ಹೂವು ಚೆಲುವೆಲ್ಲಾ ನಂದೆಂದಿತು....
ಹೌದು. ಹೂ ಎಂದೊಡನೆ ತಟ್ಟನೆ ಹೊಳೆಯುವುದೇ ಅದರ ಸೌಂದರ್ಯ, ಸುವಾಸನೆ... ಆದರೆ, ಎಲ್ಲ ಹೂಗಳೂ ಸ್ವೀಟ್ ಆ್ಯಂಡ್ ಕ್ಯೂಟ್ ಆಗಿರುವುದಿಲ್ಲ. ಹೂಗಳಿಗೂ ಕರಾಳ ಮುಖವಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ನೋಡಲು ಮನೋಹರವಾಗಿದ್ದರೂ ಕೆಲವೊಂದು ಪುಷ್ಪಗಳು, ಸಸ್ಯಗಳು ಅತ್ಯಂತ ಅಪಾಯಕಾರಿ ವಿಷವನ್ನು ಕಕ್ಕುವ, ಜೀವಿಗಳನ್ನೇ ಕಬಳಿಸುವ ಸಾಮರ್ಥ್ಯವನ್ನೂ ಹೊಂದಿವೆ. ಅಂತಹ ವಿಶಿಷ್ಟ ಹೂಗಳು, ಸಸಿಗಳ ಬಗ್ಗೆ ತಿಳಿಯಬೇಕೆ?
ಟೈಟಾನ್ ಆರಂ- ಹೆಣದ ಹೂವು
ಟೈಟಾನ್ ಆರಂ ಅನ್ನು ಹೆಣದ ಹೂವು ಎಂದು ಕರೆಯುವುದರಲ್ಲಿ ವಿಶೇಷವೇನೂ ಇಲ್ಲ. ವರ್ಷದ ಕೆಲವೇ ದಿನಗಳಲ್ಲಿ ಅರಳುವ ಈ ಹೂ ಪೂರ್ಣವಾಗಿ ಅರಳುವ ಹೊತ್ತಿಗೆ ಕೊಳೆತ ಮಾಂಸದ ವಾಸನೆ ಬರುತ್ತದೆ. ಈ ದುರ್ವಾಸನೆಯು ಸತ್ತ ಪ್ರಾಣಿಗಳನ್ನು ತಿನ್ನುವಂತಹ ಕ್ರಿಮಿಕೀಟಗಳನ್ನು ಆಕರ್ಷಿಸುತ್ತದೆ. ಅದರಲ್ಲೇ ಈ ಕೀಟಗಳು ಹೊರಳಾಡಿ 3 ದಿನಗಳ ಬಳಿಕ ಹೂ ಮುದುಡಿಹೋಗುತ್ತದೆ. ಇಂಡೋನೇಷ್ಯಾದ ಸುಮಾತ್ರಾ ಅರಣ್ಯಗಳಲ್ಲಿ ಈ ಹೂಗಳು ಹೆಚ್ಚಾಗಿ ಕಾಣಸಿಗುತ್ತವೆ.
ಡ್ರಕೇ ಗ್ಲಿಪ್ಟೋಡನ್- ಮೋಸದ ಹೂ
ಈ ಹೂವು ಕೂಡ ಕೊಳೆತ ಮಾಂಸದ ವಾಸನೆ ಬರುತ್ತದೆ. ಆದರೆ, ಕ್ರಿಮಿಕೀಟಗಳನ್ನು ಆಕರ್ಷಿಸುವ ಬದಲು, ಕಣಜದ ಹುಳುಗಳನ್ನು ಮರುಳು ಮಾಡುವ ತಂತ್ರಗಾರಿಕೆ ಈ ಹೂವಿನದ್ದು. ಅದು ಹೇಗೆಂದರೆ, ಈ ಹೂವು ನೋಡಲು ಕಣಜದ ಹುಳುವಿನಂತೆಯೇ ಇರುತ್ತದೆ. ಹೆಣ್ಣು ಹುಳುವಿನಂತೆ ನಟಿಸಿ ಗಂಡು ಹುಳುಗಳಿಗೆ ಬಲೆ ಬೀಸಿ ತನ್ನ ಹೊಟ್ಟೆ ತಣಿಸಿಕೊಳ್ಳುವ ಕೆಲಸ ಮಾಡುತ್ತವೆ ಈ ಡ್ರಕೇ ಗ್ಲಿಪ್ಟೋಡನ್ ಹೂಗಳು.
ನೆಪೆಂತಸ್ ಟ್ರಂಕಾಟಾ- ಪರಭಕ್ಷಕ ಹೂಜಿ ಗಿಡ
ಇದನ್ನು ಹೂವೆಂದು ಕರೆಯಲು ಭಯವಾಗುತ್ತದೆ. ಏಕೆಂದರೆ, ಇದು ಕೇವಲ ಕ್ರಿಮಿಕೀಟಗಳನ್ನು ಭಕ್ಷಿಸುವುದು ಮಾತ್ರವಲ್ಲ, ಇಲಿಗಳಂತಹ ಪ್ರಾಣಿಗಳನ್ನು ಒಂದೇ ಏಟಿಗೆ ಗುಳುಂ ಸ್ವಾಹಾ ಮಾಡುತ್ತವೆಂದರೆ ನಂಬುತ್ತೀರಾ? ಹೌದು. ಇಲಿಗಳು ಈ ಗಿಡದ ಜಾರುವ ಎಲೆಗಳ ಮೇಲೆ ಕಾಲಿಟ್ಟ ತಕ್ಷಣ ಜಾರಿಕೊಂಡು ಹೂಜಿಯಂತಹ ಗಿಡದೊಳಕ್ಕೆ ಬೀಳುತ್ತದೆ. ನಂತರ ಅದರ ಕಥೆ ಮುಗಿಯಿತೆಂದೇ ಅರ್ಥ. ಅಪರೂಪದ ಈ ಹೂವು ಕಾಣಿಸಿಕೊಳ್ಳುವುದು ಫಿಲಿಪ್ಪೀನ್‌ನ ಮಿಂಡನಾವೋ ದ್ವೀಪದಲ್ಲಿ.
ರಫ್ಲೇಷಿಯಾ ಅರ್ನಾಲ್ಡಿ- ಸಸ್ಯಜಗತ್ತಿನ ದೈತ್ಯ ಪಾಂಡಾ
ಇದು ವಿಶ್ವದ ಅತಿ ದೊಡ್ಡ ಹೂವು. ಇದರ ಒಂದೊಂದು ಎಸಳು ಕೂಡ 3 ಅಡಿಯಷ್ಟು ಉದ್ದವಿದ್ದು, 6.8 ಕಿಲೋ ಗ್ರಾಂ ತೂಕವಿರುತ್ತದೆ. ಬೃಹತ್ ಮರಗಳ ಬೇರಿನ ಪ್ರದೇಶದಲ್ಲಿ ಈ ಹೂ ಅರಳುತ್ತವೆ. 5 ದಿನಗಳ ಕಾಲ ಮಾತ್ರ ಇವುಗಳು ಅರಳಿರುತ್ತವೆ. ಇವು ಕೂಡ ಅರಳಿದಾಗ ಹೆಣದ ವಾಸನೆ ಬಡಿಯಲಾರಂಭಿಸುತ್ತವೆ. ಇದೇ ಸಮಯದಲ್ಲಿ ಕ್ರಿಮಿಗಳನ್ನು ಸೆಳೆದು ಪರಾಗಸ್ಪರ್ಶಕ್ಕೆ ಅನುವು ಮಾಡಿಕೊಡುತ್ತದೆ.
ಡ್ರೋಸೆರಾ ರೋಟನ್‌ಡಿಫೋಲಿಯಾ- ಅಮಂಗಳ ಕದಿರಪನಿ
ಬಿಸಿಲಿನಲ್ಲಿ ಹಿಮಕಣಗಳಂತೆ ಹೊಳೆಯುವ ದ್ರವದ ಹನಿಗಳನ್ನು ಸ್ರವಿಸುವ ತಂತುಗಳನ್ನು ಹೊಂದಿರುವ ಅಪಾಯಕಾರಿ ಸಸ್ಯವಿದು. ಇವು ಸಣ್ಣ ಗಾತ್ರದವುಗಳಾಗಿದ್ದು, ವಿನಾಶದ ಅಂಚಿನಲ್ಲಿವೆ. ಸಮೀಪದಲ್ಲಿ ಸುಳಿಯುವ ಕ್ರಿಮಿ ಕೀಟಗಳು, ಹುಳಗಳನ್ನು ಕಬಳಿಸುವುದರಲ್ಲಿ ನಿಸ್ಸೀಮ. ಈ ಸಸ್ಯದ ಎಲೆಗಳು ಮೆಜೆಂಟಾ ಬಣ್ಣದ ಕೂದಲುಗಳನ್ನು ಹೊಂದಿರುತ್ತವೆ. ಆ ಕೂದಲುಗಳ ತುದಿಗಳಲ್ಲಿ ಇರುವ ದ್ರವದ ಹನಿಯು ಹಿಮದ ಕಣಗಳಂತೆ ಹೊಳೆಯುತ್ತಿರುತ್ತವೆ. ಇವುಗಳ ಆಕರ್ಷಣೆಗೆ ಬಿದ್ದು ಹುಳುಹುಪ್ಪಟೆಗಳು ಎಲೆಯ ಮೇಲೆ ಬಂದು ಕುಳಿತುಕೊಳ್ಳುತ್ತವೆ. ಅಷ್ಟಾದರೆ ಮುಗಿಯಿತು, ಎಲೆಯು ಸಂಪೂರ್ಣವಾಗಿ ಮಡಚಿ ಹುಳಗಳನ್ನು ಸ್ವಾಹಾ ಮಾಡುತ್ತವೆ.
ಅಬ್ರಸ್ ಪ್ರಿಕೆಟೋರಿಯಸ್- ಡೆಡ್ಲಿ ಲವ್ ಬೀನ್
ನೈರುತ್ಯ ಏಷ್ಯಾದಲ್ಲಿ ಹೆಚ್ಚಾಗಿ ಕಾಣಸಿಗುವ ಗಿಡವಿದು. ಇದನ್ನು ಜೆಕ್ವಿರಿಟಿ ಎಂದೂ ಕರೆಯುತ್ತಾರೆ. ಇದರಲ್ಲಿನ ಕಪ್ಪುಬಣ್ಣದ ಬೀಜಗಳು ಅತ್ಯಂತ ವಿಷಕಾರಿ. ಈ ವಿಷವನ್ನು ಅಬ್ರಿನ್ ಎನ್ನುತ್ತಾರೆ (ರಿಸಿನ್ ವಿಷದ ಮಾದರಿಯದ್ದು). ಇಷ್ಟೊಂದು ವಿಷವನ್ನು ಹೊಂದಿದ್ದರೂ ಜೆಕ್ವಿರಿಟಿ ಚೀನಾದಲ್ಲಿ ಪ್ರೀತಿಯ ಸಂಕೇತವಾಗಿದೆ. ಅಲ್ಲಿ ಇದನ್ನು 'ಪರಸ್ಪರ ಪ್ರೇಮಬೀಜ'ಗಳು ಎನ್ನುತ್ತಾರೆ. ಹಾಲೆಂಡ್‌ನಲ್ಲಿ ಇದರ ಬೀಜಗಳ ಜತೆಗೆ ಮುತ್ತುಗಳನ್ನು ಪೋಣಿಸಿ ನೆಕ್ಲೇಸ್ ಮಾಡಲಾಗುತ್ತದೆ. ನಿಜ ಹೇಳಬೇಕೆಂದರೆ ಜೆಕ್ವಿರಿಟಿ ಬೀಜಗಳು ಎಷ್ಟು ವಿಷಕಾರಿಯೆಂದರೆ, ಹಾರ ಪೋಣಿಸುವಾಗ ಬೀಜದೊಳಗೆ ಉಗುರು ತಾಗಿದ್ದರಿಂದ ಎಷ್ಟೋ ಮಂದಿ ಮೃತಪಟ್ಟ ಉದಾಹರಣೆಗಳೂ ಇವೆ. ಆದರೂ ಇದರ ಬಳಕೆ ಮಾತ್ರ ಬಿಟ್ಟಿಲ್ಲ.
ಡ್ರಾಕಂಕ್ಯುಲಸ್ ವಲ್ಗ್ಯಾರಿಸ್- ಡ್ರಾಕುಲ ಹೂ
ಇದನ್ನು ವೂಡೂ ಲಿಲ್ಲಿ, ಸ್ನೇಕ್ ಲಿಲ್ಲಿ, ಸ್ಟಿಂಕ್ ಲಿಲ್ಲಿ ಎಂದೂ ಕರೆಯುತ್ತಾರೆ. ಇದು ಕೂಡ ಸತ್ತ ಹೆಣದಂತಹ ವಾಸನೆ ಪಸರಿಸುವುದರಲ್ಲಿ ಹೆಸರುವಾಸಿ. ಈ ವಾಸನೆ ಇರುವುದು ಕೇವಲ ಒಂದು ದಿನ ಮಾತ್ರ ಎನ್ನುವುದೇ ಸಮಾಧಾನದ ಸಂಗತಿ. ಕಪ್ಪಾಗಿ, ಭಯಾನಕವಾಗಿ ಇರುವ ಕಾರಣವೇ ಇದನ್ನು ಡ್ರಾಕುಲ ಹೂ ಎನ್ನುವುದು. ಇದಕ್ಕೆ ಸೂರ್ಯನ ಕಿರಣವೆಂದರೆ ಅಲರ್ಜಿ. ಅರಳಿದಾಗ ಸೂರ್ಯ ಕಿರಣ ತಾಗಿತೆಂದರೆ ಸಾಕು, ಬಾಡಿಹೋಗುತ್ತದೆ. ಈ ಸಸ್ಯದ ಎಲ್ಲ ಭಾಗವೂ ಅಪಾಯಕಾರಿ. ಎಲ್ಲಿ ಮುಟ್ಟಿದರೂ ಸಾಕು, ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತದೆ.
ಕ್ಯಾಸ್ಟರ್ ಆಯಿಲ್ ಸಸ್ಯ- ವಿಶ್ವದಲ್ಲೇ ಅತ್ಯಂತ ವಿಷಕಾರಿ
ಗಿನ್ನೆಸ್ ಪುಸ್ತಕದಲ್ಲಿ ದಾಖಲಾದ ಪ್ರಕಾರ ಇದು ವಿಶ್ವದಲ್ಲೇ ಅತ್ಯಂತ ವಿಷಯುಕ್ತ ಸಸ್ಯ. ಇದನ್ನು 'ಪಾಮ್ ಆಫ್ ಕ್ರೈಸ್ಟ್' ಎಂದೂ ಕರೆಯುತ್ತಾರೆ. ಏಕೆಂದರೆ, ಈ ಸಸ್ಯದಲ್ಲಿನ ಎಣ್ಣೆಗೆ ಗಾಯಗಳನ್ನು ವಾಸಿಮಾಡುವ ವಿಶೇಷ ಶಕ್ತಿಯಿದೆ. ಆದರೂ, ವಿಪರ್ಯಾಸವೆಂದರೆ, ಈ ಸಸಿಯ 1 ಮಿಲಿ ಗ್ರಾಂ ವಿಷ ತಾಗಿದರೂ ಸಾಕು, ವ್ಯಕ್ತಿಯ ಸಾವು ಖಚಿತ. ಈ ಸಸಿಯ ಬೀಜದಲ್ಲೂ ಕಾರ್ಕೋಟಕ ತುಂಬಿದೆ. ಇದರಲ್ಲಿ ಅರಳುವ ಹೂವು ಅಂಟಂಟಾಗಿದ್ದು, ಮಕ್ಕಳಿಗೆ ಅತ್ಯಂತ ಅಪಾಯಕಾರಿ.
-ದಿಯಾ