ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಎನ್ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದ್ದು, ತೆರಿಗೆ ಪಾವತಿಸದವರಿಗೆ ಕನಿಷ್ಚ 10 ವರ್ಷ ಶಿಕ್ಷೆ ವಿಧಿಸುವುದಾಗಿ ಹೇಳಿದ್ದಾರೆ.
ಭಾರೀ ಭರವಸೆಗಳನ್ನಿತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಇಂದು 2015ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಬೆಳಗ್ಗೆ 11 ಗಂಟೆಗೆ ಮಂಡಿಸಿತು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ 2015ರ ಮುಂಗಡಪತ್ರವನ್ನು ಮಂಡಿಸಿದರು.
ಈ ಬಾರಿಯ ಬಜೆಟ್ನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚು ಒತ್ತುಕೊಟ್ಟಿದ್ದು, ತೆರಿಗೆ ಸಂಗ್ರಹಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಇನ್ನು ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನು ವಂಚಿಸುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, 10ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲು ತೀರ್ಮಾನಿಸಿದೆ. ಇದಲ್ಲದೆ ಬೇನಾಮಿ ಆಸ್ತಿಯನ್ನೂ ಕೂಡ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದ್ದು, ಐಟಿ ರಿಟರ್ನ್ಸ್ ಮಾಡದಿದ್ದರೆ ಏಳು ವರ್ಷದವರೆಗೂ ಶಿಕ್ಷೆ ನೀಡುವುದಾಗಿ ಘೋಷಣೆ ಮಾಡಿದೆ.
ಇದೇ ವೇಳೆ ಕಪ್ಪು ಹಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಕಪ್ಪು ಹಣ ಕುರಿತ ಹೊಸ ಮಸೂದೆಯೊಂದನ್ನು ಜಾರಿಗೆ ತರುವುದಾಗಿ ಹೇಳಿದ್ದು, ಕಪ್ಪು ಹಣ ಪ್ರಕರಣದ ಸಂಬಂಧ ಜಾಮೀನು ರಹಿತ 10 ವರ್ಷ ಜೈಲು ಶಿಕ್ಷೆಯನ್ನು ನೀಡುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜೇಟ್ಲಿ ಘೋಷಿಸಿದ್ದಾರೆ.