ನಾಗರ ಪಂಚಮಿಯನ್ನು ಪ್ರತೀವರ್ಷ ಆಷಾಢ ಅಮಾವಾಸ್ಯೆಯ 5ನೇ ದಿನದಂದು ಆಚರಿಸಲಾಗುತ್ತದೆ. ಅಂತರೆ ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತಿದೆ. ನಾಗಸರ್ಪಗಳ ಬಗ್ಗೆ ಹಿಂದೂ ಧರ್ಮದಲ್ಲಿ ಅಪಾರವಾದ ನಂಬಿಕೆ ಹಾಗೂ ಭಕ್ತಿ ಇದೆ.
ಪೌರಾಣಿಕ ಗ್ರಂಥಗಳ ಪ್ರಕಾರ ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರುತ್ತದೆ ಎಂದು ತಿಳಿಸಲಾಗಿದೆ. ನಾಗದೋಷವಿದ್ದವರು ಸಾಮಾನ್ಯವಾಗಿ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಅನುಭವಿಸುತ್ತಾರೆ. ಆ ಕಾರಣದಿಂದಾಗಿಯೇ ನಾಗ ದೇವತೆಗಳು ನೆಲೆಸಿರುವ ಪುಣ್ಯಕ್ಷೇತ್ರಕ್ಕೆ ತೆರಳಿ ಪೂಜೆ ಹಾಗೂ ಶಾಂತಿಗಲನ್ನು ಮಾಡುತ್ತಾರೆ.
ಪುರಾಣಗಳ ಪ್ರಕಾರ, ಪಾತಾಳ ಲೋಕವು ಹಾವುಗಳ ವಾಸಸ್ಥಾನವಾಗಿದ್ದು, ನಾಗರ ಪಂಚಮಿಯಂದು ಬೆಳ್ಳಿಗ ನಾಗನಿಗೆ, ಕಲ್ಲಿನ ನಾಗನಿಗೆ ಅಥವಾ ಮರದ ನಾಗನಿಗೆ ಹಾಲನ್ನು ಅಭಿಷೇಕ ಮಾಡುವುದರಿಂದ ಪಾತಾಳ ಲೋಕದಲ್ಲಿನ ಹಾವುಗಳಿಗೆ ಅಭಿಷೇಕ ಮಾಡಿದಂತೆ ಎಂಬ ನಂಬಿಕೆಯಿದೆ.
ಮನೆಯಲ್ಲಿಯೇ ನಾಗಪೂಜೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ...
ಕೊರೋನಾ ವೈರಸ್ ಭೀತಿಯಿರುವುದರಿಂದ ಈ ಬಾರಿ ನಾಗರ ಪಂಚಮಿಗೆ ಮನೆಯಿಂದ ಹೊರ ಹೋಗಿ ಹುತ್ತದ ಬಳಿ ಅಥವಾ ದೇವಸ್ಥಾನಗಳಲ್ಲಿ ನಾಗ ಪ್ರತಿಮೆಗೆ ಪೂಜೆ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಮನೆಯಲ್ಲಿಯೇ ಶಾಸ್ತ್ರೋಕ್ತವಾಗಿ ನಾಗಪೂಜೆ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
- ನಾಗಪೂಜೆಗೆ ಜುಲೈ.25ರ ಶನಿವಾರ ಬೆಳಿಗ್ಗೆ 5.38ರಿಂದ 8 ಗಂಟೆ 22 ನಿಮಿಷದ ಒಳಗೆ ಪೂಜೆ ಮಾಡಲು ಒಳ್ಳೆಯ ಮುಹೂರ್ತವಿದೆ.
- ಶುಚಿರ್ಭೂತವಾಗಿ, ಮಡಿವಸ್ತ್ರ ಧರಿಸಿ, ಗರಿಕೆ, ಗಂಧ, ಅಕ್ಷತೆ, ಹೂವು, ಅರಿಶಿಣ, ಮೋದಕ ಅಥವಾ ನಾಗದೇವನಿಗೆ ನೈವೈದ್ಯಕ್ಕೆ ಇನ್ನಿತರ ಖಾದ್ಯಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು.
- ದೇವರ ಕೋಣೆಯಲ್ಲಿ ಒಂದು ಬೆಳ್ಳಿ ಬಟ್ಟಲಿನಲ್ಲಿ ಬೆಳ್ಳಿಯ ನಾಗರ ಪ್ರತಿಮೆ ಅಥವಾ ಹಸುವಿನ ಸಗಣಿಯಿಂದಮಾಡಿದ ನಾಗರ ಪ್ರತಿಮೆಯನ್ನು ಇರಿಸಿಕೊಳ್ಳಿ. ನಂತರ ಓಂ ಭುಜಂಗೇಶಾಯ ವಿದ್ಮಹೇ ಸರ್ಪರಾಜಾಯ ಧೀಮಹ, ತನ್ನೇ ನಾಗಃ ಪ್ರಚೋದಯಾತ್ ಎಂದು ಮಂತ್ರ ಪಠಿಸುತ್ತಾ ಹಾಲಿನ ಅಭಿಷೇಕ ಮಾಡಬೇಕು.
- ನಂತರ ನಾಗ ಪ್ರತಿಮೆಗೆ ಗರಿಗೆ, ಗಂಧ ಹಾಗೂ ಅಕ್ಷತೆಯನ್ನು ಹಾಕಿ ಪೂಜೆ ಮುಂದುವರೆಸಬೇಕು. ನಂತರ ಗಂಧದ ಕಡ್ಡಿ ಹಚ್ಚಿ, ದೀಪ, ಬೆಳಗಿ, ತೆಂಗಿನಕಾಯಿ ಒಡೆದು ವಿವಿಧ ಖಾದ್ಯಗಳನ್ನು ನಾಗರಾಜನಿಗೆ ನೈವೇದ್ಯ ಮಾಡಬೇಕು.
- ಕರ್ಪೂರದಿಂದ ಮಂಗಳಾರತಿ ಮಾಡಿ. ನಂತರ ಕೈಲಿ ಹೂವು, ಅಕ್ಷತೆ ಹಾಗೂ ಅರಿಶಿಣವನ್ನು ಹಿಡಿದುಕೊಂಡು ನಾಗರಾಜನ ಮಂತ್ರವನ್ನು ಪಠಣ ಮಾಡಿ ಪಾರ್ಥನೆ ಮಾಡಬೇಕು. ನಂತರ ಮನೆ-ಮಂದಿಯೊಂದಿಗೆ ಪ್ರಸಾದ ಸೇವಿಸಿದರೆ, ನಾಗ ಪೂಜೆ ಪೂರ್ಣಗೊಳ್ಳುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos