ಭಕ್ತಿ-ಭವಿಷ್ಯ

ಬಂತು ಶ್ರಾವಣ, ಈ ಮಾಸದಲ್ಲಿ ಏನೆಲ್ಲಾ ಮಾಡಿದರೆ ಒಳಿತಾಗುವುದು ತಿಳಿಯೋಣ!

Srinivas Rao BV
ಆಷಾಢ ಮಾಸ ಮುಗಿದು, ಶ್ರಾವಣ ಮಾಸ ಬಂದಿದೆ.  ಶ್ರಾವಣ ಮಾಸವನ್ನು ಹಿಂದೂ ಪಂಚಾಂಗದಲ್ಲಿ ಅತ್ಯಂತ ಮಹತ್ವ ಹಾಗೂ ದೈವಿಕ ಮಾಸ ಎಂದೇ ಪರಿಗಣಿಸಲಾಗಿದೆ. ಈ ಮಾಸವನ್ನು ಶಿವನಿಗೆ ಅರ್ಪಿಸಲಾಗಿದ್ದು, ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸ ಎಂದೇ ಹೇಳಲಾಗುತ್ತದೆ. ಶ್ರಾವಣದಲ್ಲಿ ನಾಗರ ಪಂಚಮಿ ಮಂಗಳ ಗೌರಿ ವ್ರತಗಳನ್ನು ಆಚರಿಸುವ ಪದ್ಧತಿ ಇದ್ದು, ಈ ಮಾಸದ ಸೋಮವಾರಗಳಿಗೆ ವಿಶೇಷ ಮಹತ್ವವಿದೆ.
ಶ್ರಾವಣ ಮಾಸವನ್ನು ಶಿವನಿಗೆ ಅರ್ಪಿಸಲಾಗಿರುವುದರಿಂದ ಅಥವಾ ಶ್ರಾವಣ ಮಾಸ ಶಿವನ ಮಾಸ ಎಂದು ಪರಿಗಣಿಸಲಾಗಿರುವುದರಿಂದ ಶ್ರಾವಣ ಮಾಸದ ಸೋಮವಾರಗಳಂದು ಉಪವಾಸವಿದ್ದು, ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರಿಂದ ಮನಸ್ಸಿಗೆ ಶಾಂತಿ ಲಭಿಸಿ ಜೀವನದ ಗುಣಮಟ್ಟ ಹೆಚ್ಚಲಿದೆ ಎಂಬ ನಂಬಿಕೆ ಇದೆ.
ಶ್ರಾವಣ ಮಾಸದಲ್ಲಿ ಈ ಇವುಗಳನ್ನು ಮಾಡಿದರೆ ಒಳಿತಾಗಲಿದೆ:
ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನಾದಿಗಳನ್ನು ಮುಗಿಸಿ, ಸ್ವಲ್ಪ ನಿಮಿಷವಾದರೂ ಧ್ಯಾನ ಮಾಡಿ
ಹತ್ತಿರ ಶಿವನ ದೇವಾಲಯವಿದ್ದರೆ ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿ
ಸಾತ್ವಿಕ ಆಹಾರ ಹೆಚ್ಚು ಸೇವಿಸಿ, ಸಾಧ್ಯವಾದರೆ, ಅವಕಾಶ ಇದ್ದಲ್ಲಿ ಉಪವಾಸ ಮಾಡಿ
ನಿಮಗೆ ಸಾಧ್ಯವಿದ್ದು, ಅಗತ್ಯವಿರುವವರಿಗೆ ಅನ್ನದಾನ ಮಾಡಿದರೆ ಒಳಿತು
ಸಂಜೆ ವೇಳೆಗೆ ದೀಪ ಹಚ್ಚಿ ಮತ್ತೆ ಕೆಲವು ನಿಮಿಷ ಧ್ಯಾನ ಮಾಡಿ ಶಿವ ಮೂಲ ಮಂತ್ರ (ಓಂ
ನಮಃ ಶಿವಾಯ) ಪಠಿಸಿ
ಶ್ರಾವಣ ಮಾಸದ ಅವಧಿಯಲ್ಲಿ ಈ ರೀತಿ ಮಾಡಿದಲ್ಲಿ ಅದು ಜೀವನ ವಿಧಾನವನ್ನು ಬದಲಿಸಿ, ನಿಮ್ಮ ಆಹಾರ ಹಾಗೂ ಜೀವನ ಶೈಲಿ ಉತ್ತಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲದೇ ಸತತ ಒಂದು ತಿಂಗಳು ಈ ಮೇಲಿನ ಅಂಶಗಳನ್ನು ರೂಢಿಸಿಕೊಂಡಲ್ಲಿ ಮನಸ್ಸು, ದೇಹ ಹಗುರವಾಗಿ ಸಕಾರಾತ್ಮಕ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಇದೆ.
SCROLL FOR NEXT