ಪ್ರಾಚೀನ ಕಾಲದಲ್ಲಿ ಪುಣ್ಯ ಗಳಿಸಲು ಅಥವಾ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತಕ್ಕಾಗಿ ಅಥವಾ ಊರಿಗೆ ಉಪಕಾರ ಮಾಡಲು ಕೆರೆ- ಕಟ್ಟೆ ಕಟ್ಟಿಸುತ್ತಿದ್ದರು. ರಾಜಮಹಾರಾಜರು ಕೂಡ ಜನಕಲ್ಯಾಣಕ್ಕಾಗಿ ಕೆರೆ- ಕಟ್ಟೆಗಳನ್ನು ಕಟ್ಟಿಸುತ್ತಿದ್ದರು.
ಕೆಂಪೇಗೌಡ ಕಟ್ಟಿಸಿದ ಬೆಂಗಳೂರಿನಲ್ಲಿ ಹಿಂದೆ 262 ಕೆರೆಗಳಿದ್ದವು. ಆದರೆ, ಈಗ ಉಳಿದಿರುವುದು ಕೇವಲ 33 ಮಾತ್ರ. ಇದಕ್ಕೆ ನಗರೀಕರಣ ಕಾರಣ ಎನ್ನದೇ ವಿಧಿಯಿಲ್ಲ. ಹೀಗಾಗಿ ಈಗ ಕೆರೆ-ಕಟ್ಟೆಗಳ ಉಳಿವಿಗಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ದುರಂತ.
ರಾಜ್ಯ ಸರ್ಕಾರ ಕೆರೆಗಳ ಸಂರಕ್ಷಣೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ ಮೂಲಕ ಕೆರೆಗಳ ಪುನರುಜ್ಜೀವನಕ್ಕೆ ಯತ್ನಿಸುತ್ತಿದೆ. ನದಿಯ ನೀರು ಬಳಸಿಕೊಂಡು ಕೆರೆ- ಕಟ್ಟೆ ತುಂಬಿಸುವ ಯತ್ನವನ್ನೂ ಮಾಡುತ್ತಿದೆ. ಇದು ಸರ್ಕಾರದ ಮಟ್ಟದಲ್ಲಿ ಆದರೆ ಖಾಸಗಿ ಮಟ್ಟದಲ್ಲೂ ಅಲ್ಲಲ್ಲಿ ಇಂಥ ಪ್ರಯತ್ನ ನಡೆಯುತ್ತಲೇ ಇವೆ. ಮೈಸೂರಿನ ಜನಚೇತನ ಸಂಸ್ಥೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೆರೆಗಳ ಸಂರಕ್ಷಣೆಗಾಗಿ ಹೋರಾಟ ಆರಂಭಿಸಿದೆ.
ಕೆರೆ ಪುನರುಜ್ಜೀವನ
ಉಭಯ ಜಿಲ್ಲೆಗಳಲ್ಲಿ ಕೆರೆಗಳ ಪುನರುಜ್ಜೀವನಕ್ಕೆ ಆರಂಭಿಸಿರುವ ಯೋಜನೆಗಳನ್ನು ಶೀಘ್ರ ಕಾರ್ಯಗತ ಮಾಡಬೇಕು ಎಂದು ಆಗ್ರಹಿಸಿದೆ. ಹಾಲಂಬೂರು ಕುಡಿಯುವ ನೀರು ಯೋಜನೆಯಲ್ಲಿ 34 ಕೆರೆಗಳಿಗೆ, ಗಾಂಧಿ ಗ್ರಾಮ ಯೋಜನೆಯಲ್ಲಿ 12 ಕೆರೆಗಳಿಗೆ, ಸುತ್ತೂರು ಯೋಜನೆಯಲ್ಲಿ 15 ಕೆರೆಗಳಿಗೆ, ಚಿಕ್ಕನಂದಿ ಯೋಜನೆಯಲ್ಲಿ 23 ಕೆರೆಗಳಿಗೆ, ಜಯಪುರ ಯೋಜನೆಯಲ್ಲಿ 5 ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಲಾಗಿದೆ. ಕೆ.ಆರ್. ನಗರ, ಪಿರಿಯಾಪಟ್ಟಣ ತಾಲೂಕುಗಳಲ್ಲೂ ಯೋಜನೆ ರೂಪಿಸಲು ಸಮೀಕ್ಷೆ ಆಗಿದ್ದರೂ ಕುಂಠಿತಗೊಂಡಿವೆ.
ಜನಜಾಗೃತಿ
ಈ ಬಗ್ಗೆ ಜನಜಾಗೃತಿಗಾಗಿಯೇ ಇತ್ತೀಚೆಗೆ ಟಿ. ನರಸೀಪುರ ತಾಲೂಕು ಬನ್ನೂರು ಹೋಬಳಿಯ ಸೀಹಳ್ಳಿ ಬಳಿಯಿಂದ ಮೈಸೂರಿನವರೆಗೆ ಹಸಿರು ನಡಿಗೆ ಏರ್ಪಡಿಸಲಾಗಿತ್ತು. ಅರವಟ್ಟಿಗೆ ಕೊಪ್ಪಲು, ಮಾಡ್ರಹಳ್ಳಿ, ಕೊಡಗಳ್ಳಿ, ಗಾಡಿಜೋಗಿ ಹುಂಡಿ, ಮಾದಗಹಳ್ಳಿ, ಬನ್ನೂರು, ರಂಗಸಮುದ್ರ, ರಂಗನಾಥಪುರ, ಮಾದೇಗೌಡಹುಂಡಿ, ಹುನುಗನಹಳ್ಳಿ, ಮೆಲ್ಲಹಳ್ಳಿ ಮೂಲಕ ಸಾಗಿದ ಹಸಿರು ನಡಿಗೆಯಲ್ಲಿ ಶುದ್ಧ ಕುಡಿಯುವ ನೀರು, ಕೃಷಿ ಬಳಕೆ, ಅಂತರ್ಜಲ ವೃದ್ಧಿ, ಮೀನು ಸಾಕಾಣಿಕೆ, ಪಕ್ಷಿ ಸಂಕುಲಗಳಿಗೆ ಆಶ್ರಯಕ್ಕಾಗಿ ಕೆರೆ ಉಳಿಸಬೇಕು. ಪ್ರತಿ ಎರಡ್ಮೂರು ವರ್ಷಗಳಿಗೊಮ್ಮೆ ಹೂಳು ತೆಗೆಯುವಂತೆ ಸರ್ಕಾರ ಮತ್ತು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಬೇಕು. ಕೆರೆಗೆ ಮಳೆಯ ನೀರು ಸರಾಗವಾಗಿ ಹರಿದು ಬರುವಂತೆ ಸುತ್ತಮುತ್ತಲಿನ ಒತ್ತುವರಿ ತೆರೆವುಗೊಳಿಸಬೇಕು. ಕೊಳಚೆ ನೀರು ಸೇರದಂತೆ ಎಚ್ಚರ ವಹಿಸಬೇಕು. ಕೆರೆಗಳ ಸುತ್ತಮುತ್ತ ಮರ- ಗಿಡ ಬೆಳೆಸಬೇಕು. ಇದರಿಂದ ವಾತಾವರಣ ತಂಪಾಗಿರುವುದಲ್ಲದೆ ಹೆಚ್ಚು ಮಳೆ ಬೀಳಲು ಕಾರಣವಾಗುತ್ತದೆ. ಪಶು- ಪಕ್ಷಿಗಳಿಗೂ ಆಶ್ರಯ ಸಿಕ್ಕಿ, ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು.
ರಾಜ್ಯಾದ್ಯಂತ ಹೋರಾಟ
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರ ಹೋರಾಟಗಾರರಾದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್, ಸ್ವಾತಂತ್ರ ಯೋಧ ಎಚ್.ಎಸ್. ದೊರೆಸ್ವಾಮಿ, ಪರಿಸರವಾದಿ ಎ.ಎನ್. ಯಲ್ಲಪ್ಪ ರೆಡ್ಡಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಬಿ.ಟಿ. ಲಲಿತಾ ನಾಯಕ್, ಡಾ.ಎಸ್. ತುಕಾರಾಂ ಮೊದಲಾದವರು ಭಾಗವಹಿಸಿ, ಕೆರೆಯ ಕೂಗಿಗೆ ಓಗೊಟ್ಟಿದ್ದಾರೆ. ಇಂಥ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸುವ ಆಲೋಚನೆ ಜನಚೇತನ ಸಂಸ್ಥೆಗೆ ಇದೆ.
-ಅಂಶಿ ಪ್ರಸನ್ನಕುಮಾರ್