ಕೃಷಿ-ಪರಿಸರ

ಬಟಾಟೆ ಭರಾಟೆ

ಕರಾವಳಿಯಲ್ಲಿನ ಕೃಷಿ ಎಂದರೆ ನೆನಪಿಗೆ ಬರುವುದು ಇಲ್ಲಿನ ತೆಂಗು- ಅಡಕೆ ತೋಟ, ಬತ್ತದ ಗದ್ದೆಗಳು, ತೊಂಡೆ, ಬೆಂಡೆ, ಹಾಗಲು, ಹೀರೆ, ಸೌತೆ, ಬದನೆಯಂಥ ತರಕಾರಿಗಳು. ಆದರೆ, ಇದಕ್ಕೆಲ್ಲ ಅಪವಾದವೆನಿಸುವಂತೆ ಬಯಲುಸೀಮೆಯಲ್ಲಿ ಬೆಳೆಯುವ ಬಟಾಟೆ ಬೆಳೆದು ಯಶಸ್ಸು ಕಂಡರೆ ಅದು ನಿಜಕ್ಕೂ ಅಚ್ಚರಿಯಲ್ಲವೇ?
ಹೌದು, ಬೆಂಗಳೂರಿನ ಕಾಸ್ಮೆಟಿಕ್ ಕಂಪನಿಯಲ್ಲಿ ಸಹಾಯಕ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತ, ಜತೆಗೆ ಹುಟ್ಟೂರಾದ ಕಾರವಾರದ ಮಾಜಾಳಿಯ ಸಮೀಪದ ನಿವಾಸಿ ಪ್ರಶಾಂತ ಸಾಳುಂಕೆ ಈ ಯಶಸ್ವಿ ಪ್ರಯತ್ನ ನಡೆಸಿದ ಯುವಕ.
ಗೆಳೆಯನ ಪ್ರೇರಣೆ
ಇವರ ಗೆಳೆಯ ಬೆಂಗಳೂರಿನ ಸಮೀಪದವರು. ಅವರು ತಮಗಿರುವ ಜಮೀನನ್ನು ಸಮರ್ಪಕವಾಗಿ ಬಳಸಿ ಉತ್ತಮ ಆದಾಯ ಪಡೆಯುವುದನ್ನು ತಿಳಿದು, ಊರಲ್ಲಿರುವ ಪಾಳುಬಿದ್ದ ಭೂಮಿಯನ್ನು ಯಾಕೆ ಉಪಯೋಗಿಸಬಾರದು ಎಂದು ಯೋಚಿಸಿದರು. ಅದರಂತೆ ತಮ್ಮ ಗೆಳೆಯರೊಂದಿಗೆ ಚರ್ಚಿಸಿ ಹೊಸ ಪ್ರಯೋಗಕ್ಕೆ ಮುಂದಾಗಿ ಬಟಾಟೆ ನೆಡುವ ನಿರ್ಧಾರಕ್ಕೆ ಬಂದರು. ತಮ್ಮ ಗೆಳೆಯರ ಸಲಹೆ ಮತ್ತು ಮಾಹಿತಿ ಪಡೆದು ಬಟಾಟೆ ಬೆಳೆಯುವ ಪ್ರದೇಶಕ್ಕೆ ಭೇಟಿ ಕೊಟ್ಟು ಅಧಿಕ ತೇವಾಂಶವಿರುವ ಪ್ರದೇಶದಲ್ಲೂ ಬೆಳೆಯಬಹುದಾದ ಎಫ್‌ಕೆ ಎಂಬ ತಳಿಯ 150 ಕೆ.ಜಿ. ಬಟಾಟೆ ತಂದರು.
ಕೃಷಿ ಮಾಡಿದ್ದು ಹೀಗೆ...
ಗೋವಾಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಮಾಜಾಳಿ ಗ್ರಾಮದ ಮೂಡಗೇರಿ ಬಳಿಯ ಗಿಡ- ಗಂಟಿ, ಕಸಗಳಿಂದ ತುಂಬಿದ್ದ ತಮ್ಮ ಒಂದೂವರೆ ಎಕರೆ ಭೂಮಿಯನ್ನು ಇವರು ಹದಗೊಳಿಸಿದರು. 2 ಅಡಿ ಅಗಲ ಮತ್ತು 40 ಅಡಿ ಉದ್ದದ 100 ಮಡಿ ಮಾಡಿ ಅದಕ್ಕೆ ಕೋಳಿ ಪಿಟ್ಟಿ ಮತ್ತು ಕುರಿಹಿಕ್ಕೆ ಹಾಕಿ ಭೂಮಿಯನ್ನು ಫಲವತ್ತು ಮಾಡಿದರು. ನಂತರ 1 ಅಡಿ ಅಂತರದಲ್ಲಿ ಬಟಾಟೆಯನ್ನು ನೆಲದೊಳಗಿಟ್ಟು ಮುಚ್ಚಿ, ಮೂರು ದಿನಕ್ಕೊಮ್ಮೆ ನೀರು ದೊರೆಯುವಂತೆ ಹನಿ ನೀರಾವರಿ ಪೈಪ್ ಅಳವಡಿಸಿದ್ದಾರೆ. ಆದರೆ, ಗಿಡ ನೆಟ್ಟು ಒಂದೂವರೆ ತಿಂಗಳಿನಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದ್ದು, ನಂತರ ಅದನ್ನು ರಾಸಾಯನಿಕಗಳ ಸಿಂಪಡಣೆಯಿಂದ ತಕ್ಕಮಟ್ಟಿಗೆ ಹತೋಟಿಗೆ ತರಲಾಗಿತ್ತು. ಹೀಗೆ ಬಟಾಟೆ ಗಿಡ ರೋಗಕ್ಕೆ ತುತ್ತಾಗಿದ್ದನ್ನು ಕಂಡು ತಕ್ಷಣ ಕಾರ್ಯಪ್ರವೃತ್ತರಾದ ಸಾಳುಂಕೆ 7 ಅಡಿ ಅಂತರದಲ್ಲಿ ಹೈಬ್ರಿಡ್ ಪಪ್ಪಾಯಿ ನೆಟ್ಟರು. ಈಗ ಪಪ್ಪಾಯಿ ಗಿಡ ಹುಲುಸಾಗಿ ಬೆಳೆದಿದೆ.
ಇಳುವರಿ
ಇವರು ನಿರೀಕ್ಷಿಸಿದ ಮಟ್ಟದಲ್ಲಿ ಇಳುವರಿ ಬರದಿದ್ದರೂ ಬಂಡವಾಳದ ಹಣಕ್ಕೆ ಮೋಸವಾಗಿಲ್ಲವಂತೆ. ಸುಮಾರು 2.5 ಟನ್ ಇಳುವರಿ ಬಂದಿದ್ದು, ಕ್ವಿಂಟಲ್‌ಗೆ ರು. 700 ಬೆಲೆ ದೊರೆತಿದೆಯಂತೆ. ಮುಂದೆ ಇದೇ ಜಾಗದಲ್ಲಿ ಬೆಳೆಯುತ್ತಿರುವ ಪಪ್ಪಾಯಿ ಗಿಡದಿಂದ ಉತ್ತಮ ಆದಾಯ ಬರಬಹುದೆಂಬ ನಿರೀಕ್ಷೆ ಇವರದ್ದಾಗಿದೆ.
ಪ್ರಶಾಂತ್ ಹೇಳುವಂತೆ ಸ್ವಂತ ತಾವೇ ನಿಂತು ಕೃಷಿ ಮಾಡಿಸಿದರೆ ಬಟಾಟೆ ಕೃಷಿಯಲ್ಲಿ ಅಧಿಕ ಇಳುವರಿ, ಹೆಚ್ಚು ಲಾಭ ದೊರೆಯುತ್ತಿತ್ತು ಎಂಬುದು ಇವರ ಅಭಿಪ್ರಾಯ. ಬೆಂಗಳೂರಲ್ಲಿ ತಮ್ಮ ಕೆಲಸದ ಒತ್ತಡ ಜಾಸ್ತಿ ಇದ್ದುದರಿಂದ ಕಾರ್ಮಿಕರ ಮೇಲೆ ಹೆಚ್ಚಿನ ಜವಾಬ್ದಾರಿ ಹೊರಿಸಿದೆ. ಆದರೆ, ಅವರಿಗೆ ಈ ಕೃಷಿಯಲ್ಲಿ ಅನುಭವದ ಕೊರತೆ ಸ್ವಲ್ಪ ಮಟ್ಟಿಗೆ ಇಳುವರಿಯ ಮೇಲೆ ಪರಿಣಾಮ ಬೀರಿತು. ಆದ್ದರಿಂದ ಮುಂದಿನ ದಿನಗಳಲ್ಲಿ ತಾವೇ ಖುದ್ದಾಗಿ ನಿಂತು ಕೃಷಿ ಚಟುವಟಿಕೆಯಲ್ಲಿ ತೊಡಗಿ ಹೆಚ್ಚಿನ ಕಾಳಜಿ ವಹಿಸುತ್ತೇನೆಂಬ ಇಂಗಿತ ಇವರದ್ದಾಗಿದೆ.

= ಪ್ರೊ. ಶಿವಾನಂದ ಎಸ್ ಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ನನ್ನ ಕನಸು ನೀವೇ ಸರ್‌; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ