108 ಸಂಖ್ಯೆಯ ಹಿನ್ನೆಲೆ, ಮಹತ್ವ
ಧ್ಯಾನಕ್ಕೆ ಕುಳಿತಾಗ ಹಿಡಿಯುವ ಜಪಮಾಲೆಯ ಮಣಿ ಸಂಖ್ಯೆ 108, ಯಾವುದಾದರು ಮಂತ್ರವನ್ನು ಜಪಿಸಬೇಕೆಂದರೆ 108 ಬಾರಿ ಜಪಿಸಬೇಕೆಂಬ ಸಲಹೆ. 108 ಬಾರಿ ಸೂರ್ಯ ನಮಸ್ಕಾರ ಮಾಡುವುದು ಸೂಕ್ತ, ಹೀಗೆ ಧಾರ್ಮಿಕ ಕ್ರಿಯೆಗಳಿಗೆ ಸಂಬಂಧಿಸಿದ ಆಚರಣೆಗಳಲ್ಲಿ 108 ಸಂಖ್ಯೆಯನ್ನು ಬಹಳಷ್ಟು ಬಾರಿ ಬಳಸುತ್ತೇವೆ. ಆಚರಣೆಗಳಿಗೂ ಈ 108 ಸಂಖ್ಯೆಗೂ ಇರುವ ನಂಟೇನು, ಅದರ ಮಹತ್ವವೇನು ಎಂಬ ಪ್ರಶ್ನೆ ಒಂದಲ್ಲಾ ಒಂದು ಬಾರಿ ಕಾಡಿರುತ್ತದೆ.
ಹಿಂದೂಧರ್ಮ ಅಥವಾ ಸನಾತನ ಧರ್ಮದಲ್ಲಿ 108 ರ ಮಹತ್ವ ಏನೆಂಬ ಪ್ರಶ್ನೆಗೆ ವೇದ ವಿಜ್ಞಾನ, ಗಣಿತದಲ್ಲಿ ಉತ್ತರವನ್ನು ತಿಳಿಸಲಾಗಿದೆ. ವೇದಗಳ ಪ್ರಕಾರ 108 ಸಂಖ್ಯೆ ಇಡಿ ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತದೆ ಹಾಗೂ ಹಿಂಬಾಲಿಸಿ ಹೋದಷ್ಟು ಬ್ರಹ್ಮಾಂಡದ ಅಸ್ತಿತ್ವವನ್ನು ಕೂಡ ವಿವರಿಸುತ್ತದೆ.
ಆಚರಣೆಗಳ ವಿಷಯಕ್ಕೆ ಬಂದರೆ ಭಾರತದಲ್ಲಿ 108 ಪವಿತ್ರ ಕ್ಷೇತ್ರಗಳಿವೆ, ಜ್ಞಾನದ ವಿಷಯಕ್ಕೆ ಬಂದಲ್ಲಿ ನಾಲ್ಕು ವೇದಗಳ ಸಾರವನ್ನು ಹೊಂದಿದ್ದ ಉಪನಿಷತ್ ಗಳ ಸಂಖ್ಯೆಯೂ 108. ಇನ್ನು ಸೌರ ಮಂಡಲದ ಮೂಲಕವೂ 108 ರ ಮಹತ್ವವನ್ನು ತಿಳಿಯಬಹುದಾಗಿದ್ದು, ಋಗ್ವೇದದ ಸೂತ್ರಗಳ ಮೂಲಕ ಸೂರ್ಯ ಭೂಮಿಯಿಂದ ಸೂರ್ಯನ ವ್ಯಾಸದ 108ರಷ್ಟು ಮತ್ತು ಚಂದ್ರನ ವ್ಯಾಸದ 108ರಷ್ಟು ದೂರದಲ್ಲಿದ್ದಾನೆ ಎಂಬುದು ತಿಳಿಯುತ್ತದೆ. ಇನ್ನು ಮನುಷ್ಯನ ಹೊರ ಭಾಗಕ್ಕೆ ಕಾಣುವ ದೇಹ(ಸ್ಥೂಲ ಶರೀರ)ಕ್ಕೂ ಒಳಗಿರುವ ಆತ್ಮಕ್ಕೂ 108 ಯುನಿಟ್ ಗಳಷ್ಟು ಅಂತರವಿರುವುದನ್ನು ಋಷಿಗಳು ಕಂಡುಕೊಂಡಿದ್ದಾರೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಆತ್ಮಜ್ಞಾನ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸುವವರು 108 ಮಣಿಗಳುಳ್ಳ ಮಾಲೆಯನ್ನು ಹಿಡಿದು ಜಪಿಸುತ್ತಾರೆ, 108 ಮಣಿಗಳು ಮನುಷ್ಯ ಮೋಕ್ಷ ಸಾಧಿಸುವುದಕ್ಕೂ ಮುಂಚಿನ ಹಂತಗಳನ್ನು ಪ್ರತಿನಿಧಿಸುತ್ತವೆ ಹಾಗೂ 108 ಮಣಿಗಳನ್ನು ಹೊಂದಿದ ಮಾಲೆಯ ಮೂಲಕ ಜಪ ಮಾಡಿದರೆ ಮನುಷ್ಯ ಆಂತರಿಕವಾಗಿ ಸದೃಢನಾಗಲು ಸಹಕಾರಿ ಎಂಬ ನಂಬಿಕೆ ಇದೆ.
ಇನ್ನು ಬ್ರಹ್ಮಾಂಡ ಶಕ್ತಿಯನ್ನು ಪ್ರತಿನಿಧಿಸುವ ಶಿವನ ಭರತನಾಟ್ಯ ಯಾರಿಗೆ ತಾನೆ ಗೊತ್ತಿಲ್ಲ?, ಶಿವನ ಸ್ವರೂಪವಾದ ನಟರಾಜನ ನಾಟ್ಯ ಅಣುಗಳ ನರ್ತನಕ್ಕೆ ಸಾಮ್ಯತೆ ಇದ್ದು, ನಟರಾಜನ ನಾಟ್ಯ ಭಂಗಿಯೂ 108 ಆಗಿದೆ. ಆದ್ದರಿಂದಲೇ ಶಿವನನ್ನು ಪ್ರತಿನಿಧಿಸುವ ರುದ್ರಾಕ್ಷಿ ಮಾಲೆಯಲ್ಲಿ ರುದ್ರಾಕ್ಷಿಗಳು ಸಹ 108 ಸಂಖ್ಯೆಯಲ್ಲಿದೆ. ವೈಜ್ಞಾನಿಕ ದೃಷ್ಟಿಯಿಂದ ಹಿಡಿದು, ದೈವಿಕ ದೃಷ್ಟಿಯವರೆಗೂ 108 ಸಂಖ್ಯೆ ಸನಾತನ ಧರ್ಮದೊಂದಿಗೆ ಅವಿನಾಭವ ನಂಟು ಹೊಂದಿದ್ದು, ಮಂಗಳಕರ ಸಂಖ್ಯೆ ಎಂಬ ನಂಬಿಕೆ ಇದೆ.