ಹಣತೆ  
ಭಕ್ತಿ-ಜ್ಯೋತಿಷ್ಯ

ದೀಪಾವಳಿ: ಕತ್ತಲಿಗೂ ಬೆಳಕಿನ ಭಾಷೆ ಕಲಿಸುವ ಹಬ್ಬ

ದೀಪಾವಳಿಯ ಅತ್ಯಂತ ಸುಂದರ ಸಂದೇಶ. ಕತ್ತಲಿಗೂ ಬೆಳಕಿನ ಭಾಷೆಯನ್ನು ಕಲಿಸುವ ಹಬ್ಬವಿದು.

ದೀಪಗಳು, ಸಂಭ್ರಮ ಮತ್ತು ಸಂಪ್ರದಾಯಗಳನ್ನು ಮೀರಿದ ದೀಪಾವಳಿ, ಎಂತಹ ಗಾಢ ಕತ್ತಲೆಯೂ ಬೆಳಕಿನ ಭಾಷೆಯನ್ನು ಕಲಿಯಬಲ್ಲದು ಎಂಬ ಸುಂದರ ನೆನಪನ್ನು ನಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ.

ವಿಶಾಲವಾದ ಕತ್ತಲೆಯ ನಡುವೆ ಬೆಳಗುವ ಪುಟ್ಟ ಹಣತೆಯಲ್ಲಿ ಏನೋ ಒಂದು ಅದ್ಭುತ ಶಕ್ತಿಯಿದೆ. ಅದು ರಾತ್ರಿಯ ಕತ್ತಲೆಯೊಂದಿಗೆ ವಾದ ಮಾಡುವುದಿಲ್ಲ, ನೆರಳುಗಳ ಬಗ್ಗೆ ದೂರುವುದಿಲ್ಲ, ಇಡೀ ಜಗತ್ತು ಬೆಳಕಾಗುವವರೆಗೆ ಕಾಯುವುದೂ ಇಲ್ಲ. ಸುಮ್ಮನೆ ತಾನು ಬೆಳಗುತ್ತದೆ. ಆ ಒಂದು ಮೌನ ಕ್ರಿಯೆಯಲ್ಲೇ ಕತ್ತಲೆಯ ಪ್ರಭಾವ ನಿಧಾನವಾಗಿ ಕಡಿಮೆಯಾಗತೊಡಗುತ್ತದೆ.

ಬಹುಶಃ ಇದೇ ದೀಪಾವಳಿಯ ಅತ್ಯಂತ ಸುಂದರ ಸಂದೇಶ. ಕತ್ತಲಿಗೂ ಬೆಳಕಿನ ಭಾಷೆಯನ್ನು ಕಲಿಸುವ ಹಬ್ಬವಿದು.

ಪ್ರತಿ ವರ್ಷ ಹಿಂದೂ ಪಂಚಾಂಗದ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಭಾರತದಾದ್ಯಂತ ಕೋಟ್ಯಂತರ ಮನೆಗಳು ಸಾಲು ಸಾಲು ಎಣ್ಣೆ ದೀಪಗಳು, ಬಣ್ಣಬಣ್ಣದ ವಿದ್ಯುತ್ ದೀಪಗಳು ಮತ್ತು ಆತ್ಮೀಯತೆಯ ಸಂಭ್ರಮದಿಂದ ಕಂಗೊಳಿಸುತ್ತವೆ.

ಬೀದಿಗಳು ಝಗಮಗಿಸುತ್ತವೆ. ಮನೆಯ ಹೊಸ್ತಿಲುಗಳು ಸುಂದರ ರಂಗೋಲಿಗಳಿಂದ ಅಲಂಕೃತಗೊಳ್ಳುತ್ತವೆ. ಹಬ್ಬದ ಸಿಹಿತಿಂಡಿಗಳ ಸುವಾಸನೆ ಮನೆಮಾಡುತ್ತದೆ. ಆಕಾಶವೂ ಸಂಭ್ರಮದ ಬೆಳಕಿನಲ್ಲಿ ಮಿನುಗುತ್ತದೆ. ಆದರೆ ಈ ಎಲ್ಲ ವೈಭವದ ಹಿಂದೆ ಸಾವಿರಾರು ದೀಪಗಳ ಸೌಂದರ್ಯಕ್ಕಿಂತಲೂ ಮಿಗಿಲಾದ ಸಂದೇಶವೊಂದಿದೆ. ಬೆಳಕು ಎಂದರೆ ಕೇವಲ ಕಣ್ಣಿಗೆ ಕಾಣುವ ಪ್ರಕಾಶವಲ್ಲ; ನಾವೇ ಬೆಳಕಾಗಬೇಕು ಎಂಬುದೇ ಆ ಸಂದೇಶ.

ಬೆಳಕು ಬದುಕಿನ ಮಾರ್ಗವಾದಾಗ

ದೀಪಾವಳಿಯ ಮಹತ್ವ ಹಲವು ಪ್ರಾಚೀನ ಭಾರತೀಯ ಸಂಪ್ರದಾಯಗಳು ಮತ್ತು ಪೌರಾಣಿಕ ಕಥೆಗಳಲ್ಲಿ ಬೇರೂರಿದೆ. ರಾಮಾಯಣದ ಪ್ರಕಾರ, ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ರಾವಣನನ್ನು ಸಂಹರಿಸಿದ ಬಳಿಕ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ಅಯೋಧ್ಯೆಗೆ ಮರಳಿದ ಸಂದರ್ಭದಲ್ಲಿ ಪ್ರಜೆಗಳು ಸಾಲು ಸಾಲು ಮಣ್ಣಿನ ಹಣತೆಗಳನ್ನು ಬೆಳಗಿಸಿ ಅವರನ್ನು ಸ್ವಾಗತಿಸಿದರು. ಕತ್ತಲ ರಾತ್ರಿಯನ್ನು ಬೆಳಕಿನ ಸಂಭ್ರಮವಾಗಿ ಪರಿವರ್ತಿಸಿದ ಈ ಘಟನೆ ಅಧರ್ಮದ ವಿರುದ್ಧ ಧರ್ಮದ ವಿಜಯವನ್ನೂ, ನಿರಾಶೆಯ ವಿರುದ್ಧ ಭರವಸೆಯ ಗೆಲುವನ್ನೂ ಸಂಕೇತಿಸುತ್ತದೆ.

ಮತ್ತೊಂದು ಪೌರಾಣಿಕ ಪರಂಪರೆಯ ಪ್ರಕಾರ, ನರಕಾಸುರನ ವಿರುದ್ಧ ಶ್ರೀಕೃಷ್ಣ ಸಾಧಿಸಿದ ವಿಜಯವೂ ದೀಪಾವಳಿಯೊಂದಿಗೆ ಸಂಬಂಧ ಹೊಂದಿದೆ. ಇದು ಅಹಂಕಾರ, ಕ್ರೌರ್ಯ ಮತ್ತು ಅನ್ಯಾಯದ ನಾಶವನ್ನು ಸಂಕೇತಿಸುತ್ತದೆ. ಅನೇಕ ಸಮುದಾಯಗಳಲ್ಲಿ ದೀಪಾವಳಿಯನ್ನು ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆ ಲಕ್ಷ್ಮಿ ಹಾಗೂ ಜ್ಞಾನ ಮತ್ತು ವಿಘ್ನ ನಿವಾರಣೆಯ ಸಂಕೇತವಾದ ಗಣೇಶನ ಆರಾಧನೆಯೊಂದಿಗೆ ಆಚರಿಸಲಾಗುತ್ತದೆ.

ಪುಟ್ಟ ಹಣತೆಯಲ್ಲಿದೆ ಬದುಕಿನ ದೊಡ್ಡ ಪಾಠ

ಮಣ್ಣಿನ ಹಣತೆ ಭಾರತೀಯ ಮನೆಗಳಲ್ಲಿ ಕಾಣಸಿಗುವ ಅತ್ಯಂತ ಸರಳ ವಸ್ತುಗಳಲ್ಲೊಂದು. ಮಣ್ಣಿನಿಂದ ತಯಾರಾದ ಈ ಪುಟ್ಟ ಹಣತೆಯಲ್ಲಿ ಎಣ್ಣೆ ತುಂಬಿ, ಹತ್ತಿಯ ಬತ್ತಿಯನ್ನು ಇರಿಸಿದಾಗ ಅದು ಬೆಳಕನ್ನು ನೀಡುತ್ತದೆ. ನೋಡಲು ಅತ್ಯಂತ ಸಾಮಾನ್ಯವಾಗಿ ಕಾಣುವ ಈ ಹಣತೆಯಲ್ಲಿಯೇ ಬದುಕಿನ ಅದ್ಭುತ ಪಾಠವೊಂದು ಅಡಗಿದೆ.

ತಾನು ಕರಗುತ್ತಾ ಇತರರಿಗೆ ಬೆಳಕು ನೀಡುವ ಹಣತೆ, ಶ್ರೀಮಂತರು ಮತ್ತು ಬಡವರು, ಪರಿಚಿತರು ಮತ್ತು ಅಪರಿಚಿತರು ಎಂಬ ಭೇದ ಮಾಡುವುದಿಲ್ಲ. ಅದರ ಬೆಳಕು ಎಲ್ಲ ಮೂಲೆಗಳಿಗೂ ಸಮಾನವಾಗಿ ಹರಡುತ್ತದೆ.

ಈ ಪುಟ್ಟ ಹಣತೆಯಲ್ಲಿ ಬದುಕಿನ ಮೌನ ತತ್ವವಿದೆ. ಶ್ರೇಷ್ಠತೆ ಎನ್ನುವುದು ಅಧಿಕಾರ, ಸಂಪತ್ತು ಅಥವಾ ಪ್ರಭಾವದಿಂದ ಮಾತ್ರ ಬರುವುದಿಲ್ಲ. ಬದಲಾಗಿ, ಬೇರೊಬ್ಬರ ಬದುಕಿನಲ್ಲಿ ಪುಟ್ಟದೊಂದು ಬದಲಾವಣೆ ತರಲು ಸಾಧ್ಯವಾದಾಗಲೂ ಅದು ವ್ಯಕ್ತವಾಗುತ್ತದೆ ಎಂಬುದನ್ನು ಹಣತೆ ಕಲಿಸುತ್ತದೆ.

ಒಂಟಿತನದಿಂದ ಬಳಲುತ್ತಿರುವವರಿಗೆ ಸಾಂತ್ವನದ ಮಾತೊಂದನ್ನು ಹೇಳುವುದು, ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಿನ ಹಸ್ತ ಚಾಚುವುದು, ನೋವುಂಟು ಮಾಡಿದವರನ್ನು ಕ್ಷಮಿಸುವುದು ಅಥವಾ ಆತ್ಮವಿಶ್ವಾಸ ಕಳೆದುಕೊಂಡವರಿಗೆ ಪ್ರೋತ್ಸಾಹ ನೀಡುವುದು — ಇವೆಲ್ಲವೂ ಒಂದೊಂದು ಹಣತೆಯೇ. ಅವು ಇಡೀ ನಗರವನ್ನು ಬೆಳಗಿಸದಿರಬಹುದು. ಆದರೆ ಯಾರದ್ದೋ ಬದುಕನ್ನು ಬೆಳಗಿಸಬಲ್ಲವು.

ತಲೆಮಾರುಗಳನ್ನು ಬೆಸೆಯುವ ಹಬ್ಬ

ದೀಪಾವಳಿ ನೆನಪುಗಳು ಮತ್ತು ಆತ್ಮೀಯತೆಯ ಸಂಭ್ರಮವೂ ಹೌದು. ಅನೇಕರಿಗೆ ಹಬ್ಬದ ನಿಜವಾದ ಸಡಗರ ಆರಂಭವಾಗುವುದು ದೀಪಾವಳಿಯ ದಿನಕ್ಕಿಂತಲೂ ಮೊದಲೇ. ಮನೆ ಸ್ವಚ್ಛಗೊಳಿಸುವುದು, ಹೊಸ ಬಟ್ಟೆ ಖರೀದಿಸುವುದು, ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ತಯಾರಿಸುವುದು, ಮನೆಯ ಪ್ರವೇಶದ್ವಾರವನ್ನು ಅಲಂಕರಿಸುವುದು ಮತ್ತು ಸಾಲು ಸಾಲು ಹಣತೆಗಳನ್ನು ಜೋಡಿಸುವುದರಲ್ಲೇ ಹಬ್ಬದ ಕಳೆ ಮೂಡುತ್ತದೆ.

ಮಕ್ಕಳು ಹಬ್ಬದ ಸಿಹಿತಿಂಡಿಗಳು ಮತ್ತು ಪಟಾಕಿಗಳಿಗಾಗಿ ಕಾತರದಿಂದ ಕಾಯುತ್ತಿದ್ದರೆ, ಹಿರಿಯರು ತಲೆಮಾರುಗಳಿಂದ ನಡೆದುಬಂದ ಆಚರಣೆಗಳನ್ನು ಸಂಭ್ರಮಿಸುತ್ತಾರೆ. ದೂರದ ಊರುಗಳಲ್ಲಿ ನೆಲೆಸಿರುವ ಕುಟುಂಬ ಸದಸ್ಯರು ಒಟ್ಟಿಗೆ ಸೇರಲು ಪ್ರಯತ್ನಿಸುತ್ತಾರೆ. ಹಳೆಯ ಛಾಯಾಚಿತ್ರಗಳು ಮತ್ತೆ ನೆನಪಾಗುತ್ತವೆ. ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಪರಿಚಿತ ಅಡುಗೆಗಳ ಸುವಾಸನೆ ಮರೆತುಹೋದ ಮನೆಯ ಆತ್ಮೀಯತೆಯನ್ನು ಮತ್ತೆ ನೆನಪಿಸುತ್ತದೆ.

ದಿನದಿಂದ ದಿನಕ್ಕೆ ವೇಗವಾಗಿ ಸಾಗುತ್ತಿರುವ ಬದುಕಿನಲ್ಲಿ ದೀಪಾವಳಿ ಒಂದು ಕ್ಷಣ ವಿರಾಮ ನೀಡುತ್ತದೆ. ಕುಟುಂಬ ಸದಸ್ಯರನ್ನು ಮತ್ತೆ ಊಟದ ಮೇಜಿನ ಸುತ್ತ ಒಗ್ಗೂಡಿಸುತ್ತದೆ, ನೆರೆಹೊರೆಯವರನ್ನು ಹತ್ತಿರವಾಗಿಸುತ್ತದೆ ಮತ್ತು ಸಮುದಾಯಗಳನ್ನು ಸಂಭ್ರಮದ ಮೂಲಕ ಬೆಸೆಯುತ್ತದೆ.

ಈ ಸಂಪ್ರದಾಯಗಳ ಸೌಂದರ್ಯ ಕೇವಲ ಗತಕಾಲವನ್ನು ಉಳಿಸಿಕೊಳ್ಳುವುದರಲ್ಲಿ ಇಲ್ಲ. ಬದಲಾಗಿ, ಕೃತಜ್ಞತೆ, ಉದಾರತೆ, ಒಗ್ಗಟ್ಟು ಮತ್ತು ಬದುಕಿನ ಬಗೆಗಿನ ಗೌರವದಂತಹ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವುದರಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೋದಿ ಇನ್ನೂ 120 ವರ್ಷ ಅಧಿಕಾರದಲ್ಲಿದ್ದರೂ ಅಂಬೇಡ್ಕರ್, ಗಾಂಧಿ, ನೆಹರುಗಿಂತ ದೊಡ್ಡವರಾಗಲು ಸಾಧ್ಯವಿಲ್ಲ: ದೀಪ್ಕೆ

ದೇಶದ ಜನತೆಗೆ ಪ್ರಧಾನಿಯಿಂದ ದೀಪಾವಳಿ ಹಬ್ಬದ ಶುಭಾಶಯ: ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯದ ಬಗ್ಗೆ ಹೇಳಿದ್ದಿಷ್ಟು...

ನೌಕರರಿಗೆ ದೀಪಾವಳಿ ಉಡುಗೊರೆಯಾಗಿ 1 ಲಕ್ಷ ರೂಪಾಯಿ ಕೊಟ್ಟ ಜವಳಿ ಉದ್ಯಮಿ, ಖುಷಿಯಿಂದ ಕಣ್ಣೀರು ಹಾಕಿದ ಸಿಬ್ಬಂದಿ!

'ನಿಮ್ಮ ಇಟಾಲಿಯನ್ ಕನ್ನಡಕ ತೆಗೆದು ನೋಡಿ': ಸೋನಿಯಾ ಗಾಂಧಿಗೆ ಬಿಜೆಪಿ ತಿರುಗೇಟು

ಕಾಲೇಜು ವಿದ್ಯಾರ್ಥಿಗಳಿಗೆ ದೀಪಾವಳಿ ಗಿಫ್ಟ್: ಉಚಿತ ಲ್ಯಾಪ್‌ಟಾಪ್ ವಿತರಿಸಲು ತಮಿಳುನಾಡು CM ವಿಜಯ್ ಆದೇಶ