ಭಕ್ತಿ-ಭವಿಷ್ಯ

ಕನ್ಯಾಕುಮಾರಿಗೆ ಆ ಹೆಸರು ಬರಲು ಹಿಂದಿರುವ ಪೌರಾಣಿಕ ಹಿನ್ನೆಲೆ ಗೊತ್ತಾ?

Srinivas Rao BV
ಭಾರತದ ಅಡಿಯಿಂದ ಮುಡಿಯವರೆಗೆ ಆಧ್ಯಾತ್ಮಿಕ ಶ್ರೀಮಂತಿಕೆ ವ್ಯಾಪಿಸಿದೆ. ಭಾರತದ ವರ್ಣನೆ ಮಾಡುವಾಗಲೆಲ್ಲಾ, ಸಾಮಾನ್ಯವಾಗಿ ಕಾಶ್ಮೀರ-ಕನ್ಯಾಕುಮಾರಿ ಹೆಸರನ್ನು ಪ್ರಸ್ತಾಪಿಸುತ್ತೇವೆ. ದಕ್ಷಿಣ ಭಾರತದ ಮುಖ್ಯ ಭೂಮಿಯ ತುತ್ತ ತುದಿಯಲ್ಲಿರುವ ಊರಿಗೆ 'ಕನ್ಯಾಕುಮಾರಿ' ಎಂಬ ಹೆಸರು ಬಂದದ್ದು ಪೌರಾಣಿಕ ಕಥೆಯಿಂದ.
ಪುರಾಣಗಳ ಹೊರತಾಗಿಯೂ  ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್ ನಂತಹ ಕಾರಣಗಳಿಂದ ಕನ್ಯಾಕುಮಾರಿ ಪ್ರಸಿದ್ಧಿ ಪಡೆದಿದೆ. ಸಾಧು-ಸಂತರು, ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಕನ್ಯಾಕುಮಾರಿಗೆ ಆ ಹೆಸರು ಬರುವುದರ ಹಿಂದೆಯೂ ಅಷ್ಟೇ ರೋಚಕವಾದ ಹಿನ್ನೆಲೆಯಿದೆ. ಪಾರ್ವತಿ ದೇವಿ ಶಿವನನ್ನು ಗಂಡನಾಗಿ ಪಡೆಯಲು ಒಂಟಿ ಕಾಲಲ್ಲಿ ನಿಂತು ತಪಸ್ಸು ಮಾಡಿದ್ದಕ್ಕೂ ಇಂದಿನ ಕನ್ಯಾಕುಮಾರಿಗೂ ನಂಟಿದೆ. ಇತ್ತೀಚೆಗೆ ಅಂದರೆ ನಮ್ಮ ಕಾಲಘಟ್ಟದಲ್ಲಿ ನಡೆದ ಐತಿಹಾಸಿಕ ಘಟನೆಯೆಂದರೆ ಅದು ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನವನ್ನುದ್ದೇಶಿಸಿ ಮಾತನಾಡಲು ಅಮೆರಿಕಾಗೆ ಹೊರಡುವ ಮುನ್ನ ಕನ್ಯಾಕುಮಾರಿ ಕಡಲಲ್ಲಿರುವ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡಿದ್ದರು ಎನ್ನುವುದು ಮತ್ತೊಂದು ವಿಶೇಷ. 
ಕನ್ಯಾಕುಮಾರಿ ಎಂದು ಈ ಪ್ರದೇಶಕ್ಕೆ ಹೆಸರು ಬರಲು ಹಿಂದಿನ ಕಾರಣವೆಂದರೆ ಅದು ಪಾರ್ವತಿ ದೇವಿಯ ತಪಸ್ಸು. ಸತಿ ದೇವಿಯ ತಂದೆ ದಕ್ಷ ಪ್ರಜಾಪತಿ ತಾನು ನಡೆಸುತ್ತಿದ್ದ ಯಾಗಕ್ಕೆ ಶಿವನಿಗೆ ಆಹ್ವಾನ ನೀಡಲಿಲ್ಲ ಎಂಬ ಕಾರಣಕ್ಕೆ ಸತಿ ಯಾಗದ ಕುಂಡಕ್ಕೆ ಧುಮುಕಿ ತನ್ನನ್ನೇ ಆಹುತಿ ನೀಡುತ್ತಾಳೆ. ನಂತರ ಸತಿ ದೇವಿಯೇ ಪಾರ್ವತಿಯಾಗಿ ಮತ್ತೆ ಹುಟ್ಟಿ ಶಿವನನ್ನು ಪತಿಯಾಗಿ ಪಡೆಯಲು ತಪಸ್ಸು ಮಾಡುತ್ತಾಳೆ. ಶಿವನನ್ನು ಪಡೆಯಲು ಪಾರ್ವತಿ ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡಿದ್ದು ಇಂದಿನ ಕನ್ಯಾಕುಮಾರಿ ಪ್ರದೇಶದಲ್ಲೇ. ಆದ್ದರಿಂದಲೇ ಇದಕ್ಕೆ ಕನ್ಯಾಕುಮಾರಿ ಎಂಬ ಹೆಸರು ಬಂತು ಎಂಬ ನಂಬಿಕೆ ಇದೆ. 
ಒಂಟಿ ಕಾಲಿನಲ್ಲಿ ತಪಸ್ಸು ಮಾಡುವುದಕ್ಕೂ ಹಲವು ಮಹತ್ವಗಳಿದ್ದು, ಜೀವನದಲ್ಲಿ ಒಂದೇ ಗುರಿ, ಒಬ್ಬನೇ ಗುರು, ಒಂದೇ ಮಂತ್ರವನ್ನು ಅನುಸರಿಸಿ ನಡೆದರೆ ಯಶಸ್ಸು ಸಿಗುತ್ತದೆ ಎಂಬುದು ಒಂಟಿ ಕಾಲು ತಪಸ್ಸಿನ ಗೂಢಾರ್ಥ ಎಂದೂ ಹೇಳಲಾಗುತ್ತದೆ. ಆದ್ದರಿಂದಲೇ ಪಾರ್ವತಿ ಒಂಟಿ ಕಾಲಿನ ಮೇಲೆ ನಿಂತು ಶಿವನನ್ನು ಕುರಿತು ತಪಸ್ಸು ಮಾಡಿದ್ದರಿಂದ ಶಿವ ಪಾರ್ವತಿಗೆ ಒಲಿದ ಎಂಬ ನಂಬಿಕೆಯೂ ಇದೆ. ಕನ್ಯಾಕುಮಾರಿ ಪ್ರದೇಶ ದೇವಿ ಪಾರ್ವತಿಯ ತಪಸ್ಸಿಗೆ ಅತ್ಯುತ್ತಮ ಉದಾಹರಣೆಯಾಗಿದ್ದು, ಸ್ವಾಮಿ ವಿವೇಕಾನಂದರ ತಪಸ್ಸಿಗೂ ನೆರವಾಯಿತು, ಕನ್ಯಾಕುಮಾರಿಯಲ್ಲಿ ತಪಸ್ಸು ಮಾಡಿದ ನಂತರ ವಿವೇಕಾನಂದರಲ್ಲಿದ್ದ ಶಕ್ತಿ ಮತ್ತಷ್ಟು ಹೆಚ್ಚಾಯಿತು ಎಂದರೂ ಬಹುಶಃ ತಪ್ಪಾಗಲಾರದು. 
ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಕನ್ಯಾಕುಮಾರಿಗೆ ಭೇಟಿ ನೀಡುವುದರಿಂದ ಪ್ರವಾಸಿಗರ ಮನಸ್ಸೂ ಸಹ ಹಗುರವಾಗುತ್ತದೆ. ಈ ಮೂಲಕ ಚಿತ್ತ ಶುದ್ಧಿಯೂ ಸಾಧ್ಯವಾಗುತ್ತದೆ ಎಂಬ ನಂಬಿಕೆ ಇದೆ. ಭಾರತಾಂಬೆಯ ಪದತಲದಲ್ಲಿರುವ ಕನ್ಯಾಕುಮಾರಿ ಸಮಸ್ತ ಭಾರತಕ್ಕೆ ಪೂಜನೀಯವಾಗಿದೆ. 
SCROLL FOR NEXT