ಉ.ಕ. ಜಿಲ್ಲೆಯ ಯಲ್ಲಾಪುರ, ಶಿರಸಿ, ಸಿದ್ದಾಪುರ ತಾಲೂಕಿನ ಹಲವು ಕಡೆಗಳಲ್ಲಿ ಕಪ್ಪು ಮುಳ್ಳೇ ಹಣ್ಣಿನ ಗಿಡಗಳಿವೆ. ಗಿಡದ ತುಂಬಾ ಈಗ ಹಣ್ಣುಗಳೇ ತುಂಬಿಕೊಂಡು ರಾರಾಜಿಸುತ್ತಿವೆ. ಅವುಗಳನ್ನು ಕೊಯ್ದು, ತಿನ್ನುವವರು ಮಾತ್ರ ವಿರಳ.
ಮೊದಲೆಲ್ಲಾ ಮಕ್ಕಳಿಗೆ ಶಾಲೆ ಬಿಡುವುದೇ ತಡ, ಬೆಟ್ಟ- ಬೇಣಗಳನ್ನು ಸುತ್ತಿರುಗಿ ಮುಳ್ಳೇ ಹಣ್ಣಿನ ಮಟ್ಟಿ ಹುಡುಕಿ, ಸಿಕ್ಕಷ್ಟು ಹಣ್ಣು ಕೊಯ್ದು, ತಿನ್ನುತ್ತಾ ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಎಷ್ಟೋ ಬಾರಿ ಕೊಯ್ದುಕೊಂಡು ಮುಳ್ಳೇ ಹಣ್ಣು ಕಿಸೆಯಲ್ಲಿ ಇಟ್ಟುಕೊಂಡು ಮರುದಿನ ಶಾಲೆಗೆ ಬರುವಾಗ ಸವಿಯುವುದೂ ಇತ್ತು. ಆಗಿನ ಮಕ್ಕಳಿಗೆ ಕಾಡಿನ ಹಣ್ಣಿನ ಪರಿಚಯ ಚೆನ್ನಾಗಿಯೇ ಇತ್ತು. ಜತೆಗೆ ಹಣ್ಣಿನ ಸೀಜನ್ನಿನಲ್ಲಿ ಆ ಹಣ್ಣುಗಳನ್ನು ಮಕ್ಕಳು ಸ್ವತಂತ್ರವಾಗಿಯೇ ಕೊಯ್ದು ತಿನ್ನುವ ಕೌಶಲ್ಯ, ಚಾಣಾಕ್ಷತನವಿತ್ತು. ಒಮ್ಮೆ ಮುಳ್ಳೇ ಹಣ್ಣಿನ ರುಚಿ ನೋಡಿದವರು, ಮುಂದಿನ ವರುಷದ ಆ ಹಣ್ಣಿನ ಸೀಜನ್ ಅನ್ನು ಎದುರು ನೋಡುತ್ತಿದ್ದರು. ಅಷ್ಟರ ಮಟ್ಟಿಗೆ ಅದರ ರುಚಿ ಸೆಳೆತ ಇರುತ್ತೆ.
ಬದಲಾದ ಪರಿಸ್ಥಿತಿ
ಈಗ ಪರಿಸ್ಥಿತಿ ಬದಲಾಗಿದೆ. ಆಧುನಿಕತೆಯ ಗಂಧ- ಗಾಳಿಯಲ್ಲಿ ಮಕ್ಕಳು ಬೆಳೆಯುತ್ತಿದ್ದಾರೆ. ಅಲ್ಲದೆ, ಬಹುತೇಕ ಮಕ್ಕಳನ್ನು ಪಾಲಕರು ವಾಹನದ ಮೂಲಕವೇ ಕರೆದುಕೊಂಡು ಹೋಗುವುದರಿಂದ ಬೆಟ್ಟ- ಬೇಣ ಸುತ್ತಿರುಗಿ ಮನೆ ಸೇರುವ ಪರಿಪಾಠವೇ ಇಲ್ಲ. ಹೀಗಾಗಿ, ಗ್ರಾಮೀಣ ಪ್ರದೇಶದ ಮಕ್ಕಳಿಗೂ ಕಾಡಿನಲ್ಲಿ ಸಿಗುವ ಹಣ್ಣುಗಳ ಪರಿಚಯವೇ ಇಲ್ಲದಂತಾಗಿದೆ. ಬೆಟ್ಟ- ಬೇಣಗಳಲ್ಲಿ ಹೇರಳವಾಗಿ ಬೆಳೆಯುವ ಮುಳ್ಳೇ ಹಣ್ಣಿನಂತಹ ಹಣ್ಣುಗಳು ಗಿಡದಲ್ಲಿಯೇ ಅಸ್ತಿತ್ವ ಕಳೆದುಕೊಳ್ಳುತ್ತಿವೆ.
ಏನಿದು ಮುಳ್ಳೇ ಹಣ್ಣು?
ಇದು ಬೆಟ್ಟ- ಬೇಣಗಳಲ್ಲಿ ಬೆಳೆಯುವ ಬಳ್ಳಿ ರೂಪದ ಸಸ್ಯ. ಇದಕ್ಕೆ ಹೇರಳವಾಗಿ ಮುಳ್ಳುಗಳು ಇರುತ್ತವೆ. ಪ್ರತಿ ದಂಟಿಗೂ ಪುಟ್ಟ ಪುಟ್ಟ ನೂರಾರು ಹಸಿರು ಕಾಯಿ ಬಿಡುತ್ತವೆ. ಅವು ಹಣ್ಣಾದಾಗ ಕಪ್ಪು ಬಣ್ಣ ಹೋಲುತ್ತವೆ. ಅದಕ್ಕೆ ಕರಿ ಮುಳ್ಳೇ ಹಣ್ಣು ಅಂಥಲೇ ಹಳ್ಳಿಯ ಜನರು ಕರೆಯುತ್ತಾರೆ. ತಿನ್ನಲು ಬಲು ರುಚಿ. ಸಾಮಾನ್ಯವಾಗಿ ಈ ಮುಳ್ಳೆ ಹಣ್ಣುಗಳು ಮಕರ ಸಂಕ್ರಾಂತಿಯ ಎಡ- ಬಲದಲ್ಲಿ ಹೇರಳವಾಗಿ ಬಿಡುತ್ತವೆ. ಯಲ್ಲಾಪುರ ತಾಲೂಕಿನ ಸೂರಿಮನೆ, ಹಾಸ್ಪುರ, ಕಾನಗೋಡ, ಬಿದ್ರಳ್ಳಿಗಳಲ್ಲಿ ವಿಪರೀತ ಮುಳ್ಳೇ ಹಣ್ಣಿನ ಗಿಡಗಳಿವೆ.ಢ
- ಗಣಪತಿ ಹಾಸ್ಪುರ