ಅನಾದಿ ಕಾಲದಿಂದಲೂ ಮಾನವನಿಗೂ ಮರಕ್ಕೂ ಇರುವ ಸಂಬಂಧ ಅನನ್ಯ. 'ಮರ ಕಡಿದಾತನಿಗೆ ನರಕವೇ ಗತಿ' ಎನ್ನುತ್ತದೆ ಸ್ಕಂದಪುರಾಣ. ಮತ್ಸ್ಯಪುರಾಣದಲ್ಲಿ ಪಾರ್ವತಿ ಮರವನ್ನು ಕುರಿತು ಹೀಗೆ ಬಣ್ಣಿಸುತ್ತಾಳೆ; 'ಯಾರು ಬಾವಿ ತೋಡುತ್ತಾರೋ ಅವರು ಹಲವು ವರ್ಷ ಸ್ವರ್ಗದಲ್ಲಿರುತ್ತಾರೆ. ಹತ್ತು ಬಾವಿಗಳು ಒಂದು ಪುಷ್ಕರಿಣಿಗೆ ಸಮ. ಹತ್ತು ಪುಷ್ಕರಿಣಿಗಳು ಒಬ್ಬ ಮಗನಿಗೆ ಸಮ. ಹತ್ತು ಗಂಡು ಮಕ್ಕಳು ಒಂದು ಮರಕ್ಕೆ ಸಮ'.
ಜಗತ್ತಿನ ಎಲ್ಲ ಮತ, ಧರ್ಮಗಳೂ ಮರಗಳನ್ನು ಪೋಷಣೆಯಲ್ಲಿ ನಮ್ಮ ನೆಮ್ಮದಿ ಇದೆ ಎಂದು ಸಾರುತ್ತವೆ. ಯಾಜ್ಞವಲ್ಕ್ಯ ಮಹಾಮುನಿಗಳಂತೂ ಮರ ಕಡಿಯುವವರಿಗೆ ತಕ್ಕ ಶಿಕ್ಷೆಯನ್ನೇ ಘೋಷಿಸಿದ್ದಾರೆ. ಬೆಳೆಯುವ ಮರದ ಕೊಂಬೆ, ಬುಡ, ಬೇರು ವಗೈರೆ ಕಡಿದರೆ ಇತರರಿಗೆ ಸಹಾಯಕವಾದ ಮರಗಳನ್ನು ಉರುಳಿಸಿದರೆ ಅದರ ಎರಡು ಪಟ್ಟು ದಂಡ ವಿಧಿಸಬೇಕಂತೆ! ಮಹಾಕವಿ ಕಾಳಿದಾಸ ತನ್ನ ಅಮೋಘ ನಾಟಕಗಳಲ್ಲೊಂದಾದ 'ಅಭಿಜ್ಞಾನ ಶಾಕುಂತಲ'ದಲ್ಲಿ ತನ್ನ ಹಸಿರಿನ ಪ್ರೀತಿಯನ್ನು ಹೀಗೆ ಮೆರೆದಿದ್ದಾನೆ. 'ಕೋ ನಾಮೋಷ್ಣೋದಕೇನ ನವಮಾಲಿಕಾಂ ಸಿಂಚನೆ' ಅಂದರೆ ಬೆಳೆಯುತ್ತಿರುವ ಬಳ್ಳಿಗೆ ಒಡನಾಡಿಯಾದರೆ ಮಾತ್ರ ನಮ್ಮ ಬಾಳು ಹಸನು.
ಈಗ ಮರವೊಂದರ ಕಿಮ್ಮತ್ತೇನು ನೋಡೋಣ. ನಾವು ನೀವೆಲ್ಲ ಒಂದು ಉದ್ಯಾನವನದಲ್ಲಿ ಕುಳಿತಿದ್ದೇವೆ ಎಂದು ಭಾವಿಸೋಣ. ನಮ್ಮ ಮುಂದೆಯೇ 50 ವರ್ಷ ವಯಸ್ಸಿನ ಒಂದು ಮರವಿದೆ. ಅದರ ಮಹತ್ವವೇನು ಎಂಬುದನ್ನು ತುಸು ಅರಿತುಕೊಳ್ಳೋಣ.
- 18,75000 ಗಳಷ್ಟು ಪ್ರಾಣವಾಯುವಾದ ಆಮ್ಲಜನಕ ಬಿಡುಗಡೆ ಮಾಡುತ್ತದೆ.
- 37,20000 ಖರ್ಚಿನ ವಾಯುಮಾಲಿನ್ಯ ನಿಯಂತ್ರಣ ಸಾಧಿಸುತ್ತದೆ.
- 18,75000 ಗಳಷ್ಟು ಖರ್ಚಿನ ಭೂಸವೆತ ನಿಯಂತ್ರಣ ಹಾಗೂ ಭೂಫಲವತ್ತತೆ ಸಾಧಿಸುತ್ತದೆ.
- 19,10000 ಗಳಷ್ಟು ಖರ್ಚಿನ ನೀರಿನ ಪುನರ್ಬಳಕೆ ಕಾಮಗಾರಿ ನಿರ್ವಹಿಸುತ್ತದೆ.
- 18,75000 ವೆಚ್ಚಕ್ಕೆ ಸಮಾನವಾದಷ್ಟು ಆಶ್ರಯ, ಆಸರೆಯನ್ನು ಕ್ರಿಮಿ, ಕೀಟ, ಪ್ರಾಣಿಗಳಿಗೆ ಮನುಷ್ಯರಿಗೆ ಕಲ್ಪಿಸುತ್ತದೆ.
ಇದರ ಒಟ್ಟು ಕಿಮ್ಮತ್ತು ರು. 1,12,55,000. ಹೀಗೆ ಲೆಕ್ಕ ಹಾಕುವಾಗ ಆ ಮರ ಬಿಡುವ ಹಣ್ಣು, ಕಾಯಿ, ಮರಮುಟ್ಟನ್ನು ಗಣನೆಗೆ ತೆಗೆದುಕೊಂಡಿಲ್ಲ. ದಾರ್ಶನಿಕ ಡಾ. ಡಿವಿಜಿ ಅವರು ಸೊಗಸಾಗಿ ಕಿವಿಮಾತೊಂದನ್ನು ಹೀಗೆ ಹೇಳಿದ್ದಾರೆ.
ಮರವ ನೀನರಿಯುವಡೆ ಬುಡವ ಕೀಳಲುಬೇಡ
ತರಿಯಬೇಡೆಲೆ ಕಡ್ಡಿಗಳ ಪರೀಕ್ಷಣಕೆ
ಎರೆ ನೀರ, ಸುರಿಗೊಬ್ಬರವ, ಕೆದಕು ಪಾತಿಯನು
ನಿರುಕಿಸುತ ತಳಿರಲರ- ಮಂಕುತಿಮ್ಮ
ವೃಕ್ಷ ಪೋಷಿಸಲು ಇದಕ್ಕೂ ಪ್ರಖರ ಹಿತನುಡಿ ಹಿತನುಡಿ ಬೇಕೆ? ನಮ್ಮ ಜನಪದರು ಪರೋಪಕಾರ, ಲೋಕ ಚಿಂತನೆ ಮಾಡುತ್ತ ಬಾಳಿದವರಿಗೆ ಸಲ್ಲಿಸುವ ಗೌರವಾದರ ಅಸದೃಶ. ಅವರ ಸಮ್ಯಕ್ ದೃಷ್ಟಿಯಲ್ಲಿ ಬಿತ್ತಿದವರಿಗೆ ಸಾವಿಲ್ಲ ಎಂದಿಗೂ.
- ಬಿಂಡಿಗನವಿಲೆ ಭಗವಾನ್