ಕೃಷಿ-ಪರಿಸರ

ಫ್ರಾಗ್ ಪಯಣ

ಸುತ್ತಲೂ ಗುಡ್ಡಗಾಡು. ಆಕಾಶದೆತ್ತರಕ್ಕೆ ಬೆಳೆದು ನಿಂತ ಮರಗಳು. ಸೂಜಿ ಬಿದ್ದರೂ...

ಸುತ್ತಲೂ ಗುಡ್ಡಗಾಡು. ಆಕಾಶದೆತ್ತರಕ್ಕೆ ಬೆಳೆದು ನಿಂತ ಮರಗಳು. ಸೂಜಿ ಬಿದ್ದರೂ ಸಪ್ಪಳಾಗುವ ನಿಶ್ಶಬ್ದ. ಮಾನ್ಸೂನ್ ಮಾರುತಗಳಿಂದ ಬರುವ ಮೋಡಗಳು ಪಶ್ಚಿಮ ಘಟ್ಟಗಳಲ್ಲಿ ನಿಂತು ಧೋ... ಎಂದು ಸುರಿವ ಮಳೆ. ಎತ್ತರ ಪ್ರದೇಶದಿಂದ ಇಳಿಜಾರಿಗೆ ಜುಳುಜುಳು ಹರಿವ ನೀರು. ಅಲ್ಲಲ್ಲಿ ಚಿಕ್ಕಪುಟ್ಟ ಕೆರೆಗಳು. ಮಳೆಯೊಂದಿಗೆ ತಣ್ಣನೆ ಬೀಸುವ ಸುಳಿಗಾಳಿಗೆ ಮೈ ಸೋಕಿದ ಅನುಭವ. ಸಂಜೆಯಾಗುತ್ತಿದ್ದಂತೆ ಸಂಗಾತಿ ಸೇರಬೇಕೆಂಬ ಉನ್ಮಾದ ಆವರಿಸಿಕೊಳ್ಳುತ್ತದೆ. ಆಗಲೇ ಶುರುವಾಗುತ್ತದೆ ನೋಡಿ ಪ್ರಣಯದ ನಿವೇದನೆ...
- ಇದು ನಮ್ಮ- ನಿಮ್ಮಗಳ ಪ್ರೇಮ- ಪ್ರಣಯದ ಕತೆಯಲ್ಲ. ಅಸಲಿಗೆ ಅವಸಾನದ ಅಂಚಿನಲ್ಲಿರುವ, ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲೇ ಹೆಚ್ಚಾಗಿ ನೆಲೆ ಕಂಡುಕೊಂಡಿರುವ, ಉಭಯಚರಿಗಳಲ್ಲೇ ಅತ್ಯಾಕರ್ಷಕವಾಗಿರುವ ಹ್ಯಾಕೋಫೋರಸ್ ಮಲಬಾರಿಕಸ್ ಜಾತಿಯ ಕಪ್ಪೆಗಳ ಸಂತಾನವೃದ್ಧಿಯ ವೈಶಿಷ್ಟ್ಯವಿದು.
ಮಾನ್ಸೂನ್ ಮಾರುತ ಬೀಸಿ ತರುವ ಮೊದಲ ಮಳೆಗೂ ಮುನ್ನ ಮಣ್ಣಲ್ಲಿ ಹುದುಗಿಕೊಂಡಿರುವ ಹ್ಯಾಕೋಫೋರಸ್ ಮಲಬಾರಿಕಸ್ ಜಾತಿಯ ಕಪ್ಪೆಗಳು ಮೊದಲ ಮಳೆ ಬಿದ್ದು ತಗ್ಗು ಪ್ರದೇಶಕ್ಕೆ ನೀರು ಶೇಖರಣೆಗೊಳ್ಳುತ್ತಿದ್ದಂತೆ ಅಲ್ಲಿ ಪ್ರತ್ಯಕ್ಷವಾಗುತ್ತವೆ. ಆದರೆ, ಇವುಗಳ ಜೀವನ ನೀರಿನ ಮೇಲಿನ ಗುಳ್ಳೆಯಂತೆ. ದಟ್ಟ ಕಾಡುಗಳಲ್ಲಿ ಅಧಿಕವಾಗಿರುವ ಸರೀಸೃಪ, ವಿಷಜಂತುಗಳ ಕಾಟದಿಂದ ತಪ್ಪಿಸಿಕೊಂಡು ಬದುಕುವುದೆಂದರೆ ಅವುಗಳಿಗೆ ಸವಾಲೇ ಸರಿ. ಅದೂ ವರ್ಷಕ್ಕೊಮ್ಮೆ ತಮ್ಮ ಸಂತಾನವೃದ್ಧಿ ಮಾಡುವ ಇವುಗಳ ಕ್ರಮವೂ ಅಷ್ಟೇ ಆಕರ್ಷಕ.
ಲಕ್ಷಣಗಳು
ಈ ಜಾತಿಯ ಕಪ್ಪೆಗಳು ತಮ್ಮ ದೇಹದ ಗಾತ್ರಕ್ಕಿಂತ ಅಧಿಕ ಎನ್ನುವ ಉದ್ದನೆಯ ಕಾಲು, ಕಣ್ಣು ಹೊಂದಿರುತ್ತವೆ. ಕಾಲುಗಳ ನಾಲ್ಕು ಬೆರಳು ಬಣ್ಣ- ಬಣ್ಣಗಳಿಂದ ಕೂಡಿರುತ್ತವೆ. ಈ ಬೆರಳು ಬರೀ ಮೂಳೆಗಳಂತೆ ಗೋಚರಿಸುತ್ತವೆ. ಎಂತಹ ಬಿಸಿಲಲ್ಲೂ ಇವುಗಳ ದೇಹ ತೀವ್ರ ಶೀತ, ದೇಹದ ಮೇಲ್ಭಾಗ ಒರಟಾಗಿ ಮುಳ್ಳು- ಮುಳ್ಳಾಗಿರುತ್ತದೆ. ದೇಹದ ಕೆಳಭಾಗ ತೀವ್ರ ಮೃದುವಾಗಿರುತ್ತದೆ. ಪ್ರಾಣ ರಕ್ಷಣೆಗಾಗಿ ಸದಾ ಕಾಲ ಜಾಗೃತವಾಗಿರುವ ಚಲನಶೀಲ ಪ್ರಾಣಿ.

ಸಂತಾನ ಹೇಗೆ?
ಹ್ಯಾಕೋಫೋರಸ್ ಮಲಬಾರಿಕಸ್ ಜಾತಿಯ ಹೆಣ್ಣು ಕಪ್ಪೆಗಳ ಮೂರು ಪಟ್ಟು ಅಧಿಕ ಸಂಖ್ಯೆಯಲ್ಲಿರುವ ಗಂಡು ಕಪ್ಪೆಗಳು ಹೆಚ್ಚಾಗಿ ನೀರಿನ ಬದಿಯಲ್ಲಿರುವ ಮರದ ಕೊಂಬೆಗಳಲ್ಲಿ ಅಡಗಿರುತ್ತವೆ. ಹೆಣ್ಣು ಕಪ್ಪೆಗಳು ಹೆಚ್ಚಾಗಿ ನೀರಿನಲ್ಲಿರುತ್ತವೆ. ಮಾನ್ಸೂನ್ ಮಾರುತ ಬೀಸಿ ಮೊದಲ ಮಳೆ ಸುರಿಯುತ್ತಿದ್ದಂತೆ ಗಂಡು ಕಪ್ಪೆಗಳ ಪ್ರಣಯ ನಿವೇದನೆ, ಸರಸ- ಸಲ್ಲಾಪಕ್ಕೆ ಆಹ್ವಾನ ನೀಡುತ್ತವೆ. ಸಂಜೆಯಾಗುತ್ತಿದ್ದಂತೆ ಮರಗಳಿಂದ ಕೆಳಗಿಳಿದು ಹೆಣ್ಣು ಕಪ್ಪೆಗಳ ಬಳಿಗೆ ಆಗಮಿಸಿ, ಕೂಗಿ ಕರೆದು ಆಕರ್ಷಿಸುತ್ತವೆ.
ನೀರಿನ ದಡದಲ್ಲಿರುವ ಮರದ ಕೊಂಬೆಗಳು, ಕಲ್ಲುಗಳ ಮೇಲೆ ಕುಳಿತ ಹೆಣ್ಣು ಕಪ್ಪೆಗಳ ಜೊತೆಗೆ ಸುಮಾರು ಒಂದು ಗಂಟೆಯವರೆಗೆ ದೈಹಿಕ 'ಸಂಪರ್ಕ' ಬೆಳೆಸುತ್ತವೆ. ಈ ಮಿಲನ ಮಹೋತ್ಸವಕ್ಕೆ ಪ್ರತಿ ಹೆಣ್ಣು ಕಪ್ಪೆಗೆ ಮೂರರಿಂದ ನಾಲ್ಕು ಕಪ್ಪೆಗಳು ಒಂದರ ಮೇಲೊಂದರಂತೆ 'ಕಾದು' ಕುಳಿತಿರುತ್ತವೆ. ಇವೆಲ್ಲವುಗಳ ಉದ್ದೇಶ ಒಂದೇ ಸಂತಾನವೃದ್ಧಿ.
ಇದಾದ ವಾರದಲ್ಲೇ ಕಪ್ಪೆಗಳ ಮೊಟ್ಟೆಯಿಡುವ ಪ್ರಕ್ರಿಯೆ ಆರಂಭವಾಗುತ್ತದೆ. ಅದಕ್ಕಾಗಿ ಹೆಣ್ಣು ಮತ್ತು ಗಂಡು ಕಪ್ಪೆಗಳು ಸೇರಿಯೇ ಕೀಟಗಳು, ಕೇರೆ ಹಾವು, ಇರುವೆ, ಇತರೆ ಹಾವುಗಳ ಕಣ್ಣಿಗೆ ಬೀಳದಂತಿರುವ, ಮರದ ಎಲೆ, ಕಸ- ಕಡ್ಡಿಯಿಂದ ಮುಚ್ಚಲ್ಪಡುವ, ಇತರ ಸರಿಸೃಪಗಳಿಂದ ಮುಕ್ತವಾಗಿರುವಂತೆ ಸೂಕ್ತ ಸ್ಥಳ ಗುರುತಿಸುತ್ತವೆ.
ನಂತರ ಹೆಣ್ಣು ಕಪ್ಪೆ ಕೆಳ ಚರ್ಮದಂತೆ ಮೃದುವಾದ ಮೇಲ್ಪದರುಗಳುಳ್ಳ ಮೊಟ್ಟೆಯಿಡುತ್ತದೆ. ಒಂದು ವೇಳೆ ಮೊಟ್ಟೆಗಳು ಆ ಸ್ಥಳದಿಂದ ಜಾರಿ ಬಿದ್ದರೂ ನೀರಿನಲ್ಲೇ ಬೀಳುವ ಸ್ಥಳವನ್ನೇ ಆಯ್ಕೆ ಮಾಡಿಕೊಂಡಿರುತ್ತವೆ. ನಂತರ ಮೊಟ್ಟೆಗಳು ಒಟ್ಟಿಗೆ ಇರುವಂತೆ ಅವುಗಳ ಮೇಲೆ ಅಂಟಾದ ನೊರೆ ಹಾಕಿ ಗಾಳಿ, ಬಿಸಿಲಿಗೆ ಒಣಗದಂತೆ ಸಂರಕ್ಷಿಸುತ್ತವೆ. ಇದಕ್ಕೆ ಗಂಡು ಕಪ್ಪೆಗಳೂ ಸಹಕಾರ ನೀಡುತ್ತವೆ.

ಸ್ವತಂತ್ರವಾಗಿ ಹಾರಾಟ
ಮೂರು ವಾರಗಳವರೆಗೆ ಮೊಟ್ಟೆಯೊಳಗೆ ಮರಿಗಳು ಬೆಳೆಯುತ್ತಿರುತ್ತವೆ. ಅಧಿಕ ಪೌಷ್ಟಿಕಾಂಶವುಳ್ಳ ಮೊಟ್ಟೆಗಳಲ್ಲಿ ಬೆಳೆಯುವ ಮರಿಗಳು ಆರಂಭದಲ್ಲಿ ಬಾಲ ಹೊಂದಿರುತ್ತವೆ. ಆಗ ಅವು ನೀರಿನಲ್ಲಿರುವಾಗ ಮೀನುಗಳಂತೆ ಕಿವಿರುಗಳಿಂದ ವಾಸಿಸುತ್ತಿರುತ್ತವೆ. ಮರಿಗಳು ಬೆಳೆದಂತೆ ಬಾಲ ಸ್ವಲ್ಪ ಸ್ವಲ್ಪ ತುಂಡರಿಸುತ್ತಾ ಸಾಗುತ್ತದೆ. ಇತರೆ ದೊಡ್ಡ ಕಪ್ಪೆಗಳು ಅವುಗಳಿಗೆ ನೀರಲ್ಲಿರುವ ಸಣ್ಣ- ಸಣ್ಣ ಕೀಟ ತಿನ್ನಲು ಕಲಿಸುತ್ತವೆ. ಅದರಿಂದ ಮರಿ ಕಪ್ಪೆಗಳ ಬೆಳವಣಿಗೆ ತೀವ್ರಗೊಳ್ಳುತ್ತದೆ.
ಈ ಮರಿ ಕಪ್ಪೆಗಳು ದೈಹಿಕವಾಗಿ ಪ್ರಬಲವಾಗುತ್ತಾ ನೀರಿನ ಮೇಲೆ ಹಾರಾಡಲು ಶುರು ಮಾಡುತ್ತವೆ. ಆಗ ಸ್ವತಂತ್ರವಾಗಿ ಬದುಕಲು ಆರಂಭಿಸುತ್ತವೆ. ಹುಳುಗಳು, ಇತರೆ ವಿಷಜಂತುಗಳಿಂದ ರಕ್ಷಿಸಿಕೊಳ್ಳಲು ಹಾರಾಟವನ್ನೇ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತವೆ.

- ವೀರೇಶ ಜಿ. ಮಠ
mathvg@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ