ಒಬ್ಬನ ಯಶೋಗಾಥೆ ಹಲವರಿಗೆ ಮಾದರಿಯಾಗಬಲ್ಲದು ಎಂಬುದಕ್ಕೆ ಇದೊಂದು ತಾಜಾ ನಿದರ್ಶನ.
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಲೋಕಿಕೆರೆಯ ಹರೀಶ್ ಹೈನುಗಾರಿಕೆ ಕೈಗೊಂಡು ಗ್ರಾಮಸ್ಥರಿಗೆ ಮಾದರಿಯಾಗಿದ್ದಾನೆ. ಆತನಿಗೆ ಕಾಲೇಜು ಓದು ತಲೆಗೆ ಹತ್ತಲಿಲ್ಲ. ಸಮಯ ವ್ಯರ್ಥ ಮಾಡಬಾರದೆಂದು ಮನೆಗೆ ಮರಳಿದವನಿಗೆ ಸ್ವ- ಉದ್ಯೋಗ ಮಾಡುವ ಕನಸು ಹುಟ್ಟಿತು.
ಆತನೊಂದಿಗೆ ಗ್ರಾಮದ ಕೆಂಚಪ್ಪ ಮತ್ತು ಹೇಮಂತರಾಜ್ ಕೈಜೋಡಿಸಿದರು. ಈ ಯುವಕರು ಜರ್ಸಿ ಹಸು ಸಾಕಲು ಮುಂದಾದರು. ಹೀಗೆ ಸಣ್ಣದಾಗಿ ಪ್ರಾರಂಭಿಸಿದ ಹೈನುಗಾರಿಕೆಯಿಂದ ಈ ಹುಡುಗನ ಬದುಕು ಹಸನಾಯಿತು. ಹರೀಶ್‌ನ ಹೈನುಗಾರಿಕೆ ಕಂಡು ಗ್ರಾಮದ ಹಲವರು ಹಸು ಸಾಕಣೆ ಕೈಗೊಂಡಿದ್ದಾರೆ. ಗ್ರಾಮದಲ್ಲೇ ಒಂದು 'ಹಾಲು ಉತ್ಪಾದಕರ ಸಹಕಾರ ಸಂಘ' ಹುಟ್ಟಿಕೊಂಡಿದೆ.
ರೋಚಕ ಹಾದಿ
ಹರೀಶನ ಹೈನು ಕೃಷಿ ಸಾಗಿ ಬಂದ ಹಾದಿ ರೋಚಕ. ಅದು 2008- 09ರ ದಿನಗಳು. ಪಿಯುಸಿಗೆ ಓದು ನಿಲ್ಲಿಸಿ ಮನೆಗೆ ಬಂದ ಹರೀಶ್ ಹೈನುಗಾರಿಕೆ ಮಾಡಿ ಸಫಲತೆ ಕಂಡವರ ಯಶೋಗಾಥೆ ಓದಿ ಪ್ರೇರಿತನಾದ. ಆದರೆ, ಎಚ್‌ಎಫ್ ತಳಿಯ ಹಸು ಸಾಕುವಷ್ಟು ಶಕ್ತಿ ಇರಲಿಲ್ಲ. ಬ್ಯಾಂಕ್ ಸಾಲ ನೀಡುವಾಗ ವಿಧಿಸುವ ನಿಬಂಧನೆಗಳಿಗೆ ಇವನ ಒಪ್ಪಿಗೆ ಇರಲಿಲ್ಲ. ಅಲ್ಲದೆ, ಇಂಥ ಹಸುಗಳ ಆರೈಕೆ, ಈ ವಾತಾವರಣಕ್ಕೆ ಒಗ್ಗಿಕೊಳ್ಳದೆ ಸಾಯುವ, ಬೆಂಬಿಡದೆ ಬಾಧಿಸುವ ರೋಗಗಳಿಂದ ಇದು ಕಷ್ಟಸಾಧ್ಯವೆಂದು ನಿರ್ಧರಿಸಿದ. ಕ್ರಾಸಿಂಗ್ ಮಾಡಿಸಿ, ನಂತರ ಜರ್ಸಿ, ಎಚ್‌ಎಫ್ ತಳಿಯ ಹಸು ಸಾಕಲು ಮುಂದಾದ.
200 ಲೀಟರ್ ಹಾಲು
ಮೊದಲೇ ನಾಟಿ ತಳಿ ಹಸುಗಳ ಬೀಡಾಗಿದ್ದ ಇವರ ಮನೆಯಲ್ಲಿಯ ಒಂದು ಹಸುಗೆ ಕ್ರಾಸಿಂಗ್ (ಕೃತಕ ಗರ್ಭಧಾರಣೆ) ಮಾಡಿಸಿದ. ಒಂದೆರಡು ವರ್ಷಗಳಲ್ಲಿ ಅದರ ಸಂತತಿ ವೃದ್ಧಿಸಿತು. ಜವಾರಿ ತಳಿ ಜತೆ ಐದಾರು ಜರ್ಸಿ, ಎಚ್‌ಎಫ್ ತಳಿಯ ಆಕಳುಗಳು ಸೇರಿದವು. ಜತೆಗೆ ಹೈನುಗಾರಿಕೆ ಲಾಭದಾಯಕವಾಯಿತು. ಹಾಲನ್ನು ಐದಾರು ಕಿ.ಮೀ. ದೂರದ ಹೊಸಹಳ್ಳಿಯ 'ಹಾಲು ಉತ್ಪಾದಕರ ಸಹಕಾರ ಸಂಘ'ಕ್ಕೆ ಹಾಕುತ್ತಾ ಬಂದನು. ಹರೀಶನ ಈ ಯಶೋಗಾಥೆ ಇತರೆ ಹಳ್ಳಿ ಮಂದಿಗೂ ಸ್ಫೂರ್ತಿ ತುಂಬಿತು. ಫಲವಾಗಿ ಇಂದು ಪುಟ್ಟ ಗ್ರಾಮದಲ್ಲಿ ಇನ್ನೂರು ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ.
ರೋಗ ನಿರೋಧಕ ಶಕ್ತಿ
ಹರೀಶ್ ಮೇವಿಗೆ ಪರದಾಡುವುದಿಲ್ಲ. ಹೊಲದ ಒಂದೆಡೆ ಅಲ್ಪ ಜಾಗದಲ್ಲಿ ಬೆಳೆಸಿದ ನೇಪಿಯಾರ್ ತಳಿಯ ಹುಲ್ಲನ್ನು ನಿಯಮಿತವಾಗಿ ನೀಡುತ್ತಾರೆ. ಇವುಗಳಲ್ಲಿ ರೋಗ ನಿರೋಧಕ ಶಕ್ತಿ ನಿಸರ್ಗದತ್ತವಾಗಿಯೇ ಬಂದಿರುವುದರಿಂದ ರೋಗಗಳು ವಿರಳ. ಇನ್ನು ಆಗೊಮ್ಮೆ- ಈಗೊಮ್ಮೆ ಇಣುಕುವ ಕಾಲುಬಾಯಿ, ಕೆಚ್ಚಲು ಬಾವು ಇತ್ಯಾದಿ ರೋಗಗಳಿಗೆ ಮುಂಜಾಗ್ರತೆ ಅನುಸರಿಸುತ್ತಾನೆ. ನಿತ್ಯ 20 ಲೀಟರ್‌ವರೆಗೆ ಹಾಲು ಉತ್ಪಾದನೆಯಾಗುತ್ತಿದೆ. ಸಂಪರ್ಕಕ್ಕೆ ಮೊ. 9743906134
ನಾಲ್ಕೈದು ವರ್ಷದ ಹಿಂದೆ ಹರೀಶ್ ಸೇರಿದಂತೆ ಕೆಂಚಪ್ಪ ಮತ್ತು ಹೇಮಂತರಾಜ್ ಸಣ್ಣದಾಗಿ ಪ್ರಾರಂಭಿಸಿದ ಹೈನು ಸಾಕಣೆ ಇಂದು ಬಲವಾಗಿ ಬೇರೂರುತ್ತಿದೆ. ಊರಿನಲ್ಲಿ ಹೈನೋದ್ಯಮ ಹೆಮ್ಮರವಾಗುತ್ತಿರುವುದಕ್ಕೆ, ಹಾಲು ಉತ್ಪಾದಕರ ಸಹಕಾರ ಸಂಘ ಹುಟ್ಟಲಿಕ್ಕೆ ಅಂದು ಇವರು ಇಟ್ಟ ದಿಟ್ಟ ಹೆಜ್ಜೆಯೇ ಕಾರಣ.
-ವೆಂಕಟೇಶ್‌ರೆಡ್ಡಿ, ಕಾರ್ಯದರ್ಶಿ, ಹಾಲು ಉತ್ಪಾದಕರ ಸಹಕಾರ ಸಂಘ, ಲೋಕಿಕೆರೆ
- ಸ್ವರೂಪಾನಂದ. ಎಂ. ಕೊಟ್ಟೂರು