ಹತ್ತು ವರ್ಷದ ಹಿಂದೆ ಮಲೆನಾಡಿನ ಭಾಗದಲ್ಲಿ ಮನೆಮಾತಾಗಿದ್ದ ವೆನಿಲ್ಲಾ ಪ್ರಚಲಿತದಲ್ಲಿದೆ. ಹಸಿರು ಚಿನ್ನ ಎಂದೇ ಹೆಸರು ಪಡೆದಿದ್ದ ವೆನಿಲ್ಲಾ ಧಾರಣೆ ಮತ್ತೆ ಚೇತರಿಕೆ ಕಂಡಿದೆ. ಹಸಿ ವೆನಿಲ್ಲಾ ರು. 700 ಹಾಗೂ ಸಂಸ್ಕರಣೆ ಮಾಡಿದ ವೆನಿಲ್ಲಾ ರು. 4,000ಕ್ಕೆ ಏರಿಕೆಯಾಗಿ ರೈತರಲ್ಲಿ ಸಂಚಲನ ಮೂಡಿಸಿದೆ.
ಪಾತಾಳ ಕಂಡಿದ್ದ ಧಾರಣೆ
ಪ್ರಾರಂಭದಲ್ಲಿ ಬೆರಳೆಣಿಕೆಯಷ್ಟಿದ್ದ ವೆನಿಲ್ಲಾ ಬಳ್ಳಿಗೆ ಧಾರಣೆ ಏರಿದಂತೆ ಬೇಡಿಕೆ ಹೆಚ್ಚಿ ಬಳ್ಳಿಗಳನ್ನು ಮೀಟರ್ ಲೆಕ್ಕದಲ್ಲಿ ಮಾರಲಾಯಿತು. ವೆನಿಲ್ಲಾ ಧಾರಣೆಯೂ ಏರುತ್ತಾ ಹೋಗಿ 2003- 04ನೇ ಸಾಲಿನಲ್ಲಿ ಗರಿಷ್ಠ ಮಟ್ಟದ ಏರಿಕೆ ಕಂಡಿತು. ಆಗ ಹಸಿ ವೆನಿಲ್ಲಾ 1 ಕೆಜಿಗೆ ರು. 4,000 ಹಾಗೂ ಸಂಸ್ಕರಿಸಿದ ವೆನಿಲ್ಲಾ 1 ಕೆಜಿಗೆ ರು. 27,000 ವರೆಗೂ ಮಾರಾಟವಾಗುತ್ತಿತ್ತು.
ವಿದೇಶಕ್ಕೆ ರಫ್ತು
ಆಗ ವೆನಿಲ್ಲಾ ಅಮೆರಿಕ, ಜರ್ಮನ್, ಜಪಾನ್ ಮೊದಲಾದ ದೇಶಗಳಿಗೂ ರಫ್ತಾಗುತ್ತಿತ್ತು. ಭಾರತಕ್ಕೆ ಕೋಟ್ಯಂತರ ರುಪಾಯಿ ಆದಾಯ ತಂದಿತ್ತು. ಮಡಗಾಸ್ಕರ್ ದೇಶವು ವೆನಿಲ್ಲಾ ಬೆಳೆಗೆ ಪ್ರಸಿದ್ಧಿ. ಆ ದೇಶದಲ್ಲಿ ಚಂಡಮಾರುತ ಬೀಸಿದ್ದರಿಂದ ವೆನಿಲ್ಲಾ ನಾಶವಾಗಿ ಧಾರಣೆ ಏರಿಕೆಯಾಯಿತು.
ಪತನದ ಹಾದಿ
ಬೆಳೆಗೆ ಚಿನ್ನದ ಬೆಲೆ ಬಂದಿದ್ದೇ ತಡ, ರೈತರು ವೆನಿಲ್ಲಾ ಬಗ್ಗೆ ಆಸಕ್ತಿ ವಹಿಸಿ, ಬೆಳೆಯಲು ಪ್ರಾರಂಭಿಸಿದರು. 2003- 04ರಲ್ಲಿ ಗರಿಷ್ಠ ಮಟ್ಟದ ಧಾರಣೆ ಇತ್ತು. ಕೆಲವೇ ಬೆಳೆಗಾರರು ಮಾತ್ರ ವೆನಿಲ್ಲಾ ಬೆಳೆದಿದ್ದರು. ಆ ರೈತರಿಗೆ ಮಾತ್ರ ಹಣದ ಹೊಳೆಯೇ ಹರಿದುಬಂದಿತ್ತು. ವೆನಿಲ್ಲಾ ಬೆಳೆಗೆ ಗರಿಷ್ಠ ಧಾರಣೆ ಬಂದಿದ್ದಾಗ ಕಳ್ಳರಿಂದ ವೆನಿಲ್ಲಾ ಬೆಳೆ ಉಳಿಸಿಕೊಳ್ಳುವುದೇ ಹರಸಾಹಸ ಆಗಿತ್ತು. ಕಳ್ಳರಿಂದ ವೆನಿಲ್ಲಾ ಉಳಿಸಿಕೊಳ್ಳಲು ಗ್ರಾಮಗಳಲ್ಲಿ ಯುವಕರ ಪಡೆ ಸಜ್ಜಾಗಿತ್ತು. ಪೊಲೀಸರಿಂದಲೂ ರಕ್ಷಣೆ ಕೇಳಲಾಗಿತ್ತು. ಮಲೆನಾಡಿನ ಎಲ್ಲೆಲ್ಲೂ ವೆನಿಲ್ಲಾ ಬಗ್ಗೆಯೇ ಚರ್ಚೆಯಾಗಿತ್ತು. ಅಡಕೆ ತೋಟಗಳಲ್ಲಿ, ಕಾಫಿ ತೋಟಗಳಲ್ಲಿ, ಮನೆಯ ತಾರಸಿಯಲ್ಲೂ ವೆನಿಲ್ಲಾ ಬಳ್ಳಿಯನ್ನು ನೆಡಲಾಗಿತ್ತು. ಆದರೆ, ಕೇವಲ ಎರಡೇ ವರ್ಷಗಳಲ್ಲಿ ವೆನಿಲ್ಲಾ ಧಾರಣೆ ಕುಸಿಯಿತು. ಇದ್ದಕ್ಕಿದ್ದಂತೆ ವೆನಿಲ್ಲಾ ಬಳ್ಳಿಗೆ ಶಿಲೀಂಧ್ರ ರೋಗ ಕಾಣಿಸಿಕೊಂಡು ಬಳ್ಳಿಗಳು ಸತ್ತುಹೋದವು.
ಕೆಜಿಗೆ ಬರೀ ರು. 30
ಹಸಿ ವೆನಿಲ್ಲಾ ರು. 4,000ದಿಂದ ಇಳಿಯುತ್ತಾ ಕೊನೆಗೆ ಪ್ರಥಮ ದರ್ಜೆಯ ಹಸಿ ವೆನಿಲ್ಲಾ ಕೆಜಿಗೆ ರು. 50 ಹಾಗೂ ದ್ವಿತೀಯ ದರ್ಜೆಯದು ರು. 30ಕ್ಕೆ ಇಳಿಯಿತು. ಒಂದೆಡೆ ಧಾರಣೆ ಕುಸಿತ, ಮತ್ತೊಂದೆಡೆ ಶಿಲೀಂಧ್ರ ರೋಗದಿಂದಾಗಿ ರೈತರು ಕಂಗಾಲಾದರು. ವೆನಿಲ್ಲಾ ಬಳ್ಳಿಯ ಬಗ್ಗೆ ಆಸಕ್ತಿ ಕಳೆದುಕೊಂಡರು. ಪರಿಣಾಮವಾಗಿ ಮಲೆನಾಡಿನ ಭಾಗದಲ್ಲಿ ವೆನಿಲ್ಲಾ ಸಂಪೂರ್ಣ ಮಾಯವಾಯಿತು. ವೆನಿಲ್ಲಾ ಏನಿಲ್ಲಾ ಎಂಬ ಗಾದೆಗಳೂ ಕಿವಿ ಗುದ್ದಿದವು. <
ಮತ್ತೆ ಬೇಡಿಕೆ ಬಂತು...
ಈಗ ವೆನಿಲ್ಲಾ ಬೆಳೆಯ ಧಾರಣೆ ದಿಢೀರ್ ಏರಿಕೆಯಾಗಿದೆ. ಹಸಿ ವೆನಿಲ್ಲಾ ರು. 500ರಿಂದ ರು. 700 ಹಾಗೂ ಸಂಸ್ಕರಿಸಿದ ವೆನಿಲ್ಲಾ ರು. 4,000ದ ವರೆಗೆ ಏರಿಕೆ ಕಂಡಿದೆ ಎನ್ನುತ್ತಾರೆ ಬಾಳೆಹೊನ್ನೂರಿನ ವೆನಿಲ್ಲಾ ಉದ್ಯಮಿ ಸತೀಶ್ ಜೈನ್(9448657238). ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗ ಹುಡುಕಾಟ ನಡೆಸಿದರೂ 500 ಕೆಜಿ ವೆನಿಲ್ಲಾ ಸಿಗುವುದಿಲ್ಲ. ಹಾಗಾಗಿ ರೈತರು ವೆನಿಲ್ಲಾ ಬಳ್ಳಿ ಕೇರಳದಿಂದ ತರುತ್ತಿದ್ದಾರೆ. 1 ಮೀಟರ್ ಬಳ್ಳಿಗೆ ರು. 40 ಧಾರಣೆ ಇದೆ.
ಏನು ತಯಾರಾಗುತ್ತೆ?
ಸುವಾಸನೆ ಬೀರುವ ವೆನಿಲ್ಲಾದಿಂದ ಮುಖ್ಯವಾಗಿ ಐಸ್ಕ್ರೀಂ, ಬಿಸ್ಕತ್, ಚಾಕೊಲೇಟ್ ತಯಾರಿಸಲಾಗುತ್ತದೆ. ಬೆಂಗಳೂರು, ಮಂಗಳೂರಿನಲ್ಲಿ ತಯಾರಾಗುವ ನಂದಿನಿ ಐಸ್ಕ್ರಿಂಗಳಿಗೆ ನೈಸರ್ಗಿಕ ವೆನಿಲ್ಲಾ ಬಳಸಲಾಗುತ್ತದೆ.
ಬೇಡಿಕೆ ಹೆಚ್ಚಳಕ್ಕೆ ಕಾರಣವೇನು?
ಭಾರತ ದೇಶದಲ್ಲಿ ವೆನಿಲ್ಲಾಗೆ ಆಂತರಿಕ ಬೇಡಿಕೆ ಹೆಚ್ಚಾಗಿರುವುದು ಹಾಗೂ ಮಾರುಕಟ್ಟೆಯಲ್ಲಿ ವೆನಿಲ್ಲಾ ಇಲ್ಲದಿರುವುದೇ ಧಾರಣೆ ಏರಿಕೆಗೆ ಕಾರಣ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯದಲ್ಲಿ ಮಾತ್ರ ವೆನಿಲ್ಲಾ ಬೆಳೆಯಲಾಗುತ್ತಿತ್ತು. ಈಗ ಧಾರಣೆ ಕುಸಿತದ ಹಿನ್ನೆಲೆಯಲ್ಲಿ ಮೂರು ರಾಜ್ಯಗಳು ಸೇರಿದರೂ ಬೇಡಿಕೆಯ ಶೇ.10ರಷ್ಟು ವೆನಿಲ್ಲಾ ಬೆಳೆಯುತ್ತಿಲ್ಲ. ಜತೆಗೆ ಅಮೆರಿಕದಲ್ಲಿ ವೆನಿಲ್ಲಾಗೆ ಬೇಡಿಕೆ ಹೆಚ್ಚಿದೆ. ಅಮೆರಿಕ ಕಂಪನಿಗಳಿಗೆ ಭಾರತ, ಮಡಗಾಸ್ಕರ್ನಿಂದ ವೆನಿಲ್ಲಾ ರಫ್ತು ಮಾಡಲಾಗುತ್ತಿತ್ತು. ಅಮೆರಿಕದಲ್ಲಿ ನೈಸರ್ಗಿಕ ವೆನಿಲ್ಲಾಗೆ ಹೆಚ್ಚು ಬೇಡಿಕೆ ಇದೆ.
ಧಾರಣೆ ಐತೆ, ಬಳ್ಳಿ ಇಲ್ಲ
ವೆನಿಲ್ಲಾಗೆ ಧಾರಣೆ ಇದ್ದಾಗ ವೆನಿಲ್ಲಾ ಇರಲಿಲ್ಲ. ನಂತರ ವೆನಿಲ್ಲಾ ಬೆಳೆದೆವು. ಧಾರಣೆ ಕುಸಿಯಿತು. ಹೀಗಾಗಿ ಬೆಳೆಯುವುದನ್ನು ಕೈಬಿಟ್ಟೆವು. ಈಗ ಧಾರಣೆ ಏರಿದೆ. ವೆನಿಲ್ಲಾ ಇಲ್ಲ. ಒಟ್ಟಿನಲ್ಲಿ ಹಲ್ಲಿದ್ದಾಗ ಕಡ್ಲೆ ಇಲ್ಲ. ಕಡ್ಲೆ ಇದ್ದಾಗ ಹಲ್ಲಿಲ್ಲ ಎಂಬ ಪರಿಸ್ಥಿತಿ ರೈತರದ್ದು.
- ಕೆಸಕೊಡಿಗೆ ಕೃಷ್ಣಮೂರ್ತಿ, ವೆನಿಲ್ಲಾ ಬೆಳೆದಿದ್ದ ರೈತ
-ಯಡಗೆರೆ ಮಂಜುನಾಥ್