ಸಾಂದರ್ಭಿಕ ಚಿತ್ರ 
ಕೃಷಿ-ಪರಿಸರ

ತಾಜಾ ಹಣ್ಣು, ತರಕಾರಿ ಹೊತ್ತು ತರುವ ಫ್ರೆಷ್ ಬಾಕ್ಸ್

ಹುಬ್ಬಳ್ಳಿಯ ಮಟ್ಟಿಗೆ ಇದೊಂದು ತಾಜಾ ಅನುಭವ. ಮೊಬೈಲ್, ಬಟ್ಟೆ, ವಾಚು, ಪಾದರಕ್ಷೆ ಇಂಥವನ್ನೆಲ್ಲ ಆನ್-ಲೈನಲ್ಲಿ...

ಹುಬ್ಬಳ್ಳಿಯ ಮಟ್ಟಿಗೆ ಇದೊಂದು ತಾಜಾ ಅನುಭವ. ಮೊಬೈಲ್, ಬಟ್ಟೆ, ವಾಚು, ಪಾದರಕ್ಷೆ ಇಂಥವನ್ನೆಲ್ಲ ಆನ್-ಲೈನಲ್ಲಿ ತರಿಸಿಕೊಳ್ಳುವುದು ಈಗ ಸ್ಮಾರ್ಟ್ ಆಗಿರುವ ಎಲ್ಲರಿಗೂ ಗೊತ್ತು. ಸಾವಯವ ತರಕಾರಿ ಹಾಗೂ ಹಣ್ಣುಗಳೂ ಬೆರಳ ತುದಿಯ ಆದೇಶಕ್ಕೆ ಮನೆ ಬಾಗಿಲಲ್ಲೇ ಸಿಗುವಂತಾದರೆ? ಆಹಾ!

ಸಂತೆಗೆ ಹೋಗಬೇಕಿಲ್ಲ, ಬಿಸಿಲಲ್ಲಿ ಅಲೆಯಬೇಕಿಲ್ಲ. ಚೌಕಾಶಿ ಮಾಡುವ ಅಗತ್ಯವಿಲ್ಲ. ಗುಣಮಟ್ಟದಲ್ಲಿ ರಾಜಿಯಿಲ್ಲ. ಮನೆ ಬಾಗಿಲಿಗೇ ಬರುತ್ತೆ ತಾಜಾ ಹಣ್ಣು, ತರಕಾರಿ!
ಹುಬ್ಬಳ್ಳಿ ವಿದ್ಯಾನಗರದಲ್ಲಿರುವ ರೋಹನ್ ಕುಲಕರ್ಣಿ (31) ಎಂಬ ಕನಸುಗಾರನ ‘ತಾಜಾ’ ಸಾಹಸವಿದು. ನೀವೊಂದು ಕರೆ ಮಾಡಿ ಅಥವಾ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಇಂತಹ ತರಕಾರಿ, ಹಣ್ಣುಗಳು ಬೇಕೆಂದು ಆರ್ಡರ್ ಕೊಟ್ಟರೆ ಸಾಕು, ಅದನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಮನೆಗೆ ಮುಟ್ಟಿಸುತ್ತೆ, ಫ್ರೆಷ್ ಬಾಕ್ಸ್. ಐದು ತಿಂಗಳ ಈ ಕೂಸು ಈಗ ಬೆರಗು ಮೂಡಿಸುವ ಸಾಧನೆ ಮಾಡಿದೆ.

ಬಿಗ್ ಬಾಸ್ಕೆಟ್, ಪೆಪ್ಪರ್ ಟ್ಯಾಪ್ ಮುಂತಾದ ಕಂಪನಿಗಳು ಸುಪರ್ ಮಾರ್ಕೆಟ್‌ನಲ್ಲಿ ಹಣ್ಣು, ತರಕಾರಿಗಳನ್ನು ಖರೀದಿಸಿ ಗ್ರಾಹಕರಿಗೆ ತಲುಪಿಸುತ್ತವೆ. ಆದರೆ, ರೋಹನ್ ಶೈಲಿ ಆಪ್ತವಾಗಿದೆ. ರೈತರಿಂದಲೇ ಸಾವಯವ ಹಣ್ಣು, ತರಕಾರಿ ಖರೀದಿಸಿ, ಸಂಸ್ಕರಿಸಿ ಗ್ರಾಹಕರಿಗೆ ತಲುಪಿಸುವ ಪರಿಕಲ್ಪನೆ ಹುಬ್ಬಳ್ಳಿಯ ಮಟ್ಟಿಗೆ ಹೊಸದು.

ಹೇಗೆ ಕಾರ್ಯ ನಿರ್ವಹಿಸುತ್ತೆ?
ತಿನ್ನುವ ವಸ್ತು ‘ಫ್ರೆಷ್’ ಇರಲಿ, ರಾಸಾಯನಿಕಮುಕ್ತವಾಗಿರಲಿ. ಜನರ ಆರೋಗ್ಯ ಕೆಡಿಸದಿರಲಿ ಎಂಬ ಉದ್ದೇಶದಿಂದ ಫ್ರೆಷ್ ಬಾಕ್ಸ್ ವೆಂಚರ್ ಆರಂಭಿಸಿದ್ದಾಗಿ ಚಾಣಕ್ಯ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸಂಸ್ಥೆಯಿಂದ ಎಂಬಿಎ ಪದವಿ ಪಡೆದಿರುವ ರೋಹನ್ ಕುಲಕರ್ಣಿ ವಿವರಿಸುತ್ತಾರೆ. ಗ್ರಾಹಕರು ಮೊಬೈಲ್ ಸಂಖ್ಯೆ 7899884488ಗೆ ಕರೆ ಮಾಡಿ ಅಥವಾ ಕಂಪನಿಯ ಅಧಿಕೃತ ವೆಬ್ ಸೈಟ್  ಮೂಲಕ ತಮ್ಮ ಬೇಡಿಕೆ ಸಲ್ಲಿಸಿದರೆ, ಹಣ್ಣುಗಳ ಬುಟ್ಟಿ ಹಿಡಿದು ಫ್ರೆಷ್ ಬಾಕ್ಸ್ ಸಿಬ್ಬಂದಿ ನಗುಮೊಗದಿಂದ ನಿಮ್ಮ ಮನೆಯ ಕರೆಗಂಟೆ ಒತ್ತುತ್ತಾರೆ.

ಗ್ರಾಹಕರ ಬೇಡಿಕೆಯನ್ನು ರೋಹನ್ ರೈತರಿಗೆ ತಲುಪಿಸುತ್ತಾರೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತಮ್ಮೊಂದಿಗೆ ಗುರುತಿಸಿಕೊಂಡಿರುವ ಸುಮಾರು 25 ರೈತರಿಗೆ ಸಾವಯವ ಕೃಷಿ ತರಬೇತಿ ನೀಡಿದ್ದಾರೆ. ವಹಿವಾಟು ವೃದ್ಧಿಸಿದಂತೆ ರೈತರ ಸಂಖ್ಯೆಯೂ ಹೆಚ್ಚಲಿದೆ. ಗುರುವಾರ ಹಾಗೂ ಭಾನುವಾರ ಮುಂಜಾನೆ ತಮ್ಮ ಸರಕು ವಾಹನ ಹಾಗೂ ಸಿಬ್ಬಂದಿಯೊಂದಿಗೆ ರೈತರ ಹೊಲಗಳಿಗೆ ತೆರಳುವ ರೋಹನ್, ಅಲ್ಲಿ ಹಣ್ಣು, ತರಕಾರಿಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ತೂಕ ಮಾಡಿ, ಸೀಲ್ ಮಾಡಲಾದ ಪೊಟ್ಟಣಗಳಲ್ಲಿ ಗ್ರಾಹಕರಿಗೆ ತಲುಪಿಸುತ್ತಾರೆ. ಸದ್ಯ ವಾರದಲ್ಲಿ ಎರಡು ದಿನ (ಗುರುವಾರ, ಭಾನುವಾರ) ಹಣ್ಣು, ತರಕಾರಿಗಳನ್ನು ಪೂರೈಸುವ ರೋಹನ್, ವಹಿವಾಟು ವಿಸ್ತರಿಸಿದರೆ ನಿತ್ಯ ಸೇವೆ ಒದಗಿಸಲಿದ್ದಾರಂತೆ.

ರೈತರಿಗೇನು ಲಾಭ?
ಮಧ್ಯವರ್ತಿಗಳ ಹಾವಳಿಯೇ ರೈತರ ಆತ್ಮಹತ್ಯೆಗೆ ಮುಖ್ಯ ಕಾರಣ. ನಾವು ರೈತರನ್ನು ನೇರವಾಗಿ ಸಂಪರ್ಕಿಸಿ ಹಣ್ಣು, ತರಕಾರಿಗಳನ್ನು ಕೊಳ್ಳುತ್ತೇವೆ. ತೂಕದಲ್ಲಿ ವ್ಯತ್ಯಾಸವಿಲ್ಲ. ಮಧ್ಯವರ್ತಿ ಕಮೀಷನ್ ಪಡೆಯುವುದಿಲ್ಲ. ಉತ್ತಮ ಬೆಲೆ ಸಿಕ್ಕಿ, ಅವರ ಜೀವನಮಟ್ಟವೂ ಸುಧಾರಿಸುತ್ತದೆ. ಬೆಲೆ ಏರಿಳಿತದ ಸಮಸ್ಯೆ ನಮ್ಮನ್ನು ಈವರೆಗೂ ಕಾಡಿಲ್ಲ. ಏಕೆಂದರೆ ಬೆಲೆ ಏರಿಸುವುದು, ಇಳಿಸುವುದು ರೈತರೂ ಅಲ್ಲ, ಗ್ರಾಹಕರೂ ಅಲ್ಲ; ಮಧ್ಯವರ್ತಿಗಳು. ಹೀಗಾಗಿ, ಬೆಂಗಳೂರು, ತುಮಕೂರಿನಿಂದಲೂ ಕೆಲವು ರೈತರು ಕರೆ ಮಾಡಿ, ತಮ್ಮ ಹೊಲದಿಂದ ತರಕಾರಿ ಖರೀದಿಸುವಂತೆ ಕೇಳುತ್ತಿದ್ದಾರೆ - ಎನ್ನುವಾಗ ರೋಹನ್ ಮುಖದಲ್ಲಿ ಹೆಮ್ಮೆ ಇಣುಕುತ್ತಿತ್ತು.

ಕೇವಲ ₹ 3 ಲಕ್ಷ ಬಂಡವಾಳದೊಂದಿಗೆ ಆರಂಭವಾದ ಫ್ರೆಷ್ ಬಾಕ್ಸ್ ಈಗ ಏಳು ಸದಸ್ಯರ ಗುಂಪು. ನಾಲ್ಕೇ ತಿಂಗಳಲ್ಲಿ 120 ಗ್ರಾಹಕರನ್ನು ಸಂಪಾದಿಸಿದ ಕಂಪನಿ, ತಿಂಗಳಿಗೆ 400ಕ್ಕೂ ಹೆಚ್ಚು ಆರ್ಡರ್ ಸ್ವೀಕರಿಸುತ್ತಿದೆ. ಫ್ರಾಂಚೈಸಿಗಳ ಮೂಲಕ ಧಾರವಾಡ, ಬೆಂಗಳೂರು ಬೆಳಗಾವಿ, ಕಾರವಾರ ಹಾಗೂ ಗೋವಾಕ್ಕೆ ವಹಿವಾಟನ್ನು ವಿಸ್ತರಿಸಲು, ದವಸ-ಧಾನ್ಯ, ಹಪ್ಪಳ, ಉಪ್ಪಿನಕಾಯಿ ಹಾಗೂ ಮಸಾಲೆ ಪದಾರ್ಥಗಳನ್ನು ತಮ್ಮ ವಹಿವಾಟಿನ ಪರಿಧಿಗೆ ತರಲು ರೋಹನ್ ನಿರ್ಧರಿಸಿದ್ದಾರೆ.

ಇತ್ತೀಚೆಗೆ ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 1 ಲಕ್ಷ ನಗದು ಬಹುಮಾನವಿದ್ದ ಸ್ಯಾಂಡ್ ಬಾಕ್ಸ್ ಸ್ಟಾರ್ಟ್ ಅಪ್ ಚಾಲೆಂಜ್ ಪ್ರಶಸ್ತಿಯನ್ನು ಫ್ರೆಷ್ ಬಾಕ್ಸ್ ವೆಂಚರ್ಸ್ ತನ್ನದಾಗಿಸಿಕೊಂಡಿದೆ. 72 ಸ್ಪರ್ಧಿಗಳ ಮಧ್ಯೆ ಫ್ರೆಷ್ ಬಾಕ್ಸ್ ಮೊದಲ ಸ್ಥಾನಕ್ಕೇರಿದ್ದು ವಿಶೇಷ ಸಾಧನೆ ಎನಿಸಿತು.

ಇದರಲ್ಲೇನು ವಿಶೇಷ ಅಂತೀರಾ?
‘ಬೈ ಇಟ್, ಕುಕ್ ಇಟ್, ಈಟ್ ಇಟ್’ - ಪ್ರೆಷ್ ಬಾಕ್ಸ್ ನ ಸರಳ ಸೂತ್ರ. ಸದ್ಯ ತರಕಾರಿ, ಸೊಪ್ಪು, ಹಣ್ಣುಗಳು ಹಾಗೂ ತೆಂಗಿನಕಾಯಿ ಸೇರಿ 58 ವಸ್ತುಗಳನ್ನು ಪೂರೈಸುತ್ತಿದೆ. ಬೇಡಿಕೆಗೆ ಅನುಸಾರ ರೈತರ ತೋಟದಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಾಜಾ ಹಣ್ಣು, ತರಕಾರಿ ತಲುಪಿಸುವ ಸೇವೆ ಉಚಿತ. ಖರೀದಿಸಿದ ವಸ್ತುಗಳಿಗೆ ನಿಗದಿತ ಮೌಲ್ಯ ಪಾವತಿಸಿದರೆ ಆಯಿತು. ಮುಂದಿನ ವಾರದಿಂದ ಆನ್-ಲೈನ್ ಪಾವತಿಗೂ ಅವಕಾಶ ಲಭ್ಯವಾಗಲಿದೆ. ಚೌಕಾಶಿಗೆ ಅವಕಾಶವಿಲ್ಲ, ಬಲವಂತದ ಮಾರಾಟವಿಲ್ಲ. ಆರ್ಡರ್ ರದ್ದು ಮಾಡುವಂತಿಲ್ಲ, ಹೆಚ್ಚು ಬೇಕೆಂದರೂ ಸಿಗಲ್ಲ. ಅಚ್ಚುಕಟ್ಟಾದ ಈ ಸೇವೆಗೆ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

-ಅನಂತ ಹುದೆಂಗಜೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!