ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲವಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರೈತರು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿದ್ದರು. ಆದರೆ ಬಜೆಟ್ ನಲ್ಲಿ ರೈತರ ಎಲ್ಲಾ ಬೇಡಿಕೆಗಳನ್ನು ಕಡೆಗಣಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.
ಇಂದು ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಅವರು ನಿರ್ಜೀವವಾದ ಬಜೆಟ್ ಅನ್ನು ಮಂಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆತ್ಮಹತ್ಯೆಗೆ ಶರಣಾಗಿರುವ ರೈತರ ಸಾಲ ಮನ್ನಾ ಮಾಡಿಲ್ಲ ಮತ್ತು ಅವರಿಗೆ ಸೂಕ್ತ ಪರಿಹಾರವೂ ಸಿಕ್ಕಿಲ್ಲ ಎಂದು ಶೆಟ್ಟರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಬಜೆಟ್ ನಲ್ಲಿ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಡಾ.ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಕಡಿಮೆ ಅನುದಾನ ನೀಡಲಾಗಿದೆ ಎಂದು ದೂರಿದರು.
ಹಿಂದುಳಿದ ತಾಲೂಕಗಳನ್ನು ಕಡೆಗಣಿಸಿರುವ ಸಿಎಂ ಹೊಸ ತಾಲೂಕುಗಳ ಘೋಷಣೆಯಲ್ಲೂ ವಿಫಲವಾಗಿದ್ದಾರೆ. ನೀರಾವರಿ ಯೋಜನೆಗೆ ಯಾವುದೇ ಅನುದಾನ ನೀಡಿಲ್ಲ ಮತ್ತು ಕಳಸಾ ಬಂಡೂರಿ, ಮಹದಾಯಿ ಯೋಜನೆ ನಿರ್ಲಕ್ಷಿಸಿದ್ದಾರೆ ಎಂದು ಶೆಟ್ಟರ್ ಆರೋಪಿಸಿದರು.
ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ತೆರಿಗೆಯನ್ನು ಹೆಚ್ಚಿಸಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಹೆಚ್ಚಾಗಲಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಹೆಚ್ಚಲಿದೆ ಎಂದು ಶೆಟ್ಟರ್ ಹೇಳಿದರು.