ಕೃಷಿ-ಪರಿಸರ

ಹಂದಿ ಬಂಧಿ

ಮನಸ್ಸು ಮಾಡಿದರೆ ಯಾರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳ ಕೆಲಸವೇ ಸಾಕ್ಷಿ.
ಅದು 2005ರ ಸಮಯ. ಆ ವರ್ಷದ ಸೆಪ್ಟೆಂಬರ್ 5ರಂದು, ಆಗ ಪರಪ್ಪನ ಅಗ್ರಹಾರ ಕಾರಾಗೃಹದ ಜೈಲರ್ ಆಗಿದ್ದ ಓಬಳೇಶಪ್ಪ ಕಾಳಜಿಯಿಂದ ಯಾಕರ್ ತಳಿಯ 5 ಹಂದಿ ಮರಿ ತರಿಸಿದರು. ಅವುಗಳನ್ನು ನೋಡಿಕೊಳ್ಳಲು ಪ್ರಾಣಿಗಳ ಬಗೆಗೆ ಆಸಕ್ತಿ ಹೊಂದಿರುವ ಮೂರು ಕೈದಿಗಳನ್ನು ನೇಮಿಸಲಾಯಿತು. ಜೈಲಿನ ಆವರಣದಲ್ಲಿದ್ದ ಕೆರೆಯ ಭಾಗದಲ್ಲಿ 'ವರಾಹ ಸಾಕಾಣಿಕಾ ಕೇಂದ್ರ' ಸ್ಥಾಪಿಸಲಾಯಿತು. ಹೀಗೆ ಕೇವಲ 5 ಮರಿಗಳಿಂದ ಆರಂಭವಾದ ಹಂದಿಗಳ ಸಂಖ್ಯೆ ಇಂದು ನೂರರ ಗಡಿ ದಾಟಿದೆ.
4 ಬಾರಿ ಮರಿ ಹಾಕುತ್ತೆ
ಅತ್ಯಂತ ಲಾಭದಾಯಕವೆನಿಸಿರುವ ಹಂದಿ ಸಾಕಾಣೆ ಕಡಿಮೆ ಅವಧಿಯಲ್ಲಿ ಉತ್ತಮ ಆದಾಯ ತಂದುಕೊಡುವ ಕಸುಬು. ವರ್ಷದಲ್ಲಿ 4 ಬಾರಿ ಮರಿ ಹಾಕುವ ಸಾಮರ್ಥ್ಯವುಳ್ಳ ಹಂದಿ ಸಾಕಣೆ ಲಾಭದಾಯಕ ಉದ್ಯೋಗ. ಕಡಿಮೆ ಶ್ರಮ, ಖರ್ಚಿನ ಬಾಬತ್ತಾಗಿದೆ.
ಆಹಾರ ಕ್ರಮ ಹೇಗೆ?
ಜೈಲಿನಲ್ಲಿ ತಿಂದುಂಡು ಉಳಿದ ಆಹಾರವು ಹಂದಿಗಳ ಹಸಿವಿನ ಕೊರತೆ ನೀಗಿಸುತ್ತದೆ. ಬೇಕಾದಲ್ಲಿ ಹೋಟೆಲ್ಲುಗಳ ಟೀ, ಕಾಫಿ ಪುಡಿಯ ಗಷ್ಟ, ಅಳಿದುಳಿದ ಅನ್ನ- ಸಾಂಬಾರ ತಂದು ಹಾಕುತ್ತಾರೆ. ಇದನ್ನು ಹಂದಿಗಳು ಚಪ್ಪರಿಸಿ ತಿನ್ನುತ್ತವೆ. ಜತೆಗೆ ಹಿಂಡಿ, ಬೂಸ ಕೊಡಲಾಗುತ್ತದೆ.
ಆಗತಾನೆ ಹಾಲು ಬಿಡಿಸಿದ ಮರಿಗಳಿಗೆ ಮಾತ್ರ ಮುಸುಕಿನ ಜೋಳದ ಹಸಿರು ಹುಲ್ಲು ಕಡ್ಡಿ, ಸೀಮೆ ಹುಲ್ಲು ಬೇಕು. ತಾಯಿ ಹಂದಿಯ ದೇಹ ಮತ್ತು ಅದರ ಸದೃಢತೆಯ ಆಧಾರದ ಮೇಲೆ ಮರಿಗಳು ಹಾಲು ಕುಡಿಯುವುದನ್ನು ಬಿಡಿಸಲಾಗುತ್ತದೆ. ಅಂದರೆ, ಇದನ್ನು ತಾಯಿ ಹಂದಿಯು ಎಷ್ಟು ಪುಷ್ಟಿಯಿಂದಿದೆ ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ.
ಔಷಧೋಪಚಾರ
ಸಾಮಾನ್ಯವಾಗಿ ಹಂದಿಗಳಲ್ಲಿ ಅವು ಹುಟ್ಟಿದ ಸಂದರ್ಭ, ಸಣ್ಣ ಮರಿಗಳಿದ್ದಾಗ ಸೂಕ್ತ ಔಷಧೋಪಚಾರ ಮಾಡಬೇಕು. ಇದರಿಂದ ಮತ್ತೆ ಅವು ಕಾಯಿಲೆ ಬೀಳದಂತೆ ತಡೆಯಬಹುದು. ಅಲ್ಲದೆ, ಚಿಕಿತ್ಸಾ ವೆಚ್ಚವೂ ಉಳಿಯುತ್ತದೆ ಮತ್ತು ಶ್ರಮ, ನಷ್ಟವೂ ತಪ್ಪುತ್ತದೆ ಎನ್ನುತ್ತಾರೆ ಕೈದಿ ತುಮಕೂರಿನ ವೆಂಕಟೇಶ್.
ಇನ್ನು ಔಷಧೋಪಚಾರದ ವಿಚಾರಕ್ಕೆ ಬಂದರೆ, ಮರಿಗಳು ಜನಿಸಿದ ತಕ್ಷಣವೇ ಅಂದರೆ ಹುಟ್ಟಿದ 21ನೇ ದಿನಕ್ಕೆ ಜಂತುಹುಳು ನಿವಾರಕ ಆಲ್ಬೆಂಡೋಜೆಲ್ ನೀಡಬೇಕು. ಜತೆಗೆ ಆಸ್ಟೋವೆಟ್ ಟಾನಿಕ್ ಕುಡಿಸಬೇಕು. ಹಂದಿಗಳನ್ನು ಹೆಚ್ಚು ಕಾಡುವ ಸಮಸ್ಯೆ ಎಂದರೆ ಜ್ವರ. ಪಶು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ನೀಡಬೇಕು. ಇನ್ನುಳಿದಂತೆ ಎಲ್ಲ ಚಿಕಿತ್ಸೆಯು ನಮ್ಮದೇ ಅನುಭವದ ಮೇಲೆ ಕೊಡುತ್ತೇವೆ ಎನ್ನುತ್ತಾರೆ ಸಾಕಾಣೆ ಜವಾಬ್ದಾರಿಯ ಪಾಲು ಹೊತ್ತ ವೃದ್ಧ ಕೈದಿ ವೆಂಕಟೇಗೌಡ.
ನಿತ್ಯ ಸ್ವಚ್ಛತೆ ಅಗತ್ಯ
ಹಂದಿ ಸಾಕಾಣಿಕೆಯಲ್ಲಿ ಸ್ವಚ್ಛತೆ ಅತ್ಯಂತ ಮುಖ್ಯ. ಹಂದಿಗಳು ಸಾಮಾನ್ಯವಾಗಿ ಕೊಳೆಯಲ್ಲಿ ಬಿದ್ದು ಒದ್ದಾಡುವ ಸ್ವಭಾವ. ಆದ್ದರಿಂದ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹಂದಿ ಮತ್ತು ಗೂಡನ್ನು ನೀರಿನಿಂದ ತೊಳೆಯಬೇಕು. ಇದನ್ನು ಚಾಚೂ ತಪ್ಪದೆ ನಡೆಸಬೇಕು. ಅಂದಾಗ ಮಾತ್ರ ಹಂದಿಗಳ ಆರೋಗ್ಯ ಚೆನ್ನಾಗಿರುತ್ತದೆ.
ಉತ್ತಮ ಗೊಬ್ಬರ ಸಿಗುತ್ತೆ
ಹಂದಿಗಳ ಮಲ- ಮೂತ್ರ ಉತ್ತಮ ಗೊಬ್ಬರ. ಅಲ್ಲದೆ, ಪೌಷ್ಟಿಕಾಂಶಗಳ ಆಗರ. ಅದಕ್ಕೆ ಭಾರಿ ಬೇಡಿಕೆ. ಆದರೆ, ಜೈಲು ಸರ್ಕಾರದ ಅಧೀನ ಸಂಸ್ಥೆಯಾದ ಕಾರಣ, ಎಲ್ಲವೂ ಟೆಂಡರ್ ಆಧರಿಸಿರುವ ಕಾರಣಕ್ಕೆ ಆ ಗೊಬ್ಬರದ ಸಂಗ್ರಹ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅದನ್ನು ಜೈಲಿನ ಆವರಣದ ತೋಟಕ್ಕೆ ಬಳಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಹಂದಿಗೂಡು ಮತ್ತು ತೋಟದ ಉಸ್ತುವಾರಿ ಹೊತ್ತಿರುವ ಜೈಲಿನ ವಾರ್ಡನ್ ಸಂಗಮನಾಥ ಬಾಳಿಗಟ್ಟಿ. <

ಎಷ್ಟು ಆದಾಯ?
ಹಂದಿ ಸಾಕಣೆಯಿಂದ ವರ್ಷಕ್ಕೆ ಏನಿಲ್ಲವೆಂದರೂ 3ರಿಂದ 4 ಸಲ ಕೊಟೇಷನ್ ಪಡೆದು ಹರಾಜು ಪ್ರಕ್ರಿಯೆ ನಡೆಯುತ್ತದೆ. ಆ ಮೂಲಕ ಲಕ್ಷಗಟ್ಟಲೆ ಆದಾಯ ಸಿಗುತ್ತಿದೆ. ಇದಕ್ಕೆ ಕಾರಣರಾದವರು ಹಂದಿ ಸಾಕಣೆ ಹೊಣೆ ಹೊತ್ತ ಕೈದಿಗಳಾದ ಶ್ರೀನಿವಾಸ್, ವೆಂಕಟೇಶ್, ವೆಂಕಟೇಗೌಡ ಮತ್ತಿತರ ಕೈದಿಗಳು ಹಾಗೂ ಜೈಲಿನ ಸಹಾಯಕ ಅಧೀಕ್ಷಕ ಐ.ಎಸ್. ಸೀಮಿಮಠ್ ಮತ್ತಿತರೆ ಅಧಿಕಾರಿಗಳ ಶ್ರಮವಿದೆ.

ಇಲಾಖೆಯ ಎಡಿಜಿಪಿ ಕೆ.ವಿ. ಗಗನ್‌ದೀಪ್ ಸಾಹೇಬರ ಸಲಹೆ ಮೇರೆಗೆ ಕೈದಿಗಳಿಗೆ ಉತ್ತಮ ಜೀವನ ಕೌಶಲ್ಯ ಕಲಿಸಿಕೊಡುವ ಕೆಲಸವಾಗಿ ಹಲವು ತರಬೇತಿ ಹಮ್ಮಿಕೊಳ್ಳುತ್ತಿದ್ದೇವೆ. ಅದರಲ್ಲಿ ಈ ಹಂದಿ ಸಾಕಾಣೆಯೂ ಒಂದು. ಇದರಿಂದ ಕೈದಿಗಳು ಶಿಕ್ಷೆಯಿಂದ ಮುಕ್ತರಾಗಿ ಹೊರಹೋದ ಮೇಲೆ ಮತ್ತೆ ಜೀವನ ರೂಪಿಸಿಕೊಳ್ಳಲೆಂಬ ಉದ್ದೇಶದಿಂದ ಇಂಥ ಜೀವನ್ಮುಖಿ ಕಸುಬು ರೂಪಿಸಲಾಗಿದೆ. ಇದು ಅವರಿಗಷ್ಟೇ ಅಲ್ಲದೆ ಇಲಾಖೆಗೂ ಲಾಭದಾಯಕ.
= ಎಚ್.ವಿ. ವೀರೇಂದ್ರ ಸಿಂಹ, ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ

ಮೊದಲಿಂದ್ಲೂ ಹಂದಿ ಸಾಕೋದ್ರ ಬಗ್ಗೆ ಅನುಭವ ಇರ್ಲಿಲ್ಲ. ಜೈಲಿಗೆ ಬಂದಾಗ ಅಧಿಕಾರಿಗಳು ನನ್ನ ತೋಟದ ಕೃಷಿ, ಹಸು ಸಾಕಣೆ ಬಗೆಗಿನ ಆಸಕ್ತಿ ನೋಡಿ, ಇಲ್ಲಿಗೆ ಹಾಕಿದ್ರು. ಮೊದಮೊದ್ಲು ನನಗೆ ತೋಚಿದಂಗೆ, ಡಾಕ್ಟ್ರು ಹೇಳ್ದಂಗೆ ಹಂದಿ ಉಪಚಾರ ಮಾಡ್ತಿದ್ದೆ. ಅಮೇಲಾಮೇಲೆ ಹಂದಿ ಸಾಕಾಣಿಕೆಯ ಗುಟ್ಟು ತಿಳೀತಾ ಹೋಯ್ತು.
= ಶ್ರೀನಿವಾಸ್, ಕೈದಿ


=  ರೇಷ್ಮಾ ಎಚ್. ಸಿ. ಗೌಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

3rd T20I: ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, ವಿಂಡೀಸ್ ಗೆ ಗೆಲ್ಲಲು 224 ರನ್ ಗುರಿ ನೀಡಿದ ಭಾರತ