆರೆಯಲ್ಲಿ ಸಂಸ್ಥೆಯು ನಿರ್ಮಿಸಿರುವ ಎಲ್ಲಾ ಎರೆಹುಳು ಘಟಕಗಳು ಈ ವಿಧಾನದಲ್ಲಿವೆ. ಇದರಿಂದ ಆಗಿರುವ ಅನುಕೂಲ ಅಪಾರ.
ಎರೆಗೊಬ್ಬರ ಘಟಕಕ್ಕೆ ತ್ಯಾಜ್ಯ ಹಾಗೂ ಸಗಣಿ ತುಂಬಿದ ನಂತರ ನಿಯಮಿತವಾಗಿ ನೀರು ಹಾಕಬೇಕು. ಆದರೆ, ಸಂಸ್ಥೆಯು ಗಮಸಿದಂತೆ ಕೊಳವೆಬಾವಿ, ಇಲ್ಲವೇ ಬಾವಿಯ ಹತ್ತಿರ ಎರೆಘಟಕ ನಿರ್ಮಿಸಿಕೊಂಡಿದ್ದರೆ ರೈತರು ಆಗಾಗ ನೀರು ಹಾಕುತ್ತಾರೆ. ಆದರೆ, ದೂರದಿಂದ ನೀರು ತರಬೇಕೆಂದರೆ ಕಷ್ಟ. ಬಲವಂತಕ್ಕೆ ಒಂದೆರಡು ಬಾರಿ ಹಾಕಿ ನಂತರ ಸುಮ್ಮನಾಗುತ್ತಾರೆ. ಇದರಿಂದ ಎರೆಗೊಬ್ಬರ ಉತ್ಪಾದನೆ ಸಹಜವಾಗಿಯೇ ಕುಂಠಿತವಾಗುತ್ತಿತ್ತು. ಸಗಣಿ ಹಾಕಲೂ  ರೈತರಿಗೆ ಸಮಸ್ಯೆಗಳಿದ್ದವು. ಹೊಲದಲ್ಲಿ ಎರೆಘಟಕ, ಮನೆಯಲ್ಲಿ ಕೊಟ್ಟಿಗೆ ಇರುವುದರಿಂದ ಅಷ್ಟು ದೂರ ಸಗಣಿ ತಂದು ಹಾಕುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆರಂಭದ ಉತ್ಸಾಹದಲ್ಲಿ ಕೆಲವು ದಿನ ಹಾಕಿ ನಂತರ ಸುಮ್ಮನಾಗುತ್ತಿದ್ದವರೆ ಹೆಚ್ಚು. ಅಲ್ಲದೆ, ಸಗಣಿಯನ್ನು ನೇರವಾಗಿ ಹಾಕುವುದಕ್ಕಿಂತ ಅದನ್ನು ಕದರಿ ಬಗ್ಗಡದ ರೂಪದಲ್ಲಿ ಹಾಕಿದರೆ ಎರೆಹುಳುಗಳ ಚಟುವಟಿಕೆ ವೇಗವಾಗಿ ಸಾಗಿ ಅವುಗಳ ಸಂಖ್ಯೆಯೂ ಹೆಚ್ಚಳವಾಗುತ್ತದೆ. ಗೊಬ್ಬರದ ಉತ್ಪಾದನೆಯೂ ಅಧಿಕವಾಗುತ್ತದೆ. ಈ ಅಂಶಗಳನ್ನು ಮನಗಂಡ ಸಂಸ್ಥೆಯು ನೀರು ಮತ್ತು ಜೀವಾಮೃತ ಘಟಕಗಳನ್ನು ಎರೆಘಟಕಕ್ಕೆ ಹೊಂದಿಕೊಂಡಂತೇ ಏಕೆ ನಿರ್ಮಿಸಬಾರದು ಎಂದು ಆಲೋಚಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ನೀರು, ಸಗಣಿ, ಗಂಜಲ, ಬೆಲ್ಲ ಹಾಗೂ ದ್ವಿದಳ ಧಾನ್ಯದ ಹಿಟ್ಟನ್ನು ಮಾಗುಹಾಕಿದ ಜೀವಾಮೃತವು ಸಗಣಿನೀರಿಗಿಂತಲೂ ಉತ್ತಮ ಪರಿಣಾಮ ಕೊಡುವುದರಿಂದ ಅದನ್ನೆ ಮಾಡಿಕೊಳ್ಳಲು ಪ್ರೇರೇಪಿಸಲಾಗುತ್ತಿದೆ.
ಚಿಕ್ಕಶೆಟ್ಟಿಕೆರೆ ಗ್ರಾಮದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಇದನ್ನು ಮಾಡಿಕೊಂಡಿದ್ದಾರೆ. ಕೆಲವರು ಎರೆಹುಳು ತೊಟ್ಟಿಯ ಗೋಡೆಗೆ ಹೊಂದಿಕೊಂಡಂತೆಯೆ ಇಟ್ಟಿಗೆ ಬಳಸಿ ಚಿಕ್ಕ ಅಳತೆಯ ಎರಡು ತೊಟ್ಟಿ ನಿರ್ಮಾಣ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಎರಡು ಸಿಮೆಂಟ್ ತೊಟ್ಟಿ ಖರೀದಿಸಿ ತಂದು ಎರೆಹುಳು ತೊಟ್ಟಿಯ ಪಕ್ಕದಲ್ಲಿ ಜೋಡಿಸಿದ್ದಾರೆ. ಅದರ ಪ್ರತಿಫಲ ಇಂದು ಇಲ್ಲಿನ ಎಲ್ಲ ಎರೆಹುಳು ಘಟಕಗಳು ನಿರಂತರವಾಗಿ ಗೊಬ್ಬರ ಉತ್ಪಾದನೆ ಮಾಡುತ್ತಿವೆ. ರೈತರಿಗೆ ಸದಾ ನೀರು ಸಗಣಿ ಹೊತ್ತು ತರಬೇಕೆಂಬ ಕಿರಿಕಿರಿ ಇಲ್ಲವಾಗಿದೆ. ಒಮ್ಮೆ ಜೀವಾಮೃತ ತಯಾರಿಸಿಕೊಂಡರೆ ಹಲವಾರು ದಿವಸ ಇರುತ್ತದೆ. ಒಂದು ಸಲ ನೀರು ತುಂಬಿಸಿದರೆ ವಾರದವರೆಗೂ ಬಳಸಬಹುದು. ಹಾಗಾಗಿ ಎರೆಘಟಕದ ಬಳಿ ಬಂದಾಗಲೆಲ್ಲಾ ಸ್ವಲ್ಪ ನೀರು ಚಿಮುಕಿಸಿ, ಜೀವಾಮೃತ ಹಾಕುತ್ತಾರೆ. ಅವರಿಗೂ ಸುಲಭ, ಎರೆಹುಳುಗಳಿಗೂ ಹಬ್ಬ. ಗ್ರಾಮದ ಹುಚ್ಚಪ್ಪ, ವೆಂಕಟೇಶ್, ಕುಮಾರ್, ನರಸಿಂಹಮೂರ್ತಿ ಮುಂತಾದ ಅನೇಕರು ಈ ವಿಧಾನ ತುಂಬಾ ಒಳ್ಳೆಯದು ಎನ್ನುತ್ತಾರೆ. ಎಲ್ಲರೂ ಈ ರೀತಿ ಮಾಡಿಕೊಂಡರೆ ಎರೆಗೊಬ್ಬರ ಘಟಕಗಳು ಅನುತ್ಪಾದಕವಾಗುವುದು ತಪ್ಪುತ್ತದೆ.

- ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!