ತಿರುವನಂತಪುರಮ್: ಕೇರಳದಾದ್ಯಂತ ಕ್ಯಾಲ್ಸಿಯಂ ಕಾರ್ಬೈಡ್ ಅಥವಾ ಬೇರೆ ರಾಸಾಯನಿಕಗಳನ್ನು ಬಳಸಿ ಮಾವನ್ನು ಮಾಗಿಸುವ ಪ್ರಕ್ರಿಯೆಯನ್ನು ನಿಷೇಧಿಸಿ ಆಹಾರ ಸುರಕ್ಷಿತ ಮಹಾನಿರ್ದೇಶಕ ಸೂಚನೆ ಹೊರಡಿಸಿದ್ದಾರೆ.
ಕೃತಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾರುವುದು, ದಾಸ್ತಾನು ಮಾಡುವುದು ಮತ್ತು ಸಾಗಾಣೆ ಮಾಡುವುದನ್ನು ಆಹಾರ ಸುರಕ್ಷತೆ ನಿಯಮ ೨.೩.೫ ಮತ್ತು ಆಹಾರ ಸುರಕ್ಷತೆ ಕಾಯ್ದೆ ವಿಭಾಗ ೩೦ ರ ಅಡಿ ನಿಷೇದಿಸಲಾಗಿದೆ ಎಂದು ತಿಳಿಸಲಾಗಿದೆ.
ಕ್ಯಾಲ್ಸಿಯಂ ಕಾರ್ಬೈಡ್ ನಂತಹ ರಾಸಾಯನಿಕಗಳು ಬಳಕೆಯಾಗದಂತೆ ತಡೆಯಲು, ಇಂತಹ ಕೃತಕವಾಗಿ ಮಾಗಿಸಿದ ಹಣ್ಣುಗಳನ್ನು ಸಾಗಿಸುವ ವಾಹನಗಳ ತಪಾಸಣೆ ಮಾಡಲು ಅಬಕಾರಿ, ಪೋಲಿಸ್ ಮಾತು ಸಂಚಾರಿ ನಿಯಂತ್ರಣ ಇಲಾಖೆಗಳಿಗೆ ಸೂಚಿಸಲಾಗಿದೆ.
ಇಂತಹ ಕೃತಕ ಮಾಗಿದ ಹಣ್ಣುಗಳ ಬಗ್ಗೆ ಎಚ್ಚರದಿಂದಿರಲು ಕೂಡ ಸಾರ್ವಜನಿಕರಿಗೆ ಆಹಾರ ಸುರಕ್ಷಿತ ಆಯೋಗ ತಿಳಿಸಿದೆ. ಮಾವಿನ ಹಣ್ಣುಗಳು ಅಲ್ಲದೆ ಅನಾನಸ್, ಸೇಬು, ಕಿತ್ತಳೆ ಮತ್ತು ನಿಂಬೆ ಹಣ್ಣುಗಳ ಮೇಲೂ ಕೂಡ ಕ್ಯಾಲ್ಸಿಯಂ ಕಾರ್ಬೈಡ್ ಬಳಸಲಾಗುತ್ತದೆ.
ಈ ಅಧಿಸೂಚನೆಯನ್ನು ಉಲ್ಲಂಘಿಸಿದವರ ಬಗ್ಗೆ ಸಾರ್ವಜನಿಕರು ದೂರು ನೀಡಲು ಟಾಲ್ ಫ್ರೀ ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ಸಾರ್ವಜನಿಕರನ್ನು ಉತ್ತೇಜಿಸಲಾಗಿದೆ. ಈ ಸಂಖ್ಯೆ ೧೮೦೦-೪೨೫-೧೧೨೫.