ಶ್ರಾವಣವೆಂದರೆ ಪ್ರಸನ್ನ ಚಿತ್ತದ ಭಕ್ತಿಯ, ಸಾತ್ವಿಕ ಮಾತುಗಳ ಶ್ರವಣದ, ಸಾಲುಸಾಲು ಸಂಭ್ರಮದ ಮಾಸ. ಇದು ಆಷಾಢದ ಬೇಸರ ಮರೆಸುವ ಉತ್ಸಾಹದ ಹೆಬ್ಬಾಗಿಲು. ಶ್ರಾವಣವೆನ್ನುವುದು ನಮ್ಮ ಮನಸಿನ ಹಿತಕ್ಕೆ, ನಮ್ಮ ಅಭಿರುಚಿಯ ಅನನ್ಯತೆಗೆ ಮತ್ತು ನಮ್ಮ ಜೀವನೋತ್ಸಾಹಕ್ಕೆ ರೂಪಕ.
ಶ್ರಾವಣವನ್ನು ವಸುಂಧರೆಯ ಮಧುಮಾಸ ಎನ್ನುತ್ತಾರೆ. 'ಶ್ರಾವಣದ ಹಕ್ಕಿ' ಎಂದೇ ಹೆಸರಾಗಿರುವ ವರಕವಿ ಬೇಂದ್ರೆ, ಆಷಾಢದ ನಂತರ ಬರುವ ಶ್ರಾವಣದಲ್ಲಿ ಸೂರ್ಯ ಪ್ರಖರತೆ ಹೊಂದದೆ ನವಿರಾದ ಹೂ ಬಿಸಿಲಿನೊಂದಿಗೆ ನೆರಳಿನಾಟನಾಡುವನು.
ಆಗಾಗ ತುಂತುರು ಮಳೆಯ ತುಷಾರ ಸಿಂಚನ, ತುಂಬಿ ಹರಿಯುವ ನದಿ, ತೊರೆಗಳ ಜುಳುಜುಳು ನಿನಾದ, ಸಂಪಿಗೆ, ಕೇದಿಗೆ, ಸೇವಂತಿಗೆ ಸುಮಧುರ ವಾಸನೆಯೊಂದಿಗೆ ಭೂದೇವಿ ಹೊಸ ಉಡುಗೆ ಉಟ್ಟು ನಲಿಯುವಂತೆ ಭಾಸವಾಗುವ ಈ ಕಾಲ, ಧಾರ್ಮಿಕವಾಗಿಯೂ ಮಹತ್ವದ್ದು. ಹಿಂದೂ ಪಂಚಾಂಗದ ಪ್ರಕಾರ ಇದು ಐದನೇ ಮಾಸ.
ಪ್ರಕೃತಿಗೂ ಶ್ರಾವಣ ಸಂಭ್ರಮ
ನಿಸರ್ಗದ ಜೊತೆ ನೇರ ಸಂಬಂಧ ಹೊಂದಿರುವ ಜನಪದದಲ್ಲಿ ಶ್ರಾವಣ ಸಂಭ್ರಮ ವೈವಿಧ್ಯಮಯವಾಗಿದೆ. ಭೀಮನ ಅಮಾವಾಸ್ಯೆ ಶ್ರಾವಣಕ್ಕೆ ಮುನ್ನುಡಿ ಬರೆಯುವ ಹಬ್ಬ. ಶ್ರಾವಣ ಮಾಸದ ಎರಡನೇ ಶುಕ್ರವಾರ ಮಹಾಲಕ್ಷ್ಮೀ ಜನನವಾದರೆ, ಸೆರೆಯ ಕಳೆವ ಹರಿ ಹುಟ್ಟಿದ ತಿಂಗಳು ಶ್ರಾವಣವಲ್ಲವೇ ಎಂದು ಪುತಿನ ಕೇಳುವಂತೆ- ಪೂರ್ಣ ಪುಣ್ಯಾವತಾರವೆಂಬ ಹೆಗ್ಗಳಿಕೆಗೆ ಪಾತ್ರನಾದ ಶ್ರೀಕೃಷ್ಣ ಪರಮಾತ್ಮ ಜನಿಸಿದ್ದು ಈ ಮಾಸದಲ್ಲೇ.
ಶ್ರಾವಣ ಸೋಮವಾರ ಶಿವಾರಾಧನೆಗೆ ಅತ್ಯಂತ ಶ್ರೇಷ್ಠ. ಮಾಸಾದ್ಯಂತ ಆಚರಿಸುವ ವರದ ಗಣಪತಿ ವ್ರತ, ಮಂಗಳಗೌರಿ, ನಾಗರ ಪಂಚಮಿ, ಉಪಕರ್ಮ- ರಕ್ಷಾಬಂಧನ ಸೇರಿದಂತೆ ಶ್ರಾವಣವೆಂದರೆ ಹಬ್ಬಗಳ ಜಾತ್ರೆ. ಇದೇ ತಿಂಗಳಿನಲ್ಲಿ ಸಜ್ಜನರ ಚಂದ್ರಮನಾದ ಮಂತ್ರಾಲಯ ರಾಘವೇಂದ್ರ ಗುರುಸಾರ್ವಭೌಮರು ಸಶರೀರ ಬೃಂದಾವನ ಪ್ರವೇಶ ಮಾಡಿದ ಪುಣ್ಯಾರಾಧನೆ ಮೇಳೈಸುವುದು ಮತ್ತೂ ವಿಶೇಷ.
ಮನೆಬಾಗಿಲಿಗೆ ಹಸಿರು ತೋರಣ, ಅಂಗಳದಲ್ಲಿ ರಂಗೋಲಿ ಚಿತ್ತಾರ, ಮನೆಯೊಳಗೆ ವಿಶೇಷ ಪೂಜೆಗಳ ಘಂಟಾನಾದ. ಅಡುಗೆ ಮನೆಯಲ್ಲಿ ಸಿಹಿ ಖಾದ್ಯಗಳ ಘಮ ಘಮ.
ಶ್ರವಣ ನಕ್ಷತ್ರ ವಿಷ್ಣುವಿನ ಜನ್ಮನಕ್ಷತ್ರವಂತೆ. ಶ್ರಾವಣ ಹುಣ್ಣಿಮೆಯಂದು ಶ್ರವಣ ನಕ್ಷತ್ರ ಬರುವುದರಿಂದ ಇಡಿ ಮಾಸಕ್ಕೆ ಪಾವಿತ್ರ್ಯ ಬಂತು ಎನ್ನುತ್ತಾರೆ. ಹಯಗ್ರೀವ ರೂಪಿ ಭಗವಂತನ ಆವಿರ್ಭಾವವಾದ ಸುದಿನ. ಕೇರಳದಲ್ಲಿ ಅದರಲ್ಲಿನ ಶ್ರ ಕಳೆದು ವಣಂ ಮಾತ್ರ ಉಳಿಯಿತು. ಅದು ಅನಂತಶಯನನಾದ ವಿಷ್ಣುವಿನ ನಕ್ಷತ್ರವಾಗಿ ತಿರು(ಶ್ರೀ)ವೋಣಂ ಆಯ್ತು. ಬಲಿ ಚಕ್ರವರ್ತಿ ಮತ್ತು ವಿಷ್ಣುವಿನ ವಾಮನಾವತಾರದ ನಡುವಿನ ಕತೆಯೂ ಇದರೊಂದಿಗೆ ಹೊಂದಿಕೊಂಡಿದೆ.
ಪ್ರಸೂತಿನಿ ಮಾಸ
ಇದನ್ನು ಪ್ರಸೂತಿನಿ ಮಾಸವೆಂದು ಕರೆಯುತ್ತಾರೆ. ಯಾವುದೇ ದೋಷವಿದ್ದರೂ ಈ ಮಾಸದಲ್ಲಿ ರವಿ ಸಿಂಹಪ್ರವಿತನಾಗಿರುವಾಗ ಶಾಂತಿ ಮಾಡಿಸಿದರೆ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದಕ್ಕೆ ಕಾರಣ. ಆಷಾಢದಲ್ಲಿ ಜಡಿ ಮಳೆನೀರನ್ನು ಸ್ವೀಕರಿಸಿ ಉಬ್ಬಿ ಉಗ್ರಗೊಂಡಿರುವ ಸಮುದ್ರ, ಶ್ರಾವಣ ಹುಣ್ಣಿಮೆಯಂದು ಶಾಂತವಾಗುತ್ತದೆ. ಕರಾವಳಿಯಲ್ಲಿ ಈ ದಿನ ವರುಣದೇವತೆ ಎಂದು ಸಮುದ್ರಕ್ಕೆ ಪೂಜೆ ಸಲ್ಲಿಸಿ ಸಂಭ್ರಮಿಸುತ್ತಾರೆ.
ಶ್ರಾವಣ ಮಾಸಕ್ಕೆ ಅಧಿದೇವತೆ ಶಿವನಾದ್ದರಿಂದ ಇಲ್ಲಿ ಗಂಗೆಯನ್ನು ಶಿರದಲ್ಲಿ ಧರಿಸಿದ ಈಶ್ವರ ಮುಕ್ಕಣ್ಣನೆಂದು ತೆಂಗಿನ ಕಾಯಿಯನ್ನು ಸಮುದ್ರಕ್ಕೆ ಸಲ್ಲಿಸಿ, ಈ ಮೂಲಕ ಶಿವನನ್ನೂ ವಿಶೇಷವಾಗಿ ಪೂಜಿಸುತ್ತಾರೆ.
ಆಧ್ಯಾತ್ಮಿಕ ಪರ್ವಗಳಷ್ಟೇ ಅಲ್ಲದೆ ಹೋರಾಟ, ತ್ಯಾಗ ಬಲಿದಾನ ನೆನಪಿಸುವ ಸ್ವಾತಂತ್ರದಿನವೂ ಶ್ರಾವಣದಲ್ಲೇ. ಇಂದು ನಾವೆಲ್ಲರೂ ನಿರುಮ್ಮಳವಾಗಿರುಂತೆ ಅನುಕೂಲ ಮಾಡಿಕೊಟ್ಟವರ ಸ್ಮರಣೆ. ಮೇಳು- ಕೀಳು ಎನ್ನುವ ಭೇದಗಳಿಗೆ ಬೇಕಾದಷ್ಟು ಕಾರಣ ದೊರೆಯುವ ಕಾಲವಿದು. ಇಂತಹ ಕಾಲದಲ್ಲಿ ಸಾಮಾಜಿಕ ಜೀವನದ ಸೊಬಗಿನಲ್ಲಿ ಮಾನವೀಯತೆ ಪ್ರಧಾನವಾಗಬೇಕು ಎನ್ನುವ ಆಶಯ ಬಿತ್ತಿದ ಮಹರ್ಷಿ ಅರವಿಂದರ ಜನ್ಮದಿನವೂ ಇದೆ.
ಶ್ರಾವಣದ ಹಬ್ಬಗಳಲ್ಲಿ ಮಹಿಳೆಯರ ಅಂತರಂಗ ತೆರೆದುಕೊಳ್ಳುತ್ತದೆ. ಸಮಾಜದೊಂದಿಗೆ ಬೆಸೆಯುತ್ತದೆ. ಇಲ್ಲಿ ಖಾಸಗಿತನವಿದೆ. ಸಮೂಹ ಸಂಭ್ರಮವಿದೆ. ಪ್ರತಿ ಶ್ರಾವಣದಲ್ಲೂ ಹೆಣ್ಣು ಹೊಸಬಳಾಗುತ್ತಾಳೆ. ಈ ಹೊಸದಾಗುವ ಕ್ರಿಯೆಯೇ ಶ್ರಾವಣದ ಹೂರಣವೂ ಹೌದು. ಇಂಥ ಎಲ್ಲಾ ನೆನಪುಗಳೊಂದಿಗೆ ಮತ್ತೆ ಬಂದಿದೆ ಶ್ರಾವಣ ಮಹಿಳೆಯರ ಕಣ್ಣಿನಲ್ಲಿ ಮಿನುಗುತಿದೆ ಕಾಂತಿಯ ಕಿರಣ. ಮಾಹಿತಿಗಾಗಿ ಮೊ. 9739369621
-ಗುರುರಾಜ ಪೋಶೆಟ್ಟಿಹಳ್ಳಿ