ಕೃಷಿ-ಪರಿಸರ

ಉಳಿಸಿ ಸಸ್ಯಾಗಾರ

ನಮಗೆ ಹೇರಳವಾದ ಸಸ್ಯ ಸಂಪತ್ತು ಕಾಣಸಿಗುವುದೇ ಪಶ್ಚಿಮಘಟ್ಟಗಳಲ್ಲಿ. ಇಲ್ಲಿ ಇಲ್ಲದ ಸಸ್ಯ ಸಂಪತ್ತುಗಳಿಲ್ಲ. ಇರುವ ಎಲ್ಲ ಸಸ್ಯಗಳೂ ಒಂದಿಲ್ಲೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಇವುಗಳ ಜತೆಗೆ ಪರಿಸರ ಸಮತೋಲನಕ್ಕೂ ಇವು ಕಾರಣವಾಗಿವೆ. ಆದರೆ ಇತ್ತೀಚೆಗೆ ಮಾನವನ ದುರಾಸೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ಸಾಕಷ್ಟು ಅಮೂಲ್ಯ ಗಿಡಮೂಲಿಕೆಗಳು ಕಾಣೆಯಾಗುತ್ತಿವೆ. ಗಿಡ, ಮರಗಳು ನಾಶವಾಗುತ್ತಿವೆ. ಆದರೆ ಇವಾವುದನ್ನೂ ತಡೆಯಲು ಆಗುತ್ತಿಲ್ಲವೋ ಅಥವಾ ಏನಾದರೂ ಆಗಲಿ ಎಂಬ ಅಸಡ್ಡೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಹಾನಿ ಮಾತ್ರ ಪರಿಸರಕ್ಕೆ.
ಆದರೆ ಪರಿಸರ ಉಳಿಕೆಗೆ ಶಿರಸಿಯ ಅರಣ್ಯ ಕಾಲೇಜಿನ ಪ್ರೊ. ಡಾ. ವಾಸುದೇವ ಪಣತೊಟ್ಟಿದ್ದಾರೆ. ಜೀವವೈವಿಧ್ಯದ ತಾಣವಾದ ಪಶ್ಚಿಮ ಘಟ್ಟದಲ್ಲಿ ಅನೇಕ ಉಪಯುಕ್ತ ಸಸ್ಯಗಳು ಅಳಿವಿನಂಚಿನಲ್ಲಿರುವುದರಿಂದ ಕೆಲವು ಸ್ಥಳೀಯ ಅಪರೂಪದ ಸಸ್ಯಗಳ ಜೊತೆಗೆ ವಿಶಿಷ್ಟ ತಳಿಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯನಿಯೋಜಿತರಾಗಿದ್ದಾರೆ.
ಇದಕ್ಕಾಗಿ ಕಸಿ ತಜ್ಞರ ಮತ್ತು ಪರಿಸರ ಉಳಿಸಿ, ಬೆಳೆಸುವ ಹಾಗೂ ಹಂಚುವ ಆಸಕ್ತಿಯುಳ್ಳ ಗುಂಪನ್ನು ಹುಟ್ಟುಹಾಕಿದ್ದೇವೆ ಎನ್ನುವ ಡಾ. ವಾಸುದೇವ ಅವರು ಅರಣ್ಯ ಕಾಲೇಜು ಶಿರಸಿಯಲ್ಲಿ ನಡೆಯುತ್ತಿರುವ ಕಾರ್ಯವನ್ನು ವಿವರಿಸುತ್ತಾರೆ.
ಏನಿದು ಅಂತಹ ಕಾರ್ಯ
ಅಭಿವೃದ್ಧಿಗಾಗಿ ನಡೆಯುವ ಕೈಗಾರಿಕೆ, ರಸ್ತೆ, ಅಣೆಕಟ್ಟು ಹಾಗೂ ಕೃಷಿ ಭೂಮಿ ವಿಸ್ತರಣೆಯಿಂದಾಗಿ ಪಶ್ಚಿಮ ಘಟ್ಟದಲ್ಲಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಜೊತೆಗೆ ಮನುಷ್ಯನ ದುರಾಸೆಗಾಗಿ ನಡೆಯುವ ಮರಗಳ್ಳತನ ಮತ್ತು ಕಾಡಿನ ಉತ್ಪನ್ನಗಳನ್ನು ಅಗತ್ಯಕ್ಕಿಂತ ಜಾಸ್ತಿ ಬಳಸಿಕೊಳ್ಳುವುದು, ಅಲ್ಲದೇ ಉತ್ಪನ್ನಗಳ ಜೊತೆಗೆ ಅದರ ಮೂಲ ಮರಗಳನ್ನೇ ನಾಶ ಮಾಡುವುದರಿಂದ ಅರಣ್ಯ ಸಂಪತ್ತು ವಿನಾಶದ ಅಂಚಿಗೆ ಹೋಗುತ್ತಿದೆ. ಇದರಿಂದಾಗಿ ಅಮೂಲ್ಯ ಸಸ್ಯ ಭಂಡಾರ ಇನ್ನೆಂದೂ ಸಿಗದಂತೆ ಕಣ್ಮರೆಯಾಗುತ್ತಿದೆ. ಈ ಕಾರಣಕ್ಕೆ ಹಾಗೂ ಪರಿಸರದ ಸಮತೋಲದ ದೃಷ್ಟಿಯಿಂದ ಈ ಜೀವವೈವಿಧ್ಯವನ್ನು ಕಾಪಾಡಲೇಬೇಕು. ಹಾಗಾಗಿ ಪ್ರಾಕೃತಿಕವಾಗಿ ಪರಿಸರದ ಸಂರಕ್ಷಣೆಯ ಜೊತೆಗೆ ರೈತರ ಜಮೀನುಗಳಲ್ಲಿಯೂ ಈ ವೈವಿಧ್ಯದ ಕೆಲವು ಸಸ್ಯಗಳಾದರೂ ಬೆಳೆಯಬೇಕು.
ಈ ನಿಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಕೆಲವು ಸಸ್ಯಗಳು ಹಾಗೂ ವಿಶೇಷ ಹಣ್ಣಿನ ತಳಿಗಳನ್ನು ಶಿರಸಿಯ ಅರಣ್ಯ ಕಾಲೇಜಿನಲ್ಲಿ ಸಂರಕ್ಷಣೆ ಮಾಡಲಾಗುತ್ತಿದೆ. ಪಶ್ಚಿಮಘಟ್ಟಕ್ಕೇ ಸೀಮಿತವಾಗಿರುವ ಗಾರ್ಸೀನಿಯ ಕುಟುಂಬದ ದ್ಯಾವಣಿಗೆ, ಅರಿಶಿಣ ಮುಂಡಿ ಕೆಂಪು ಮುರುಗಲು ಹಾಗೂ ವಿಶಿಷ್ಟ ಮಾವಿನ ಹಣ್ಣಿನ ಗಿಡಗಳು, ಹಲಸು ಮತ್ತು ಅಪ್ಪೆಮಿಡಿಯ ವಿಶೇಷ ತಳಿಗಳು ಇವೆ. ಇವು ಮಾರಾಟಕ್ಕೆ ಕೂಡ ಲಭ್ಯ.
ಇವೆಲ್ಲ ಕೆಲಸಗಳನ್ನು ನಾವು ಸ್ಥಳೀಯ ಹಣ್ಣು ತಳಿ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಯೋಜನೆ ಅಡಿಯಲ್ಲಿ ಮಾಡುತ್ತಿದ್ದೇವೆ. ಈ ಕಾರ್ಯಕ್ಕೆ ಆರ್ಥಿಕ ಸಹಾಯವನ್ನು ಜಾಗತಿಕ ಪರಿಸರ ಸಂಸ್ಥೆ (ಜಿಇಎಫ್), ವಿಶ್ವ ಪರಿಸರ ಕಾರ್ಯಕ್ರಮ (ಯುಎನ್‌ಇಪಿ), ಅಂತಾರಾಷ್ಟ್ರೀಯ ಜೀವವೈವಿಧ್ಯ ಸಂಸ್ಥೆ ಹಾಗೂ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಗಳು ಒದಗಿಸಿವೆ. ಸ್ಥಳೀಯವಾಗಿ ಲೈಫ್ ಟ್ರಸ್ಟ್ ಮತ್ತು ಇಕೋ ವಾಚ್ ಸಂಸ್ಥೆಯ ಸಹಯೋಗವಿದೆ ಎಂದು ಡಾ. ವಾಸುದೇವ್ ಹೇಳುತ್ತಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- ಡಾ. ವಾಸುದೇವ, ದೂರವಾಣಿ- 08384 223160.

-ಸೌಖ್ಯ ಮೋಹನ್ ತಲಕಾಲುಕೊಪ್ಪ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!