ಆಡು ಬಹೋಪಯೋಗಿ ಪ್ರಾಣಿ. ಸಣ್ಣ, ಅತಿ ಸಣ್ಣ ರೈತರಿಗಲ್ಲದೆ ಜಮೀನಿಲ್ಲದ ಕೃಷಿ ಕಾರ್ಮಿಕರಿಗೂ ಆರ್ಥಿಕ ಮಟ್ಟ ಸುಧಾರಿಸಲು ನೆರವಾಗುತ್ತದೆ. ಗ್ರಾಮೀಣ ಜನತೆಗೆ ಆಡು ಸಾಕಣೆ ಮುಖ್ಯ ಉದ್ಯೋಗ. ಅದರಲ್ಲೂ ಮುಖ್ಯವಾಗಿ ನೀರಾವರಿ ಇಲ್ಲದ ಒಣ ಪ್ರದೇಶಗಳಿಗೆ ಜೀವನಾಧಾರ.
ಆಡುಗಳು ಬರಡು ಭೂಮಿ, ಬರದ ಪರಿಸ್ಥಿತಿಯಲ್ಲಿಯೂ ಸಾಕಣೆಗೆ ಯೋಗ್ಯ. ಯಾವ ಬೆಳೆ ಬೆಳೆಯದಿದ್ದರೂ ಇದ್ದುದರಲ್ಲಿಯೇ ಸಿಗುವ ಮುಳ್ಳು ಗಿಡ, ವಿವಿಧ ಗಿಡಗಂಟಿ ತಿಂದು ತನ್ನ ಒಡೆಯನಿಗೆ ಕಷ್ಟ ಕೊಡದೆ ಆರ್ಥಿಕ ನೆರವು ನೀಡುತ್ತವೆ. ಆಡು ಸಾಕಾಣಿಕೆಯನ್ನು ಕೃಷಿಗೆ ಪೂರಕ ಉದ್ಯಮವನ್ನಾಗಿ ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಬಹುದು.
ಆಶಾಕಿರಣ ತಳಿ
ಆಡುಗಳಲ್ಲಿ ವಿವಿಧ ತಳಿಗಳು ಉಂಟು. ಶಿರೋಹಿ, ಜಮುನಾಪಾರಿ, ಬರಬಾರಿ, ಬೀಟಲ್, ಜಕರನ, ಮರವಾರಿ, ಬ್ಲಾಕ್ ಬೆಂಗಾಲ್ ಮುಂತಾದವುಗಳು ಉತ್ತಮವಾಗಿವೆ. ಅವುಗಳಲ್ಲಿ ಶಿರೋಹಿ ಆಡುಗಳು ಬಯಲು ಪ್ರದೇಶಗಳಿಗೆ ಸೂಕ್ತ. ಇವು ಉತ್ತಮ ಗುಣಮಟ್ಟದ ಹಾಲು, ಮಾಂಸ ಒದಗಿಸುತ್ತವೆ. ಇವುಗಳ ಬೆಳವಣಿಗೆ ಬಗ್ಗೆ ಹೆಚ್ಚು ಕಾಳಜಿ ವಹಿಸದಿದ್ದರೂ ಅಧಿಕ ತೂಕ ಮತ್ತು ಉತ್ತಮ ಹಾಲಿನ ಇಳುವರಿ ಕೊಡಬಲ್ಲವು. ಇವು ರೋಗ ನಿರೋಧಕ ಶಕ್ತಿ ಹೊಂದಿವೆ. ಎಲ್ಲಾ ರೀತಿಯ ವಾತಾವರಣಕ್ಕೂ ಹೊಂದಿಕೊಳ್ಳುವ ತಾಕತ್ತು ಇದೆ. ಇವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಯಾದರೂ ಅಥವಾ ಮೇಯಿಸಿಯಾದರೂ ಸಾಕಬಹುದು. ಒಂದು ವರ್ಷವಾದಾಗ ಗರ್ಭಧಾರಣೆಗೆ ಬರುತ್ತವೆ. ಹೆಚ್ಚುವರಿ ವಂಶಾಭಿವೃದ್ಧಿಗೆ 30 ಆಡುಗಳಿಗೆ 1 ಹೋತ ಸಾಕು. ವರ್ಷಕ್ಕೆ ಎರಡು ಬಾರಿ ಗರ್ಭ ಧರಿಸುತ್ತದೆ.
ಲಾಭದಾಯಕ
ಇವು ರಾಜಸ್ಥಾನದ ತಳಿಗಳಾಗಿದ್ದರೂ ದೇಶದ ವಿವಿಧ ಭಾಗಗಳಿಗೆ ಹೊಂದಿಕೊಳ್ಳುತ್ತವೆ. ಪ್ರಾಯೋಗಿಕವಾಗಿ ರಾಯಚೂರು ಕೃಷಿ ವಿವಿ ವ್ಯಾಪ್ತಿಯಲ್ಲಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕವಡಿಮಟ್ಟಿ ಸಂಶೋಧನಾ ಕೇಂದ್ರಕ್ಕೆ ಸಮಗ್ರ ಕೃಷಿ ಪದ್ಧತಿಯಡಿ ಆಡು ಸಾಕಣೆಯನ್ನು ಕೃಷಿಗೆ ಪೂರಕ ಘಟಕವಾಗಿ ಅಳವಡಿಸಲು ಶಿರೋಹಿ ತಳಿ ತರಿಸಲಾಗಿತ್ತು.
2011ರ ಮಾರ್ಚ್ ತಿಂಗಳಲ್ಲಿ 5 ಆಡು ಹಾಗೂ 1 ಹೋತ ತರಿಸಲಾಗಿತ್ತು. ಅವು ಕವಡಿಮಟ್ಟಿ ಸಂಶೋಧನಾ ಕೇಂದ್ರದಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದಿವೆ. ಅವುಗಳನ್ನು ಕೊಟ್ಟಿಗೆಯಲ್ಲಿ ಸಾಕದೆ ಹೊರಗಡೆ ಮೇಯಿಸಲಾಗಿತ್ತು. ಯಾವುದೇ ಪೋಷಕಾಂಶ ಮಿಶ್ರಣ ನೀಡಿರಲಿಲ್ಲ. ಆದರೂ ಅವುಗಳ ಸಂಖ್ಯೆ ಈಗ ಕೇವಲ 2 ವರ್ಷಗಳ ಅವಧಿಯಲ್ಲಿ 28ಕ್ಕೇರಿದೆ.
5 ಆಡು ಹಾಗೂ 1 ಹೋತಗಳಿಗೆ ಪ್ರಾರಂಭಿಕ ಬಂಡವಾಳ ರು. 18 ಸಾವಿರ ತೊಡಗಿಸಲಾಗಿತ್ತು. ಆದರೆ, ಈಗ ಸಂಖ್ಯೆ 28ಕ್ಕೇರಿದ್ದು, ಅವುಗಳಿಂದ ಬರಬಹುದಾದ ಆದಾಯ ಕನಿಷ್ಠ ರು. 1.50 ಲಕ್ಷ ಎನ್ನುತ್ತಾರೆ ಸಂಶೋಧನಾ ಕೇಂದ್ರದ ತಜ್ಞರಾದ ಪ್ರಕಾಶ ಗುಳಗಿ ಹಾಗೂ ಶ್ವೇತಾ ಬಿ.ಎನ್.
ಹೆಚ್ಚಿನ ಮಾಹಿತಿಗಾಗಿ ಕವಡಿಮಟ್ಟಿ ಸಂಶೋಧನಾ ಕೇಂದ್ರ (ಮೊ. 8277450994) ಸಂಪರ್ಕಿಸಬಹುದು.
ಲಾಭ ಹೇಗೆ?
ಆಡು ಸಾಕಾಣಿಕೆಗೆ ಬೇಕಾಗುವ ಬಂಡವಾಳ ಕಡಿಮೆ.
ಕೊಟ್ಟಿಗೆ ಮತ್ತು ನಿರ್ವಹಣೆ ಸುಲಭ.
10 ತಿಂಗಳಿಗೆ ವಂಶಾಭಿವೃದ್ಧಿ ವಯಸ್ಸಿಗೆ ಬರುತ್ತವೆ.
ಬರಗಾಲದಲ್ಲೂ ಆಡು ಸಾಕಣೆ ಕಷ್ಟವಲ್ಲ.
ಹೆಣ್ಣು, ಗಂಡು ಆಡುಗಳೆರಡೂ ಸಮಾನ ಆರ್ಥಿಕ ಮಟ್ಟ.
ಮುಳ್ಳು, ಕಳೆಗಳು, ಬೆಳೆಯುಳಿಕೆ ತಿನ್ನಬಲ್ಲವು.
ಮಾಂಸ ಕಡಿಮೆ ಕೊಬ್ಬಿನ ಅಂಶ ಹೊಂದಿದ್ದು, ಆರೋಗ್ಯದಾಯಕ.
ರೋಗ ನಿರೋಧಕ ಶಕ್ತಿ ಜಾಸ್ತಿ.
ಕುರಿಗಿಂತ ಆಡು ಸಾಕಣೆ ಎರಡೂವರೆ ಪಟ್ಟು ಲಾಭಕಾರಿ.
- ನಾರಾಯಣ ಹೆಗಡೆ
ngkarwar@gmail.com