ಕೃಷಿ-ಪರಿಸರ

ದ್ವೀಪದ ಜೀವ

ಸುತ್ತಲೂ ಕಣ್ಣು ಹಾಯಿಸಿದಷ್ಟು ದೂರ ಸ್ವಚ್ಛಂದ ನೀರು, ಅಲ್ಲಲ್ಲಿ ಹಾಲ್ನೊರೆಯಂತೆ ಲಾಸ್ಯವಾಡುವ...

ಸುತ್ತಲೂ ಕಣ್ಣು ಹಾಯಿಸಿದಷ್ಟು ದೂರ ಸ್ವಚ್ಛಂದ ನೀರು, ಅಲ್ಲಲ್ಲಿ ಹಾಲ್ನೊರೆಯಂತೆ ಲಾಸ್ಯವಾಡುವ ಅಲೆಗಳು, ಅಲ್ಲಲ್ಲಿ ಕಾಣಸಿಗುವ ಐಲ್ಯಾಂಡ್‌ಗಳು...
ಆಹಾ ಎಂಥ ಅದ್ಭುತ. ಇಂಥ ಪ್ರಕೃತಿ ಮಡಿಲಿನಲ್ಲಿ ಒಮ್ಮೆ ಹೊರಟರೆ ಸಾಕು, ನಿಸರ್ಗ ಪಾಠ ತಾನಾಗೇ ದಕ್ಕುತ್ತದೆ. ನಮ್ಮ ರಾಜ್ಯ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ನೂರಕ್ಕೂ ಅಧಿಕ ದ್ವೀಪಗಳಿವೆ. ಅಲ್ಲಿ ಅಗಾಧ ಸಸ್ಯ, ಜೀವ ಸಂಪತ್ತಗಳೂ ಇವೆ. ಮಂಗಳೂರಿನಿಂದ ಕಾರವಾರದವರೆಗೆ 320 ಕಿ.ಮೀ. ಉದ್ದಕ್ಕೆ ವ್ಯಾಪಿಸಿರುವ ಕಡಲಿನಲ್ಲಿ ಕೂರ್ಮಗಢ, ನೇತ್ರಾಣಿ, ಬಸವರಾಜದುರ್ಗ, ಸೇಂಟ್‌ಮೇರಿಸ್‌ನಂಥ ದ್ವೀಪಗಳು ಭೌಗೋಳಿಕ, ಪ್ರವಾಸಿತಾಣ ಮತ್ತು ಜೀವವೈವಿಧ್ಯತೆಯ ದೃಷ್ಟಿಯಿಂದ ಮಹತ್ವ ಪಡೆದಿವೆ.

ಭೌಗೋಳಿಕ ಹಿನ್ನೆಲೆ
ಜ್ವಾಲಾಮುಖಿಯ ಸ್ಫೋಟದಿಂದ ಸ್ಥಂಭಾಕಾರದಂತೆ ರಚಿತವಾದ ಶಿಲೆಗಳು ಉಡುಪಿ ಬಳಿಯ ಸೇಂಟ್‌ಮೇರಿಸ್ ದ್ವೀಪ (ತೆಂಗಿನ ದ್ವೀಪ)ದಲ್ಲಿದೆ. ಈ ದ್ವೀಪವು 27 ಎಕರೆ ಭೂಭಾಗ ಹೊಂದಿದೆ. ಇದರ ಅಕ್ಕಪಕ್ಕದಲ್ಲೂ ಅನೇಕ ಚಿಕ್ಕ- ಪುಟ್ಟ ಸುಂದರ ದ್ವೀಪಗಳಿವೆ. 1960ರ ಆಸುಪಾಸಿನಲ್ಲಿ ಪ್ರೊ. ಸಿ. ನಾಗಣ್ಣ ಮತ್ತವರ ತಂಡ ದ್ವೀಪಕ್ಕೆ ಭೇಟಿ ನೀಡಿ ಭೂವೈಜ್ಞಾನಿಕ ಮಹತ್ವದ ಕುರಿತು ಅಧ್ಯಯನ ನಡೆಸಿತು.

ಸಂಶೋಧನೆಗೆ ಅವಕಾಶ
ಈ ದ್ವೀಪದಲ್ಲಿರುವ ಶಿಲಾಸ್ತಂಭಗಳು ಜ್ವಾಲಾಮುಖಿಯಿಂದ ಹೊರಹೊಮ್ಮಿದ ಲಾವಾರಸವು ತಂಪುಗೊಂಡು ನಿರ್ಮಾಣವಾದದ್ದು. ವೈಜ್ಞಾನಿಕವಾಗಿ ಡೇನೈಟ್, ಗ್ರ್ಯಾನೋಫೈರ್ ಮತ್ತು ರೈಯೋಲೈಟ್‌ಗಳು ಈ ನೈಸರ್ಗಿಕ ಶಿಲಾಸ್ಥಾಯಿಗಳಲ್ಲಿವೆ. ಅಂತೆಯೇ ನೇತ್ರಾಣಿ ದ್ವೀಪದ ತುದಿಯಲ್ಲಿ ದೊರೆಯುವ ಕಲ್ಲುಗುಂಡುಗಳು ಅತ್ಯಂತ ಹಗುರವಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಅವಕಾಶಗಳಿವೆ.

ಜೀವವೈವಿಧ್ಯತೆಯ ತಾಣ
ಪಶ್ಚಿಮ ಕರಾವಳಿಯ ಎಲ್ಲ ದ್ವೀಪಗಳು ಪರಿಸರದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿವೆ. ಸಮುದ್ರ ದಂಡೆಯಲ್ಲಿ ನಿಂತು ಈ ದ್ವೀಪಗಳನ್ನು ವೀಕ್ಷಿಸಿದಾಗ ಅವುಗಳಲ್ಲಿ ಏನಿರಬಹುದು ಎಂಬ ಕುತೂಹಲ ಸಾಮಾನ್ಯ. ಕೂರ್ಮಗಢದಲ್ಲಿ ಮಾತ್ರ ರೆಸಾರ್ಟ್ ಇದ್ದು, ಉಳಿದ ದ್ವೀಪಗಳಲ್ಲಿ ಮನುಷ್ಯರಾರೂ ವಾಸಿಸುವುದಿಲ್ಲ. ಈ ಎಲ್ಲ ದ್ವೀಪಗಳಲ್ಲೂ ಅತ್ಯಂತ ಅಪರೂಪದ ಔಷಧೀಯ ಮಹತ್ವ ಹೊಂದಿರುವ ಸಸ್ಯ ಪ್ರಭೇದಗಳಿವೆ. ನೇತ್ರಾಣಿ ದ್ವೀಪದಲ್ಲಿ ಸುಮಾರು 65 ಪ್ರಭೇದದ ಸಸ್ಯಗಳಿವೆ. ಮರಕೆಸು, ಕೇದಿಗೆ, ಆಲದ ಜಾತಿಗೆ ಸೇರಿದ ಅತ್ತಿ- ಅಶ್ವತ್ಥ ಮರಗಳು, ಕಲ್ಲುಬಾಳೆ, ಕರ್ಣಕುಂಡಲ, ನೆಲನೆಲ್ಲಿ, ಹಾಲುಬೇರುಬಳ್ಳಿ, ಈಶ್ವರಿಬಳ್ಳಿ, ಮಧುನಾಶಿನಿ, ಅಶೋಕವೃಕ್ಷ, ಕವಳೆ ಹಣ್ಣಿನ ಗಿಡ, ಕುಸುಮಾಲೆ, ಹೊಳೆಗೇರು, ಕುರುಡುಹೆಂಕ, ಗುಡ್ಡೆಗೇರು, ಕಾಡುಕಣಗಿಲದಂತಹ ಅಪರೂಪದ ಸಸ್ಯಗಳು ಕಾಣಸಿಗುತ್ತವೆ. ಕೆಲವು ದ್ವೀಪಗಳಲ್ಲಿ ದೇವರ ಹೆಸರಿನಲ್ಲಿ ಹರಕೆಗೆ ಬಿಟ್ಟ ಕುರಿ, ಕೋಳಿಗಳಿವೆ.
ನೇತ್ರಾಣಿ ದ್ವೀಪದ ಬಳಿ ವಿಶಿಷ್ಟ ಜಾತಿಯ ಪಕ್ಷಿಸಂಕುಲಗಳಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದವುಗಳೆಂದರೆ ಚಿಮ್ನಿ ಸ್ವಿಫ್ಟ್, ಸದಾ ಹೆಣ್ಣು ಮತ್ತು ಗಂಡು ಜೋಡಿಯಾಗಿಯೇ ಇರುವ ಬಿಳಿ ಎದೆಯ ಹದ್ದು, ಕಾಡುಪಾರಿವಾಳ, ನೀರುಕಾಗೆ, ಬಾವಲಿ, ಸಮುದ್ರ ಬಕ ಇತ್ಯಾದಿ.
ಹೆಚ್ಚಾಗಿ ಬೆಳಕು ಕಡಿಮೆ ಇರುವ ಕಣಿವೆಗಳಲ್ಲಿ, ಗುಹೆಗಳಲ್ಲಿ ವಾಸಿಸುವ ಚಿಮ್ನಿ ಸ್ವಿಫ್ಟ್ ಎಂಬ ಉದ್ದನೆಯ ರೆಕ್ಕೆಯ ಚಿಕ್ಕ ಪಕ್ಷಿ ತನ್ನ ಜೊಲ್ಲು ಮತ್ತು ಒಣಗಿದ ಹುಲ್ಲನ್ನು ಸೇರಿಸಿ ಗೂಡನ್ನು ಕಟ್ಟುತ್ತದೆ. ಈ ಗೂಡುಗಳಿಗೆ ಚೀನಾದಲ್ಲಿ ಎಲ್ಲಿಲ್ಲದ ಬೇಡಿಕೆ. ಏಕೆಂದರೆ ಜೊಲ್ಲು ಮತ್ತು ಹುಲ್ಲು ಮಿಶ್ರಣದ ಗೂಡನ್ನು ಬಳಸಿ ತಯಾರಿಸಿದ ಸೂಪ್ ಆರೋಗ್ಯವರ್ಧಕ. ಜೊತೆಗೆ ಅತ್ಯಂತ ರುಚಿಕರವಾಗಿರುತ್ತದೆಯಂತೆ. ಪಕ್ಷಿಯ ಜೊಲ್ಲು ಜೀರ್ಣಕ್ರಿಯೆಗೆ ಸಹಾಯಕಾರಿಯಾದರೆ ಹುಲ್ಲಿನಲ್ಲಿ ಕಾರ್ಬೋಹೈಡ್ರೇಟ್ ಅಂಶವಿರುತ್ತದೆ.

ಹವಳದ ಬಂಡೆ

ಕೆಲವು ದ್ವೀಪಗಳು ಮಾನವ ಚಟುವಟಿಕೆಯಿಂದ ದೂರವಿರುವುದರಿಂದ ಮಾಲಿನ್ಯ ಮುಕ್ತವಾಗಿವೆ. ಹಾಗಾಗಿಯೇ ದ್ವೀಪದ ಸುತ್ತಲೂ ಅತ್ಯಂತ ಅಪರೂಪದ ಜಲಚರಗಳು ತಮ್ಮ ಜೀವನ ನಡೆಸುತ್ತಿವೆ. ನೇತ್ರಾಣಿ ದ್ವೀಪದ ಸುತ್ತಲೂ ಅಲ್ಲಲ್ಲಿ ಹವಳದ ಬಂಡೆಗಳು ಬೆಳೆಯುತ್ತಿದ್ದು, ಆ ಭಾಗದಲ್ಲಿ ಪರಿಸರ ಮಾಲಿನ್ಯವಾಗದಿದ್ದಲ್ಲಿ ಹವಳದ ದಿಬ್ಬಗಳು ಇನ್ನೂ ಬೆಳೆಯಬಹುದಾಗಿದೆ. ಈ ಹವಳದ ದಿಬ್ಬಗಳು ಬೆಳೆಯಲು ಬೇಕಾದ ಪರಸ್ಪರ- ಅವಲಂಬಿತ (ಸಿಂಬಯೊಟಿಕ್) ಪಾಚಿಗಳೂ ಇಲ್ಲಿನ ನೀರಿನಲ್ಲಿದೆ.

ಪಾರಂಪರಿಕ ತಾಣ ಮಾಡಿ
ಈ ಭಾಗದಲ್ಲಿ ಅಕ್ವೇರಿಯಂಗಳಲ್ಲಿಡಬಹುದಾದ 40ಕ್ಕೂ ಅಧಿಕ ವಿಧದ ವರ್ಣಮಯವಾದ ಮೀನುಗಳಿವೆ. ಶಾರ್ಕ್, ತಿಮಿಂಗಲ, ವಿವಿಧ ಬಗೆಯ ಹಾವು, ಮೀನುಗಳು, ಸುಂದರವಾದ ಚೇಳು ಮೀನು, ಸಮುದ್ರಸೌತೆ, ಬಣ್ಣ ಬಣ್ಣದ ಸೀಆಚರ್‌ನಗಳು, ಆಕ್ಟೋಪಸ್‌ಗಳು ದ್ವೀಪದ ಸುತ್ತಲಿನ ನೀರಿನಲ್ಲಿ ಕಾಣಸಿಗುತ್ತವೆ. ಅಂತೆಯೇ ಅಲ್ವಾ, ಪೆಡಿನಾ, ಸರಗಾಸಮ್, ಕಾಲರೆಪಾದಂಥ ಸಮುದ್ರ ಪಾಚಿಗಳು ದ್ವೀಪದಂಚಿನ ಬಂಡೆಗಳ ಮೇಲೆ ಬೆಳೆದಿವೆ. ಈ ಎಲ್ಲ ಕಾರಣಗಳಿಂದ ಈ ದ್ವೀಪಗಳನ್ನೆಲ್ಲ ಪಾರಂಪರಿಕ ತಾಣವನ್ನಾಗಿ ಮಾಡಿ ಎಂಬ ಕೂಗು ಪರಿಸರಪ್ರೇಮಿಗಳೆಲ್ಲರಿಂದ ಆಗಾಗ ಧ್ವನಿಸುತ್ತಲೇ ಇರುತ್ತದೆ. ಸೇಂಟ್‌ಮೇರಿಸ್ ದ್ವೀಪ, ಕೂರ್ಮಗಡಗಳಿಗೆ ಪ್ರವಾಸಿಗರು ಸುಲಭವಾಗಿ ಭೇಟಿ ನೀಡಬಹುದಾದರೂ ನೇತ್ರಾಣಿ ಮತ್ತು ಅಂಜುದ್ವೀಪಗಳಿಗೆ ಹೋಗಬೇಕಾದರೆ ಸರ್ಕಾರದ ಅನುಮತಿ ಪಡೆಯಲೇಬೇಕು. ಅದೇನೆ ಇರಲಿ, ಸದ್ಯಕ್ಕಂತೂ ಈ ಎಲ್ಲ ಕರಾವಳಿಯ ದ್ವೀಪಗಳು ಮಾಲಿನ್ಯಮುಕ್ತವಾಗಿವೆ.

- ಪ್ರೊ. ಶಿವಾನಂದ ಎಸ್. ಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ