ಬೆಂಗಳೂರು: ಏಳನೇ ಅಂತರಾಷ್ಟ್ರೀಯ ಸಿನಿಮೋತ್ಸವದ ಹಿನ್ನೋಟದಲ್ಲಿ ಇಂದು ವಾರ್ತಾ ಇಲಾಖೆಯ ಸುಲೋಚನ ಚಿತ್ರಮಂದಿರದಲ್ಲಿ ಆಸ್ಟ್ರೇಲಿಯನ್-ಹಾಲಿವುಡ್ ನಿರ್ದೇಶಕ ಫಿಲಪ್ ನಾಯ್ಸ್ ಅವರ ನ್ಯೂಸ್ ಫ್ರಂಟ್ ಸಿನೆಮಾ ಪ್ರದರ್ಶನಗೊಂಡಿತು.
ಡ್ರಾಮಾ ವಿಭಾಗದ ಸಿನೆಮಾಗೆ ಸೇರುವ ಈ ೧೯೭೮ರ ಆಸ್ಟ್ರೇಲಿಯನ್ ಸಿನೆಮಾ, ಪತ್ರಿಕೋದ್ಯಮದಲ್ಲಾದ ಒಂದು ಸಿಥ್ಯಂತರ, ಆಸ್ಟ್ರೇಲಿಯಾದ ರಾಜಕೀಯ, ಮನುಷ್ಯ ಸಂಬಂಧಗಳ ಮತ್ತು ಪತ್ರಿಕೋದ್ಯಮ ನೈತಿಕತೆಯ ಕಥೆಗಳನ್ನು ಒಟ್ಟಿಗೆ ಹೇಳುತ್ತದೆ.
ನ್ಯೂಸ್ ರೀಲ್ ಗಳ ಸಮಯದಲ್ಲಿ ಸುದ್ದಿಗಾಗಿ ಪತ್ರಕರ್ತರಿಬ್ಬರು ಹೆಣಗಾಡುತ್ತಿದ್ದ ರೀತಿ, ಅದರ ಸವಾಲುಗಳು ಮತ್ತು ಟಿ ವಿ ಬಂದ ನಂತರದ ದಿನಗಳಲ್ಲಿ ನ್ಯೂಸ್ ರೀಲ್ ಗಳ ಪ್ರಸ್ತುತತೆ ಹೇಗೆ ಬದಲಾಗುತ್ತದೆ ಹಾಗೂ ಇದರಿಂದ ನ್ಯೂಸ್ ರೀಲ್ ಚಿತ್ರೀಕರಣ ಮಾಡುತ್ತಿದ್ದ ಪತ್ರಕರ್ತರ ಜೀವನ ಹೇಗೆ ಬದಲಾಗುತ್ತದೆ ಎಂಬುದನ್ನು ಬಹಳ ಪರಿಣಾಮಕಾರಿಯಾಗಿ ಈ ಚಿತ್ರ ತೋರಿಸುತ್ತದೆ.
ನ್ಯೂಸ್ ರೀಲ್ ಚಿತ್ರೀಕರಣ ಮಾಡುವ 'ಲೆನ್ ಮ್ಯಾಗುರಿ' ಪಾತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿರುವ ಬಿಲ್ ಹಂಟರ್ ಅವರ ವೃತ್ತಿ-ನೈತಿಕತೆಯ ವಿರುದ್ಧ ಏಳುವ ಹಲಾವಾರು ಸನ್ನಿವೇಶಗಳನ್ನು ಅವರು ನಿಭಾಯಿಸುವ ರೀತಿ ಇಂದಿನ ಪತ್ರಕರ್ತರಿಗೆ ಪಾಠವಾಗಬಲ್ಲುದು. ಹಾಗೆಯೇ ಸಿನಿಮಾದಲ್ಲಿ ಲೆನ್ ಮ್ಯಾಗುರಿಯ ಪ್ರಜಾಪ್ರಭುತ್ವದ ಒಲವಿನ ನಿಲುವು, ಆಸ್ಟ್ರೇಲಿಯಾದ ಪ್ರವಾಹವನ್ನು ಚಿತ್ರೀಕರಣ ಮಾಡುವ ಬಗೆ ಇವೆಲ್ಲವನ್ನೂ ಒಳಗೊಂಡಿರುವ ಸಿನೆಮಾ ಫಿಲಿಪ್ ನಾಯ್ಸ್ ಅವರ ಅತ್ಯುತ್ತಮ ಸಿನೆಮಾಗಳಲ್ಲೊಂದು.