ಕಣ್ಗಳಿಗೆ ತಂಪನ್ನೀಯುವ, ಮನಸ್ಸಿಗೆ ಮುದ ನೀಡುವ ಅಲಂಕಾರಿಕ ಸಸ್ಯಗಳನ್ನು ಮನೆಯ, ಕಚೇರಿಗಳ ಅಥವಾ ಜನಸಂದಣಿ ಇರುವ ಹೋಟೆಲ್ ಇತ್ಯಾದಿ ಸ್ಥಳಗಳಲ್ಲಿ ಬೆಳೆಸುವುದು ಈಗಂತೂ ಸರ್ವೇಸಾಮಾನ್ಯ.
ಇಂಥ ಸ್ಥಳಗಳಿಗೆ ಸೂಕ್ತ ಸಸ್ಯಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ಆಯ್ಕೆ ಮಾಡಿಕೊಂಡ ಗಿಡಗಳು ನೋಡುಗರ ಕಣ್ಣನ್ನು ಸೆಳೆಯಬೇಕು. ಹೆಚ್ಚು ನೀರು ಮತ್ತು ಆರೈಕೆಯ ಅಗತ್ಯವಿರಬಾರದು. ಎಂಥದ್ದೇ ವಾತಾವರಣಕ್ಕೂ ಹೊಂದಿಕೊಂಡು ಬೆಳೆಯುವಂಥದ್ದಾಗಿರಬೇಕು. ಇಂಥ ಒಂದು ಸಸ್ಯ ಅಂಬ್ರೆಲಾ ಪಾಮ್.
ಬಹುವಾರ್ಷಿಕ ಸಸ್ಯ
ಈ ಸಸ್ಯವನ್ನು ಆಂಗ್ಲ ಭಾಷೆಯಲ್ಲಿ ಅಂಬ್ರೆಲಾ ಗ್ರಾಸ್, ಅಂಬ್ರೆಲಾ ಸೆಡ್ಜ್ ಮತ್ತು ಅಂಬ್ರೆಲಾ ಪ್ಯಾಪಿರಸ್ ಎಂದೂ ಕರೆಯುವರು. ಇದನ್ನು ಶಾಸ್ತ್ರೀಯವಾಗಿ ಸೈಪರಸ್ ಆರ್ಲ್ಟ್ನಿಪೋಲಿಯಸ್ ಎನ್ನುತ್ತಾರೆ. ಗ್ರೀಕ್ ಭಾಷೆಯಲ್ಲಿ ಸೈಪರಸ್ ಎಂದರೆ ಜಂಬು ಜೇಕು, ಆರ್ಲ್ಟ್ನರ್ಪೋಲಿಯಸ್ ಎಂದರೆ ಒಂದರ ಮೇಲೊಂದು ಜೋಡಣೆಯಾದ ಎಲೆಗಳು. ಇದು ಬಹುವಾರ್ಷಿಕ ಸಸ್ಯವಾಗಿದ್ದು, ಸೈಪರೇಸಿಯ ಕುಟುಂಬಕ್ಕೆ ಸೇರಿದೆ. ಸೈಪೆರಸ್ ಪ್ರಭೇದವು ಸರಿ ಸುಮಾರು 600 ಜಾತಿ ಹೊಂದಿರುವ ಉಷ್ಣವಲಯದ ಪ್ರಮುಖ ಸಸ್ಯ. ಪ್ರತಿ ಕಾಂಡವು 12 ರಿಂದ 20 ಎಲೆಗಳ ಛತ್ರಿಯಾಕಾರದ ಜೋಡಣೆಯ ರಚನೆ ಹೊಂದಿರುತ್ತದೆ.
ಅಲಂಕಾರಿಕ
ದೊಡ್ಡ ಉದ್ಯಾನವನ, ಮನೆಯಂಗಳ, ಕಚೇರಿ, ಹೋಟೆಲ್ ಹಾಗೂ ಶಾಪಿಂಗ್ ಮಾಲ್ಗಳಲ್ಲಿ ಕಂಡುಬರುವ ಪ್ರಮುಖವಾದ ಒಳಾಂಗಣ ಅಲಂಕಾರಿಕ ಸಸ್ಯ. ನೈಸರ್ಗಿಕ ಮಾನವ ನಿರ್ಮಿತ ಕೊಳದ ಬದಿಯಲ್ಲಿ ಈ ಸಸ್ಯವು ಇತರ ಅಲಂಕಾರಿಕ ಹಾಗೂ ಹೂವು ಗಿಡಗಳೊಂದಿಗೆ ಉದ್ಯಾನವನ, ಕೈತೋಟದಲ್ಲಿ ಉತ್ತಮವಾಗಿ ಹೊಂದಾಣಿಕೆಯಾಗುತ್ತದೆ.
ಆರೈಕೆ ಸುಲಭ
ಇಂಥ ಗಿಡಗಳನ್ನು ಕುಂಡಗಳಲ್ಲಿ ನೆಟ್ಟು ಬೆಳೆಸುವುದು ಮತ್ತು ಆರೈಕೆ ಮಾಡುವುದು ಬಹಳ ಸುಲಭ. ಕುಂಡಗಳಲ್ಲಿನ ಮಣ್ಣು ಒಣಗಿದರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನೀರು ಜಾಸ್ತಿಯಾದರೂ ಒಳ್ಳೆಯದಲ್ಲ. ತೇವ ಆರದ ರೀತಿ ನೋಡಿಕೊಂಡರೆ ಹಿತಕರ. ಹೂವಿನ ಕುಂಡಗಳಲ್ಲಿ ಬೆಳೆಸುವಾಗ ಕುಂಡದ ಕೆಳಗೆ ತಟ್ಟೆಯಿಟ್ಟು ಸದಾ ಕಾಲವೂ ನೀರು ನಿಲ್ಲುವಂತೆ ಇದ್ದರೆ ಉತ್ತಮ.
ಈ ಸಸ್ಯಗಳನ್ನು ಬೀಜಗಳಿಂದ ಉತ್ಪಾದಿಸಬಹುದು. ಇದರ ಬೀಜಗಳು ಬಹಳ ಚಿಕ್ಕದಾಗಿದ್ದು, ಕುಂಡಗಳಲ್ಲಿ ಬಿತ್ತನೆ ಮಾಡಿದ ನಂತರ ತೆಳುವಾದ ಒಂದು ಪದರ ಮಣ್ಣು, ಮರಳು ಅಥವಾ ಕಾಂಪೋಸ್ಟ್ ಗೊಬ್ಬರ ಹರಡಬೇಕು. 10- 12 ದಿನಗಳಲ್ಲಿ ಮೊಳಕೆಯೊಡೆದು 8- 10ನೇ ವಾರಕ್ಕೆ ಬೇರೆ ಕುಂಡಗಳಿಗೆ ಬದಲಿಸುವಷ್ಟು ಎತ್ತರ ಬೆಳೆಯುತ್ತವೆ. ಚೆನ್ನಾಗಿ ಕವಲೊಡೆದ ಗಿಡದ ಕಂದುಗಳಿಂದಲೂ ಸಸ್ಯಾಭಿವೃದ್ಧಿ ಮಾಡಬಹುದು. ಇದರ ವೈಶಿಷ್ಟ್ಯವೇನೆಂದರೆ ಛತ್ರಿಯಾಕಾರದ ಎಲೆಗಳನ್ನು ಹೊಂದಿರುವ ಒಂದು ಕಾಂಡ ಕತ್ತರಿಸಿ, ಎಲೆಗಳು ಮುಳುಗುವಂತೆ ನೀರಿನಲ್ಲಿ ತೇವವಾದ ಮಣ್ಣಿನಲ್ಲಿ ಕೆಲವು ವಾರ ಬಿಟ್ಟರೆ (ಎಲೆಗಳು ಕೊಳೆಯಲಾರಂಭಿಸಿ ಕಂದು ಬಣ್ಣಕ್ಕೆ ತಿರುಗಿದ ನಂತರ) ಎಲೆಗಳು ಕಾಂಡ ಸೇರುವ ಜಾಗದಲ್ಲಿ ಹತ್ತಿಯಂಥ ಬಿಳಿಯದಾದ ಮೊದಲನೇ ಬೇರುಗಳು ಕಾಣಿಸಿ ನಿಧಾನವಾಗಿ ಎಳೆ ಹಸಿರು ಬಣ್ಣದ ಕಾಂಡಗಳು ಕಾಣಿಸಿಕೊಳ್ಳುತ್ತವೆ. 15 ರಿಂದ 20 ದಿನಗಳ ಅವಧಿಯಲ್ಲಿ ಇವುಗಳನ್ನು ಬೇರ್ಪಡಿಸಿ ಚಿಕ್ಕ ಪಾಲಿಥೀನ್ ಚೀಲಗಳಲ್ಲಿ ನೆಟ್ಟ ನಂತರ ದೊಡ್ಡ ಕುಂಡಗಳಿಗೆ ವರ್ಗಾಯಿಸಬಹುದು ಮತ್ತು ಉತ್ತಮ ಗಿಡಗಳನ್ನು ಈ ವಿಧಾನದಲ್ಲಿ ಬಹು ಸುಲಭವಾಗಿ ಅಭಿವೃದ್ಧಿಪಡಿಸಬಹುದು.
- ಸುನೀತಾ ಸಿ. ಮತ್ತು ನಿರ್ಮಲ ಕೆ.ಎಸ್.