ಸುಡುನೆತ್ತಿಯ ಪ್ರಖರ ಬಿಸಿಲಲ್ಲಿ ಊಟದ ತಾಟಿನಲ್ಲಿ ಸೌತೆ ಕೋಸಂಬ್ರಿ, ಕರಿಂಡಿ ಇದ್ದರೆ ಊಟ ಯಾರಿಗೆ ರುಚಿಸುವುದಿಲ್ಲ ಅಲ್ಲವೇ?
ಹೌದು, ಬಿಸಿಲಿನ ತಾಪಕ್ಕೆ ಬಾಯಾರಿಕೆ ನೀಗಲು ಎಳೆ ಸೌತೆಗೆ ಎಲ್ಲಿಲ್ಲದ ಬೇಡಿಕೆ. ಜನರ ನಾಡಿಮಿಡಿತ ಅರಿತು, ಹಂಗಾಮಿಗನುಗುಣವಾಗಿ ಬೆಳೆ ಮಾಡಿದರೆ ಮೈತುಂಬ ಕೆಲಸ, ಕಿಸೆ ತುಂಬ ಕಾಂಚಾಣ ಇದಕ್ಕೊಂದು ನಿದರ್ಶನ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಕಲ್ಲಪ್ಪ ನೇಗಿನಹಾಳ ಅವರ ಸೌತೆ ಕೃಷಿ.
ಮೂವತ್ತು ಗುಂಟೆಯಲ್ಲಿ ಹಾಕಿದ್ದ ಟೊಮೇಟೊ ಬೆಳೆಗೆ ನಿರೀಕ್ಷಿತ ಆದಾಯ ದೊರೆಯದ ಪ್ರಯುಕ್ತ ರೊಟವೆಟರ್ ಹೊಡೆದು ಮಣ್ಣಲ್ಲಿ ಮುಚ್ಚಿ ಗೊಬ್ಬರವಾಗಿಸಿ, ಮಾರ್ಚ್ 4ನೇ ವಾರದಲ್ಲಿ (24್ಢ3್ಢ14) ನೆಲ ಸಜ್ಜುಗೊಳಿಸಿ ಮೂರೂವರೆ ಅಡಿ ಸಾಲು ಅಂತರ ಹಾಗೂ ಮೂರು ಅಡಿ ಸಸಿ ಅಂತರದಲ್ಲಿ ನಾಲ್ಕು ಥರದ ಸ್ಥಳೀಯ ಸೌತೆ (ಖನಗಾವ, ಗಿರಿಯಾಲ, ಧಾರವಾಡ ಹಾಗೂ ಗುಳ್ಳಸೌತೆ) ಬೀಜ ಬಿತ್ತನೆ ಮಾಡಿದರು.
ಎರಡು ಬಾರಿ ನೀರುಣಿಸಿದ್ದಾರೆ. ಬಿತ್ತಿದ 3 ವಾರಗಳ ನಂತರ ಸಸ್ಯಜನ್ಯ (ಅಡಸಾಲಿ, ಹುಲುಗಲ, ಬೇವು ಹಾಗೂ ಬಳ್ಳೊಳ್ಳಿ) ಸಿಂಪರಣೆ ಬಿಟ್ಟರೆ ಇನ್ನಿತರ ಯಾವುದೇ ಗೊಬ್ಬರ ಅಥವಾ ಕ್ರಿಮಿನಾಶಕಗಳ ಬಳಕೆ ಮಾಡಿಲ್ಲ. ಬಿತ್ತನೆಯಾದ 5ನೇ ವಾರಕ್ಕೆ ಫಸಲು ಕೊಯ್ಲಿಗಾರಂಭವಾಗಿದೆ. ಜೇನುಹುಳುಗಳ ಚಟುವಟಿಕೆ ಅತಿ ಹೆಚ್ಚಿದ್ದು, ವಾರದಲ್ಲಿ ಮೂರು ಬಾರಿ, ದಿನ ಬಿಟ್ಟು ದಿನ ಕೊಯ್ಲು ನಡೆದಿದೆ.
ಖನಗಾವ ಸೌತೆ
ದಟ್ಟ ಹಸಿರು ಎಲೆಗಳು. ದಟ್ಟ ಹಳದಿ ವರ್ಣದ ದೊಡ್ಡ ಹೂವು, ಸಂಖ್ಯೆ ಹೆಚ್ಚು. ಉದ್ದನೆಯ ದಪ್ಪ ಕಾಯಿ, ನೀರಿನಂಶ ಹೆಚ್ಚು. ಸಿಪ್ಪೆ ತೆಗೆದು ಹಸಿಯಾಗಿ ತಿನ್ನಲು ಹೆಚ್ಚು ಸೂಕ್ತ.
ಗಿರಿಯಾಲ ಸೌತೆ
ತಿಳಿಹಸಿರು ಎಲೆಗಳು. ಹೂವಿನ ಗಾತ್ರ ಚಿಕ್ಕದು. ಉದ್ದನೆಯ ಹಸಿರು ಕಾಯಿ. ಕೋಸಂಬ್ರಿ, ಪಚಡಿ, ಸಲಾಡ್ ಬಳಕೆಗೆ ಸೂಕ್ತ.
ಸಿಹಿ ಸೌತೆ
ಎಲೆ ಗಾತ್ರ ಇನ್ನುಳಿದವಕ್ಕಿಂತ ತುಸು ದೊಡ್ಡದು. ಮೃದು ಬಲು ಸ್ವಾದಿಷ್ಟ. ಕೋಸಂಬ್ರಿ, ಪಚಡಿ, ಹಸಿಯಾಗಿ ತಿನ್ನಲು ಸೂಕ್ತ.
ಗುಳ್ಳ ಸೌತೆ
ಬೆಳವಲ ಸೀಮೆಯ ಗುಂಡನೆಯ ದಪ್ಪ ಕಾಯಿ. ತರಕಾರಿ ಅದರಲ್ಲೂ ಎಣ್ಣೆಗಾಯಿ ಮಾಡಲು ಬೇಡಿಕೆಯ ತಳಿ.
ಎಲ್ಲ ಸೌತೆಗೂ ಸಾಕಷ್ಟು ಬೇಡಿಕೆ. ಸಗಟು ಮಾರಾಟ 10 ಕೆಜಿಗೆ ರು. 120ರಿಂದ ರು. 150 ದರದಂತೆ ಸರಾಸರಿ ಒಂದು ಕ್ವಿಂಟಲ್‌ಗೆ ದಲ್ಲಾಳಿ ಕಮಿಷನ್, ಬಾಡಿಗೆ, ಹಮಾಲಿ ಖರ್ಚೆಲ್ಲ ಕಳೆದು ರು. 1000 ಆದಾಯ ಸಿಕ್ಕಿದೆ. ಈಗಾಗಲೇ ಆರು ಟನ್ ಸೌತೆ ಫಸಲು ಮಾರಾಟವಾಗಿದ್ದು, ಇನ್ನೂ ಕನಿಷ್ಠ ನಾಲ್ಕು ಟನ್ ಸಿಗುವ ಭರವಸೆ ಇವರಿಗಿದೆ. ಕೊನೆ- ಕೊನೆಗೆ ಕಾಯಿ ಹರಿಯಲು ಬೇಸರಿಸಿ ಬಿಡಬೇಕಷ್ಟೇ ಎನ್ನುತ್ತಾರೆ ಕಲ್ಲಪ್ಪ. ಎರಡು ತಿಂಗಳಿನಲ್ಲಿ ಖರ್ಚೆಲ್ಲ ಮೀಗಿ ಒಂದು ಲಕ್ಷ ನಿವ್ವಳ ಆದಾಯ ಜಾತ್ರೆ, ಮದುವೆ ಇನ್ನಿತರ ಸಮಾರಂಭಗಳಿಗಾಗಿ ಸ್ಥಳದಲ್ಲೇ ಖರೀದಿಸುತ್ತಿದ್ದಾರೆ ಗ್ರಾಹಕರು. ಅಳಿದುಳಿದ ಸೌತೆ ದನಕರುಗಳಿಗೆ ಪ್ರಿಯ ಆಹಾರ. ಸೌತೆ ಬಳ್ಳಿ ಭೂಮಿಗೆ ಉತ್ಕೃಷ್ಟ ಗೊಬ್ಬರ. ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಸೌತೆಗೆ ಬೇಡಿಕೆ ಹೆಚ್ಚು. ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಉತ್ತಮ ತರಕಾರಿಯೂ ಹೌದು. ಬೀಜಕ್ಕಾಗಿ ಒಳ್ಳೆಯ ಕಾಯಿಗಳನ್ನು ಗುರುತಿಸಿದ್ದು, ಅವುಗಳಿಂದ ಬೀಜ ಸಂಗ್ರಹಿಸಿ ಆಸಕ್ತರಿಗೆ ಮಾರಾಟ ಮಾಡುವ ಇಚ್ಛೆ ಕಲ್ಲಪ್ಪ (ಮೊ. 9806 34062) ಅವರದು.
= ಶೈಲಜಾ ಬೆಳ್ಳಂಕಿಮಠ