ಕೈತೋಟದ ಹೂವು- ಗಿಡಗಳ ಬುಡಕ್ಕೆ ನೀರು ಹಾಕಲು ತಂದ ಕಪ್ಪು ಬಣ್ಣದ ಪೈಪಿನ ತುಂಡುಗಳಿಂದ ಮನೆ ಮಂದಿಗೆ ಬೇಕಾದಷ್ಟು ಬಿಸಿ ಬಿಸಿ ನೀರನ್ನು ಬೇಸಿಗೆಯುದ್ದಕ್ಕೂ ಪಡೆಯುವುದರ ಮೂಲಕ ವಾಟರ್ ಹೀಟರ್‌ಗೆ ತೆರುವ ದುಬಾರಿ ಹಣವನ್ನು ಉಳಿಸುವ ಉಪಾಯ ಕಂಡುಕೊಂಡಿದ್ದಾರೆ ಬೆಳ್ತಂಗಡಿ ತಾಲೂಕಿನ ರೈತರೊಬ್ಬರು.
ಸೂರ್ಯನ ಬಿಸಿಲು ಬಳಸಿ ನೀರು ಕಾಯಿಸುವ ಇದು ಕೂಡ ಮಳೆಗಾಲದ ದಿನಗಳಲ್ಲಿ ವಾಟರ್ ಹೀಟರ್ ಹೇಗೆ ಫಲಕಾರಿಯಲ್ಲವೋ ಹಾಗೆಯೇ ಬಿಸಿನೀರು ಕೊಡುವುದಿಲ್ಲ. ಆದರೆ, ವರ್ಷದ ಎಂಟು ತಿಂಗಳು ನಿರಾಯಾಸವಾಗಿ ಸುಡುವ ನೀರು ಲಭಿಸುತ್ತದೆ. ಖಾಲಿ ಮಾಡಿದಷ್ಟೂ ಅರೆತಾಸಿನಲ್ಲಿ ಬಿಸಿಯಾಗುತ್ತದೆ.
ಬಳ್ಳಮಂಜದಲ್ಲಿರುವ ಮೂಡಕೆರೆ ವಿಶ್ವನಾಥ ಭಟ್ಟರು ಹೀಗೊಂದು ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಅವರ ಮನೆಯ ತಾರಸಿ ಮೇಲೆ ಇಡೀ ದಿನ ಬಿಸಿಲು ಬೀಳುತ್ತದೆ. ಸಿಂಟೆಕ್ಸ್ ನೀರಿನ ತೊಟ್ಟಿ ಅಲ್ಲಿದ್ದು, ಮನೆಗೆ ಬೇಕಾದ ನೀರು ಇಲ್ಲಿಂದ ಪೈಪುಗಳ ಮೂಲಕ ಸಾಗುತ್ತದೆ. ಹೀಗೆ ನೀರು ಹೊರಬರುವಲ್ಲಿ ಒಂದು ಅರ್ಧ ಇಂಚಿನ ಟಿ ಸೇರಿಸಿ ಅದರ ಮೂಲಕ ಅರ್ಧ ಇಂಚಿನ ಕಪ್ಪು ರಬ್ಬರ್ ಅಲ್ಕಥಿನ್ ಪೈಪಿನಲ್ಲಿ ನೀರು ಹರಿಯುವಂತೆ ಮಾಡಿದ್ದಾರೆ. ತಾರಸಿಯ ಮೇಲೆ ಸುಮಾರು ನೂರು ಮೀಟರ್ ಪೈಪ್ ಅನ್ನು ವೃತ್ತಾಕಾರವಾಗಿ ಹರಡಿದ್ದಾರೆ. ಕಪ್ಪು ಪೈಪ್ ತೆಳ್ಳಗಿದ್ದು, ಬಲು ಬೇಗನೆ ಬಿಸಿಯಾಗುತ್ತದೆ. ಪೈಪಿನ ತುದಿ ತಲುಪುವುದು ನೇರವಾಗಿ ಬಚ್ಚಲು ಮನೆಗೆ. ಅದರಲ್ಲಿ ಹರಿದು ಬರುವುದು ಕುದಿಯುವ ನೀರು.
ಬೆಳಗ್ಗೆ ಮೊದಲ ಬಿಸಿಲಿನ ಕಿರಣಗಳು ಪೈಪ್ ಅನ್ನು ಸೋಕಿದ ಕೂಡಲೇ ತೆಳ್ಳಗಿನ ಪೈಪು ಬಿಸಿಯೇರಿ ಒಳಗಿರುವ ನೀರು ಕುದಿಯುತ್ತದೆ. ಬೆಳಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದರ ತನಕ ಸ್ನಾನದ ನೀರು ಬಿಸಿ ಬಿಸಿ ಇರುತ್ತದೆ. ಬಿಸಿ ನೀರನ್ನು ತಣ್ಣಗಾಗದಂತೆ ಶೇಖರಣೆ ಮಾಡುವ ವ್ಯವಸ್ಥೆಯಿದ್ದರೆ ಇಪ್ಪತ್ನಾಲ್ಕು ತಾಸೂ ಲಭಿಸುತ್ತದೆ ಎನ್ನುವ ವಿಶ್ವನಾಥ ಭಟ್ಟರು(ಮೊ. 9632391159) ಇದಕ್ಕೆ ಆಗುವ ವೆಚ್ಚ ತುಂಬ ಕಡಿಮೆ, ಶ್ರಮವಿಲ್ಲದೆ ಬಿಸಿ ನೀರು ಪಡೆಯಲು ಸುಲಭ ಎನ್ನುತ್ತಾರೆ.
= ಪ.ರಾಮಕೃಷ್ಣ ಶಾಸ್ತ್ರಿ