ಪಾಟ್ನಾ: ರಕ್ಷಾ ಬಂಧನ ಹಬ್ಬದ ಅಂಗವಾಗಿ ಶನಿವಾರ ಮರಕ್ಕೆ ರಾಖಿ ಕಟ್ಟುವುದರ ಮೂಲಕ ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಗಿದ್ದಾರೆ.
"ಜನರು ಮುಂದೆ ಬಂದು ಹೆಚ್ಚೆಚ್ಚು ಮರಗಳನ್ನು ಬೆಳೆಸಬೇಕು ಮತ್ತು ಆರೋಗ್ಯಕರ ಪರಿಸರವನ್ನು ಉಳಿಸಬೇಕು" ಎಂದು ಮರಕ್ಕೆ ರಾಖಿ ಕಟ್ಟುವ ವೇಳೆಯಲ್ಲಿ ನಿತೀಶ್ ತಿಳಿಸಿದ್ದಾರೆ.
"ಪರಿಸರ ಉಳಿಸಲು ಮರಗಳಿಗೆ ರಾಖಿಗಳನ್ನು ಕಟ್ಟಲು ನಾನು ಜನರಲ್ಲಿ ಕೈಮುಗಿಸು ಬೇಡಿಕೊಳ್ಳುತ್ತೇನೆ . ಇದು ಭೂಮಿ ಮತ್ತು ಮಾನವರ ನಡುವಿನ ಹೊಸ ಬಾಂಧವ್ಯಕ್ಕೆ ಮುನ್ನುಡಿಯಾಗಲಿ" ಎಂದು ಅವರು ಹೇಳಿದ್ದಾರೆ.
ಆಡಳಿತ ಪಕ್ಷ ಜನತಾ ದಳ ಸಂಯುಕ್ತದ ಸದಸ್ಯರು, ಸರ್ಕಾರಿ ಅಧಿಕಾರಿಗಳು ಮತ್ತು ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ರಾಜ್ಯದ ಅರಣ್ಯವನ್ನು ಐದು ಪಟ್ಟು ಹೆಚ್ಚಿಸಲು ಕೆಲವು ವರ್ಷಗಳ ಹಿಂದೆ ನಿತೀಶ್ ಕುಮಾರ್ ಒಳ್ಳೆಯ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಬಿಹಾರದ ಒಟ್ಟು ವಿಸ್ತೀರ್ಣದಲ್ಲಿ ೧೭% ಅರಣ್ಯ ಸದ್ಯಕ್ಕೆ ಉಳಿದಿದೆ.